ಪ್ರತಿಷ್ಠಿತ ಸೌದಿ ಅರಮ್ ಕೋ ನಲ್ಲಿ ಉದ್ಯೋಗಿಗಳ ರಾಜೀನಾಮೆ ಸರಣಿ

Update: 2016-10-24 07:05 GMT

ರಿಯಾದ್, ಅ.24: ಸೌದಿ ಅರೇಬಿಯಾದ ಪ್ರತಿಷ್ಠಿತ ಅರಮ್ ಕೋ ಸಂಸ್ಥೆಯಲ್ಲಿ ಉದ್ಯೋಗಿಗಳು ಸರಣಿ ರಾಜೀನಾಮೆ ನೀಡಿದ್ದು ಕಂಪೆನಿ ತನ್ನ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಸವಲತ್ತುಗಳಲ್ಲಿ ಮಾಡಿರುವ ಬದಲಾವಣೆಯೇ ಇದಕ್ಕೆ ಕಾರಣವೆನ್ನಲಾಗಿದೆ.

ಕಂಪೆನಿಯ ಮಾನವ ಸಂಪನ್ಮೂಲ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಸಿಬ್ಬಂದಿ ವಿಭಾಗದ ಮ್ಯಾನೇಜರ್ ತಮಗೆ ಅವಧಿಪೂರ್ವ ನಿವೃತ್ತಿಗೆ ಅವಕಾಶ ನೀಡಬೇಕೆಂದು ಕೋರಿದ್ದಾರೆ. ಆದರೆ ಕಂಪೆನಿ ಈ ಬಗೆಗಿನ ಸುದ್ದಿಗಳನ್ನು ನಿರಾಕರಿಸಿದೆ.

ಸಂಸ್ಥೆಯಲ್ಲಿ ಮಾಡಲಾಗಿರುವ ಬಜೆಟ್ ಕಡಿತ ತಮ್ಮ ವೇತನ ಮತ್ತಿತರ ಸವಲತ್ತುಗಳ ಮೇಲೆ ಪ್ರಭಾವ ಬೀರಬಹುದೆಂಬ ಭಯ ಉದ್ಯೋಗಿಗಳಿಗಿದೆ. ಕಂಪೆನಿ 2025 ರ ಒಳಗಾಗಿ ಒಟ್ಟು ಸುಮಾರು 334 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದೆಂದೂ ಈ ಮೊತ್ತ ಮೂಲಸೌಕರ್ಯಗಳು ಹಾಗೂ ತೈಲ ಸಾಮರ್ಥ್ಯ ಸಂಬಂಧಿತ ಯೋಜನೆಗಳಿಗೆ ವಿನಿಯೋಗಿಸಲಾಗುವುದೆಂದು ಕಂಪೆನಿ ಹೇಳಿಕೊಂಡಿತ್ತು.

ಬಹ್ರೈನ್ ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಅಝೀರ್ ಅಲ್- ಅಬ್ದುಲ್ ಕರೀಂ ಅಸಾಂಪ್ರದಾಯಿಕ ಇಂಧನ ಮೂಲಗಳನ್ನು ಹುಡುಕಿ ಅಭಿವೃದ್ಧಿ ಪಡಿಸಲೂ ಈ ಹೂಡಿಕೆ ಮೊತ್ತವನ್ನು ಉಪಯೋಗಿಸಲಾಗುವುದು ಎಂದು ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News