ಮಣ್ಣು, ನೀರು ಬಳಸದೆಯೇ ನಳನಳಿಸುವ ಬೆಳೆ!

Update: 2016-10-20 06:40 GMT

ಆಸ್ಟ್ರೇಲಿಯಾ, ಅ.20: ದಕ್ಷಿಣ ಆಸ್ಟ್ರೇಲಿಯಾ ಮರುಭೂಮಿಯಲ್ಲಿ ಮಣ್ಣು, ನೀರು ಬಳಸದೇ ಅತ್ಯಾಧುನಿಕ ತಂತ್ರಜ್ಞಾನದಿಂದ ಟೊಮ್ಯಾಟೊ ಬೆಳೆಯುವ ಮೂಲಕ ಈ ಕೃಷಿ ಫಾರ್ಮ್ ಗಮನ ಸೆಳೆದಿದೆ. ದೇಶದ ಟೊಮ್ಯಾಟೊ ಬೇಡಿಕೆಯ ಶೇಕಡ 15ರಷ್ಟನ್ನು ಇದು ಪೂರೈಸುತ್ತದೆ.
ಕಳೆದ ತಿಂಗಳು ಈ ಸನ್‌ಡ್ರಾಪ್ ಫಾರ್ಮ್ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಇಂಥ ವ್ಯವಸ್ಥೆಯಡಿ ಬೆಳೆಯುವ ವಾಣಿಜ್ಯ ವಿಧಾನವನ್ನು ಪರಿಚಯಿಸಿದೆ. ಇದು ಸೂರ್ಯನ ಬೆಳಕು ಮತ್ತು ಸಮುದ್ರನೀರನ್ನು ಲವಣಮುಕ್ತಗೊಳಿಸಿ ಬಳಸುವ ತಂತ್ರಜ್ಞಾನವನ್ನು ಒಳಗೊಂಡಿದೆ. ಪ್ರತಿ ವರ್ಷ ಸುಮಾರು 15 ಸಾವಿರ ಟನ್ ಟೊಮ್ಯಾಟೊ ಬೆಳೆಯಲು ಹಸಿರುಮನೆಯನ್ನು ಇದು ಬಳಸಿಕೊಳ್ಳುತ್ತಿದೆ. ದೇಶದ ನೂರಾರು ಮಾರುಕಟ್ಟೆಗಳಲ್ಲಿ ಈ ಟೊಮ್ಯಾಟೊ ಮಾರಾಟವಾಗುತ್ತಿದೆ.
ಇದು ಇತರ ಸಾಂಪ್ರದಾಯಿಕ ಹಸಿರುಮನೆ ತಂತ್ರಜ್ಞಾನಕ್ಕಿಂತ ಭಿನ್ನವಾಗಿದ್ದು, ಹೆಚ್ಚು ಅನುಕೂಲಕರ ಹಾಗೂ ಸುಸ್ಥಿರ ತಂತ್ರಜ್ಞಾನ ಎಂದು ಕಂಪೆನಿ ಹೇಳಿಕೊಂಡಿದೆ. ಇದು ಭಾರೀ ಪ್ರಮಾಣದ ನೈಸರ್ಗಿಕ ಸಂಪನ್ಮೂಲ ಉಳಿಸಲು ಸಹಾಯಕವಾಗುವುದಲ್ಲದೇ, ಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿ ಎಂದು ವಿಶ್ಲೇಷಿಸಿದೆ.
ಇಷ್ಟು ಪ್ರಮಾಣದ ಟೊಮ್ಯಾಟೊವನ್ನು ಪ್ರತಿ ವರ್ಷ ಹೊಸ ತಂತ್ರಜ್ಞಾನದೊಂದಿಗೆ ಬೆಳೆಯುವ ಮೂಲಕ ವಾರ್ಷಿಕ 26 ಸಾವಿರ ಟನ್ ಇಂಗಾಲ, ವಾತಾವರಣಕ್ಕೆ ಸೇರುವುದನ್ನು ತಡೆಯಬಹುದಾಗಿದೆ. ಇದು ರಸ್ತೆಯಿಂದ 500 ಕಾರುಗಳನ್ನು ಹಿಂದಕ್ಕೆ ಪಡೆದಂತೆ. ಇದರಿಂದಾಗಿ 180 ಒಲಿಂಪಿಕ್ ಈಜುಕೊಳದಷ್ಟು ಪ್ರಮಾಣದ ನೀರನ್ನು ಉಳಿಸಬಹುದಾಗಿದ್ದು, ವಾರ್ಷಿಕ 20 ಲಕ್ಷ ಲೀಟರ್ ಡೀಸೆಲ್ ಉಳಿಸಬಹುದು ಎಂದು ಹೇಳಿದೆ. ತೆಂಗಿನ ನಾರನ್ನು ಇಲ್ಲಿ ಮಣ್ಣಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಗಿಡ ಹಸಿರುಮನೆಯಲ್ಲಿ ಬೆಳೆಯಲು ಉಷ್ಣ ಮತ್ತು ಸೌರ ವಿದ್ಯುತ್ತನ್ನು ಬಳಸಲಾಗುತ್ತದೆ ಎಂದು ಕಂಪೆನಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News