‘ಲೈವ್ ಶೋ’ ಕುರಿತಾಗಿ ಒಂದು ‘ಲೈವ್ ಚರ್ಚೆ’

Update: 2016-10-20 17:34 GMT

ಈ ಪ್ರಶ್ನೋತ್ತರಗಳನ್ನು ಪ್ರಕಟನೆಗೆ ಸಿದ್ಧಪಡಿಸುವಾಗ ಚಿಕ್ಕವರಿರುವಾಗ ಆಡುತ್ತಿದ್ದ ದಾರದಾಟ ನೆನಪಿಗೆ ಬಂತು. ‘‘ಸೂತ್ರ ಕ್ರೀಡಾ’’ ಎಂಬ (ಸು)ಸಂಸ್ಕೃತ ಹೆಸರೂ ಇರುವ ಇದರಲ್ಲಿ ಮಕ್ಕಳು ಬೆರಳುಗಳಲ್ಲಿ ಹಿಡಿದ ದಾರದಿಂದ ಒಂದು ಸಾಮಾನ್ಯ, ಕಡಿಮೆ ಮಟ್ಟದ ವಿನ್ಯಾಸ ರಚಿಸಿದರೆ, ದೊಡ್ಡವರು (ಪರಿಣತರು) ಅದನ್ನು ತಮ್ಮ ಬೆರಳುಗಳಿಗೆ ವರ್ಗಾಯಿಸಿಕೊಳ್ಳುವಾಗ, ಮನೆ, ದೇವಾಲಯ, ಮಿನಾರ ಇತ್ಯಾದಿ ಸಂಕೀರ್ಣ ರೇಖಾ ವಿನ್ಯಾಸಗಳಾಗಿ ಬದಲಿಸಿ ತೋರಿಸುತ್ತಿದ್ದರು.

 ಕೆ.ವಿ. ತಿರುಮಲೇಶ್ ಸರ್ ಮಾಡಿರುವುದು ಅದನ್ನೇ. ಇನ್ನು ತಮ್ಮತಮ್ಮ ಬೆರಳುಗಳಲ್ಲಿ ನವನವೀನ ವಿನ್ಯಾಸಗಳನ್ನು ರಚಿಸುವ ಅವಕಾಶ ಓದುಗರಿಗೆ ಸದಾ ಇದ್ದೇ ಇದೆ. 

ಆ ಕಾರಣಗಳಲ್ಲಿ ಒಂದು, ಉನ್ನತಮಟ್ಟದ ವಿದ್ಯಾಭ್ಯಾಸ ಮಾಡಿ, ಪ್ರಪಂಚ ಹಾಗೂ ಮನುಷ್ಯನ ಸ್ಥಿತಿ-ಗತಿ-ಸಂಸ್ಕೃತಿಗಳನ್ನು ಆಳವಾಗಿ ವಿಶ್ಲೇಷಿಸುವ, ಅದರಿಂದ ಎಲ್ಲವನ್ನೂ ಒಳಗೊಳ್ಳುವ ಘನ ಪ್ರಮೇಯಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಇದ್ದವರ ಜಾಗದಲ್ಲೀಗ ತಾಂತ್ರಿಕ ವಿದ್ಯಾಭ್ಯಾಸ ಪರಿಣತರು ಕೂತಿದ್ದಾರೆ; ವೃತ್ತಿ ಸಂಬಂಧಿತ ತಾಂತ್ರಿಕ ಕೌಶಲಗಳನ್ನು ಕರಗತ ಮಾಡಿಕೊಳ್ಳುವುದು, ಎಡೆಬಿಡದೆ ದುಡಿದು ಹುದ್ದೆಯ ಮೆಟ್ಟಿಲುಗಳನ್ನೇರುವುದು ಹೇಗೆ ಎಂದು ಅವರು ಕೊಡುವ ಉಪದೇಶಾಮೃತವೇ ಯುವಜನತೆಯ ಮನಸೂರೆಗೊಳ್ಳುವ ಸದ್ಯದ ಬೌದ್ಧಿಕ ಚಿಂತನೆ ಆಗಿಬಿಟ್ಟಿದೆ ಎಂಬುದು. ಇದು ನಮ್ಮಲ್ಲೂ ಧಾರಾಳವಾಗಿ ಅನ್ವಯವಾಗುತ್ತದೆ. ನಿಮ್ಮ ಟಿಪ್ಪಣಿ? ಇತ್ತೀಚಿನ ತನ್ನ ಪ್ರತಿಭಟನಾತ್ಮಕ ಬರಹ ಗುಚ್ಛದಲ್ಲಿ (Because We say so) ವಿಚಾರಜ್ಞ ನೋಮ್ ಚೋಮ್ ಸ್ಕಿ ಸಹ ‘‘ವಿಶ್ವವಿದ್ಯಾನಿಲಯಗಳನ್ನು ಚಿಂತನೆ, ಪ್ರತಿಭಟನೆಯ ಕೇಂದ್ರಗಳಾಗದಂತೆ ಮಾಡಿದ ಈ ಬೆಳವಣಿಗೆಯ ಬಗ್ಗೆ ಪ್ರಸ್ತಾಪಿಸುತ್ತಾರೆ’’ ಎಂದು ಓದಿದೆ. ತಾಂತ್ರಿಕ ಬುದ್ಧಿವಂತರಿಗೆ ಇರುವ ಎಡಬಿಡಂಗಿ ಧೋರಣೆಗಳೂ ಪ್ರಶ್ನೆಗೆ ಯೋಗ್ಯ. ಉದಾಹರಣೆಗೆ ಅವರಿಗೆ ಐಷಾರಾಮಿ ಜೀವನವೂ ಬೇಕು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನೂ ಮಾಡಬೇಕು. ವಿಚಾರವಂತಿಕೆಯೂ ಬೇಕು, ಮೂಢನಂಬಿಕೆಯೂ (ಒಳ್ಳೆಯದನ್ನು ಮಾಡಿದರೆ) ಇರಲೇನಂತೆ ಎಂಬ ಧೋರಣೆ. ಬೌದ್ಧಿಕರಾಗಿರಬೇಕು ಜತೆಗೆ ‘‘ಕ್ರೇಝಿ’’ ಮದುವೆಗಳನ್ನೂ ಆಯೋಜಿಸಬೇಕು. ಆ ‘ಇಸಂ’ ಈ ‘ಇಸಂ’ ಏಕೆ ಸಮಸ್ಯೆ ನಿವಾರಿಸುವುದಿದ್ದರೆ ಎಲ್ಲವನ್ನೂ ‘ಮಿಕ್ಸ್’ ಮಾಡಬಾರದೇಕೆ ಎಂಬುದು ಅವರ ಮುಗ್ಧ (ಮೂಢ?!) ಚಿಂತನೆ. ಇವರನ್ನು ನೋಡುತ್ತಾ ಮೂರ್ನಾಲ್ಕು ದಶಕಗಳ ಹಿಂದೆ ಇದ್ದ ವಿಚಾರವಂತ ತರುಣ ಸಮುದಾಯWe are the last of the liberals!  
