ಅಂಧವಿಶ್ವಾಸದ ವಿರುದ್ಧ ಪೊಲೀಸರ ಎಚ್ಚರಿಕೆ, ಅಗಲಿದ ಪರಾಕ್ರಮಿ ಶ್ವಾನಗಳು

Update: 2016-10-24 18:07 GMT

ಕಾಲಾ ಜಾದೂ : ಪೊಲೀಸರ ಎಚ್ಚರಿಕೆ
ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಲಕ್ಷ್ಮೀಪೂಜೆಗೆ ಈಗಾಗಲೇ ತಯಾರಿ ನಡೆಯುತ್ತಿದೆ. ಇನ್ನೊಂದೆಡೆ ಕೆಲವು ಅಂಧವಿಶ್ವಾಸದ ಜನರು ದೀಪಾವಳಿಯ ಅಮಾವಾಸ್ಯೆಯ ಕಾಲೀ ರಾತ್‌ಗೆ ಕಾಲಾ ಜಾದೂ ನಡೆಸಿ ಹಣ ಸಂಪಾದಿಸುವ ತಯಾರಿ ಕೂಡಾ ಕೈಗೊಂಡಿದ್ದಾರೆ. ಆ ಕತ್ತಲೆ ರಾತ್ರಿಯಲ್ಲಿ ಪಕ್ಷಿಗಳ ಬಲಿ ನೀಡುವ ಈ ಅಂಧ ವಿಶ್ವಾಸದ ವಿರುದ್ಧ ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಸಕ್ರಿಯವಾಗಿದೆ. ಹಾಗೂ ಪಕ್ಷಿಗಳನ್ನು ಬಲಿ ನೀಡುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಿದೆ. ದೀಪಾವಳಿಯ ರಾತ್ರಿಗೆ ಕಾಲಾ ಜಾದೂ ಹೆಸರಲ್ಲಿ ಪಕ್ಷಿಗಳನ್ನು ಬಲಿ ನೀಡಿದರೆ ಸಂಪತ್ತು ವೃದ್ಧಿ ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಇಂಥವರ ವಿರುದ್ಧ ಬ್ಯೂರೋ ಜಾಗೃತಗೊಂಡಿದ್ದು ಈ ಅಪರಾಧದಲ್ಲಿ ಸಿಕ್ಕಿ ಬಿದ್ದರೆ ಮೂರು ವರ್ಷದ ತನಕ ಕಾರಾಗೃಹ ವಾಸ ಅನುಭವಿಸಬೇಕಾಗುವುದು.
ದೀಪಾವಳಿಯ ದಿನ ಲಕ್ಷ್ಮ್ಮೀದೇವಿಯ ಕೃಪೆ ಪಡೆಯಲು ಕಾಲಾ ಜಾದೂ ಹೆಸರಲ್ಲಿ ಗೂಬೆ, ನವಿಲು, ಜಿಂಕೆ ಇತ್ಯಾದಿ ಪಶುಪಕ್ಷಿಗಳನ್ನು ಬಲಿ ನೀಡಲಾಗುವ ಅಂಧ ವಿಶ್ವಾಸ ಕೆಲವರಲ್ಲಿದೆ. ಆ ದಿನ ಸ್ಟಾರ್ ಆಮೆಗಳ ಖರೀದಿ ಕೂಡಾ ನಡೆಯುತ್ತದೆ. ಹೀಗಾಗಿ ಈ ಸಲ ದೀಪಾವಳಿ ಮೊದಲೇ ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಅಲರ್ಟ್ ಜಾರಿಗೊಳಿಸಿದೆ. ಈ ಅಲರ್ಟ್ ಫಾರೆಸ್ಟ್ ಅಧಿಕಾರಿಗಳು ಸ್ವಯಂ ಸೇವಾ ಸಂಸ್ಥೆಗಳ ಸಹಿತ ಕಾಲೇಜ್ ವಿದ್ಯಾರ್ಥಿಗಳಿಗೂ ಜಾರಿಗೊಳಿಸಿದೆ. ಬ್ಯೂರೋದ ವಿಭಾಗ ನಿರ್ದೇಶಕ ಎಂ.