ನೋಬೆಲ್ ಪ್ರಶಸ್ತಿ ಸಿಗಲೇಬೆಕಾದ ಮೂರು ಸಾಹಿತ್ಯ ರತ್ನಗಳು

Update: 2016-10-23 11:45 GMT

ಡೆಲಿಲೊ ಬಾರ್ಡಿ ಆರ್ಟಿಸ್ಟ್ (2001) ಹಾಗೂ ಕಾಸ್ಮೊಪೊಲೀಸ್ (2003) ಕಾದಂಬರಿಗಳನ್ನು ಪ್ರಕಟಿಸಿದರು. ಮಹಾನ್ ಐತಿಹಾಸಿಕ ಕಾದಂಬರಿಕಾರ ಜಾಯ್ಸೊ ನ ಉಲಿಸಿಸ್ ಕಾದಂಬರಿಯ ಆಧುನಿಕ ಅವತರಣಿಕೆಯಾದ ಯೂಲಿಸೆಸ್, ವಿಮರ್ಶಕರಿಂದ ವ್ಯಾಪಕ ಟೀಕೆಗೊಳಗಾಯಿತು. 2007ರಲ್ಲಿ ಅವರ ಬರೆದ ಫಾಲಿಂಗ್ ಮ್ಯಾನ್ ಕಾದಂಬರಿಯು, ಅಮೆರಿಕದ ಕುಟುಂಬವೊಂದರ ಮೇಲೆ 9/11 ಭಯೋತ್ಪಾದಕ ದಾಳಿ ಘಟನೆಯಿಂದಾಗುವ ಪರಿಣಾಮವನ್ನು ಹೃದಯಂಗಮವಾಗಿ ಚಿತ್ರಿಸಿದೆ.

ಸ್ಪೇ ನ್‌ನ ಸಾಹಿತಿ ಜೇವಿಯರ್ ಮಾರಿಯಾಸ್, ಸಿರಿಯದ ಅರೇಬಿಕ್ ಸಾಹಿತಿ ಅದೂನಿಸ್ ಹಾಗೂ ಅಮೆರಿಕದ ಕಾದಂಬರಿಕಾರ ಡಾನ್ ಡೆಲಿಲೊ, ಜಗತ್ತಿನ ಸಾಹಿತ್ಯಲೋಕಕ್ಕೆ ಮೇರುಕೃತಿಗಳನ್ನು ನೀಡಿದ್ದಾರೆ. ಅವರ ಕೃತಿಗಳು ವಿಶ್ವದಾದ್ಯಂತ ಜನತೆಯ, ವಿಮರ್ಶಕರ ಅಪಾರ ಪ್ರಶಂಸೆಗೆ ಪಾತ್ರವಾಗಿಯೂ. ಆದಾಗ್ಯೂ ಈ ಮೂವರು ಸಾಹಿತ್ಯರತ್ನಗಳಿಗೆ ಇನ್ನೂ ನೊಬೆಲ್ ಪುರಸ್ಕಾರ ದೊರೆಯದಿರುವುದು ವಿಷಾದಕರ.

ಈ ಮೂವರು ಮಹಾನ್ ಸಾಹಿತಿಗಳ ಬದುಕು, ಸಾಧನೆಯ ಕಿರುಚಿತ್ರಣ ಇಲ್ಲಿದೆ...

  ಸ್ಪೇನ್‌ನ ಮಹಾನ್ ಕಾದಂಬರಿಕಾರರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿರುವ ಜೇವಿಯರ್ ಮಾರಿಯಾಸ್, 1951ರಲ್ಲಿ ಮ್ಯಾಡ್ರಿಡ್‌ನಲ್ಲಿ ಜನಿಸಿದರು. ಅವರ ತಂದೆ ಜೂಲಿಯಾನ್ ಮಾರಿಯಾಸ್ ಓರ್ವ ತತ್ವಜ್ಞಾನಿಯಾಗಿದ್ದು, ನಿರಂಕುಶಾಧಿಕಾರಿ ಫ್ರಾನ್ಸಿಸ್ಕೊ ಫ್ರಾಂಕೊನನ್ನು ವಿರೋಧಿಸಿದ್ದಕ್ಕಾಗಿ ಅವರನ್ನು ಹತ್ಯೆಗೈಯಲಾಗಿತ್ತು.

 ತನ್ನ ಕಾದಂಬರಿಗಳು, ಸಣ್ಣ ಕತೆಗಳು, ಪ್ರಬಂಧಗಳು ಹಾಗೂ ಅನುವಾದ ಕೃತಿಗಳ ಮೂಲಕ ವಿಶ್ವದಾದ್ಯಂತ ವ್ಯಾಪಕವಾಗಿ ಜನಮನ್ನಣೆಗಳಿಸಿರುವ ಜೇವಿಯರ್ ಮಾರಿಯಾಸ್‌ರನ್ನು ಪ್ಯಾರಿಸ್ ರಿವ್ಯೆ ಪತ್ರಿಕೆಯು ‘‘ಸಾಹಿತ್ಯಿಕ ಹಾಗೂ ಬೌದ್ಧಿಕ ಸಂಚಲನ ’’ ಎಂದು ಬಣ್ಣಿಸಿದೆ. ಅವರ ವಿವಿಧ ಕೃತಿಗಳು 42 ಭಾಷೆಗಳಿಗೆ ಅನುವಾದಗೊಂಡಿವೆ. ಜೇವಿಯರ್ ಮಾರಿಯಾಸ್‌ರ ತೀರಾ ಇತ್ತೀಚಿನ ಕಾದಂಬರಿ ‘ದಸ್ ಬ್ಯಾಡ್ ಬಿಗಿನ್ಸ್’ ಪ್ರಕಟವಾದ ಬೆನ್ನಲ್ಲೇ ‘ದಿ ನ್ಯೂಸ್ಟೇಟ್ಸ್‌ಮ್ಯಾನ್’ ಪತ್ರಿಕೆಯು ಅವರನ್ನು ‘ ಚತುರ ಕಾದಂಬರಿಕಾರ’ ನೆಂದು ಬಣ್ಣಿಸಿದೆ.

   ಮಾರಿಯಾಸ್, ತನ್ನ ಚೊಚ್ಚಲ ಕಾದಂಬರಿಯನ್ನು ಬರೆದದ್ದು ಕೇವಲ 17ನೆ ವಯಸ್ಸಿನಲ್ಲಿ. 21ನೇ ವಯಸ್ಸಿಗೆ ಕಾಲಿಡುವ ಮೊದಲೇ ಅರ ಎರಡನೆ ಕಾದಂಬರಿ ಪ್ರಕಟವಾಗಿತ್ತು. ‘ಟ್ರಾವೆಸಿಯಾ ಡೆಲ್ ಹೊರಿರೊಂಟ್’ (ದಿಗಂತದೊಂದಿಗೆ ಪಯಣ) ಹೆಸರಿನ ಈ ಕಾದಂಬರಿಯು, ಅಂಟಾರ್ಕ್ಟಿಕಾ ಖಂಡ ಪ್ರವಾಸದ ಕಥಾವಸ್ತುವನ್ನು ಒಳಗೊಂಡಿದೆ.

 ಮಾರಿಯಾಸ್ ಹದಿಹರೆಯದಲ್ಲೇ ಪ್ರೌಢಲೇಖಕನ ಸ್ಥಾನ ಪಡೆದುಕೊಂಡಿದ್ದರೂ, ಕ್ಯಾಂಪುಲ್‌ಟೆನ್ಸ್ ವಿವಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ತೇರ್ಗಡೆಯಾದ ಆನಂತರ 6 ವರ್ಷಗಳವರೆಗೆ ಅವರು ಕಾದಂಬರಿಯನ್ನು ಬರೆಯುವುದರಿಂದ ದೂರವಿದ್ದರು. ಅದರ ಬದಲು ಅವರು ಶ್ರೇಷ್ಠ ಬರಹಗಾರರಾದ ವಿಲಿಯಂ ಫಾಕ್‌ನರ್, ವ್ಯಾಲೆಸ್ ಸ್ಟೀವನ್ಸ್,ಜಾನ್ ಅಪ್‌ಡೈಕ್,ಥಾಮಸ್ ಹಾರ್ಡಿ, ವ್ಲಾದಿಮಿರ್ ನಬಕೊವ್, ಜೋಸೆಫ್ ಕೊನ್ರಾಡ್ ಹಾಗೂ ವಿಲಿಯಂ ಶೇಕ್ಸ್‌ಪಿಯರ್ ಅವರ ಕೃತಿಗಳನ್ನು ಅನುವಾದಿಸುವತ್ತ ಹೆಚ್ಚಿನ ಗಮನಹರಿಸಿದರು. ಲಾರೆನ್ಸ್ ಸ್ಟರ್ನ್ಸ್ ಅವರ ‘ಟ್ರೈಸ್ಟ್ರಾಮ್ ಶ್ಯಾಂಡಿ’ ಕಾದಂಬರಿಯ ಭಾಷಾಂತರಕ್ಕಾಗಿ ಮಾರಿಯಾಸ್‌ಗೆ 1979ರಲ್ಲಿ ಸ್ಪೇನ್‌ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು.

 1980ರ ದಶಕದ ಮಧ್ಯದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಬೋಧಕನಾಗಿದ್ದಾಗ ಮಾರಿಯಾಸ್ ಅವರು ‘ ಅಲ್ ಸೋಲ್ಸ್’ ಕಾದಂಬರಿಯನ್ನು ರಚಿಸಿದರು. ‘‘ ಆ ಕಾದಂಬರಿಯಲ್ಲಿ ಮಾರಿಯಾಸ್ ಅವರು ಆಕ್ಸ್‌ಫರ್ಡ್ ವಿವಿಯ ದಿಗ್ಗಜರ ಜೀವನಶೈಲಿಯನ್ನು ಲೇವಡಿ ಮಾಡಿದ್ದರು ಹಾಗೂ ಆಂಟಿಗುವಾದ ಕರಾವಳಿಯಾಚೆಗಿನ ಸಣ್ಣ ದ್ವೀಪವಾದ ‘ರೆಡೊಂಡಾದ ದೊರೆ’ ಎಂಬ ಬಿರುದನ್ನು ಬಳವಳಿಯಾಗಿ ಪಡೆದಿರುವ ಸಾಹಿತಿ ಜಾನ್ ಗಾವ್ಸ್‌ವರ್ತ್‌ನ ಬದುಕನ್ನು ಸಹಾನುಭೂತಿಯೊಂದಿಗೆ ಬಿಂಬಿಸಿದ್ದಾರೆ. ಅನುವಾದಕನಾಗಿ ಹಾಗೂ ಶಿಕ್ಷಕನಾಗಿ ಮಾರಿಯಾಸ್ ಪಡೆದ ಅನುಭವವು, ಮೂಲಭೂತವಾಗಿ ಅವರ ಬರವಣಿಗೆಗಳ ಮೇಲೂ ಪ್ರಭಾವ ಬೀರಿದವು. 1986ರಿಂದೀಚೆಗೆ ಅವರ ಕಾದಂಬರಿಗಳ ಎಲ್ಲಾ ನಾಯಕರು, ಭಾಷಾಂತರಕಾರರು ಅಥವಾ ವಿವಿಧ ಪ್ರಕಾರಗಳ ಸಾಹಿತ್ಯಗಳ ವ್ಯಾಖ್ಯಾನಕಾರರಾಗಿರುತ್ತಿದ್ದರು.