ಎಂದೀಗ ಉದ್ಗರಿಸುವುದನ್ನು ಗಮನಿಸಬಹುದು. ಜತೆಗೆ ತಾಂತ್ರಿಕ ಮೇಧಾವಿಗಳ ಸೃಜನಶೀಲತೆಯೆಲ್ಲ ಅವರ ಟೆಕ್ ಆವಿಷ್ಕಾರಗಳಲ್ಲಿ ಮುಗಿದುಹೋಗುತ್ತದೆ. ಅವು ಮಾರುಕಟ್ಟೆಗೆ ನುಗ್ಗಿ ಭಾವನಾತ್ಮಕತೆಯನ್ನೇ ಬಂಡವಾಳವಾಗಿಸಿಕೊಂಡ, (neuro marketing  ಎಂದು ತಜ್ಞರು ಹೆಸರಿಟ್ಟಿರುವ) ‘‘ನಾನು ಕೊಳ್ಳುತ್ತೇನೆ; ಆದ್ದರಿಂದ ಇದ್ದೇನೆ’’ ಎಂಬ ಸ್ಥಿತಿಗೆ ಗ್ರಾಹಕನನ್ನು ತಳ್ಳುವುದು ಸುಳ್ಳೇನಲ್ಲ. ಮುಕ್ತ ಮಾರುಕಟ್ಟೆಯ dumbing down- (ಮೂಢರಾಗಿಸುವ) ಪರಿಣಾಮ ಸಹ ಮನುಷ್ಯರ ಬೌದ್ಧಿಕ ರುಚಿಹೀನತೆಗೆ ಕಾರಣವಾಗಿದೆ ಎಂದು ಮೇಲಿನ ಅಂಶದ ಆಧಾರದ ಮೇಲೆ ತರ್ಕಿಸಬಹುದು.

ನಿಮ್ಮ ಈ ವಿಚಾರ ನನ್ನನ್ನು ಚಿಂತನೆಗೆ ಹಚ್ಚಿದಂತೆಯೇ ಚಿಂತೆಗೂ ಗುರಿಮಾಡಿದೆ. ಈ ಎಲ್ಲ ವಿಚಾರಗಳನ್ನೂ ಅದೆಷ್ಟು ಸೊಗಸಾಗಿ ಹೇಳಿದ್ದೀರೆಂದರೆ ಅವಕ್ಕೆ ನಾನು ಸೇರಿಸುವುದೇನೂ ಉಳಿದಿಲ್ಲ. ಆದರೂ ಒಂದೆರಡು ವಿಷಯಗಳು, ಅವು ಅಡ್ಡ ಚಿಂತನೆಯವಾದ್ದರಿಂದ, ಇಲ್ಲಿ ಪ್ರಸ್ತುತವೆಂದು ತೋರುತ್ತದೆ. ಒಂದು, ಮೂಲಭೂತ ವಿಜ್ಞಾನಗಳು ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿ. ವಿಜ್ಞಾನಿಗೆ ಸಿಗುವ ಸಂಬಳಕ್ಕಿಂತಲೂ ತಂತ್ರಜ್ಞಾನಿಗೆ ಹೆಚ್ಚು ಸಿಗುತ್ತದೆ--ಸಿಗಬಾರದು ಎಂದಲ್ಲ, ಆದರೆ ವಿಜ್ಞಾನಕ್ಕೆ ಬರುವ ಜನ ಕಡಿಮೆಯಾಗುತ್ತಾರೆ ಎನ್ನುವ ಚಿಂತೆ. ಸಾಮಾಜಿಕ ಮತ್ತು ಮಾನವಿಕ ಶಿಸ್ತುಗಳು ಯುವ ಜನರನ್ನು ಆಕರ್ಷಿಸುವುದೇ ಇಲ್ಲ. ಇನ್ನು ತಾತ್ವಿಕ ಚಿಂತನೆಗೆ (ತತ್ವಜ್ಞಾನಕ್ಕೆ) ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಜನ ಬಹಳ ಕಡಿಮೆ.

