ಮೃತನ ತಂದೆಯ ಕ್ಷಮೆ ಪಡೆಯಲು ಕೊನೆ ಕ್ಷಣದವರೆಗೂ ಪ್ರಯತ್ನಿಸಿದ್ದ ರಾಜಕುಮಾರ ಕುಟುಂಬ

Update: 2016-10-21 18:45 GMT

ರಿಯಾದ್, ಅ. 21: ರಿಯಾದ್‌ನಲ್ಲಿ ಅಕ್ಟೋಬರ್ 17ರಂದು ಮರಣ ದಂಡನೆಗೆ ಗುರಿಪಡಿಸಲಾದ ಸೌದಿ ರಾಜಕುಮಾರ ತುರ್ಕಿ ಬಿನ್ ಸೌದ್ ಅಲ್ ಕಬೀರ್‌ನನ್ನು ರಕ್ಷಿಸಲು ಅವರ ಕುಟುಂಬ ಕೊನೆ ಕ್ಷಣದವರೆಗೂ ಪ್ರಯತ್ನಿಸಿತ್ತು. ಕೊಲೆ ಪ್ರಕರಣವೊಂದರಲ್ಲಿ ಅವರಿಗೆ ಮರಣ ದಂಡನೆ ವಿಧಿಸಲಾಗಿತ್ತು. ಹತ್ಯೆಗೀಡಾದ ವ್ಯಕ್ತಿಯ ತಂದೆಯಿಂದ ಕ್ಷಮಾದಾನ ಪಡೆಯಲು ರಾಜಕುಮಾರ ಗಲ್ಲಿಗೇರಬೇಕಾದ ದಿನ ಅವರ ಕುಟುಂಬ ಹಲವು ಪ್ರಯತ್ನಗಳನ್ನು ನಡೆಸಿತ್ತು. ಹಣದ ರೂಪದಲ್ಲಿ ಪರಿಹಾರ (ಬ್ಲಡ್ ಮನಿ) ಪಡೆದು ರಾಜಕುಮಾರನನ್ನು ಕ್ಷಮಿಸಬೇಕು ಎಂಬುದಾಗಿ ಕುಟುಂಬ ವಿನಂತಿಸಿತ್ತು. ಆದರೆ, ಎಲ್ಲ ಪ್ರಯತ್ನಗಳು ವಿಫಲವಾದವು ಎಂದು ಸೌದಿಯ ವಾರ್ತಾ ವೆಬ್‌ಸೈಟ್ ‘ಅಲ್ ಮರ್ಸದ್’ ಹೇಳಿದೆ.
ಅಕ್ಟೋಬರ್ 17ರಂದು ಸಂಜೆ ಪ್ರಾರ್ಥನೆಯ ಬಳಿಕ 4:13ಕ್ಕೆ ರಾಜಕುಮಾರನನ್ನು ಮರಣ ದಂಡನೆಗೆ ಗುರಿಪಡಿಸಲಾಯಿತು.
ರಾಜಕುಮಾರನು ಗುಂಪು ಘರ್ಷಣೆಯೊಂದರ ವೇಳೆ ಸೌದಿ ರಾಷ್ಟ್ರೀಯ ಅದಿಲ್ ಬಿನ್ ಸುಲೈಮಾನ್ ಬಿನ್ ಅಬ್ದುಲ್‌ಕರೀಮ್ ಅಲ್ ಮಿಹೈಮೀದ್ ಎಂಬ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಂದಿದ್ದನು ಎಂದು ಆಂತರಿಕ ಸಚಿವಾಲಯ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.
ಸೌದಿ ಅರೇಬಿಯ ತನ್ನದೇ ಯುವ ರಾಜಕುಮಾರನೊಬ್ಬನನ್ನು ಮರಣದಂಡನೆಗೆ ಗುರಿಪಡಿಸುತ್ತಿರುವುದು 1975ರ ಬಳಿಕ ಇದೇ ಮೊದಲ ಬಾರಿಯಾಗಿದೆ. ರಾಜಕುಮಾರ ತನ್ನ ಕೊನೆಯ ಗಂಟೆಗಳನ್ನು ಕುಟುಂಬ ಸದಸ್ಯರೊಂದಿಗೆ ಕಳೆದರು ಹಾಗೂ ಎಲ್ಲರಿಗೂ ವಿದಾಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News