ಎಂ.ಮೊರಾಂಕೋ ತಿಳಿಸಿದಂತೆ ಕಾಲಾ ಜಾದೂ ನಡೆಸುವವರನ್ನು ಪತ್ತೆ ಹಚ್ಚಲು ಗ್ರಾಮೀಣ ಜನರ ಸಹಾಯವನ್ನೂ ಪಡೆಯಲಾಗುವುದು. ಇದಕ್ಕಾಗಿ ತರಬೇತಿ ಶಿಬಿರ ನಡೆಸಿ ಜನಜಾಗೃತಿ ಹುಟ್ಟಿಸಲಾಗುತ್ತಿದೆ. ಗ್ರಾಮೀಣ ಕ್ಷೇತ್ರದ ಅರಣ್ಯಗಳಲ್ಲಿ ಅಂಧ ವಿಶ್ವಾಸದ ಜನರು ಸ್ಮಗ್ಲರ್‌ಗಳಿಗೆ ಗೂಬೆಗೆ 20 ಸಾವಿರ ರೂಪಾಯಿ ತನಕವೂ ನೀಡಿ ಖರೀದಿಸುವುದಿದೆ. ಇದಕ್ಕಾಗಿ ಬಡಾ ಕಬೂತರ್ ಕೋಡ್‌ವರ್ಡ್ ಬಳಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ಐದೂ ಪರಾಕ್ರಮಿ ಶ್ವಾನಗಳು ಹೊರಟುಹೋದವು
26/11 ರ ಮುಂಬೈ ದಾಳಿಯ ಸಮಯ ಯಾವ ರಿನ್‌ಫರ್ ಡಾಗ್ಸ್ ನ ಕಾರಣದಿಂದ ಮುಂಬೈಯಲ್ಲಿ ಅನೇಕ ಜನರ ಪ್ರಾಣ ಉಳಿಯಿತೋ ಅವುಗಳಲ್ಲಿ ಸೀಜರ್ ಹೆಸರಿನ ಹೀರೋ ನಾಯಿ ಮೊನ್ನೆ ಸಾವನ್ನಪ್ಪಿದೆ. ಸೀಜರ್‌ನ ಆರೈಕೆ ನೋಡಿಕೊಳ್ಳುತ್ತಿದ್ದ ಸಂತೋಷ ಬೋಗ್ಲೆ ಅವರು ಹೇಳಿದಂತೆ 26/11ರ ಉಗ್ರರ ದಾಳಿ ಮಾತ್ರವಲ್ಲ 2006ರ ಮುಂಬೈ ಲೋಕಲ್ ರೈಲುಗಳ ಸ್ಫೋಟದಲ್ಲೂ ಜೀವಂತ ಬಾಂಬುಗಳನ್ನು ಪತ್ತೆ ಹಚ್ಚಿತ್ತು. 26/11ರ ಸಂದರ್ಭದಲ್ಲಿ ಸೀಜರ್ ಸಿ.ಎಸ್.ಟಿ.ಯ 13 ನಂಬರ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಡಗಿಸಿಟ್ಟಿದ್ದ ಹಲವು ಡಜನ್ ಹ್ಯಾಂಡ್ ಗ್ರೆನೇಡ್‌ಗಳನ್ನು ಪತ್ತೆ ಹಚ್ಚಿತ್ತು. ನರೀಮನ್ ಹೌಸ್‌ನಲ್ಲಿ ಆತಂಕವಾದಿಗಳು ಬಿಟ್ಟು ಹೋಗಿದ್ದ ಹಲವು ಸ್ಫೋಟಕ ಸಾಮಗ್ರಿಗಳನ್ನೂ ಜಪ್ತಿ ಮಾಡುವಲ್ಲಿ ಈ ಶ್ವಾನ ಪೊಲೀಸರಿಗೆ ನೆರವು ನೀಡಿತ್ತು.