 ದೆಕಾರ್ತ್, ವೋಲ್ಟೇರ್, ರೂಸೋ, ಸ್ಪಿನೋರಝಾ, ಕಾಂಟ್, ಕಿರ್ಕಗಾರ್ಡ್, ಹೆಗೆಲ್, ಮಾರ್ಕ್ಸ್ ಮುಂತಾದವರನ್ನು ಪರ್ಯಾಯವಾಗಿ ಉಲ್ಲೇಖಿಸಿ ಅಂಥವರು ನಮ್ಮ ಯುಗದಲ್ಲಿ ಯಾಕಿಲ್ಲ ಎಂಬ ವಿಸ್ಮಯ ವ್ಯಕ್ತಪಡಿಸುವ ಲೇಖನ ಮತ್ತು ‘‘ನಮ್ಮ ಕಾಲದ ಪ್ರೊಪೆಶನಲಿಸಂ (ಔದ್ಯೋಗಿಕತ್ವ) ಕುರಿತಾದ ಒಲವು’’ ಎಂದು ಅದು ಹುಡುಕಿಕೊಳ್ಳುವ ಕಾರಣದ ಪ್ರಸ್ತಾಪ ಇದೆ. ವಿಜ್ಞಾನ, ತತ್ವಜ್ಞಾನ, ವೈಚಾರಿಕತೆ ಮುಂತಾದವು ನಿಧಾನ ಲಯದ ಸಂಗತಿಗಳು; ಇಂದಿನದು ವೇಗ ಯುಗ. ಬೇಗ ಬೇಗನೆ ಮುಂದರಿಯಬೇಕು, ಉನ್ನತ ಹುದ್ದೆಗೆ ಏರಬೇಕು ಎನ್ನುವವರಿಂದ ಇದು ಸಾಧ್ಯವಿಲ್ಲ. ಅವರ ದೃಷ್ಟಿಯಲ್ಲಿ ಇದಕ್ಕೆ ಸುಲಭದಲ್ಲಿ ಅಳೆಯಬಹುದಾದ ವೌಲ್ಯವೂ ಇಲ್ಲ. ಒಳ್ಳೆಯ ಐಡಿಯಾ ಒಂದನ್ನು ಹೇಗೆ ಅಳೆಯುತ್ತೀರಿ? ಅಲ್ಲದೆ ಐಡಿಯಾಕ್ಕೆ ಪೇಟೆಂಟ್ ಕೂಡ ಇಲ್ಲ-ಅಸ್ತಿತ್ವಕ್ಕೆ ಬಂದ ಮೇಲೆ ಅದು ಜನರದ್ದು. ಇನ್ನೊಂದು ವಿಷಯ: ತಾಂತ್ರಿಕ ರಂಗದಲ್ಲಿ ಕೆಲಸ ಮಾಡುವ ವ್ಯಕ್ತಿ ತನ್ನನ್ನು ತಾನು ಒಬ್ಬ ಉದ್ಯೋಗಿಯಾಗಿ ಗುರುತಿಸುತ್ತಾನಲ್ಲದೆ ಒಬ್ಬ ಚಿಂತಕನಾಗಿ ಅಲ್ಲ; ತಾನು ಕೆಲಸ ಮಾಡುವ ಕಂಪೆನಿಯ ಐಡೆಂಟಿಟಿಯೇ ಆತನ ಐಡೆಂಟಿಟಿ ಕೂಡ. ಆ ಕಂಪೆನಿಯಲ್ಲಿ ಅವನು ಕರಗಿಹೋಗುತ್ತಾನೆ. ಇದು ಮಾರ್ಕ್ಸ್ ಹೇಳುವ ಏಲಿಯನೇಶನ್. ಆದರೆ ವಿಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಹೀಗಿಲ್ಲ (ಇದರಲ್ಲಿ ವಿವಿಧ ಕಲೆಗಳೂ ಸೇರಿವೆ). ಅಲ್ಲಿ ವ್ಯಕ್ತಿತ್ವಕ್ಕೆ, ಸ್ವಂತಿಕೆಗೆ ಬೆಲೆಯಿರುತ್ತದೆ. ಆದರೆ ಒಂದು ಕ್ಷಣ ಇನ್ನೊಂದು ಮಗ್ಗುಲಿನಿಂದ ಚಿಂತಿಸೋಣ: ಒಂದು ಸಮಾಜ ಹಳಿತಪ್ಪದೆ ಸಾಗಬೇಕಿದ್ದರೆ ಅದಕ್ಕೆ ಅನೇಕ ಬಗೆಯ ಕೆಲಸಗಾರರ ಅಗತ್ಯವಿರುತ್ತದೆ, ಬರೇ ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳು, ಕವಿಗಳು ಮತ್ತು ಕಲಾವಿದರಷ್ಟೇ ಸಾಲದು. ಕೃಷಿಕರು, ಕ್ಲರ್ಕ್‌ಗಳು, ಕುಶಲ ಕರ್ಮಿಗಳು, ಅಧ್ಯಾಪಕರು, ಪೊಲೀಸರು, ಸೈನಿಕರು, ವಾಹನ ಚಾಲಕರು, ಲೆಕ್ಕಿಗರು, ಅಮಿತಾಕ್ಷರರು ಎಲ್ಲರೂ ಬೇಕು. ಆದ್ದರಿಂದ ಅಮೂರ್ತ ನೆಲೆಗಳಲ್ಲಿ ಚಿಂತಿಸುವವರು