‘ಲೈವ್ ಶೋ’ ಕುರಿತಾಗಿ ಒಂದು ‘ಲೈವ್ ಚರ್ಚೆ’

Update: 2016-10-19 17:21 GMT

ಈ ಪ್ರಶ್ನೋತ್ತರಗಳನ್ನು ಪ್ರಕಟನೆಗೆ ಸಿದ್ಧಪಡಿಸುವಾಗ ಚಿಕ್ಕವರಿರುವಾಗ ಆಡುತ್ತಿದ್ದ ದಾರದಾಟ ನೆನಪಿಗೆ ಬಂತು. ‘‘ಸೂತ್ರ ಕ್ರೀಡಾ’’ ಎಂಬ (ಸು)ಸಂಸ್ಕೃತ ಹೆಸರೂ ಇರುವ ಇದರಲ್ಲಿ ಮಕ್ಕಳು, ಬೆರಳುಗಳಲ್ಲಿ ಹಿಡಿದ ದಾರದಿಂದ ಒಂದು ಸಾಮಾನ್ಯ, ಕಡಿಮೆ ಮಟ್ಟದ ವಿನ್ಯಾಸ ರಚಿಸಿದರೆ, ದೊಡ್ಡವರು (ಪರಿಣತರು) ಅದನ್ನು ತಮ್ಮ ಬೆರಳುಗಳಿಗೆ ವರ್ಗಾಯಿಸಿಕೊಳ್ಳುವಾಗ, ಮನೆ, ದೇವಾಲಯ, ಮಿನಾರ ಇತ್ಯಾದಿ ಸಂಕೀರ್ಣ ರೇಖಾ ವಿನ್ಯಾಸಗಳಾಗಿ ಬದಲಿಸಿ ತೋರಿಸುತ್ತಿದ್ದರು.

 ಕೆ.ವಿ. ತಿರುಮಲೇಶ್ ಸರ್ ಮಾಡಿರುವುದು ಅದನ್ನೇ. ಇನ್ನು ತಮ್ಮತಮ್ಮ ಬೆರಳುಗಳಲ್ಲಿ ನವನವೀನ ವಿನ್ಯಾಸಗಳನ್ನು ರಚಿಸುವ ಅವಕಾಶ ಓದುಗರಿಗೆ ಸದಾ ಇದ್ದೇ ಇದೆ. 

  ಶೇಕ್ಸ್‌ಪಿಯರ್‌ನ ‘‘ಜೂಲಿಯಸ್ ಸೀಸರ್’’ ನಾಟಕದಲ್ಲಿ ಸೀಸರನ ಹತ್ಯೆಯಾದ ನಂತರ ಬ್ರೂಟಸ್ ಮತ್ತು ಆ್ಯಂಟನಿ ಜನರನ್ನು ಪ್ರತ್ಯೇಕವಾಗಿ ಸಂಬೋಧಿಸಿ ಮಾಡುವ ಭಾಷಣಗಳನ್ನು ನೋಡಿ: ಬ್ರೂಟಸ್‌ನದು ಸೀದಾ ಸಾದಾ ಮಾತು, ಸೀಸರನ ಹತ್ಯೆಗೆ ಕಾರಣವನ್ನು ನೀಡುತ್ತದೆ; ಆದರೆ ಆ್ಯಂಟನಿಯದು ಜನರನ್ನು ಪಿತೂರಿಕೋರರ ವಿರುದ್ಧ ಉದ್ರೇಕಿಸುವ ತಂತ್ರಗಾರಿಕೆಯದು. ಜನರು ಆರಂಭದಲ್ಲಿ ಬ್ರೂಟಸ್‌ನ ಮಾತುಗಳಿಗೆ ಸಮ್ಮತಿಸಿದರೂ ಆ್ಯಂಟನಿಯ ರಂಜಿತ ಶೈಲಿಯ ಮಾತುಗಾರಿಕೆ ಅವರನ್ನು ಬ್ರೂಟಸ್ ಮತ್ತು ಬಳಗದವರ ವಿರುದ್ಧ ತಿರುಗಿಬೀಳುವಂತೆ ಮಾಡುತ್ತದೆ. ಆಲಂಕಾರಿಕ ಮಾತು ಸತ್ಯವನ್ನು ಮರೆಸುತ್ತದೆ. 9. ಏಕೆಂದರೆ, ಎಲ್ಲವೂ ಹೀಗೆಯೇ ಮುಂದುವರಿದು ಭಾವೋದ್ರೇಕದ ‘‘ಕಿಕ್’’ಅನ್ನು ಸಂತೋಷ ಕೂಟ ಮಾಡಿ, ಮದ್ಯ ಸೇವಿಸಿ, ಅಫೀಮು ಸೇದಿ ಪಡೆದುಕೊಳ್ಳುತ್ತಿದ್ದಷ್ಟೇ ಸುರಳೀತವಾಗಿ ಈಗ, ಜನಾಂಗದ್ವೇಷದಿಂದ, ಗನ್ ಝಳಪಿಸುವುದರಿಂದ, ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಳ್ಳುವ ಮೂಲಕ ಪಡೆದುಕೊಳ್ಳುತ್ತಿರುವುದನ್ನು ಕಂಡಾಗ ಇಂತಹದೊಂದು ಪ್ರಸ್ತಾವನೆ ಇರಬೇಕು ಹಾಗೂ ಇದನ್ನು ಬೆಂಬಲಿಸುವವರೆಲ್ಲ ಕೈಲಾದಷ್ಟು ಈ ವಿವೇಚನೆ ಹರಡಬೇಕು ಎಂದು ಉಂಟಾಗುವ ಬಯಕೆ... *

