ಕರಣ್ ವೀಡಿಯೊ

Update: 2016-10-23 12:30 GMT

ಕರಣ್ ಜೋಹರ್ ಅವರ ಹೊಸ ಸಿನೆಮಾಗೆ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ, ಅವರು ಗುರುವಾರ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ, ಅವರು ಉಗ್ರರು ಬಿಡುಗಡೆ ಮಾಡಿದ ವೀಡಿಯೊದ ಸಂತ್ರಸ್ತರಂತೆ ಕಾಣುತ್ತಿದ್ದಾರೆ. ಅವರು ತಮ್ಮ ದೇಶಭಕ್ತಿಯನ್ನು ಪುನರುಚ್ಚರಿಸಿದ್ದು, ಅಕ್ಟೋಬರ್ 28ರಂದು ‘ಏ ದಿಲ್ ಹೇ ಮುಷ್ಕಿಲ್’ ಚಿತ್ರವನ್ನು ಯಾವ ಅಡ್ಡಿಯೂ ಇಲ್ಲದೇ ಅಕ್ಟೋಬರ್ 28ರಂದು ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ. ಇಲ್ಲಿ ಜೋಹರ್ ಕಾರ್ಯಕ್ರಮ ನಿರೂಪಕರಂತೆ ಕಾಣದೇ, ಕಟುಕನ ಕಠಾರಿಗೆ ಕೊರಳೊಡ್ಡಿದವರಂತೆ ಕಾಣುತ್ತಾರೆ.
ಒಂದು ನಿಮಿಷ 46 ಸೆಕೆಂಡ್‌ಗಳ ಈ ವೀಡಿಯೊದಲ್ಲಿ ಅಂತ್ಯಸಂಸ್ಕಾರದ ದಟ್ಟ ಛಾಯೆ ಕಾಣುತ್ತಿದೆ. ಬಿಳಿಪಟ್ಟಿಯ ಕಪ್ಪು ಟಿ-ಷರ್ಟ್ ಧರಿಸಿದ ಜೋಹರ್, ಕಡು ಬೂದುಬಣ್ಣದ ಹಿನ್ನೆಲೆಯಲ್ಲಿ ಕುಳಿತುಕೊಂಡು, ಅತಿರಾಷ್ಟ್ರೀಯವಾದಿ ಟೀಕಾಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಈ ಪೈಕಿ ಬಹುತೇಕ ಮಂದಿ ಚಿತ್ರರಂಗದವರೇ. ಇಲ್ಲಿ ತಲೆ ಅಥವಾ ಕೈ ಚಲನೆ ಅಕ್ಷರಶಃ ನಿಶ್ಚೇತಗೊಂಡಿದೆ. ಜೋಹರ್ ಧ್ವನಿ ಅಡಗಿದೆ.
ಈ ಚಿತ್ರದ ಬಿಡುಗಡೆ ತಡೆಯಬೇಕು ಎಂಬ ಆಗ್ರಹಕ್ಕೆ ಮುಖ್ಯ ಕಾರಣವೆಂದರೆ ಈ ಚಿತ್ರದಲ್ಲಿ ಪಾಕಿಸ್ತಾನಿ ನಟ ಫವಾದ್ ಖಾನ್ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 2015ರ ಸೆಪ್ಟಂಬರ್‌ನಿಂದ ಡಿಸೆಂಬರ್ ನಡುವೆ ಚಿತ್ರೀಕರಣ ನಡೆದ ವೇಳೆ, ಭವಿಷ್ಯದಲ್ಲಿ ಉಭಯ ದೇಶಗಳ ಸಂಬಂಧ ಹದಗೆಡುವ ಪರಿಸ್ಥಿತಿಯ ಸುಳಿವೂ ಇರಲಿಲ್ಲ ಎನ್ನುವುದು ಜೋಹರ್ ಅವರ ಸಮರ್ಥನೆ.
ಇದೀಗ ಪರಿಸ್ಥಿತಿ ಸಂಪೂರ್ಣ ಭಿನ್ನ. ನೆರೆ ದೇಶದ ಜತೆ ಶಾಂತಿಯುತ ಸಂಬಂಧವನ್ನು ಸ್ಥಾಪಿಸಲು ಸರಕಾರ ಪ್ರಯತ್ನಿಸುತ್ತಿದೆ. ಇಂಥ ಪ್ರಯತ್ನವನ್ನು ಗೌರವಿಸುವ ಜತೆಗೆ ಜನರ ಭಾವನೆಗಳನ್ನೂ ಗೌರವಿಸುತ್ತೇನೆ ಎಂದು ಜೋಹರ್ ಹೇಳುತ್ತಾರೆ.
ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂದೆಂದೂ ನೆರೆ ದೇಶದ ಪ್ರತಿಭೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಪಾಕ್ ಜತೆಗಿನ ಕೊನೆಯ ಸಂಬಂಧವನ್ನೂ ಕಳಚಿಕೊಂಡು, ದೇಶದ ಮೇಲಿನ ನಿಯತ್ತು ಪ್ರದರ್ಶಿಸಿದ್ದಾರೆ.