ಮೇಲ್ಮಟ್ಟದವರು, ಉಳಿದವರು ಕೀಳು ಎಂಬ ಎಲೀಟಿಸ್ಟ್ ಮನೋಭಾವನೆ ಸರಿಯಲ್ಲ. 11. ಪ್ರಸಿದ್ಧ ಕಾದಂಬರಿಕಾರ ಡೇನಿಯಲ್ ಡೀಪೊನ, 18ನೆ ಶತಮಾನದ ಲಂಡನ್ ಭೂಮಿಕೆಯಾಗಿರುವMoll  Flanders"‘ ಕಾದಂಬರಿಯನ್ನು ಈ ಯುಗದ ಹೊಸ ನೋಟದಲ್ಲಿ ನೋಡುತ್ತ ಒಬ್ಬ ಸಂಶೋಧನಾರ್ಥಿ ಹೀಗೆ ಬರೆಯುತ್ತಾರೆ: "London's rapidly changing economic climate- one transitioning from agrarian to a more commercial economy- creates what I call a "bull market" for Moll to change her future.    ಮುಂದುವರಿದು, ಅವರು ಮಂಡಿಸುವ ಗ್ರಹಿಕೆ, ಇಂದಿನ ಉದಾರ/ಮುಕ್ತ ಮಾರುಕಟ್ಟೆ ಸಿದ್ಧಾಂತ ನಮ್ಮ ಸುತ್ತ ಹರಡಿರುವ ವೌಲ್ಯ ಪಲ್ಲಟವನ್ನೇ ಚಿತ್ರಿಸುತ್ತಿರುವುದು ಕುತೂಹಲಕಾರಿ:"...the feelings of romantic love and religious transcendence are not usually associated with money and most would consider this immoral...Defoe suggests that economics and morality are not related in that economics is an amoral occupation. ಇದು ಇಷ್ಟಕ್ಕೇ ಮುಗಿಯುವುದಿಲ್ಲ. Crimes induced by Economy being protected by legal  provision ಅಂದರೆ ಆರ್ಥಿಕ ಅಪರಾಧಗಳಿಗೆ ಇರುವ ಆಯಕಟ್ಟಿನ ಕಾನೂನಾತ್ಮಕ ಕುಮ್ಮಕ್ಕುಗಳು ಎಲ್ಲ ನ್ಯಾಯ-ನೀತಿ ಪರಿಕಲ್ಪನೆಗಳನ್ನು ಅಪಹಾಸ್ಯ ಮಾಡುತ್ತವೆ ಎಂಬ ವಿವರಣೆ ಈ ಕಾಲಕ್ಕೂ ಸಲ್ಲುತ್ತಿದೆ. ತಮ್ಮದೇ ರೀತಿಯಲ್ಲಿ ಈ ಜನರು ಬೆಳೆಸಿಕೊಳ್ಳುವ ವರ್ಚಸ್ಸು, ಗಳಿಸುವ ಭಾವನಾತ್ಮಕ ಜನಬೆಂಬಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಅಣಕಿಸುತ್ತದೆ. ಉದಾಹರಣೆಗೆ ರಾಬಿನ್‌ಹುಡ್ ಎನಿಸಿಕೊಳ್ಳುವ ‘‘ಡಾನ್’’ಗಳು, ಎಲ್ಲ ಬಗೆಯ ಅನೈತಿಕ ದಾರಿ ಅನುಸರಿಸಿಯೂ, ಕೊಡುಗೈದಾನಿ (ಯಾರ ಖರ್ಚಿನಲ್ಲಿ?)ಗಳಾಗುವ ಮುಖ್ಯಮಂತ್ರಿಗಳು, ಇನ್ನಿತರ ರಾಜಕಾರಣಿಗಳು.
*
“The King is dead, long live the King!”