    ‘‘ ಅಲ್‌ಸೋಲ್ಸ್ ಕೃತಿಯ ಪ್ರಕಟನೆಯೊಂದಿಗೆ, ಮಾರಿಯಾಸ್ ಅವರು ರೆಡೊಂಡಾ ದ್ವೀಪದ ನೂತನ ದೊರೆ ಎಂದೇ ಪ್ರಶಂಸಿಸಲ್ಪಟ್ಟರು ಹಾಗೂ ಈಗಲೂ ಅವರು ಆ ಬಿರುದನ್ನು ತನ್ನಲ್ಲಿರಿಸಿಕೊಂಡಿದ್ದಾರೆ’’ ಎಂದು ಪ್ಯಾರಿಸ್ ರಿವ್ಯೆ, ಮಾರಿಯಾಸ್‌ಅವರ ಸಂದರ್ಶನ ಲೇಖನದ ಪೀಠಿಕೆಯಲ್ಲಿ ಹೇಳಿದೆ. ತನ್ನ ಏಳನೆಯ ಕಾದಂಬರಿ, ‘ ಎ ಹಾರ್ಟ್ ಸೊ ವೈಟ್’ಗಾಗಿ ಅವರು ಅಂತಾರಾಷ್ಟ್ರೀಯ ‘ಇಂಪ್ಯಾಕ್’ ಡಬ್ಲಿನ್ ಸಾಹಿತ್ಯ ಪುರಸ್ಕಾರವನ್ನು ಆ ಕಾದಂಬರಿಯ ಅನುವಾದಕಿ ಮಾರ್ಗರೆಟ್ ಜುಲ್‌ಕೋಸ್ಟಾ ಜೊತೆ ಹಂಚಿಕೊಂಡಿದ್ದರು. 2002 ಹಾಗೂ 2007ರ ಮಧ್ಯೆ ಮಾರಿಯಾಸ್ ಅವರು ಮೂರು ಸರಣಿಗಳ ‘ಯುವರ್ ಫೇಸ್ ಟುಮಾರೊ’ ಕಾದಂಬರಿಯನ್ನು ಬರೆದರು. ಈ ಕೃತಿಯ ಬಗ್ಗೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ, ಲ್ಯಾರಿ ರೋಥರ್ ಬರೆದ ವಿಮರ್ಶೆಯೊಂದರಲ್ಲಿ, ಮಹಾನ್ ಕಥೆಗಾರರನ್ನು ಸದಾ ಕಾಲವೂ ಆಕರ್ಷಿಸುವ ಥೀಮ್‌ಗಳಾದ ಪ್ರೀತಿ ಹಾಗೂ ಸಾವು, ಅಧಿಕಾರ ಹಾಗೂ ಹಿಂಸೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ಕಪಟತನ, ನಿಷ್ಠೆ ಹಾಗೂ ವಂಚನೆ ಇವುಗಳ ಸಮಗ್ರ ಚಿತ್ರಣ ಇದಾಗಿದೆ’’ ಎಂದು ಹೇಳಿದ್ದಾರೆ. ಈ ಕೃತಿಗಾಗಿ ಮಾರಿಯಾಸ್‌ಗೆ 2003ನೆ ಸಾಲಿನ ಪ್ರಿಕ್ಸ್ ಫಾರ್ಮೆಂಟರ್ ಪುರಸ್ಕಾರ ಲಭಿಸಿತ್ತು.

 ಮಾರಿಯಾಸ್ ಅವರು ಸ್ಪಾನಿಶ್‌ನಿಂದ ಇಂಗ್ಲಿಷ್‌ಗೆ ಅನುವಾದಿಸಿದ ಕಾದಂಬರಿಗಳೆಂದರೆ, ಅಲ್ ಸೋಲ್ಸ್, ಎ ಹಾರ್ಟ್ ಸೋ ವೈಟ್, ಟುಮಾರೊ ಇನ್ ದಿ ಬ್ಯಾಟಲ್ ಥಿಂಕ್ ಆನ್ ಮಿ, ವೆನ್ ಐ ವಾಸ್ ಮೋರ್ಟಲ್, ಡಾರ್ಕ್ ಬ್ಯಾಕ್ ಆಫ್ ಟೈಮ್, ದಿ ಮ್ಯಾನ್ ಆಫ್ ಫೀಲಿಂಗ್, ವೋಯೇಜ್ ಆಲೊಂಗ್ ದಿ ಹಾರಿಝನ್, ರಿಟನ್ ಲಿವ್ಸ್, ದಿ ಯುವರ್ ಫೇಸ್ ಟುಮಾರೊ ತ್ರಿಸರಣಿ (ಫಿವರ್ ಆ್ಯಂಡ್ ಸ್ಪಿಯರ್, ಡಾನ್ಸ್ ಆ್ಯಂಡ್ ಡ್ರೀಮ್ ಹಾಗೂ ಪಾಯಿಸನ್, ಶ್ಯಾಡೊ ಆ್ಯಂಡ್ ಫಾರ್‌ವೆಲ್), ಬ್ಯಾಡ್ ನೇಚರ್, ವೈಲ್ ದಿ ವುಮನ್ ಆರ್ ಸ್ಲೀಪಿಂಗ್, ದಿ ಇನ್‌ಫ್ಯಾಚುಯೇಶನ್ಸ್ ಹಾಗೂ ದಸ್ ಬ್ಯಾಡ್ ಬಿಗಿನ್ಸ್.

 ಆದೂನಿಸ್

 ಆದೂನಿಸ್ ಎಂಬ ಕಾವ್ಯನಾಮದಿಂದ ವಿಶ್ವವಿಖ್ಯಾತರಾಗಿರುವ ಸಿರಿಯದ ಕವಿ, ಅನುವಾದಕ ಹಾಗೂ ಪ್ರಬಂಧಕಾರ ಅಲಿ ಅಹ್ಮದ್ ಸಯೀದ್‌ಎಸ್ಬೇರ್, ಅಧುನಿಕ ಅರಬಿಕ್ ಕಾವ್ಯ ಲೋಕಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ.

