ಸಾಹಿತ್ಯದ ಸೀಮೆಗಳಿಗೆ ಮರುವ್ಯಾಖ್ಯಾನ

Update: 2016-10-23 11:03 GMT

 ಸ್ವೀಡಿಶ್ ನೊಬೆಲ್ ಅಕಾಡಮಿಯ ಸದಸ್ಯೆಯರಲ್ಲೊಬ್ಬರಾದ ಸಾರಾ ಡೆನಿಸ್ ಅವರು, ‘‘ಬಾಬ್ ಡಿಲಾನ್ ಇಂಗ್ಲಿಷ್ ಭಾಷಾ ಪರಂಪರೆಯ ಮಹೋನ್ನತ ಕವಿ’’ ಎಂದು ಗುಣಗಾನ ಮಾಡಿದ್ದಾರೆ.

‘‘ಡಿಲಾನ್, ಸಂಗೀತ ಕ್ಷೇತ್ರಕ್ಕೊಂದು ಐಕಾನ್ ಆಗಿದ್ದಾರೆ. ಸಮಕಾಲೀನ ಸಂಗೀತದ ಮೇಲೆ ಅವರು ಬೀರಿದ ಪ್ರಭಾವ ಅಪಾರ ’’ ಎಂದು ನೊಬೆಲ್ ಅಕಾಡಮಿ ಪ್ರಶಂಸಿಸಿದೆ. ಗಾಯಕನಾಗಿ, ಗೀತರಚನೆಕಾರರಾಗಿ ಡಿಲಾನ್ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಪಾಪ್ ಹಾಗೂ ರಾಕ್ ಸಂಗೀತದ ಮೇಧಾವಿಗಳಿಗೆ ಮಾನ್ಯತೆ ನೀಡುವ ಹಾಗೂ ಅವರ ಕೃತಿಗಳನ್ನು ಸಂರಕ್ಷಿಸುವ ಸಂಗ್ರಹಾಲಯವಾದ ರಾಕ್ ಆ್ಯಂಡ್ ರೋಲ್ ಹಾಲ್ ಆಫ್ ಫೇಮ್‌ಗೆ ಡಿಲಾನ್ 1988ರಲ್ಲಿ ಸೇರ್ಪಡೆಗೊಂಡರು. 2012ರಲ್ಲಿ ಅವರು ಅಮೆರಿಕದ ಅಧ್ಯಕ್ಷರ ಸ್ವಾತಂತ್ರ ಪದಕಕ್ಕೆ ಪಾತ್ರರಾದರು.

ನೊಬೆಲ್ ಸಮಿತಿಯು ಮತ್ತೊಮ್ಮೆ ವಿಶ್ವದ ಜನತೆಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದೆ. 2015ನೆ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಗದ್ಯ ಬರಹಗಾರ್ತಿ ಹಾಗೂ ಪತ್ರಕರ್ತೆ ಸ್ವೆತ್ಲಾನಾ ಅಲೆಕ್ಸಿವಿಚ್‌ಗೆ ನೀಡಿದ್ದ ನೊಬೆಲ್ ಸಮಿತಿಯು ಈ ಬಾರಿ ಅಮೆರಿಕದ ಜನಪ್ರಿಯ ಗಾಯಕ ಹಾಗೂ ಗೀತರಚನೆಕಾರ ಬಾಬ್ ಡಿಲಾನ್ ಅವರಿಗೆ ಈ ಸಾಹಿತ್ಯ ನೊಬೆಲ್ ಪುರಸ್ಕಾರವನ್ನು ಘೋಷಿಸುವ ಔದಾರ್ಯವನ್ನು ಪ್ರದರ್ಶಿಸಿದೆ. ಆ ಮೂಲಕ ಗಂಭೀರ ಸಾಹಿತ್ಯ ಹಾಗೂ ಜನಪ್ರಿಯ ಹಾಡುಗಳ ನಡುವಿನ ಅಂತರವನ್ನು ನಿವಾರಿಸಿದೆ.
