×
Ad

ಬಾಲಕನಲ್ಲಿದ್ದ ಹೆಣ್ಣಿನ ಅಂಗಾಂಗಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ ವೈದ್ಯರು

Update: 2016-10-21 16:14 IST

ಬೆಂಗಳೂರು,ಅ.21: ಬೆಂಗಳೂರಿನಲ್ಲಿ ವಿಲಕ್ಷಣ ವೈದ್ಯಕೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 16 ವರ್ಷದ ಬಾಲಕನ ದೇಹದಲ್ಲಿ ಹೆಣ್ಣಿನ ಲೈಂಗಿಕ ಅಂಗಾಂಗಗಳು ಪತ್ತೆಯಾಗಿವೆ. ಈ ಬಾಲಕ ಹೆಣ್ಣಿನ ದೇಹದಲ್ಲಿ ಮಾತ್ರ ಇರುವ,ವಯಸ್ಸಿಗನುಗುಣವಾಗಿ ಬೆಳೆದಿದ್ದ ಗರ್ಭಕೋಶ, ಅಂಡಾಶಯ,ಡಿಂಬನಾಳ ಮತ್ತು ಪ್ರಾಥಮಿಕ ಹಂತದ ಯೋನಿಯನ್ನು ಹೊಂದಿದ್ದ. ಇದು ಅತ್ಯಂತ ಅಪರೂಪದ ಸ್ಥಿತಿಯಾಗಿದ್ದು,ವಿಶ್ವದಲ್ಲಿ ಈವರೆಗೆ ವರದಿಯಾಗಿರುವ ಕೇವಲ 10ನೇ ಪ್ರಕರಣವೆನ್ನಲಾಗಿದೆ.

  ವೈದ್ಯಕೀಯ ಭಾಷೆಯಲ್ಲಿ ‘ಪರ್‌ಸಿಸ್ಟಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್ (ಪಿಎಂಡಿಎಸ್)’ ಎಂದು ಕರೆಯಲಾಗುವ ಈ ದೇಹಸ್ಥಿತಿಯನ್ನು ಸರಿಪಡಿಸಲು ಈ ವರ್ಷದ ಜೂನ್‌ನಿಂದ ಆಗಸ್ಟ್ ನಡುವೆ ಪಶ್ಚಿಮ ಬಂಗಾಲ ಮೂಲದ ಈ ಬಾಲಕನಿಗೆ ಸರಣಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಇಲ್ಲಿಯ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ವೈದ್ಯರಾದ ಡಾ.ಮೋಹನ ಕೇಶವಮೂರ್ತಿ ಮತ್ತು ಡಾ.ಶಕೀರ್ ತಬ್ರೇಝ್ ಅವರು ಆತನಲ್ಲಿದ್ದ ಹೆಣ್ಣಿನ ಅಂಗಾಂಗಗಳನ್ನು ತೆಗೆದುಹಾಕುವ ಮೂಲಕ ಪುನರ್ ಜೀವನವನ್ನು ನೀಡಿದ್ದಾರೆ.

ಈ ಅಪರೂಪದ ದೇಹಸ್ಥಿತಿಯಲ್ಲಿ ರೋಗಿಗಳು(ಪುರುಷರು) ಸಾಮಾನ್ಯ ಪುರುಷ ಜನನಾಂಗಗಳ ಜೊತೆಗೆ ಸ್ತ್ರೀಯರ ಜನನಾಂಗಗಳಾದ ಗರ್ಭಕೋಶ ಮತ್ತು ಡಿಂಬನಾಳವನ್ನೂ ಹೊಂದಿರುತ್ತಾರೆ ಎಂದು ಡಾ.ಕೇಶವಮೂರ್ತಿ ತಿಳಿಸಿದರು.

ಪಿಎಂಡಿಎಸ್ ಪುರುಷರನ್ನು ಕಾಡುವ ಲೈಂಗಿಕ ಅಂಗಾಂಗಗಳ ಅಭಿವೃದ್ಧಿಯ ವೈಕಲ್ಯವಾಗಿದೆ. ತಾಯಿಯ ಗರ್ಭಕೋಶದಲ್ಲಿ ಭ್ರೂಣವು ಬೆಳೆಯುತ್ತಿರುವಾಗ ಮುಲ್ಲೇರಿಯನ್ ಡಕ್ಟ್‌ನಿಂದ ಗರ್ಭಕೋಶ ಮತ್ತು ಡಿಂಬನಾಳಗಳು ಹುಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ಗಂಡುಶಿಶುಗಳ ಆರಂಭಿಕ ಬೆಳವಣಿಗೆಯಲ್ಲಿ ಈ ಮುಲ್ಲೇರಿಯನ್ ಡಕ್ಟ್ ತುಂಡಾಗುತ್ತದೆ, ಆದರೆ ಪಿಎಂಡಿಎಸ್ ಇರುವವರಲ್ಲಿ ಈ ಡಕ್ಟ್ ಹಾಗೆಯೇ ಉಳಿದುಕೊಳ್ಳುತ್ತದೆ. ಆದರೆ ಈ ವೈಕಲ್ಯದೊಡನೆ ಹುಟ್ಟುವ ಮಕ್ಕಳು ಗಂಡಿನಲ್ಲಿರುವ ಸಾಮಾನ್ಯ ಎಕ್ಸ್‌ವೈ ಜೀವತಂತುಗಳನ್ನು ಮತ್ತು ಸಾಮಾನ್ಯ ಪುರುಷ ವೃಷಣಗಳನ್ನು ಹೊಂದಿರುತ್ತವೆ. ಹೀಗಾಗಿ ಅವು ಮೂಲದಲ್ಲಿ ಗಂಡುಗಳಾಗಿರುತ್ತವೆ.

ಪ್ರಸ್ತುತ ಪ್ರಕರಣದಲ್ಲಿ ಬಾಲಕನಿಗೆ ಒಂದು ವೃಷಣ ಹುಟ್ಟುವಾಗಲೇ ಇಲ್ಲವಾಗಿತ್ತು ಮತ್ತು ಶಿಶ್ನವು ತುದಿಯಲ್ಲಿ ಬಾಗಿತ್ತು, ಹೀಗಾಗಿ ಮೂತ್ರ ವಿಸರ್ಜನೆ ಕಷ್ಟಕರವಾಗಿತ್ತು. ಈ ವೈಕಲ್ಯವನ್ನು ವೈದ್ಯಕೀಯ ಭಾಷೆಯಲ್ಲಿ ‘ಹೈಪೋಸ್ಪೇಡಿಯಾಸ್’ಎಂದು ಕರೆಯುತ್ತಾರೆ. ಹೀಗಾಗಿ ವೈದ್ಯರಿಗೆ ಇವೆರಡೂ ವೈಕಲ್ಯಗಳನ್ನು ಸರಿಪಡಿಸುವ ಸವಾಲು ಎದುರಾಗಿತ್ತು.

 ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಳಿಕ ಬಾಲಕ ಇದೀಗ ಚೇತರಿಸಿಕೊಂಡಿದ್ದು, ಆತ ಎಲ್ಲರಂತೆ ಸಾಮಾನ್ಯ ಜೀವನ ನಡೆಸುವುದು ಸಾಧ್ಯವಾಗಲಿದೆ. ಲೈಂಗಿಕ ಜೀವನಕ್ಕೂ ಯಾವುದೇ ತೊಂದರೆಯಿಲ್ಲ ಎಂದು ಡಾ.ಕೇಶವಮೂರ್ತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News