  ಅದೂನಿಸ್ 1930ರಲ್ಲಿ ಪಶ್ಚಿಮ ಸಿರಿಯದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದರು. ತನ್ನ ಬಾಲ್ಯದ ಆರಂಭದ ವರ್ಷಗಳಲ್ಲಿ ಶಾಲೆಯ ಮೆಟ್ಟಲು ಹತ್ತಲು ಸಾಧ್ಯವಾಗದ ಈ ಬಾಲಕ, ಇಂದು ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಪ್ರಶಂಸನೀಯ ಕವಿಗಳಲ್ಲೊಬ್ಬರಾಗಿದ್ದಾರೆ. ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟವಾದ ಅವರ ಪರಿಚಯ ಲೇಖನದಲ್ಲಿ ಖ್ಯಾತ ಸಾಹಿತ್ಯ ವಿಮರ್ಶಕಿ ಮಾಯಾ ಜಗ್ಗಿ ಅವರ, ಅದೊನಿಸ್ ಅವರು ಅರಬ್‌ಜಗತ್ತಿನ ಜೀವಂತವಿರುವ ಅತ್ಯಂತ ಶ್ರೇಷ್ಠ ಕವಿಯೆಂದು ಶ್ಲಾಘಿಸಿದ್ದಾರೆ. ಕಡುಬಡತನದ ನಡುವೆಯೂ ಅದೂನಿಸ್ ಅವರು ಶಾಲೆಗೆ ಹೋಗಲು ಹೇಗೆ ಸಫಲರಾದರೆಂಬ ಬಗ್ಗೆ ಒಂದು ರೋಚಕ ಕಥೆಯೇ ಇದೆ. ಕವನವನ್ನು ಹೇಗೆ ಓದಬೇಕು ಹಾಗೂ ಕಂಠಪಾಠ ಮಾಡಬೇಕು ಎಂಬ ಬಗ್ಗೆ ಅವರು ತಂದೆಯವರಿಂದ ತರಬೇತಿ ಪಡೆದಿದ್ದರು. ಸಿರಿಯದ ಅಧ್ಯಕ್ಷರು ಸಮೀಪದ ಪಟ್ಟಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಮುಂದೆ 14 ವರ್ಷದ ಅದೂನಿಸ್ ಕವನವೊಂದನ್ನು ವಾಚಿಸಿದರು. ಆಗ ಅಧ್ಯಕ್ಷರು ಆತನಿಗೆ ಏನು ಬೇಕೆಂದು ಕೇಳಿದಾಗ,ತನ್ನನ್ನು ಶಾಲೆಗೆ ಸೇರಿಸುವಂತೆ ಕೋರಿದ. ಈ ಘಟನೆ ನಡೆದ ಮೂರು ವರ್ಷಗಳ ಬಳಿಕ 17 ವರ್ಷದ ಈ ಬಾಲಕ ತನಗೆ ಅದೂನಿಸ್ ಎಂಬ ಕಾವ್ಯನಾಮವನ್ನು ಇಟ್ಟುಕೊಂಡ.

  1950ರಲ್ಲಿ ಅದೂನಿಸ್ ತನ್ನ ಚೊಚ್ಚಲ ಕವನಸಂಕಲನವನ್ನು ಪ್ರಕಟಿಸಿದರು. ಆಗತಾನೆ ಅವರು ಕಾನೂನು ಹಾಗೂ ತತ್ವಶಾಸ್ತ್ರವನ್ನು ಅಧ್ಯಯನ ಮಾಡಲು ಸಿರಿಯ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಗೊಂಡಿದ್ದರು. ಪದವೀಧರನಾದ ಒಂದೆರಡು ವರ್ಷಗಳಲ್ಲಿಯೇ ಅವರನ್ನು ಸಿರಿಯನ್ ಪ್ರಗತಿಪರ ರಾಷ್ಟ್ರೀಯ ಪಕ್ಷದ ಸದಸ್ಯತ್ವವನ್ನು ಹೊಂದಿದ್ದಕ್ಕಾಗಿ ಸರಕಾರವು ಬಂಧನದಲ್ಲಿರಿಸಿತು. ಬಿಡುಗಡೆಯ ತರುವಾಯ ಅವರು ಬೈರೂತ್‌ಗೆ ತೆರಳಿದರು. ಅಲ್ಲಿ ಅವರು ಅರೇಬಿಕ್ ಸಾಹಿತ್ಯದಲ್ಲಿ ಡಾಕ್ಟರೇಟ್ ಡಿಗ್ರಿ ಪಡೆದರು ಹಾಗೂ ಸಾಹಿತ್ಯ ನಿಯತಕಾಲಿಕಗಳಾದ ‘ಮಜಲ್ಲತ್ ಶೀರ್’ ಹಾಗೂ ಆನಂತರ ‘ಮಾವಾಕಿಫ್’ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಮಜಲ್ಲಾತ್ ಶೀರ್ ಪತ್ರಿಕೆಯು ಪ್ರಕಟಿಸಿದ ಅದೊನಿಸ್ ಅವರ ಪ್ರಾಯೋಗಿಕ ಕವನಗಳು, ಪ್ರಭಾವಶಾಲಿಯಾಗಿದ್ದವು. ಆನಂತರ ಅವರಿಗೆ ಪ್ಯಾರಿಸ್‌ನಲ್ಲಿ ಅಧ್ಯಯನ ಮಾಡಲು ಶಿಷ್ಯವೇತನ ಸಹ ದೊರೆಯಿತು.