 ರಾಕ್ ಯುಗದ ಜನಪ್ರಿಯ ಗಾಯಕರಾದ ಡಿಲಾನ್‌ಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ದೊರೆಯುವುದರೊಂದಿಗೆ ಅವರು ಟಿ.ಎಸ್.ಇಲಿಯಟ್, ಗ್ಯಾಬ್ರಿಯೆಲ್ ಗಾರ್ಸಿಯಾ ಮಾರ್ಕೆಝ್, ಟೋನಿ ಮಾರಿಸನ್ ಹಾಗೂ ಸ್ಯಾಮುವೆಲ್ ಬೆಕೆಟ್‌ರಂತಹ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಾನ್ ಸಾಹಿತಿಗಳ ಸಾಲಿಗೆ ಸೇರಿದ್ದಾರೆ.
 ಸುಮಾರು ಅರ್ಧ ಶತಮಾನದಷ್ಟು ಹಿಂದೆ, ಬಾಬ್ ಡಿಲಾನ್ ಜಾನಪದ ಸಂಗೀತಗೋಷ್ಠಿಯೊಂದರಲ್ಲಿ ಇಲೆಕ್ಟ್ರಿಕ್ ಗೀಟಾರ್ ಬಾರಿಸುವ ಮೂಲಕ ಇತರ ಜಾನಪದ ಕಲಾವಿದರಿಗಿಂತ ಭಿನ್ನದಾರಿಯನ್ನು ತುಳಿದಿದ್ದರು. ಆನಂತರದ ಹಲವು ದಶಕಗಳ ಬಳಿಕವೂ ಅವರು ಹೊಸ ಹೊಸ ಅಚ್ಚರಿಗಳನ್ನೇ ನೀಡುತ್ತಾ ಬಂದಿದ್ದಾರೆ. ತನ್ನ ಗಾಢವಾದ ಹಾಗೂ ಲವಲವಿಕೆಯ ಗೀತರಚನೆಯೊಂದಿಗೆ ಜಗತ್ತಿನಾದ್ಯಂತ ಸಂಗೀತ ಪ್ರೇಮಿಗಳನ್ನು ತನ್ನೆಡೆಗೆ ಸೆಳೆಯುತ್ತಿದ್ದಾರೆ.
    ಅಂದಹಾಗೆ 75 ವರ್ಷದ ಡಿಲಾನ್ ಅವರು ನೊಬೆಲ್ ಸಾಹಿತ್ಯ ಪ್ರಶಸ್ತಿ ಗೆದ್ದ ಪ್ರಪ್ರಥಮ ಸಂಗೀತಗಾರರಾಗಿದ್ದಾರೆ. ಪ್ರಾಯಶಃ 1901ನೆ ಇಸವಿಗಿಂತಲೂ ಹಿಂದಿನ ಇತಿಹಾಸವನ್ನು ಹೊಂದಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರ ಆಯ್ಕೆಯು ಸಾಹಿತ್ಯದ ಸೀಮೆಗಳನ್ನು ಮರುವ್ಯಾಖ್ಯಾನಿಸಿದೆ. ಆ ಮೂಲಕ ಜನಪ್ರಿಯ ಹಾಡುಗಳ ಸಾಹಿತ್ಯ ಕೂಡಾ ಕವನ ಅಥವಾ ಕಾದಂಬರಿಗಳಷ್ಟೇ ಕಲಾತ್ಮಕ ವೌಲ್ಯವನ್ನು ಹೊಂದಿವೆಯೇ ಎಂಬ ಕುರಿತ ಚರ್ಚೆಗೆ ಎಡೆಮಾಡಿಕೊಟ್ಟಿದೆ.
  ಸ್ವೀಡಿಶ್ ನೊಬೆಲ್ ಅಕಾಡಮಿಯ ಸದಸ್ಯೆಯರಲ್ಲೊಬ್ಬರಾದ ಸಾರಾ ಡೆನಿಸ್ ಅವರು, ‘‘ಬಾಬ್ ಡಿಲಾನ್ ಇಂಗ್ಲಿಷ್ ಭಾಷಾ ಪರಂಪರೆಯ ಮಹೋನ್ನತ ಕವಿ’’ ಎಂದು ಗುಣಗಾನ ಮಾಡಿದ್ದಾರೆ.

