5ರೂಪಾಯಿಯ ಚಹಾ ಖರೀದಿಸಿ, ಅರ್ಧ ಗಂಟೆ ಇಂಟರ್ನೆಟ್ ಸಂಪರ್ಕ ಪಡೆಯಿರಿ

Update: 2016-10-21 11:34 GMT

ಬೆಂಗಳೂರು ಅ.21: ಟೆಲಿಕಾಂ ಕಂಪೆನಿಗಳ ಡಾಟಾ ಸಮರದ ಈ ಕಾಲದಲ್ಲಿ ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ಗ್ರಾಮದ ಟೀ ಅಂಗಡಿ ಯುವಕನೊಬ್ಬ ತನ್ನ ಮಾರಾಟ ಹೆಚ್ಚಿಸಲು ಚಾಯ್ ಪೆ ಡಾಟಾ ಯೋಜನೆಯನ್ನು ಕಳೆದ ತಿಂಗಳು ರೂಪಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾನೆ. ಈ ಯೋಜನೆಯಂತೆ ಆತನ ಅಂಗಡಿಯಲ್ಲಿ ಐದು ರೂಪಾಯಿಗೆ ಒಂದು ಕಪ್ ಚಹಾ ಪಡೆದವರು ಅರ್ಧ ಗಂಟೆ ಉಚಿತ ಇಂಟರ್ನೆಟ್ ಸಂಪರ್ಕವನ್ನು ಆತನ ವೈ ಫೈ ರೂಟರ್ ಮೂಲಕ ಹೊಂದಬಹುದು.

ಈ ಚಾಯ್ ಪೆಡಾಟಾ ಯೋಜನೆ ಜಾರಿಗೊಳಿಸುವ ಮೊದಲು 23 ವರ್ಷದ ಸಯ್ಯದ್ ಖಾದರ್ ಬಾಷಾನ ಟೀ ಅಂಗಡಿಯಲ್ಲಿ ದಿನಕ್ಕೆ 100 ಕಪ್ ಟೀ ಮಾರಾಟವಾಗುತ್ತಿದ್ದರೆ ಈಗ ಬರೋಬ್ಬರಿ 400 ಮಂದಿ, ಅವರಲ್ಲಿ ಹೆಚ್ಚಿನವರು ಕಾಲೇಜು ಯುವಕರು ಈತನ ಅಂಗಡಿಯಲ್ಲಿ ಚಹಾ ಕುಡಿದು ಇಂಟರ್ನೆಟ್ ಸಂಪರ್ಕವನ್ನೂ ಪಡೆಯುತ್ತಾರೆ. ಬಾಷಾನ ಅಂಗಡಿಯೆದುರು ಇರುವ ಸರತಿ ಸಾಲನ್ನು ನೋಡಿದಾಗಲೇ ಆತನ ಯೋಜನೆ ಅದೆಷ್ಟು ಜನಪ್ರಿಯವಾಗಿದೆಯೆಂದು ತಿಳಿಯಬಹುದು.

ಬೆಂಗಳೂರಿನಂತಹ ಹಲವು ವೈ ಫೈ ವಲಯಗಳಿರುವ ನಗರದಲ್ಲಿ ಇಂತಹ ಯೋಜನೆ ಯಶಸ್ವಿಯಾಗುವುದು ಅಸಾಧ್ಯವಾದರೂ ಸಿರಿಗುಪ್ಪದಂತಹ ಗ್ರಾಮದಲ್ಲಂತೂ ಯುವಕರು ಈಟೀ ಸ್ಟಾಲ್ ಅಂಗಡಿಯಾತನ ಯೋಜನೆಯಿಂದ ಫುಲ್ ಖುಷ್ ಆಗಿದ್ದಾರೆ.

ಆದರೆ ಬಾಷಾ ಅವರ ನಿಯಮದಂತೆ ಒಬ್ಬರು ಒಂದು ದಿನಕ್ಕೆ ಒಂದು ಬಾರಿ ಮಾತ್ರ ಇಂಟರ್ನೆಟ್ ಸಂಪರ್ಕ ಪಡೆಯಬಹುದಾಗಿದೆ. ಈ ಯೋಜನೆ ಜಾರಿಗೆ ಬಾಷಾ ರೂ 3,000 ಬೆಲೆಯಒಂದು ವೈ ಫೈ ರೂಟರ್ ಖರೀದಿಸಿದ್ದಾನೆ ಹಾಗೂ ಸ್ಥಳೀಯ ಕೇಬಲ್ ಆಪರೇಟರ್ ನಿಂದ ಒಂದು ಅನಿಯಮಿತ ಡಾಟಾ ಪ್ಲ್ಯಾನ್ ತಿಂಗಳಿಗೆ ರೂ 1,700 ರಂತೆ ಪಾವತಿಸಿ ಪಡೆಯುತ್ತಿದ್ದಾನೆ. ಗ್ರಾಹಕನೊಬ್ಬ ಚಹಾ ಖರೀದಿಸಿದ ಕೂಡಲೇ ಆತನಿಗೆ ವೈಫೈ ಪಾಸ್ ವರ್ಡ್ ಇರುವ ಕೂಪನ್ ನೀಡಲಾಗುತ್ತದೆ. ಅರ್ಧ ಗಂಟೆ ಇಂಟರ್ನೆಟ್ ಸಂಪರ್ಕದ ನಂತರ ಅದು ತನ್ನಿಂತಾನೇಕಡಿತಗೊಳ್ಳುತ್ತದೆ.

ಗ್ರಾಮಗಳ ಯುವಕರೂ ಈಗ ಸ್ಮಾರ್ಟ್ ಫೋನ್ ಖರೀದಿಸುವುದರಿಂದ ಹಾಗೂ ಸಾಮಾಜಿಕ ಜಾಲತಾಣಗಳ ಕ್ರೇಝ್ ಅವರಲ್ಲೂ ಹುಟ್ಟಿರುವುದರಿಂದ ಬುದ್ಧಿವಂತ ಯುವಕನಾದ ಬಾಷಾ ಇದನ್ನೇ ಬಂಡವಾಳವಾಗಿಸಿ ಲಾಭ ಗಳಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News