 ಎಂಬ ಜೋಕ್ ಒಂದು ಇದೆ. ಆರ್ಥಿಕ ಕುಸಿತ ಹೇಗೆ ಅನೀತಿಯನ್ನು ಹುಟ್ಟಿಹಾಕಬಲ್ಲುದೋ (ಮೋಲ್ ಪ್ಲಾಂಡರ್ಸ್ ಅಂಥ ಹಿನ್ನೆಲೆಯಿಂದ ಬಂದವಳು), ಹುಲುಸಾದ ಇಕಾನಮಿ ಕೂಡ ಅ-ನೀತಿಗೆ ಕಾರಣವಾಗಬಲ್ಲದು. ನಿಮಗೆ ಸಿನೆಮಾ ಪ್ರಿಯವಾದ ವಿಷಯವಾದ್ದರಿಂದ ಹೇಳುತ್ತೇನೆ: ಹೇಗೆ ಶ್ರೀಮಂತ ನಟರಿಂದ, ಉದ್ಯಮಿಗಳಿಂದ, ಡಾಕ್ಟರರಿಂದ, ರಾಜಕಾರಿಣಿಗಳಿಂದ ಹಣ ವಸೂಲಿ ಮಾಡುವ ಭೂಗತ ಮಾಫಿಯಾವೇ ಜನಪ್ರಿಯ ಸಿನೆಮಾಗಳನ್ನು ಪೋಷಿಸುತ್ತಿವೆ ಎನ್ನುವುದನ್ನು. ಈ ಸಿನೆಮಾಗಳು ಭೂಗತರನ್ನೇನೂ ಕೊಂಡಾಡುವುದಿಲ್ಲ, ವಾಸ್ತವದಲ್ಲಿ ಅವರು ವಿಲನುಗಳಾಗಿಯೇ ಇರುತ್ತಾರೆ. ಹಾಗಿಲ್ಲದಿದ್ದರೆ ಜನ ಮೆಚ್ಚುವುದಿಲ್ಲ. ಆದರೂ ಭೂಗತರು ಸಿನೆಮಾ ಕ್ಷೇತ್ರವನ್ನು ನಿಯಂತ್ರಿಸುತ್ತಾರೆ. ಎಂದರೆ ನೀವು ಹೇಳಿದಂತೆ ಹಣ ಅ-ಮೋರಲ್. ಆದರೆ ಅದಕ್ಕೆ ವ್ಯಾಲ್ಯೂ ಇಲ್ಲದಿಲ್ಲ. ಹಣವೇ ವ್ಯಾಲ್ಯೂ. ಇನ್ನೂ ಒಂದು ವಿದ್ಯಮಾನವನ್ನು ನೋಡಿರಿ: ಎಲ್ಲಿ ಏನೇ ಟ್ರಾಜಡಿಯಾದರೂ-ಉದಾ: ವೀರಪ್ಪನ್, ದಂಡು ಪಾಳ್ಯ, ತಾಜ್ ಆಕ್ರಮಣ, ನಿರ್ಭಯಾ ಕೇಸ್-ಅದನ್ನು ಸಿನೆಮಾ ಮಾಡಿ ಜನರಿಗೆ ಉಣಬಡಿಸುವ ಮಧ್ಯವರ್ತಿಗಳಿದ್ದಾರೆ. ನೋಡಿ ಖುಷಿಪಡುವ ಜನರೂ ಇದ್ದಾರೆ. ಇವರಿಗೂ ಯಾವ ಮೊರಾಲಿಟಿಯೂ ಇಲ್ಲ. ಕ್ರಮೇಣ ರಾಬಿನ್‌ಹುಡ್ ಆಗುವುದು ವೀರಪ್ಪನೇ-ಅವನನ್ನು ಎದುರಿಸಿದ ಯಾರೂ ಅಲ್ಲ. ಮನುಷ್ಯನಿಗೆ ಇವಿಲ್ ಕುರಿತಾದ ಆಕರ್ಷಣೆ ಒಂದು ಪ್ರಾಕೃತ ಬಳುವಳಿ ಎನಿಸುತ್ತದೆ. If you look at the Chasm, the Chasm looks at you’ ಎನ್ನುವ ನೀತ್ಸೆಯದೊಂದು ಮಾತಿದೆ! 12. ನಮ್ಮ ಸುತ್ತ (ಅಮೆರಿಕ, ಇಂಡಿಯಾ ಎಂಬ ಭೇದವಿಲ್ಲದೆ) ಈಗ ಕಾಣಸಿಗುವ ಉದ್ದೀಪನಗೊಂಡ ದೇಶಪ್ರೇಮ, ಪರಂಪರೆಯ ಭಾವುಕ ಆರಾಧನೆ, ಸಂಶೋಧನೆಗೆ ಪಕ್ಕಾಗದ ವಿಚಾರಗಳನ್ನು ‘‘ವೈಜ್ಞಾನಿಕ’’ ಎಂದು ಹರಡುವ ಉತ್ಸಾಹ, ‘‘ಅಪಾಯ ಹತ್ತಿರದಲ್ಲಿದೆ’’ ಎಂದು ನಿಸರ್ಗ ಕೊಡುತ್ತಿರುವ ಸಂದೇಶಗಳನ್ನು ಲೆಕ್ಕಿಸದ, ಪರಿಸರ ವಿಜ್ಞಾನ, ಸಂಶೋಧನೆ, ಸಮೀಕ್ಷೆಗಳನ್ನು ಧಿಕ್ಕರಿಸುವ ಮೊಂಡುವಾದಗಳಿಗೂ ಭಾವನಾತ್ಮಕತೆ- Emotionalism   ಕಾರಣವಾಗಿದೆ ಎಂಬ ವಿಶ್ಲೇಷಣೆ ಕುರಿತಂತೆ...