   
ಡಿಲಾನ್ ಅವರು ನೊಬೆಲ್ ಪುರಸ್ಕಾರವನ್ನು ಗೆದ್ದ ಪ್ರಪ್ರಥಮ ಗಾಯಕ ಹಾಗೂ ಗೀತರಚನೆಕಾರರಾದರೂ, ವಿಶ್ವಕವಿ ರವೀಂದ್ರನಾಥ ಠಾಗೋರ್ ಕೂಡಾ ಪ್ರಾಥಮಿಕವಾಗಿ ಗೀತರಚನೆಕಾರರೇ ಆಗಿದ್ದಾರೆ. ತನ್ನ ಕವನಗಳ ಸಂಗ್ರಹ ಗೀತಾಂಜಲಿಗಾಗಿ ಅವರಿಗೆ 1913ರಲ್ಲಿ ನೊಬೆಲ್ ಪಾರಿತೋಷಕ ದೊರೆತಿತ್ತು. ‘ಗೀತಾಂಜಲಿ’ಯ ಅನೇಕ ಬಂಗಾಳಿ ಕವನಗಳನ್ನು ಸ್ವತಃ ಠಾಗೋರ್ ಅವರೇ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಅವುಗಳಲ್ಲೊಂದಾದ, ‘ತುಮಿ ಶೊಂಧಾರೊ ಮೇಘೋ ಮಾಲಾ’ (ನೀವು ಮುಸ್ಸಂಜೆಯ ಮೋಡದ ತಂತಿಗಳು) ಕವನವು ಪಾಬ್ಲೊ ನೆರುಡಾ ಅವರ ಪ್ರಸಿದ್ಧ ಕವನಸಂಕಲನ ‘ಟ್ವೆಂಟಿ ಪೊಯೆಮ್ಸ್ ಆ್ಯಂಡ್ ಎ ಸ್ಟ್ರಿಂಗ್ ಆಫ್ ಡಿಸ್ಪೇರ್’ಮೇಲೂ ಪ್ರಭಾವವನ್ನು ಬೀರಿತ್ತು. ಡಿಲಾನ್ ಓರ್ವ ಶ್ರೇಷ್ಠ ಪ್ರಯೋಗಶೀಲ ವ್ಯಕ್ತಿಯೆಂದು ಡೆನಿಸ್ ಪ್ರಶಂಸಿಸಿದ್ದಾರೆ. ಜಾನಪದ,ಪಾಪ್,ನಾಡಗೀತೆಗಳು,ಭಕ್ತಿಗೀತೆಗಳು, ರಾಕ್, ಜಾಝ್ ಹಾಗೂ ಸ್ಕಾಟಿಶ್ ಜಾನಪದ ಗೀತೆ ಹೀಗೆ ಸಂಗೀತದ ಹಲವು ಪ್ರಕಾರಗಲ್ಲಿ ಡಿಲಾನ್ ಹೊಸ ಹೊಸ ಪ್ರಯೋಗಗಳನ್ನು ಮಾಡಿರುವುದನ್ನು ನೋಡಿದಾಗ ಅವರ ಮಾತಿನಲ್ಲಿ ಹುರುಳಿದೆಯೆನಿಸುತ್ತಿದೆ. ಕೆಲವು ಶ್ರೋತೃಗಳು ಅವರದು ಲಾಲಿತ್ಯರಹಿತ ಹಾಗೂ ಗದರುವ ಶೈಲಿಯ ಧ್ವನಿಯಾಗಿದ್ದು, ಹಾಡುವುದಕ್ಕೆ ಯೋಗ್ಯವಲ್ಲವೆಂದು ದೂರುತ್ತಿದ್ದರು. ಅಮೆರಿಕ ಜನಪ್ರಿಯ ಬರಹಗಾರ ಜಾಯ್ಸಿ ಕಾರ್ಲೊಸ್ ಓಟ್ಸ್ ಅವರು, ಡಿಲಾನ್ ಅವರದು ‘‘ ಕಚ್ಚಾ, ಅತ್ಯಂತ ಎಳೆಯ ಹಾಗೂ ತರಬೇತುಗೊಂಡಿರದ ಧ್ವನಿಯೆಂಬಂತೆ ಭಾಸವಾಗುತ್ತದೆ. ಮರಳುಕಾಗದ (ಸ್ಯಾಂಡ್‌ಪೇಪರ್) ಕೂಡಾ ಹಾಡಬಹುದು ಎನ್ನುವಂತಿದೆ ಅವರ ಧ್ವನಿ’’ ಎಂದು ಟೀಕಿಸಿದ್ದುಂಟು. ಆದರೆ ಡಿಲಾನ್‌ರ ಅಪಾರ ಶಕ್ತಿಯುತ ಹಾಗೂ ಸಂಕೀರ್ಣವಾದ ಗೀತ ಸಾಹಿತ್ಯವು ಅವರನ್ನು ಇತರ ಇಂಗ್ಲಿಷ್ ಗೀತರಚನೆಕಾರರಿಗಿಂತ ವಿಭಿನ್ನವಾಗಿ ಗುರುತಿಸುವಂತೆ ಮಾಡಿದೆ. ಡಿಲಾನ್ ಅವರ ಲೈಕ್ ಎ ರೋಲಿಂಗ್ ಸ್ಟೋನ್ ಹಾಡಿನ ಸಾಲುಗಳು ಹೀಗಿವೆ.