ಜುಲೈ 2006ರಲ್ಲಿ ಮುಂಬೈಯ 7 ಲೋಕಲ್ ರೈಲುಗಳಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಆತಂಕವಾದಿಗಳು ಇನ್ನೂ ಕೆಲವೆಡೆ ಬಾಂಬ್ ಇರಿಸಿದ್ದರು. ಸೀಜರ್ ಅವುಗಳು ಸ್ಫೋಟಗೊಳ್ಳುವ ಮೊದಲೇ ಹುಡುಕಿಕೊಟ್ಟಿತ್ತು. ಈ ಶ್ವಾನದ ಹ್ಯಾಂಡ್ಲರ್ ಸಂತೋಷ ಭೋಗ್ಲೆ ಹೇಳುವಂತೆ ಸೀಜರ್‌ನನ್ನು ಅಕ್ಟೋಬರ್ 2004 ರಲ್ಲಿ ಪನ್ವೇಲ್‌ನಲ್ಲಿ ಖರೀದಿಸಲಾಗಿತ್ತು. ಆವಾಗ ಅದರ ಪ್ರಾಯ 3 ತಿಂಗಳು ಮಾತ್ರ. 9 ತಿಂಗಳ ತರಬೇತಿಯ ನಂತರ 2005ರಲ್ಲಿ ಪೊಲೀಸ್ ಇಲಾಖೆಗೆ ಅದನ್ನು ಸೇರಿಸಲಾಯಿತು. 2013 ರಲ್ಲಿ ಅದು ನಿವೃತ್ತಿಯೂ ಆಗಿತ್ತು. ನಿವೃತ್ತಿಯ ನಂತರ ಅದನ್ನು ವಿರಾರ್‌ನ ಒಂದು ಫಾರ್ಮ್‌ಹೌಸ್‌ನಲ್ಲಿ ಇರಿಸಲಾಗಿತ್ತು. ಅಲ್ಲೇ ಅದು ಅಕ್ಟೋಬರ್ 13ರಂದು ಸಾವನ್ನಪ್ಪಿತು. ಸರಕಾರಿ ಮರ್ಯಾದೆಯೊಂದಿಗೆ ಅದರ ಅಂತ್ಯ ಸಂಸ್ಕಾರ ನಡೆಯಿತು.
ಸೀಜರ್ ಶ್ವಾನದ ಸಾವಿನೊಂದಿಗೆ ಪರಾಕ್ರಮಿ ಐದೂ ಶ್ವಾನಗಳು ಕಣ್ಮರೆಯಾದಂತಾಗಿವೆ. ಕಳೆದ ಒಂದು ವರ್ಷದಲ್ಲಿ 26/11ರ ಆತಂಕವಾದಿ ದಾಳಿ, 7/11ರ ಲೋಕಲ್ ರೈಲು ಸರಣಿ ಸ್ಫೋಟ, ಅಪೆರಾ ಹೌಸ್‌ನ ಬಳಿಯ ಬಾಂಬ್ ಸ್ಫೋಟ...... ಇತ್ಯಾದಿಗಳ ತನಿಖೆಯಲ್ಲಿ ಸಹಾಯ ಮಾಡಿದ್ದ ನಾಲ್ಕು ಶ್ವಾನಗಳಾದ ಗೋಲ್ಡಿ, ಮ್ಯಾಕ್ಸ್, ಸುಲ್ತಾನ್ ಮತ್ತು ಟೈಗರ್ ಸಾವನ್ನಪ್ಪಿದ್ದು ಇದೀಗ ಸೀಜರ್ ಕೂಡಾ ನಮ್ಮಿಂದ ಕಣ್ಮರೆಯಾಯಿತು.

ತನ್ನ ಕಚೇರಿಯ ಅಕ್ರಮ ಭಾಗವನ್ನು ತಾನೇ ಕೆಡವಿದ ಬಿಜೆಪಿ
ಮಹಾರಾಷ್ಟ್ರ ಬಿಜೆಪಿ ತನ್ನ ನಾರಿಮನ್ ಪಾಯಿಂಟ್‌ನಲ್ಲಿ ಮಹಾರಾಷ್ಟ್ರ ಮುಖ್ಯಾಲಯದ ಅಧಿಕಾಂಶ ಭಾಗವನ್ನು ತಾನೇ ಇತ್ತೀಚೆಗೆ ಕೆಡವಿಹಾಕಿದೆ. ಕಾರಣ ಮುಂಬೈ ಹೈಕೋರ್ಟ್‌ನ ಹಸ್ತಕ್ಷೇಪ. ಹೈಕೋರ್ಟ್‌ನ ಆದೇಶದ ನಂತರ ಬಿಜೆಪಿ ಮುಖ್ಯಾಲಯದ ಅನಧಿಕೃತ ಭಾಗವನ್ನು ಕೆಡವಿ ಹಾಕಲೇಬೇಕಾಯಿತು.