  ಹುತಾತ್ಮನಾಗುವ ಬಯಕೆಯಿದೆಯಲ್ಲಾ-ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ರಾಷ್ಟ್ರ ಅಥವಾ ಜನಾಂಗದ ಹೆಸರಲ್ಲಿ, ಐಡಿಯಾಲಜಿಯ ಹೆಸರಲ್ಲಿ, ತಥಾಕಥಿತ ಸತ್ಯದ ಹೆಸರಲ್ಲಿ-ಅದು ಅಪಾಯಕರ. ಗೆಲಿಲಿಯೋನನ್ನು ಇಂಕ್ವಿಸಿಶನ್, ಭೂಮಿ ಸೂರ್ಯನ ಸುತ್ತಲು ಸುತ್ತುತ್ತದೆ ಎಂಬ ನಿನ್ನ ಮಾತನ್ನು ಹಿಂದೆಗೆದುಕೋ ಇಲ್ಲದಿದ್ದರೆ ಮರಣದಂಡನೆಗೆ ತಯಾರಾಗು ಎಂದು ಬೆದರಿಸಿದಾಗ, ಅವನು ಅದಕ್ಕೆ ಒಪ್ಪುತ್ತಾನೆ; ಭೂಮಿ ತಿರುಗುವುದಿಲ್ಲ, ಇದ್ದಲ್ಲೇ ಇದೆ ಎನ್ನುತ್ತಾನೆ, ಅದರ ಬೆನ್ನ ಹಿಂದೆಯೇ, ಆದರೆ ತಿರುಗುತ್ತಿದೆ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. ಮೂರ್ಖರ ಜತೆ ವಾದಿಸುವುದಕ್ಕೆ ಅವನಿಗೆ ಇಷ್ಟವಿರುವುದಿಲ್ಲ. ಮಧ್ಯಯುಗದ ಇಂಕ್ವಿಸಿಶನ್ ಕಾಲದಲ್ಲಿ ಧರ್ಮಾಂಧರು ಸಾವಿರಾರು ಅಮಾಯಕರನ್ನು ಕೊಂದುಹಾಕಿದರು-ಯಾವ ಧರ್ಮವು ಜನರನ್ನು ರಕ್ಷಿಸಬೇಕಿತ್ತೋ ಅದರ ಹೆಸರಿನಲ್ಲಿ. ಇಂದಿನ ಐಸಿಸ್ ಹತ್ಯಾಕಾಂಡವನ್ನು ನೋಡಿದರೆ ನನಗದರ ನೆನಪಾಗುತ್ತದೆ. ಸಂಸ್ಥೀಕರಣಗೊಂಡ ಧರ್ಮಗಳ ಅಪಾಯವೆಂದರೆ ಅವು ಕೊಲೆಪಾತಕಿಗಳನ್ನು ದೇವದೂತರನ್ನಾಗಿ ಮಾಡಿಬಿಡುತ್ತವೆ. ಇದಕ್ಕಿಂತಲೂ ಹೆಚ್ಚಿನ ಅಪಾಯ ಈ ಕೊಲೆಪಾತಕಿಗಳು ತಾವು ಎಸಗುತ್ತಿರುವ ಕೃತ್ಯ ಸರಿ ಎಂದು ತಿಳಿದುಕೊಂಡಿರುವುದು. ಭಾವೋದ್ರೇಕ ಎಂದರೆ ಇದುವೇ: ತನ್ನನ್ನು ತಾನು