ಡಿಲಾನ್ ಅವರ ಲೈಕ್ ಎ ರೋಲಿಂಗ್ ಸ್ಟೋನ್ ಹಾಡಿನ ಸಾಲುಗಳು ಹೀಗಿವೆ.
‘ಹೌ ಡಸ್ ಇಟ್ ಫೀಲ್, ಹೌ ಡಸ್ ಇಟ್ ಫೀಲ್?
 ಟು ಬಿ ಆನ್ ಯುವರ್ ವೋನ್, ವಿದ್ ನೋ ಡೈರೆಕ್ಷನ್ ಹೋಮ್
ಎ ಕಂಪ್ಲೀಟ್ ಅನ್‌ನೋನ್, ಲೈಕ್ ಎ ರೋಲಿಂಗ್ ಸ್ಟೋನ್’


ನಿಮ್ಮಷ್ಟಕ್ಕೆ ಇರುವುದು, ಮನೆಯೆಂಬ ದಿಕ್ಕಿಲ್ಲದಿರುವುದು
ಉರುಳುವ ಕಲ್ಲಿನಂತೆ ಸಂಪೂರ್ಣ ಅಜ್ಞಾತನಾಗಿ)
   "when you got nothing, you invisible now, you have got no secrets to conceal"  ಅಲೆಮಾರಿ ಹಾಗೂ ನಿರಾಶ್ರಿತರ ಬದುಕುಬವಣೆಗಳನ್ನು ಈ ಹಾಡಿನಲ್ಲಿ ವ್ಯಕ್ತಪಡಿಸಲಾಗಿದೆ. ವಲಸಿಗಳಾದ ಮಹಿಳೆಯು ತನ್ನ ಅಸ್ತಿತ್ವವನ್ನು ಬೀದಿಗಳಲ್ಲಿ ಹುಡುಕಾಡುತ್ತಾಳೆ. ಈ ಹಾಡು ನಿರಾಶ್ರಿತರ ಬಗ್ಗೆ ಸಹಾನುಭೂತಿಯನ್ನು ತೋರುವ ಜೊತೆಗೆ, ಇತರರಿಂದ ನೀವು ತುಳಿತಕ್ಕೊಳಗಾಗಬಾರದೆಂಬ ಎಚ್ಚರಿಕೆಯ ಸಂದೇಶವನ್ನು ಕೂಡಾ ನೀಡುತ್ತದೆ). ಆದರೆ ಈ ನಿರಾಶ್ರಿತರು ಎಲ್ಲಾ ಬಂಧನಗಳಿಂದ ಮುಕ್ತರೆಂಬ ಅನಿಸಿಕೆಯನ್ನು ಈ ಹಾಡಿನ ಮುಂದಿನ ಸಾಲುಗಳು ವ್ಯಕ್ತಪಡಿಸುತ್ತವೆ. (ನಿಮ್ಮಲ್ಲಿ ಏನೂ ಇಲ್ಲದಿದ್ದಲ್ಲಿ, ನೀವು ಕಳೆದುಕೊಳ್ಳುವುದೇನೂ ಇಲ್ಲ. ನೀವೀಗ ಅಗೋಚರರಾಗಿರುವಿರಿ. ಬಚ್ಚಿಡುವಂತಹ ಯಾವುದೇ ರಹಸ್ಯ ನಿಮ್ಮಲ್ಲಿಲ್ಲ) ಎಂಬುದೇ ಈ ಹಾಡಿನ ಸಾಲುಗಳ ಭಾವಾರ್ಥವಾಗಿದೆ. ನಿರಾಶ್ರಿತರ ಸಮಸ್ಯೆಯ ಬಗ್ಗೆ ಈ ಹಾಡು ಬೆಳಕು ಚೆಲ್ಲುವುದರ ಜೊತೆಗೆ, ಮಧ್ಯಮವರ್ಗದ ಬೂಟಾಟಿಕೆಯ ಬಗ್ಗೆಯೂ ಅಣಕವಾಡುತ್ತದೆ. ಹೀಗೆ ಡಿಲಾನ್ ಹಾಡುಗಳು ಎರಡು ಅಲಗಿನ ಖಡ್ಗದಂತಿರುತ್ತವೆ.
  ‘ಬ್ಲೋಯಿಂಗ್ ಇನ್ ದಿ ವಿಂಡ್’ ಹಾಗೂ ‘ದಿ ಟೈಮ್ಸ್ ದೈ ಆರ್ ಚೇಂಜಿಂಗ್’ನಂತಹ ಜಾನಪದ ಹಾಗೂ ಬಂಡಾಯದ ಗೀತೆಗಳು, ಲೈಕ್ ಎ ರೋಲಿಂಗ್ ಸ್ಟೋನ್ ಸೇರಿದಂತೆ ಹಿಟ್ ಪಾಪ್‌ಗೀತೆಗಳ ರಚನೆಕಾರರಾದ ಡಿಲಾನ್ ಓರ್ವ ಅಸಾಮಾನ್ಯ ಪ್ರತಿಭಾವಂತ. 1993ರಲ್ಲಿ ಮೊರಿಸನ್ ಬಳಿಕ ಸಾಹಿತ್ಯ ನೊಬೆಲ್ ಪುರಸ್ಕಾರವನ್ನು ಪಡೆದ ಪ್ರಥಮ ಅಮೆರಿಕನ್ ಎಂಬ ಹೆಗ್ಗಳಿಕೆಗೂ ಡಿಲಾನ್ ಪಾತ್ರರಾಗಿದ್ದಾರೆ.
    ಡಿಲಾನ್ ಅವರ ಗೀತರಚನೆಗಳು, ಕವನವಾಗಿ ಸ್ವಂತಿಕೆಯನ್ನು ಹೊಂದಿವೆಯೇ ಎಂಬ ಬಗ್ಗೆ ಸಾಹಿತ್ಯ ವಿದ್ವಾಂಸರು ಬಹಳಷ್ಟು ಚರ್ಚಿಸಿದ್ದಾರೆ. ಆದಾಗ್ಯೂ ಅಮೆರಿಕನ್ ಕವನ ಕುರಿತ ಆಕ್ಸ್‌ಫಡ್ ಪುಸ್ತಕ ಕೃತಿಯು ತನ್ನ 2006ರ ಆವೃತ್ತಿಯಲ್ಲಿ ಅವ ‘ಡೆಸೊಲೇಶನ್ ರೋ’ ಹಾಡನ್ನು ಸೇರ್ಪಡೆಗೊಳಿಸಿತ್ತು. 2009ರಲ್ಲಿ ಕೇಂಬ್ರಿಡ್ಜ್ ವಿವಿ ಪ್ರೆಸ್ ಪ್ರಕಾಶನವು ‘ದಿ ಕೇಂಬ್ರಿಡ್ಜ್ ಕಂಪೇನಿಯನ್ ಟು ಬಾಬ್ ಡಿಲಾನ್’ ಕೃತಿಯನ್ನು ಪ್ರಕಟಿಸುವ ಮೂಲಕ ಅವರೊಬ್ಬ ಪ್ರತಿಭಾವಂತ ಸಾಹಿತಿಯೆಂಬ ಮನ್ನಣೆಯನ್ನು ಇನ್ನಷ್ಟು ಬಲಪಡಿಸಿತು.