ಚರ್ಚ್‌ಗೇಟ್ ಮತ್ತು ಕೂಪರೇಜ್‌ನ ನಾಗರಿಕ ಸಂಘಟನೆಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ ಬಿಜೆಪಿಗೆ ಎಲ್‌ಐಸಿ ಯೋಗ ಕ್ಷೇಮ ಕಟ್ಟಡದ ಎದುರು ಕೇವಲ 2,686 ವರ್ಗ ಅಡಿಯ ಜಾಗ ಅಲಾಟ್ ಮಾಡಲಾಗಿತ್ತು. ಆದರೆ ಪಾರ್ಟಿಯು ಪಕ್ಕದ ಜವಾಹರ್‌ಲಾಲ್ ನೆಹರೂ ಪಾರ್ಕ್‌ನ ಕೆಲವು ಭಾಗಗಳನ್ನು ಅಕ್ರಮವಾಗಿ ವಶಪಡಿಸಿದೆ ಎಂದು ಆರೋಪಿಸಲಾಗಿತ್ತು. ಕೋರ್ಟ್‌ಗೆ ತಿಳಿಸಿದಂತೆ ಬಿಜೆಪಿ 9,500 ವರ್ಗ ಅಡಿ ತನಕ ಮುಖ್ಯಾಲಯವನ್ನು ವಿಸ್ತರಿಸಿದೆ. ಆದರೆ ಸರಕಾರಿ ವಿಕಾಸ ಯೋಜನೆಯಲ್ಲಿ ಈ ಕ್ಷೇತ್ರವನ್ನು ಕ್ರೀಡಾ ಮೈದಾನದ ರೂಪದಲ್ಲಿ ತೋರಿಸಲಾಗಿದೆ. ಬಿಜೆಪಿಯ ವಿಸ್ತರಿತ ಕಾರ್ಯಾಲಯದಲ್ಲಿ 14 ಕ್ಯಾಬಿನ್, ಕಾನ್ಫರೆನ್ಸ್ ಹಾಲ್, ಕ್ಯಾಂಟೀನ್, ಬಾತ್‌ರೂಮ್, ಟಾಯ್ಲೆಟ್ ಇತ್ಯಾದಿ ನಿರ್ಮಾಣ ಮಾಡಲಾಗಿದೆ. ನರೀಮನ್ ಪಾಯಿಂಟ್ ಚರ್ಚ್ ಗೇಟ್ ಸಿಟಿಜನ್ಸ್ ವೆಲ್ಫೇರ್ ಟ್ರಸ್ಟ್, ಓವಲ್-ಕೂಪರೇಜ್ ರೆಸಿಡೆನ್ಸ್ ಅಸೋಸಿ ಯೇಶನ್ ಮತ್ತು ಫೆಡರೇಶನ್ ಆಫ್ ಚರ್ಚ್‌ಗೇಟ್ ರೆಸಿಡೆನ್ಸ್ ಜಂಟಿಯಾಗಿ ಮುಂಬೈ ಹೈಕೋರ್ಟ್‌ನಲ್ಲಿ ಜನಹಿತ ಅರ್ಜಿ ಸಲ್ಲಿಸಿತ್ತು.
ಬಿಜೆಪಿಗೆ 80ರ ದಶಕದಲ್ಲಿ ಪಾರ್ಟಿ ಮುಖ್ಯಾಲಯಕ್ಕಾಗಿ 1,200 ವರ್ಗ ಅಡಿಯ ಜಾಗ ಅಲೌಟ್ ಆಗಿತ್ತು. 1995ರಲ್ಲಿ ಪಕ್ಷ ಆಡಳಿತಕ್ಕೆ ಬಂದ ನಂತರ 1,482 ವರ್ಗ ಅಡಿಯ ಹೆಚ್ಚುವರಿ ಜಾಗ ಅಲಾಟ್ ಆಗಿತ್ತು. ಕೆಲ ಸಮಯದ ಹಿಂದೆ ಪಕ್ಷ ತನ್ನ ಮುಖ್ಯಾಲಯದ ಪುನರ್ನಿರ್ಮಾಣ ಆರಂಭಿಸಿದಾಗ ವಿಸ್ತರಿಸಿತು. ಇದಕ್ಕಾಗಿ ಪಕ್ಕದ ಸ್ಥಳವನ್ನೂ ಆಕ್ರಮಿಸಿತು. ಇದನ್ನು ಗಮನಿಸಿ ಮಹಾನಗರ ಪಾಲಿಕೆ ತಡೆ ಆದೇಶ ಜಾರಿಗೊಳಿಸಿತ್ತು. ಆದರೆ ಮಹಾನಗರ ಪಾಲಿಕೆ ತಡೆ ಆದೇಶ ತಂದಿದ್ದರೂ ಬಿಜೆಪಿ ಮುಖ್ಯಾಲಯಕ್ಕಾಗಿ ಅನಧಿಕೃತವಾಗಿ ವಿಸ್ತರಣೆ ಕಾರ್ಯ ನಡೆಸಲಾಗಿದೆ ಎಂದು ಕೋರ್ಟ್‌ನಲ್ಲಿ ದೂರು ನೀಡಲಾಯಿತು.