ದೇಶಪ್ರೇಮ ರಾಷ್ಟ್ರೀಯತೆಗೆ ಸಂಬಂಧಿಸಿದ ವಿಷಯ. ಒಂದು ದೇಶವೆಂದರೆ (ಅಥವಾ ರಾಷ್ಟ್ರವೆಂದರೆ) ಒಂದು ಏಕ ಜನಾಂಗ, ಏಕ ಭಾಷೆ, ಏಕ ಧರ್ಮವಿರುವ ಒಂದು ಭೂಪ್ರದೇಶ ಎನ್ನುವ ಕಲ್ಪನೆ ಬಹಳ ಹಿಂದಿನದು; ಬಹುಶಃ ನಮ್ಮ ಪೂರ್ವದ ಬುಡಕಟ್ಟು ಸಂಸ್ಕೃತಿಗೆ ಸಂಬಂಧಿಸಿದುದು. ಇದು ತೀರ ಇತ್ತೀಚಿನ ವರೆಗೆ, ಈಗಲೂ ಜನರಲ್ಲಿ ನೆಲೆನಿಂತ ಭಾವನೆ. ಜಗತ್ತಿನ ಹಲವು ಯುದ್ಧಗಳು, ಸಂಘರ್ಷಗಳು ಇಂಥ ರಾಷ್ಟ್ರೀಯತೆಯ ಕಾರಣಕ್ಕೆ ಆಗಿಹೋಗಿವೆ, ಹಾಗೂ ಅಂಥ ಪ್ರತಿಯೊಂದು ಯುದ್ಧವೂ ವಿಭಿನ್ನ ಜನಾಂಗಗಳ ಸಂಕರಕ್ಕೂ ಕಾರಣವಾಗಿವೆ. ಇಂದು ಎಲ್ಲೆಡೆಯೂ ಬೇರೆ ಬೇರೆ ಕಾರಣಗಳಿಂದಾಗಿ ಶುದ್ಧ ರಾಷ್ಟ್ರ (= ಭೂಮಿಯ ಮೇಲಣ ಸ್ವರ್ಗ) ಎನ್ನುವುದೊಂದು ಇಲ್ಲ. ಏಕ ಭಾಷೆ, ಏಕ ಧರ್ಮವನ್ನು ನಂಬುವವರಲ್ಲಿ ಕೂಡಾ ಭಿನ್ನ ಬುಡಕಟ್ಟುಗಳು ಎಂಬ ಕಾರಣಕ್ಕೆ ಸಂಘರ್ಷಗಳು ಹುಟ್ಟುತ್ತಿರುವುದನ್ನು ಕಾಣುತ್ತೇವೆ. ಏಕ ಭಾಷೆಯಾಗಿದ್ದರೆ, ಏಕ ಉಪಭಾಷೆಯಾಗಿರುವುದಿಲ್ಲ; ಏಕ ಧರ್ಮವಾಗಿದ್ದರೆ, ಏಕ ಪಂಥವಾಗಿರುವುದಿಲ್ಲ!
ಒಂದು ಕಾಲದಲ್ಲಿ ಜನಸಮೂಹಗಳ ಅಭಿವೃದ್ಧಿಗೆ ಸಹಕಾರಿಯಾಗಿದ್ದ ರಾಷ್ಟ್ರೀಯತೆ, ದೇಶಪ್ರೇಮ, ಮಾತೃಭೂಮಿ ಇತ್ಯಾದಿಗಳು ಇಂದು ಜನರನ್ನು ಒಗ್ಗೂಡಿಸುವ ಶಕ್ತಿಗಳಾಗಿ ಉಳಿದಿಲ್ಲ. ಹಿಂದೆ ದೇಶಗಳನ್ನು ಹಿಗ್ಗಿಸುವ ಪ್ರಮೇಯ ಚಾಲ್ತಿಯಲ್ಲಿತ್ತು; ಈಗ ದೇಶಗಳು ಚಿಕ್ಕ ಚಿಕ್ಕದಾಗಿ ಒಡೆಯುತ್ತಿವೆ. ಒಂದೇ ದೇಶದೊಳಗಿನ ಪ್ರಾಂತಗಳು ಕೂಡ ಕ್ಷುಲ್ಲಕ ಕಾರಣಗಳಿಗೋಸ್ಕರ ವಿಭಜನೆಗೊಳ್ಳುತ್ತಿವೆ. ಅವು ಕ್ಷುಲ್ಲಕವಲ್ಲ ಎಂದು ವಾದಿಸಬಹುದು. ತೆಲಂಗಾಣ ರಾಷ್ಟ್ರೀಯತೆಯ ಕತೆಯನ್ನೇ ನೋಡಿದರೆ, ‘‘ತೆಲುಗು ತಲ್ಲಿ’’ ತೆಲುಗರನ್ನು ಒಟ್ಟಾಗಿ ನಿಲ್ಲಿಸಲು ಅಸಮರ್ಥಳಾದಳು. ತೆಲಂಗಾಣ ಪ್ರಾಂತದ ಸ್ಥಾಪನೆಗೋಸ್ಕರ ಎಷ್ಟೋ ಮಂದಿ ಪ್ರಾಣ ತೆತ್ತರು, ಕೆಲವರು ಗುಂಡಿಗೆ ಬಲಿಯಾಗಿ, ಹಲವರು ಆತ್ಮಹತ್ಯೆ ಮಾಡಿಕೊಂಡರು. ಒಂದು ಪ್ರಾಂತಕ್ಕೋಸ್ಕರ ಹೀಗಾದರೆ ಇನ್ನು ದೇಶದ ಮಾತೇನು? ಇಮೋಶನಲಿಸಂ ಎಂದರೆ ಇದು. ಈವತ್ತು ಯಾವುದೇ ದೇಶವನ್ನು ತೆಗದುಕೊಂಡರೂ ಅಲ್ಲಿ ‘‘ಮೈನಾರಿಟಿ’’ ಜನರು ಇದ್ದೇ ಇರುತ್ತಾರೆ. ಅವರು ಚಾರಿತ್ರಿಕ ಕಾರಣಗಳಿಗಾಗಿ ಅಲ್ಪಸಂಖ್ಯಾತ ಸ್ಥಿತಿಯಲ್ಲಿ ಇರುವವರು; ಅಥವಾ ಕೆಲಸ ಹುಡುಕಿ, ಇಲ್ಲವೇ ನಿರಾಶ್ರಿತರಾಗಿ, ಕಾನೂನು ಬದ್ಧವಾಗಿಯೋ, ಅಥವಾ ನುಸುಳಿಯೋ ಒಳ ಬಂದವರಾಗಿರುತ್ತಾರೆ. ಬೋಟ್ ಪೀಪಲ್. ಇವೆಲ್ಲಾ ಸಂಘರ್ಷ ವಲಯಗಳು. ಇಂಥ ಹಿನ್ನೆಲೆಯಲ್ಲಿ ದೇಶದ ಪರಿಕಲ್ಪನೆ ಸಡಿಲಾಗುತ್ತದೆ. ಇನ್ನು ದೇಶಪ್ರೇಮದ ಬಗ್ಗೆ ನಿಲುವುಗಳು ಒಂದೊಂದು ಪಂಗಡಗಳಿಗೆ ಒಂದೊಂದು ರೀತಿ ಇದ್ದರೆ ಆಶ್ಚರ್ಯ ವಿಲ್ಲ. ದೇಶಪ್ರೇಮದ ಇನ್ನೊಂದು ಮುಖ ಕ್ಝೆನೊಪೋಬಿಯಾ, ಅರ್ಥಾತ್ ಪರರ ಕುರಿತಾದ ಸಂಶಯ. ಇಲ್ಲಿ ದೇಶ ಎಂದರೆ ತನ್ನ ಗುಂಪು, ಧರ್ಮ ಅಥವಾ ಪಂಥವೂ ಆಗಿರಬಹುದು.