 ಅಮೆರಿಕದ ಮಾಜಿ ನೊಬೆಲ್ ಪುರಸ್ಕೃತ ಬಿಲ್ಲಿಕಾಲಿನ್ಸ್ ಅವರು ಡಿಲಾನ್‌ರನ್ನು ಕೇವಲ ಗೀತರಚನೆಕಾರರೆಂದು ಪರಿಗಣಿಸದೆ ಕವಿಯೆಂದು ಮಾನ್ಯತೆ ನೀಡಬೇಕೆಂದು ವಾದಿಸಿದ್ದಾರೆ.
ಡಿಲಾನ್ ಅವರಿಗೆ ಸಾಹಿತ್ಯ ಪುರಸ್ಕಾರವನ್ನು ನೀಡುವ ಮೂಲಕ ಅಕಾಡಮಿಯು ಉನ್ನತ ಮಟ್ಟದ ಕಲೆ ಹಾಗೂ ಕಮರ್ಶಿಯಲ್ ಮಾದರಿಯ ಸೃಜನಶೀಲ ಕಲೆಗಳ ನಡುವಿನ ಅಂತರವನ್ನು ಅಳಿಸಿಹಾಕಿದೆ.
 ಡಿಲಾನ್ ಅವರ ಬದುಕು ಅವರ ಹಾಡುಗಳಷ್ಟೇ ಕುತೂಹಲಕರ. 1941ರ ಮೇ 24ರಂದು ಜನಿಸಿದ ಡಿಲಾನ್ ಅವರ ಮೂಲ ಹೆಸರು ರೊಬರ್ಟ್ ಆ್ಯಲೆನ್ ಝಿಮ್ಮರ್‌ಮ್ಯಾನ್. 1961ರಲ್ಲಿ ನ್ಯೂಯಾರ್ಕ್‌ನ ಸಂಗೀತಗೋಷ್ಠಿಗಳಲ್ಲಿ ಬಂಡಾಯದ ಗೀತೆಗಳನ್ನು ಹಾಡುವ ಮೂಲಕ ಗಾಯನಜಗತ್ತಿಗೆ ಪರಿಚಿತರಾದರು. ಇದರ ಜೊತೆಗೆ ಜೀವನನಿರ್ವಹಣೆಗಾಗಿ ಕ್ಲಬ್‌ಗಳಲ್ಲಿ ಹಾಗೂ ಕೆಫೆಗಳಲ್ಲಿ ಗಿಟಾರ್ ವಾದಕರಾಗಿದ್ದರು.
 ಆರಂಭದಿಂದಲೇ ಡಿಲಾನ್ ಅವರ ಬೆರಗುಗೊಳಿಸುವಂತಹ ಹಾಡಿನ ಸಾಹಿತ್ಯ ಹಾಗೂ ವಿಶಿಷ್ಟವಾದ ಗೀತರಚನೆ ಶೈಲಿಯು ಕಲಾವಿದರು ಹಾಗೂ ವಿಮರ್ಶಕರನ್ನು ಅಪಾರವಾಗಿ ಆಕರ್ಷಿಸಿತು. 1963ರಲ್ಲಿ ಅವರ ಜಾನಪದ ಹಾಡು ‘ಪೀಟರ್, ಪೌಲ್ ಆ್ಯಂಡ್ ಮೇರಿ’ ಅಮೆರಿಕದ ಬಿಲ್‌ಬೋರ್ಡ್ ಪಟ್ಟಿಯಲ್ಲಿ ನಂ.2 ಸ್ಥಾನವನ್ನು ಪಡೆದುಕೊಂಡಿತ್ತು.