ಈ ಹೇಳಿಕೆ ಸಹಜವಾಗಿಯೇ ಭವಿಷ್ಯದಲ್ಲಿ ಪಾಕಿಸ್ತಾನಿ ನಟರು ಅಥವಾ ಕಲಾವಿದರನ್ನು ಭಾರತದ ಚಿತ್ರರಂಗದಲ್ಲಿ ಬಳಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆದಿದೆ. 1980ರ ದಶಕದಲ್ಲೇ ಪಾಕಿಸ್ತಾನಿ ಚಿತ್ರಕಥೆ ಬರೆಯುವವರು, ನಟ ಹಾಗೂ ಗಾಯಕರನ್ನು ಭಾರತ ಆಕರ್ಷಿಸಿತ್ತು. ದೂರದರ್ಶನ ಧಾರಾವಾಹಿಗಳಲ್ಲಿ ಇವರ ವೀಡಿಯೊ ನಟನೆ- ಹಾಡಿನ ವೀಡಿಯೊಗಳು ಹೇರಳವಾಗಿದ್ದವು. 1990ರ ದಶಕದ ಅಂತರ್ಜಾಲ ಕ್ರಾಂತಿ, ಪಾಕಿಸ್ತಾನಿ ತಾರೆಗಳನ್ನು ಭಾರತದ ಹತ್ತಿರಕ್ಕೆ ಕರೆತಂದಿತು. 2014ರಲ್ಲಂತೂ ಟಿವಿ ಚಾನಲ್ ಜಿಂದಗಿ ಇವರನ್ನು ನಮ್ಮ ಸ್ಟುಡಿಯೊಗಳೊಳಕ್ಕೇ ಕರೆತಂದಿತು. ಆದರೆ ಉರಿ ಘಟನೆ ಇವರ ವಿರುದ್ಧ ಆಕ್ರೋಶ ಸ್ಫೋಟಗೊಳ್ಳಲು ಕಾರಣವಾಗಿದೆ. ಪಾಕಿಸ್ತಾನಿ ಕಲಾವಿದರನ್ನು ಒಳಗೊಂಡ ಚಿತ್ರ ಪ್ರದರ್ಶಿಸಿದರೆ, ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಚಿತ್ರಮಂದಿರಗಳ ಮಾಲಕರಿಗೆ ಎಚ್ಚರಿಕೆ ನೀಡಿದೆ. ಭಾರತದ ಚಲನಚಿತ್ರ ನಿರ್ಮಾಪಕರ ಸಂಘ ಕೂಡಾ ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುವ ಹೇಳಿಕೆ ಬಿಡುಗಡೆ ಮಾಡಿದೆ.
ಜಿಂದಗಿ ಚಾನಲ್ ಕೂಡಾ ಪಾಕಿಸ್ತಾನಿ ಧಾರಾವಾಹಿಗಳನ್ನು ಕೈಬಿಟ್ಟಿದೆ. ಭಾರತದ ಸಿನೆಮಾ ಮಾಲಕರು ಹಾಗೂ ಪ್ರದರ್ಶಕರ ಸಂಘ, ಎಲ್ಲ ಸದಸ್ಯ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಗೋವಾ ಹಾಗೂ ಕರ್ನಾಟಕಕ್ಕೆ ಸೂಚನೆ ನೀಡಿ, ಗಡಿಯಾಚೆಗಿನ ಕಲಾವಿದರು ಇರುವ ಚಿತ್ರ ಪ್ರದರ್ಶಿಸದಂತೆ ಸೂಚಿಸಿದೆ.
ಪ್ರದರ್ಶಕರ ಸಂಘದ ನಿರ್ಧಾರ, ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಮೇಲೆ ನೇರ ಪರಿಣಾಮ ಬೀರಲಿದೆ. ಜೋಹರ್ ಅವರ ಹೇಳಿಕೆಯ ಉದ್ದೇಶವೆಂದರೆ, ಈ ಚಿತ್ರವನ್ನು ಪ್ರದರ್ಶಿಸುವುದರಿಂದ ದೇಶದ್ರೋಹದ ಅಪರಾಧ ಎಸಗಿದಂತಾಗುವುದಿಲ್ಲ ಎಂದು ಚಿತ್ರ ಹಂಚಿಕೆದಾರರು ಮತ್ತು ಪ್ರದರ್ಶಕರಿಗೆ ಮನದಟ್ಟು ಮಾಡುವುದು.
ನಾನು ಇದುವರೆಗೂ ವೌನವಾಗಿರಲು ಕಾರಣವೆಂದರೆ, ನನಗೆ ತೀರಾ ನೋವಾಗಿದೆ. ನಾನೊಬ್ಬ ರಾಷ್ಟ್ರದ್ರೋಹಿ ಎಂದು ಕೆಲವರು ತಿಳಿದುಕೊಂಡಂತಿದೆ. ಆದರೆ ನನಗೆ ದೇಶವೇ ಮೊದಲು. ದೇಶಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಬಯಸುತ್ತೇನೆ ಎಂದು ಕರಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News