ವಿಚಾರಿಸಿಕೊಳ್ಳದೆ ಇರುವುದು. ಇದು ಸೆಕ್ಯುಲರ್ ಅಗಿರಬಹುದು, ಧಾರ್ಮಿಕ ಆಗಿರಬಹುದು. ಭಾವೋದ್ರೇಕ ಮೋಬೋಕ್ರಸಿಗೆ ದಾರಿ ಮಾಡಿಕೊಡುವುದರಿಂದ ಇಂಥ ಪಂಗಡಗಳಿಗೆ ಸೇರಿದವರಿಗೆ ಸಂಖ್ಯಾಬಲ, ಧನಬಲ ಎಲ್ಲವೂ ಇರುತ್ತವೆ. ಸಮಾಜದಲ್ಲಿ ಭೀತಿ ಹರಡುತ್ತದೆ. ಭೀತಿ ಹುಟ್ಟಿಸುವುದೇ ಅಧಿಕಾರದ ತಂತ್ರ. ಎಲ್ಲಾ ಏಕಪಕ್ಷೀಯ ಐಡಿಯಾಲಜಿಗಳೂ ಇದನ್ನು ಮಾಡುತ್ತವೆ: ಹಿಟ್ಲರ್, ಮುಸೊಲಿನಿ, ಲೆನಿನ್, ಸ್ಟಾಲಿನ್, ಮಾವೋ, ಪೋಲ್-ಪಾಟ್. ಭಿನ್ನ ಮತವನ್ನು ಸಹಿಸಲಾರದ ಮತಧರ್ಮಗಳೂ ಹಾಗೆಯೇ. ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಸಹಿಸಲಾರದ ಅಧ್ಯಾಪಕರೂ ಹಾಗೆಯೇ. 10. ‘‘ಎಲ್ಲಿ ಹೋದರು ಆ ಎಲ್ಲಾ ಫ್ರೆಂಚ್ ಚಿಂತಕರು?’’ ಇಡೀ ಮಾನವತೆಗೆ ‘‘ನಾನು ಯೋಚಿಸುತ್ತೇನೆ; ಆದ್ದರಿಂದ ಇದ್ದೇನೆ’’ ಎಂಬ ಆತ್ಯಂತಿಕ ವ್ಯಾಖ್ಯೆ ನೀಡಿದವರು? ‘‘ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಆದರ್ಶ ಕಲಿಸಿದವರು? ಧರ್ಮನಿರಪೇಕ್ಷ ರಾಷ್ಟ್ರವೆಂದರೆ ಇದೇ, ಹೀಗಿರಬೇಕಾದ್ದೇ ಎಂಬ ಮೇಲ್ಪಂಕ್ತಿ ಹಾಕಿಕೊಟ್ಟವರು...’’ ಎಂದು ಇತ್ತೀಚೆಗೆ ‘‘ದಿ ಗಾರ್ಡಿಯನ್’’ ಪತ್ರಿಕೆಯಲ್ಲಿ ಬರೆದ ಒಬ್ಬ ಸಂಶೋಧನಾರ್ಥಿ, ಅಲ್ಲಿ ವೈಚಾರಿಕತೆ ಕಳೆದುಹೋದ ಕಾರಣಗಳನ್ನು ಪಟ್ಟಿ ಮಾಡುತ್ತಾರೆ.

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News