   ಕೆಲವೇ ವರ್ಷಗಳಲ್ಲಿ ಡಿಲಾನ್ ಅವರು ಅತ್ಯಂತ ಸಂಕೀರ್ಣವಾದ ಹಾಡುಗಳನ್ನು ರಚಿಸುವ ಮೂಲಕ ಜಾನಪದ ಸಂಗೀತದ ಬಗ್ಗೆ ಜನಸಾಮಾನ್ಯರಲ್ಲಿ ಮನೆಮಾಡಿದ್ದ ನಂಬಿಕೆಯನ್ನೇ ಬುಡಮೇಲುಗೊಳಿಸಿದರು.ಜಾನಪದ ಹಾಡುಗಳಲ್ಲಿ ರಾಕ್ ಆ್ಯಂಡ್ ರೋಲ್ ಶೈಲಿಯ ಸಂಗೀತವನ್ನು ಅಳವಡಿಸಿದರು. 1963ರಲ್ಲಿ ನ್ಯೂಪೋರ್ಟ್ ಜಾನಪದ ಉತ್ಸವದಲ್ಲಿ ಅವರು ಇಲೆಕ್ಟ್ರಿಕ್ ರಾಕ್ ಬ್ಯಾಂಡ್‌ನೊಂದಿಗೆ ಜಾನಪದ ಹಾಡುಗಳನ್ನು ಹಾಡಿದಾಗ, ಅಭಿಮಾನಿಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಡಿಲಾನ್‌ಅವರು ಹಣಕ್ಕಾಗಿ ಜಾನಪದ ಗಾಯನದ ಪರಿಶುದ್ಧತೆಗೆ ಹಾನಿಯುಂಟು ಮಾಡುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. 1966ರಲ್ಲಿ ತನ್ನ ಮನೆಯ ಸಮೀಪದ ವುಡ್‌ಸ್ಟಾಕ್‌ನಲ್ಲಿ ಮೋಟಾರ್ ಸೈಕಲ್‌ನಲ್ಲಿ ಅಪಘಾತಕ್ಕೀಡಾದ ಬಳಿಕ ಡಿಲಾನ್ ಸಾರ್ವಜನಿಕ ಬದುಕಿನಿಂದ ಹಿಂದೆ ಸರಿದರು. ಆದರೆ ಗೀತರಚನೆಕಾರರಾಗಿ ಅವರು ತಮ್ಮ ಸಾಧನೆಯನ್ನು ಮುಂದುವರಿಸಿದರು
  1975ರಲ್ಲಿ ಬಿಡುಗಡೆಗೊಂಡ ಅವರ ಆಲ್ಬಂ ‘ ಬ್ಲಡ್ ಆನ್ ದಿ ಟ್ರಾಕ್ಸ್’ ಹಾಡು, ಸಂಬಂಧವೊಂದು ಮುರಿದುಬೀಳುವ ಸನ್ನಿವೇಶವನ್ನು ಅತ್ಯಂತ ಹೃದಯಂಗಮವಾಗಿ ನಿರೂಪಿಸಿದೆ. ಆದರೆ ಅವರು ಬರೆದ ಕ್ರಿಶ್ಚಿಯನ್ ಥೀಮ್‌ಗಳನ್ನು ಒಳಗೊಂಡ ‘ಸ್ಲೋ ಟ್ರೈನ್ ಕಮಿಂಗ್’ ಬಗ್ಗೆ ವಿಮರ್ಶಕರಲ್ಲಿ ಭಿನ್ನಾಭಿಪ್ರಾಯಗಳ ಬಿರುಗಾಳಿಯೇ ಎದ್ದಿತು. ಅವರ ತೀರಾ ಇತ್ತೀಚಿನ ಎರಡು ಅಲ್ಬಂಗಳು ಸಾಂಪ್ರದಾಯಿಕ ಪಾಪ್ ಶೈಲಿಯಲ್ಲಿವೆ. ಈ ಆಲ್ಬಂಗಳಲ್ಲಿ ಇನ್ನೋರ್ವ ಖ್ಯಾತ ಪಾಪ್ ಗಾಯಕ ಫ್ರಾಂಕ್ ಸಿನಾತ್ರ ಜೊತೆಗೆ ಕೆಲವು ಹಾಡುಗಳನ್ನು ಅವರು ಹಾಡಿದ್ದಾರೆ.