ಲೆಬನಾನ್‌ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಆವರು ಆ ದೇಶದಲ್ಲಿ ಅಂತರ್ಯುದ್ಧ ಭುಗಿಲೆದ್ದ ಆನಂತರ 1980ರಲ್ಲಿ ಪ್ಯಾರಿಸ್‌ಗೆ ವಲಸೆಹೋದರು.

 ‘ಅರೇಬಿಕ್ ಕವನಸಾಹಿತ್ಯದ ಸಾಮಾನ್ಯ ಸ್ವರೂಪವನ್ನು ಮುರಿದು ಹಾಕಿದ ಅಡೊನಿಸ್ ಮುಕ್ತ ಛಂದಸ್ಸಿನಲ್ಲಿ ಹಾಗೂ ಗದ್ಯ ಕವನಗಳಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಿದ್ದರು. ಸಾಮಾಜಿಕ ಬದಲಾವಣೆ ಹಾಗೂ ದೇಶಭ್ರಷ್ಟತೆಯಂತಹ ವಿಷಯಗಳನ್ನು ಮಾರ್ಮಿಕವಾಗಿ ತಮ್ಮ ಕವನಗಳಲ್ಲಿ ಅಳವಡಿಸಿದ್ದರು ಎಂದು, ಈ ಮಹಾನ್ ಕವಿಯ ಅಧಿಕೃತ ವೆಬ್‌ಸೈಟೊಂದರಲ್ಲಿ ಪ್ರಸ್ತಾಪಿಸಲಾಗಿದೆ.

 ಈ ಪ್ರತಿಭಾವಂತ ಕವಿಯು ಅನೇಕ ಕವನಸಂಕಲನಗಳ ಕರ್ತೃವಾಗಿದ್ದಾರೆ. ಅದೊನಿಸ್: ಆಯ್ದ ಕವನಗಳು (2010, ಖಾಲಿದ್ ಮತ್ತಾವರಿಂದ ಅನುವಾದ), ಮಿಹಿಯಾರ್ ಆಫ್‌ಡಮಾಸ್ಕಸ್: ಹಿಸ್ ಸಾಂಗ್ಸ್ (2008), ಇಫ್ ಓನ್ಲಿ ಸೀ ಕುಡ್ ಸ್ಲೀಪ್ (2002), ದಿ ಬ್ಲಡ್ ಆಫ್ ಅಡೊನಿಸ್ (1971) ಈ ಕೃತಿಗಳು ಪ್ರಮುಖವಾದವು. ಈ ಪೈಕಿ ಬ್ಲಡ್ ಆಫ್ ಅಡೊನಿಸ್, ಅಂತಾರಾಷ್ಟ್ರೀಯ ಕಾವ್ಯ ವೇದಿಕೆಯ ಸಿರಿಯ-ಲೆಬನಾನ್ ಪ್ರಶಸ್ತಿಯನ್ನು ಗೆದ್ದಿತು. ಅಡೊನಿಸ್ ಅವರು ಅರಬ್ ಕಾವ್ಯಜಗತ್ತಿನ ಪರಿಚಯ ಕುರಿತ ಕೃತಿಯೊಂದರ ಲೇಖಕರೂ ಆಗಿದ್ದಾರೆ. ಅಡೂನಿಸ್ ಅವರು ಕ್ವಾಸಿದತ್ ಅಲ್ ನಸ್ರ್ (ಗದ್ಯ ಕವನ) ಶೈಲಿಯ ಕವನಗಳ ರಚನೆಯಲ್ಲಿನ ಪ್ರಾವೀಣ್ಯತೆಯಿಂದ ಜನಪ್ರಿಯರಾಗಿದ್ದಾರೆಂದು ಅಲ್‌ಜಝೀರಾ ಅಂತರ್ಜಾಲ ತಾಣದಲ್ಲಿ ಪ್ರಸಾರವಾದ ಪರಿಚಯಲೇಖನವೊಂದು ತಿಳಿಸಿದೆ. ‘‘ಅಪಾರವಾದ ಪ್ರತಿಭೆ ಹಾಗೂ ಅವಿಶ್ರಾಂತವಾದ ಚೈತನ್ಯವನ್ನು ಹೊಂದಿರುವ ಅವರು ಅರೇಬಿಕ್ ಸಂಸ್ಕೃತಿಯ ವಿಶ್ವಕೋಶವಾಗಿದ್ದಾರೆ. ಅರೇಬಿಕ್ ಕವನಶೈಲಿಯಲ್ಲಿ ಪ್ರಾವೀಣ್ಯತೆಯ ಜೊತೆಗೆ ಅಧುನಿಕತೆಗೆ ಅದರಲ್ಲೂ ವಿಶೇಷ ಫ್ರೆಂಚ್ ಕವನಶೈಲಿಗೆ ಅವರು ತನ್ನನ್ನು ಮುಕ್ತವಾಗಿ ತೆರೆದಿಟ್ಟುಕೊಂಡಿರುವುದು ಇವೆಲ್ಲವೂ ಅರನ್ನು ಅರೇಬಿಕ್ ಸಾಹಿತ್ಯ ಸಂಸ್ಕೃತಿಯ ಮೇಲೆ ವಿಶಾಲವಾದ ಹಾಗೂ ಗಾಢವಾದ ಪರಿಣಾಮವನ್ನು ಬೀರುವಂತೆ ಮಾಡುವ ಸ್ಥಾನದಲ್ಲಿ ನಿಲ್ಲಿಸಿದೆ’’ ಎಂದು ಅದು ಹೇಳಿದೆ.

