ಸುಪ್ರೀಂ ಕೋರ್ಟ್‌ನ ತೀರ್ಪು ಬಗ್ಗೆ ಪ್ರತಿಕ್ರಿಯೆ ನೀಡಲು ಠಾಕೂರ್ ನಕಾರ

Update: 2016-10-21 18:59 GMT

 ಹೊಸದಿಲ್ಲಿ, ಅ.21: ಸುಪ್ರೀಂ ಕೋರ್ಟ್ ಶುಕ್ರವಾರ ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಎರಡು ವಾರಗಳ ಗಡುವು ವಿಧಿಸಿ ಆದೇಶ ನೀಡಿದ ವಿಚಾರದ ಬಗ್ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶ ಪ್ರತಿ ತಲುಪಿಲ್ಲ. ನ್ಯಾಯಾಲಯದ ಆದೇಶದ ಪ್ರತಿ ಕೈಗೆ ಸಿಕ್ಕಿದರೆ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
   ಜಸ್ಟೀಸ್ ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ತನಕ ಬಿಸಿಸಿಐನ ತನ್ನ ಅಧೀನಕ್ಕೊಳಪಟ್ಟಿರುವ ಕ್ರಿಕೆಟ್ ಸಂಸ್ಥೆಗಳಿಗೆ ಪಂದ್ಯಗಳನ್ನು ಆಯೋಜಿಸುವ ಉದ್ದೇಶಕ್ಕಾಗಿ ಹಣಕಾಸಿನ ನೆರವು ಬಿಡುಗಡೆಗೊಳಿಸದಂತೆ ಬಿಸಿಸಿಐ ಶುಕ್ರವಾರ ತಾಕೀತು ಮಾಡಿತ್ತು. ಬಿಸಿಸಿಐ ಹಾಗೂ ಅದರ ಅಧೀನದಲ್ಲಿರುವ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಹಣಕಾಸಿನ ಲೆಕ್ಕಪರಿಶೋಧನೆಗೆ ಪ್ರತ್ಯೇಕ ಲೆಕ್ಕಪರಿಶೋಧಕರ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ನೇತೃತ್ವದ ನ್ಯಾಯಮೂರ್ತಿ ಡಿ.ವೈ .ಚಂದ್ರಚೂಡಾ ಮತ್ತು ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿತ್ತು.
    
 ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಎಷ್ಟು ಸಮಯಬೇಕು ಎಂಬ ವಿಚಾರದಲ್ಲಿ ಅಫಿಡಾವಿಟ್ ಸಲ್ಲಿಸುವ ಕುರಿತು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಲೋಧಾ ಸಮಿತಿ ಮುಂದೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಡಿ.3ರಂದು ಹಾಜರಾಗಿ ಮುಚ್ಚಳಿಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿತ್ತು. ‘‘ ನನಗೆ ನ್ಯಾಯಾಲಯದ ಬಗ್ಗೆ ಗೌರವ ಇದೆ. ರಾಜ್ಯ ಕ್ರಿಕೆಟ್ ಸಂಸ್ಥೆಗಳು ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕಾಗಿದೆ.  ನ್ಯಾಯಾಲಯದ ಆದೇಶದ ಪ್ರತಿ ಕೈ ಸೇರಿದ ಬಳಿಕ ಬಿಸಿಸಿಐ ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗೆ ಚರ್ಚಿಸಿ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಲಿದೆ’’ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News