60 ದಶಕದ ಆನಂತರದ ವರ್ಷಗಳಲ್ಲಿ ಡಿಲಾನ್ ಅವರು ಜಾನಪದ ಗೀತೆಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿ ರುವುದರ ಬಗ್ಗೆ ಬೇಸರಗೊಂಡಿದ್ದರೆಂದು ಖ್ಯಾತ ವಿಮರ್ಶಕ ಗಿಲೆಸ್ ಹಾರ್ವೆ, ದಿ ನ್ಯೂಯಾರ್ಕ್ ರಿವ್ಯೆ ಆಫ್ ಬುಕ್ಸ್‌ನಲ್ಲಿ ಅಭಿಪ್ರಾಯಿಸಿದ್ದರು.
     ‘ಬ್ರಿಂಗಿಂಗ್ ಇಟ್ ಆಲ್ ಬ್ಯಾಕ್ ಹೋಮ್’ ಹಾಗೂ ‘ಹೈವೇ 61 ರಿವಿಸಿಟೆಡ್’ (1965), ‘ಬ್ಲಾಂಡ್ ಆನ್ ಬ್ಲಾಂಡ್ (1966), ‘ಬ್ಲಡ್ ಆನ್ ದಿ ಟ್ರಾಕ್ಸ್’ (1975), ‘ಓ ಮೆರ್ಸಿ’ (1989), ‘ಟೈಮ್ ಔಟ್ ಆಫ್ ಮೈಂಡ್’ (1970, ‘ಲವ್ ಆ್ಯಂಡ್ ತೆಫ್ಟ್ ’ (2001) ಹಾಗೂ ‘ಮಾಡರ್ನ್ ಟೈಮ್ಸ್’ (2006) ಸೇರಿದಂತೆ ಡಿಲಾನ್ ಅವರ ಹಲವು ಆಲ್ಬಂಗಳು, ಜನಪ್ರಿಯ ಸಂಗೀತದ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿವೆಯೆಂದು ಸ್ವೀಡಿಶ್ ನೊಬೆಲ್ ಅಕಾಡಮಿ ಬಣ್ಣಿಸಿದೆ. ಅವರ ಹಾಡುಗಳ 38 ಆಲ್ಬಂಗಳ ಬರೋಬ್ಬರಿ 12.50 ಕೋಟಿ ಪ್ರತಿಗಳು ಜಗತ್ತಿನಾದ್ಯಂತ ಮಾರಾಟವಾಗಿವೆ.
‘‘ಡಿಲಾನ್, ಸಂಗೀತ ಕ್ಷೇತ್ರಕ್ಕೊಂದು ಐಕಾನ್ ಆಗಿದ್ದಾರೆ. ಸಮಕಾಲೀನ ಸಂಗೀತದ ಮೇಲೆ ಅವರು ಬೀರಿದ ಪ್ರಭಾವ ಅಪಾರ ’’ ಎಂದು ನೊಬೆಲ್ ಅಕಾಡಮಿ ಪ್ರಶಂಸಿಸಿದೆ.
ಗಾಯಕನಾಗಿ, ಗೀತರಚನೆಕಾರರಾಗಿ ಡಿಲಾನ್ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಪಾಪ್ ಹಾಗೂ ರಾಕ್ ಸಂಗೀತದ ಮೇಧಾವಿಗಳಿಗೆ ಮಾನ್ಯತೆ ನೀಡುವ ಹಾಗೂ ಅವರ ಕೃತಿಗಳನ್ನು ಸಂರಕ್ಷಿಸುವ ಸಂಗ್ರಹಾಲಯವಾದ ರಾಕ್ ಆ್ಯಂಡ್ ರೋಲ್ ಹಾಲ್ ಆಫ್ ಫೇಮ್‌ಗೆ ಡಿಲಾನ್ 1988ರಲ್ಲಿ ಸೇರ್ಪಡೆಗೊಂಡರು. 2012ರಲ್ಲಿ ಅವರು ಅಮೆರಿಕದ ಅಧ್ಯಕ್ಷರ ಸ್ವಾತಂತ್ರ ಪದಕಕ್ಕೆ ಪಾತ್ರರಾದರು.

Writer - ವಿಸ್ಮಯ

contributor

Editor - ವಿಸ್ಮಯ

contributor

Similar News