‘ಸಾಂಗ್ಸ್ ಆಫ್ ಮಿಹ್ಯಾರ್ ದಿ ಡಮಾಸ್ಕಿನ್’ ಅದೂನಿಸ್ ಅವರ ಮೂರನೆ ಕವನ ಸಂಕಲನವಾಗಿದ್ದು, ಅದರಲ್ಲಿ ಅವರು 11ನೆ ಶತಮಾನದ ಮಹಾನ್ ಕವಿ ಮಿಹಿಯಾರ್‌ನ ಕಣ್ಣಿನಲ್ಲಿ ಸಮಕಾಲೀನ ಡಮಾಸ್ಕಸ್‌ನ್ನು ಚಿತ್ರಿಸಿದ್ದಾರೆ.

  ಅದೂನಿಸ್ ಅಂತಾರಾಷ್ಟ್ರೀಯ ‘ನಝೀಂ ಹಿಕ್ಮತ್’ ಕಾವ್ಯ ಪ್ರಶಸಿ,್ತ ರಾಷ್ಟ್ರೀಯ ಕವನ ಪ್ರಶಸ್ತಿ, ‘ಫ್ರೆಂಚ್ ಕಲಾ ಹಾಗೂ ಸಾಹಿತ್ಯ’ ಪ್ರಶಸ್ತಿ, ಗೋಥೆ ಪದಕ ಹಾಗೂ ಪ್ರಿಕ್ಸ್ ಮೆಡಿಟರೇನಿಯನ್-ಎಟ್ರೇಂಜರ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆೆ.

ಡಾನ್ ಡೆಲಿಲ್ಲೊ

‘ವೈಟ್ ನಾಯ್ಸಾ’ ಕಾದಂಬರಿಯ ಲೇಖಕರಾದ ಡಾನ್ ಡೆಲಿಲ್ಲೊ 1936ರಲ್ಲಿ, ಶ್ರಮಿಕ ವರ್ಗಕ್ಕೆ ಸೇರಿದ ಇಟಾಲಿಯನ್ ಕೆಥೋಲಿಕ್ ಕುಟುಂಬವೊಂದರಲ್ಲಿ ಜನಿಸಿದರು. ನ್ಯೂಯಾರ್ಕ್ ನಗರದ ಬ್ರಾಂಕ್ಸ್‌ನಲ್ಲಿರುವ ಇಟಾಲಿಯನ್-ಅಮೆರಿಕನ್ ಸಂಜಾತರ ಕಾಲನಿಯಲ್ಲಿ ಅವರ ಜನನವಾಗಿತ್ತು.

 ತನ್ನ ಹದಿಹರೆಯದ ಉತ್ತರಾರ್ಧದಲ್ಲಿ ಅವರು ಬರವಣಿಗೆಯನ್ನು ಆರಂಭಿಸಿದರು. 20ರ ಹರೆಯದಲ್ಲಿ ಹಾಗೂ 30ರ ಹರೆಯದ ಆರಂಭದಲ್ಲಿ ಅಧ್ಯಯನದಲ್ಲೇ ಅಧಿಕ ಸಮಯವನ್ನು ಕಳೆದರು. ಆನಂತರ ಅವರು ಅತ್ಯಂತ ಗಂಭೀರ ಸಾಹಿತ್ಯದೆಡೆಗೆ ಗಮನಹರಿಸಿದರು. 1971ರಲ್ಲಿ ಡೆಲಿಲ್ಲೊ ಅವರು ತನ್ನ ಚೊಚ್ಚಲ ಕಾದಂಬರಿ ‘ಅಮೆರಿಕಾನಾ’ವನ್ನು ಪ್ರಕಟಿಸಿದರು. ಪ್ಯಾರಿಸ್ ರಿವ್ಯೆ ಪತ್ರಿಕೆಯು ಡೆಲಿಲ್ಲೊ ಅವರ ಆರಂಭಿಕ ಕಾದಂಬರಿಗಳು ಹಾಗೂ ಅವುಗಳಿಗೆ ಸಾಹಿತ್ಯಾಸಕ್ತರಿಂದ ದೊರೆತ ಪ್ರತಿಕ್ರಿಯೆ ಬಗ್ಗೆ ಹೀಗೆ ವಿವರಿಸಿದೆ.

  ‘‘ಅಮೆರಿಕನಾದ ಬಳಿಕ ಡೆಲಿಲೊ ಅವರ ಕಾದಂಬರಿಗಳು ಒಂದರ ಬೆನ್ನ ಹಿಂದೆ ಒಂದರಂತೆ ಧಾವಿಸಿಬಂದವು. ಏಳು ವರ್ಷಗಳಲ್ಲಿ ಅವರು ಐದು ಕಾದಂಬರಿಗಳನ್ನು ಬರೆದರು. ಎಂಡ್ ರೆನ್ (1972), ಗ್ರೇಟ್ ರೆನ್ಸ್ ಸ್ಟ್ರೀಟ್ (1973), ರ್ಯಾಟ್ನರ್ಸ್ ಸ್ಟಾರ್ (1976), ಪ್ಲೇಯರ್ಸ್ (1977) ಹಾಗೂ ರನ್ನಿಂಗ್ ಡಾಗ್ (1978) ಈ ಎಲ್ಲಾ ಕಾದಂಬರಿಗಳಿಗೆ ವಿಮರ್ಶಕರ ಮುಕ್ತಕಂಠದ ಪ್ರಶಂಸೆ ದೊರೆತವು. ಆದರೆ ಅವು ಚೆನ್ನಾಗಿ ಮಾರಾಟವಾಗಲಿಲ್ಲ.