ಆದರೆ ಸದ್ಯ ಪ್ರಸ್ತುತವಾಗುವ ಒಂದು ಪ್ರಶ್ನೆಯೆಂದರೆ, ರಾಷ್ಟ್ರ ಎಂಬ ಪದ್ಧತಿಯಿಲ್ಲದೇನೇ ಆಧುನಿಕರು ಜೀವಿಸಬಲ್ಲರೇ ಎನ್ನುವುದು. ಇಂದಿಗೆ ಅದೊಂದು ಅಗತ್ಯದ ಘಟಕ ಎನಿಸುತ್ತದೆ. ರಾಷ್ಟ್ರ ಬೇಕಾದರೆ ಗಡಿಯನ್ನು ಗುರುತಿಸಬೇಕಾಗುತ್ತದೆ, ಗಡಿ ಕಾಯಲು ಸೈನ್ಯ ಬೇಕಾಗುತ್ತದೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಪಾಸ್‌ಪೋರ್ಟ್ ಬೇಕಾಗುತ್ತದೆ, ಆಡಳಿತಕ್ಕೆ ಜನರು ಬೇಕಾಗುತ್ತಾರೆ, ಒಂದು ರಾಜಕೀಯ ವ್ಯವಸ್ಥೆ-ನ್ಯಾಯಾಂಗ, ಕಾರ್ಯಾಂಗ ಎಲ್ಲವೂ ಬೇಕಾಗುತ್ತವೆ. ಮತ್ತೆ ಸ್ಕ್ವೇರ್ ಒನ್‌ಗೆ. ಅದಲ್ಲ, ಪ್ರಿಮಿಟಿವ್ ಜನರಂತೆ ಎಲ್ಲಿ ಬೇಕಾದರೂ ಹೋಗಿ ಇರಬಹುದು ಎನ್ನುವುದಾದರೆ ಅದರ ಪರಿಣಾಮದ ಕಲ್ಪನೆಯೇ ನಮಗಿಲ್ಲ. ಒಂದು ಆದರ್ಶ ರಾಷ್ಟ್ರ ಹೇಗಿರಬೇಕು, ಅದನ್ನು ಸಾಧ್ಯಗೊಳಿಸುವುದು ಹೇಗೆ ಎಂದು ಯಾರಾದರೂ ತಿಳಿಸಬಲ್ಲರೇ? ಮನುಷ್ಯ ಇದುವರೆಗೂ ಪ್ರಯೋಗ ನಡೆಸುತ್ತ, ಬದಲಿಸುತ್ತ, ತಿದ್ದುತ್ತ, ತೀಡುತ್ತ ಬಂದಿದ್ದಾನೆ; ಇನ್ನೂ ಹೀಗೆಯೇ ಅನಿಸುತ್ತದೆ. 13. ಇದರ ವಿರೋಧಿ ಅಲೆಯಂತೆ ಕಾಣುವ ಅತಿ ಶಿಷ್ಟ ಕಾಮಿಡಿ- ರೂಪು, ಚಹರೆ, ಅಂಗಹೀನತೆ, ಸ್ಥೂಲಕಾಯ, ಕಿರಿದಾದ ಉಡುಗೆ-ತೊಡುಗೆ, ಬಡತನ, ದಾರಿದ್ರ್ಯ, ಸಮುದಾಯಗಳ ವಿಲಕ್ಷಣತೆ, ಆರ್ಥಿಕ ಮುಗ್ಗಟ್ಟು, ಘೋರ ದುರಂತ- ಎಲ್ಲ ಅಂದರೆ ಎಲ್ಲವನ್ನೂ ನವ ಯುಗದ "Standup Comedy"     ‘ ಮಾಡುತ್ತಿದೆ. ಇದು, ಅತಿ ಭಾವನಾತ್ಮಕತೆ Emotionalism   ತಡೆಯಲು ಎಂದಾದರೂ ಸಹಾಯಕವಾಗಬಹುದು ಎಂದು ನಿಮಗನ್ನಿಸುತ್ತದೆಯೇ?