ನಂತರ ಈ ಅನಧಿಕೃತ ವಿಸ್ತರಣೆಯನ್ನು ಅಧಿಕೃತಗೊಳಿಸುವ ಕಾರ್ಯವೂ ನಡೆಯಿತು. ಆದರೆ ಹೈಕೋರ್ಟ್‌ನ ಬೆಂಚ್ ಇದಕ್ಕೂ ಒಪ್ಪಲಿಲ್ಲ. ಕೊನೆಗೂ ಅನಧಿಕೃತ ವಿಸ್ತರಣೆಯನ್ನು ಬಿಜೆಪಿ ತಾನೇ ಕೆಡವಿಹಾಕಿತು.
ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಪಕ್ಷ ತನ್ನ ಮುಖ್ಯಾಲಯ ವಿಸ್ತರಣೆಗೆ ಕ್ರೀಡಾ ಮೈದಾನದ ಭಾಗವನ್ನು ವಶಪಡಿಸಿದ್ದು ಹಲವು ಸಂಘಟನೆಗಳಿಗೆ ಕೋಪ ತರಿಸಿದ್ದು ಕೋರ್ಟ್‌ಗೆ ಹೋಗಬೇಕಾಯಿತು.

ದೀಪಾವಳಿ ಮೊದಲು ಶಿವಸೇನೆ - ಬಿಜೆಪಿ ಸಮನ್ವಯ ಸಮಿತಿ ಬೈಠಕ್‌ಗೆ ಆದೇಶ
ಶಿವಸೇನಾ-ಬಿಜೆಪಿಯ ನಡುವೆ ವೃದ್ಧಿಸುತ್ತಿರುವ ಭಿನ್ನಮತಗಳನ್ನು ದೂರೀಕರಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಮನ್ವಯ ಸಮಿತಿಯ ಬೈಠಕ್ ಕರೆಯಲು ನಿರ್ಧರಿಸಿದ್ದಾರೆ. ದೀಪಾವಳಿಯ ಮೊದಲು ಈ ಸಮನ್ವಯ ಸಮಿತಿಯ ಬೈಠಕ್ ಜರಗಲಿದೆಯಂತೆ!
ಮಹಾರಾಷ್ಟ್ರದಲ್ಲಿ ಸ್ಥಳೀಯ ಚುನಾವಣೆಗಳು ಹತ್ತಿರ ಬಂದಂತೆ ಆಡಳಿತ ಶಿವಸೇನೆ-ಬಿಜೆಪಿಯ ನಡುವೆ ಆರೋಪಗಳೂ ಏರುತ್ತಿವೆ. ಇತ್ತೀಚೆಗೆ ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಅವರಿಗೆ ಶಿವಸೈನಿಕರು ಹಲ್ಲೆ ಕೂಡಾ ನಡೆಸಿದ್ದಾರೆ. ಅತ್ತ ಉದ್ಧವ್ ಪುತ್ರ ಆದಿತ್ಯ ಠಾಕ್ರೆಯ ಯುವ ಸೇನೆಯ ಮೋರ್ಚಾದಲ್ಲೂ ಬಿಜೆಪಿಯನ್ನು ಟೀಕಿಸಿದ್ದಾರೆ. ಇವರ ಇಷ್ಟೊಂದು ಜಗಳ ಹೆಚ್ಚಿದೆೆುಂದರೆ ವಿರೋಧ ಪಕ್ಷದಲ್ಲಿ ಕೂತಂತೆ ಬಿಜೆಪಿ ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯ ಭ್ರಷ್ಟಾಚಾರವನ್ನು ಹೇಳುತ್ತಿದೆ. ಇಷ್ಟುಕಾಲ ಮುಂಬೈ ಮನಪಾದಲ್ಲಿ ಶಿವಸೇನೆ-ಬಿಜೆಪಿ ಜೊತೆಯಾಗಿ ಆಡಳಿತದಲ್ಲಿದ್ದು ಈಗ ಬಿಜೆಪಿ ಮಹಾನಗರ ಪಾಲಿಕೆಯ ಭ್ರಷ್ಟಾಚಾರವನ್ನು ಹೇಳಲು ಹೊರಟಿರುವುದು ಚುನಾವಣಾ ತಂತ್ರ ಎನ್ನುತ್ತಿದೆ ಶಿವಸೇನೆ.