ಆದರೆ ದಿ ನೇಮ್ಸ್ (1982) ಹಾಗೂ ವೈಟ್ ನಾಯ್ಸ್ (1985) ಕಾದಂಬರಿಗಳು ಪ್ರಕಟಣೆಯ ಬಳಿಕ ಡೆಲಿಲ್ಲೊ ಓದುಗರ ಅಚ್ಚುಮೆಚ್ಚಿನ ಕಥೆಗಾರನೆನಿಸಿಕೊಂಡರು. 1988ರಲ್ಲಿ ಪ್ರಕಟವಾದ ಅವರ ಐತಿಹಾಸಿಕ ಕಾದಂಬರಿ ‘ಲಿಬ್ರಾ’ವು ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿಯವರ ಹಂತಕ ಲೀ ಹಾರ್ವೆ ಓಸ್ವಾಲ್ಡ್ ಕುರಿತಾದ ಕಥಾವಸ್ತುವನ್ನು ಒಳಗೊಂಡಿದೆ. ಈ ಕಾದಂಬರಿಯ ಪ್ರತಿಗಳು ಬಿಸಿ ಬಿಸಿ ದೋಸೆಯಂತೆ ಮಾರಾಟವಾದವು. ಆದಾಗ್ಯೂ, ಅಮೆರಿಕದ ಪಟ್ಟಣವೊಂದರಲ್ಲಿ ಹಿಟ್ಲರ್ ಕುರಿತ ಅಧ್ಯಯನದ ಪ್ರೊಫೆಸರ್ ಒಬ್ಬನ ಕುರಿತಾದ ಕಾದಂಬರಿ ವೈಟ್ ನಾಯ್ಸೊ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಈ ಕೃತಿಗಾಗಿ ಅವರಿಗೆ ಅಮೆರಿಕದ ಕಾಲ್ಪನಿಕ ಕಾದಂಬರಿಗಳಿಗಾಗಿನ ರಾಷ್ಟ್ರೀಯ ಗ್ರಂಥ ಪುರಸ್ಕಾರವೂ ಲಭಿಸಿತು.

II II  ಮಾವೊ ಕಾದಂಬರಿಗಾಗಿ ಡೆಲಿಲೊ ಅವರು ಪೆನ್/ಫಾಕ್ನರ್ ಪುರಸ್ಕಾರಕ್ಕೆ ಪಾತ್ರರಾದರು. ಪ್ಯಾರಿಸ್ ರಿವ್ಯೆ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತನ್ನ ಈ ಕೃತಿಯ ಬಗ್ಗೆ ಹೀಗೆ ಹೇಳಿದ್ದಾರೆ. ‘‘ಮಾವೊ ಕಾದಂಬರಿಯಲ್ಲಿ ನಾನು ಅಜ್ಞಾತ ಬರಹಗಾರನೊಬ್ಬನ ಬಗ್ಗೆ ಚಿಂತಿಸಿದ್ದೆ. ಆತ ತನ್ನ ಬರವಣಿಗೆಯಲ್ಲಿ ಪರಿಶುದ್ಧತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಬಾಹ್ಯ ಪ್ರಪಂಚದ ಜೊತೆ ಬೆರೆಯಲಿಚ್ಚಿಸುವುದಿಲ್ಲ. ಆದರೆ ತನ್ನ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ತಿರುವುಗಳಿಂದ ಆತ ಧಾರ್ಮಿಕ ನಾಯಕರು ಹಾಗೂ ರಾಜಕಾರಣಿಗಳ ಸಂಪರ್ಕಕ್ಕೆ ಬರುತ್ತಾನೆ. ಆಗ ಆತನಲ್ಲಿ ಎದುರಾಗುವ ಆಂತರಿಕ ಸಂಘರ್ಷಗಳನ್ನು ಡೆಲಿಲೊ ಅತ್ಯಂತ ಹೃದಯಂಗಮವಾಗಿ ಕಾದಂಬರಿಯಲ್ಲಿ ಮೂಡಿಸಿದ್ದಾರೆ.

   1997ರಲ್ಲಿ ಡೆಲಿಲೊ ಪ್ರಕಟಿಸಿದ ‘ಅಂಡರ್‌ವರ್ಲ್ಡ್’ಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿತು. ಇದು ಕೂಡಾ ಪ್ರಚಂಡ ಮಾರಾಟವನ್ನು ಕಂಡಿತು. ಖ್ಯಾತ ವಿಮರ್ಶಕ ಮಾರ್ಟಿನ್ ಆ್ಯಮಿಸ್ ಈ ಕಾದಂಬರಿಯ ಬಗ್ಗೆ ಬರೆದ ವಿಮರ್ಶೆಯೊಂದರಲ್ಲಿ ಹೀಗೆ ಹೇಳಿದ್ದಾರೆ. ‘‘ಅಂಡರ್‌ವರ್ಲ್ಡ್ ಶ್ರೇಷ್ಠ ಕಾದಂಬರಿಯಾಗಿರಬಹುದು ಅಲ್ಲದೇ ಇರಬಹುದು. ಆದರೆ ಇದು ಡೆಲಿಲೊ ಓರ್ವ ಶ್ರೇಷ್ಠ ಕಾದಂಬರಿಕಾರನೆಂಬುದನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿ ತೋರಿಸಿದೆ.

    ಸಮಕಾಲೀನ ಅಮೆರಿಕದ ಧಾವಂತದ ಬದುಕನ್ನು ಡೆಲಿಲೊ ಈ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಬಸ್ ಹಾಗೂ ಸಬ್‌ವೇಗಳಲ್ಲಿ ಜನರಾಡುವ ಮಾಮೂಲಿ ಸಂಭಾಷಣೆಗಳನ್ನು ಅವರು ಇದರಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದಾರೆ ಎಂದು ದಿ ಗಾರ್ಡಿಯನ್ ಪತ್ರಿಕೆ ಅಂಡರ್‌ವರ್ಲ್ಡ್ ಕಾದಂಬರಿಯ ಬಗ್ಗೆ ಬರೆದ ಲೇಖನವೊಂದರಲ್ಲಿ ತಿಳಿಸಿದೆ.