ಹೌದು, ಕಾಮೆಡಿ ನೈಟ್ಸ್, ಕಾಮೆಡಿ ಶೋಗಳ ಕುರಿತಾಗಿ ತಾನೆ ನೀವು ಹೇಳುವುದು? ಇವು ಅತಿ ಭಾವನಾತ್ಮಕತೆಯನ್ನು ತಡೆಯಲು ಸಹಾಯ ಮಾಡುತ್ತವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಗುವುದು, ನಗಿಸುವುದು ಮನುಷ್ಯನ ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಕೆಲವು ಸಲ ಇಂಥ ಹಾಸ್ಯಗಳು ಅಪಹಾಸ್ಯವಾಗುವುದೂ ಇದೆ! ಹಿಂದೆ ರಾಜ ಮಹಾರಾಜರು, ಸರ್ವಾಧಿಕಾರಿಗಳು ಕೂಡ ತಮ್ಮ ಆಸ್ಥಾನದಲ್ಲಿ ವಿದೂಷಕರನ್ನು ಇಟ್ಟುಕೊಂಡಿದ್ದರು. ಶೇಕ್ಸ್ ಪಿಯರನ ನಾಟಕಗಳಲ್ಲಿ ನಾವಿದನ್ನು ಕಾಣಬಹುದು. ಕಿಂಗ್ ಏಂಡ್ ಕ್ಲೌನ್ ಒಟ್ಟಿಗೇ ಹೋಗುತ್ತಾರೆ. ಹಾಸ್ಯವೆಂದರೆ ಕಾರ್ನಿವಲ್ ಇದ್ದಂತೆ. ಸರ್ವಾಧಿಕಾರ ಅದನ್ನೂ ತನ್ನ ಅಗತ್ಯಕ್ಕೆ ಬಳಸಿಕೊಳ್ಳುತ್ತದೆ. ಬಖ್ತೀನ್ ಈ ಕುರಿತು ಸ್ವಾರಸ್ಯಕರವಾದ ವಿಶ್ಲೇಷಣೆ ನಡೆಸಿದ್ದಾನೆ. ಆದರೂ ಅಧಿಕಾರ ವರ್ಗದ ಜತೆ ಹಾಸ್ಯಗಾರರಿಗೆ ಸುರಳಿತ ಸಂಬಂಧ ಇಲ್ಲದಿರುವುದೇ ಹೆಚ್ಚು. ಕಟ್ಟಾ ಧಾರ್ಮಿಕರೂ ಹಾಸ್ಯವನ್ನು ಸಹಿಸುವುದಿಲ್ಲ. ಮೋಲಿಯರ್‌ನ ಜೀವನ ಇದಕ್ಕೆ ಉದಾಹರಣೆ. ಕಾಮೆಡಿ, ಭಾವನಾತ್ಮಕತೆಯನ್ನು-ಅದು ಪ್ರೀತಿ ಪ್ರೇಮವಾಗಿರಲಿ, ಧರ್ಮ ದೈವಗಳಾಗಿರಲಿ-ನಗೆಗೆ ಗುರಿಯಾಗಿಸುವ ಮೂಲಕ ಜನರ ಹುಬ್ಬುಗಂಟನ್ನು ಸಡಿಲಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಪೂರ್ವ ದೇಶಗಳ ಕಡೆ ಹೋದ ಬುದ್ಧಿಸಂ, ಬುದ್ಧನನ್ನು ಸಹಾ ಲಾಫಿಂಗ್ ಬುದ್ಧನನ್ನಾಗಿ ಮಾಡಿದ್ದನ್ನು ಗಮನಿಸಬೇಕು.
ನೀವು ಎತ್ತಿದ ವಿಚಾರಗಳಿಗೆ ನನ್ನಿಂದಾದ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದೇನೆ. ಕೊನೆಯಲ್ಲಿ ಒಂದು ಮಾತು. ಬುದ್ಧಿಜೀವಿಗಳು ನೆನಪಿಡಲಿ ಎಂದು ಹೇಳುತ್ತೇನೆ. ಸಮಕಾಲೀನ ವಿದ್ಯಮಾನಗಳನ್ನು ವಿಶ್ಲೇಷಿಸುವಾಗ ಇದಮಿತ್ಥಂ ಎಂಬ ನಿರ್ಣಯವನ್ನು ಕೊಡುವುದು ಯಾರಿಂದಲೂ ಸಾಧ್ಯವಿಲ್ಲ-ನಿರ್ಣಯ ಕೊಡುವುದಕ್ಕೂ ಪ್ರಯತ್ನಿಸಬಾರದು. ಯಾಕೆಂದರೆ ನಮಗೇ ಇದೊಂದೂ ಪೂರ್ತಿಯಾಗಿ ಸ್ಪಷ್ಟವಾಗಿರುವುದಿಲ್ಲ. ಇದು ಕಿಟಿಕಿ ಬಂದ್ ಮಾಡಿ ಟ್ರೇನಿನಲ್ಲಿ ಕೂತು ಪ್ರಯಾಣಿಸಿದ ಹಾಗೆ, ಅಥವಾ ಏರೋಪ್ಲೇನಿನಲ್ಲಿ. ನಮ್ಮ ವಾಹನ ಚಲಿಸುತ್ತಿದೆಯೇ ಇಲ್ಲವೇ, ಚಲಿಸುತ್ತಿರುವುದಾದರೆ ಹಿಂದಕ್ಕೋ, ಮುಂದಕ್ಕೋ... ಎತ್ತ ಕಡೆಗೆ ಎನ್ನುವುದು ಗೊತ್ತಾಗುವುದಿಲ್ಲ. ಸಮಕಾಲೀನತೆ ಎಂದರೆ ಹಾಗೆ.

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News