ತದನಂತರ ಡೆಲಿಲೊ ಬಾರ್ಡಿ ಆರ್ಟಿಸ್ಟ್ (2001) ಹಾಗೂ ಕಾಸ್ಮೊಪೊಲೀಸ್ (2003) ಕಾದಂಬರಿಗಳನ್ನು ಪ್ರಕಟಿಸಿದರು. ಮಹಾನ್ ಐತಿಹಾಸಿಕ ಕಾದಂಬರಿಕಾರ ಜಾಯ್ಸೊನ ಉಲಿಸಿಸ್ ಕಾದಂಬರಿಯ ಆಧುನಿಕ ಅವತರಣಿಕೆಯಾದ ಯೂಲಿಸೆಸ್, ವಿಮರ್ಶಕರಿಂದ ವ್ಯಾಪಕ ಟೀಕೆಗೊಳಗಾಯಿತು. 2007ರಲ್ಲಿ ಅವರ ಬರೆದ ಫಾಲಿಂಗ್ ಮ್ಯಾನ್ ಕಾದಂಬರಿಯು, ಅಮೆರಿಕದ ಕುಟುಂಬವೊಂದರ ಮೇಲೆ 9/11 ಭಯೋತ್ಪಾದಕ ದಾಳಿ ಘಟನೆಯಿಂದಾಗುವ ಪರಿಣಾಮವನ್ನು ಹೃದಯಂಗಮವಾಗಿ ಚಿತ್ರಿಸಿದೆ.

 ಡೆಲಿಲೊ ಅವರು 2010ರಲ್ಲಿ ಪಾಯಿಂಟ್ ಒಮೆಗಾ ಕಾದಂಬರಿಯನ್ನು ಪ್ರಕಟಿಸಿದರು. ಆ ವರ್ಷವೇ ಅವರಿಗೆ ಸೈಂಟ್ ಲೂಯಿಸ್ ಸಾಹಿತ್ಯ ಪ್ರಶಸ್ತಿ ಒಲಿಯಿತು. ಜೊತೆಗೆ ಅಮೆರಿಕದ ಕಾಲ್ಪನಿಕ ಕಾದಂಬರಿ ಕ್ಷೇತ್ರದಲ್ಲಿನ ಸಾಧನೆಗಾಗಿ ಪೆನ್/ಸೌಲ್ ಬೆಲ್ಲೊ ಪುರಸ್ಕಾರ ವೂ ಲಭಿಸಿತು. 2012ರಲ್ಲಿ ದ ಲಿಲ್ಲೊ ಅವರು ಕಾರ್ಲ್ ಸ್ಯಾಂಡ್‌ಬರ್ಗ್ ಸಾಹಿತ್ಯ ಪುರಸ್ಕಾರವನ್ನು ಸ್ವೀಕರಿಸಿದರು.

ಡೆಲಿಲೊ ಅವರು ಐದು ಪ್ರಮುಖ ನಾಟಕಗಳನ್ನು ಕೂಡಾ ಬರೆದಿದ್ದಾರೆ. ಎಂಜಿನಿಯರ್ ಆಫ್ ಮೂನ್‌ಲೈಟ್ (1979), ದಿ ಡೇ ರೂಮ್ (1986), ವಾಲ್‌ಪರಾಯಿಸೊ (1999), ಲವ್ ಲೈಸ್ ಬ್ಲೀಡಿಂಗ್ (2006) ಹಾಗೂ ವರ್ಡ್ ಫಾರ್ ಸ್ನೋ (2007) ಅವುಗಳಲ್ಲಿ ಪ್ರಮುಖವಾದವು.

  ಅವರ ನೂತನ ಕಾದಂಬರಿ ‘ಝಿರೋ ಕೆ’ 2016ರಲ್ಲಿ ಪ್ರಕಟವಾಯಿತು. ಅದರಲ್ಲಿ ಕಥಾನಾಯಕ ಬಿಲಿಯಾಧೀಶ ರೋಸ್ ಲಾಕ್‌ಹಾರ್ಟ್ ತಾನು ಹಾಗೂ ಶಾಶ್ವತವಾಗಿ ರೋಗಪೀಡಿತಳಾಗಿರುವ ತನ್ನ ಪತ್ನಿಯ ದೇಹವನ್ನು ಕ್ರಿಯೋಪ್ರಿಸರ್ವೇಶನ್ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಂರಕ್ಷಿಸಿಡುವ ಮೂಲಕ ಅಮರನಾಗಲು ಪ್ರಯತ್ನಿಸುವ ರೋಚಕ ಕಥಾವಸ್ತುವನ್ನು ಒಳಗೊಂಡಿದೆ. ‘‘ ಡೆಲಿಲ್ಲೊ ಅವರು ಹಲವು ವರ್ಷಗಳಿಂದ ತಮ್ಮ ಕಾದಂಬರಿಯಲ್ಲಿ ನಿರೂಪಿಸಿದ ವಿಷಯಗಳನ್ನು ಝಿರೋ ಕೆ ಕೃತಿಯಲ್ಲಿ ಲಯಬದ್ಧವಾಗಿ ಹೆಣೆಯಲಾಗಿದೆ. ತಂತ್ರಜ್ಞಾನದ ವ್ಯಾಮೋಹದಿಂದ ಹಿಡಿದು ಮಾಧ್ಯಮಸಮೂಹದ ಧಾವಂತಗಳು, ಹಣದ ಬಲ ಹಾಗೂ ಅರಾಜಕತೆಯ ಭೀತಿ ಇವೆಲ್ಲವನ್ನೂ ಡೆಲಿಲ್ಲೊ ಈ ಕಾದಂಬರಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆಂದು ವಿಮರ್ಶಕ ಮಿಚಿಕೊ ಕಕುತಾನಿ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಬರೆದಿರುವ ವಿಮರ್ಶೆಯಲ್ಲಿ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News