ಇದನ್ನೆಲ್ಲಾ ಗಮನದಲ್ಲಿರಿಸಿ ವಿವಾದ ತಣಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮನ್ವಯ ಸಮಿತಿಯ ಬೈಠಕ್ ಕರೆಯಲು ಸಿದ್ಧರಾಗಿದ್ದಾರೆ. ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಅವರಂತೂ ಮುಂಬೈ ಮಹಾನಗರ ಪಾಲಿಕೆಯ ಮಾಫಿಯಾಗಳ ಪ್ರತಿಕೃತಿ ದಹಿಸಿದರೆ ಶಿವಸೇನೆಯ ಸದಸ್ಯರು ತೀವ್ರ ವಿರೋಧಿಸಿದರು. ಕೆಲವರು ಗಾಯಗೊಂಡದ್ದೂ ಇದೆ.
ಮೊನ್ನೆಯ ರಾಜ್ಯ ಕ್ಯಾಬಿನೆಟ್‌ನ ಬೈಠಕ್‌ನಲ್ಲೂ ಎರಡೂ ಪಕ್ಷಗಳು ವಾದ ವಿವಾದ ಎಬ್ಬಿಸಿದ್ದವು. ಶಿವಸೇನೆಯ ಮಂತ್ರಿ ರಾಮದಾಸ ಕದಮ್ ಎರಡೂ ಪಕ್ಷಗಳ ಭಿನ್ನಮತಗಳನ್ನು ಚರ್ಚಿಸಲು ಮುಂದಾಗಿದ್ದರು. ಆನಂತರ ಎಲ್ಲಾ ಸರಕಾರಿ ಅಧಿಕಾರಿಗಳನ್ನು ಬೈಠಕ್‌ನಿಂದ ಹೊರಹೋಗಲು ಸೂಚಿಸಲಾಯಿತು. ಹಾಗೂ ಮುಖ್ಯಮಂತ್ರಿಯವರು ಶಿವಸೇನೆಯ ಮಂತ್ರಿಗಳ ಜೊತೆ ಅರ್ಧಗಂಟೆ ತನಕ ಚರ್ಚಿಸಿದರು. ನಂತರ ಅವರು ಸಮನ್ವಯ ಸಮಿತಿಯ ಬೈಠಕ್ ಕರೆಯಲು ಆದೇಶಿಸಿದರು.

ಮನಪಾ ಶಾಲಾ ಮಕ್ಕಳಿಗೂ ಉಚಿತ ತರಗತಿ ಆರಂಭ
ಮುಂಬೈ ಮಹಾನಗರ ಪಾಲಿಕೆ ಶಾಲಾ ಶಿಕ್ಷಕರು ಇದೀಗ ಮನಪಾ ವಿದ್ಯಾರ್ಥಿಗಳಿಗಾಗಿ ಉಚಿತ ಸ್ಪೆಷಲ್ ಸ್ಕಾಲರ್‌ಶಿಪ್ ತರಗತಿಗಳನ್ನು ಶುರು ಮಾಡಲು ಮುಂದಾಗಿದ್ದಾರೆ. ಪ್ರತಿಭಾವಂತ ಮಕ್ಕಳ ಸಹಾಯಕ್ಕಾಗಿ ಹೆಚ್ಚುವರಿ ಸೇವೆಯನ್ನು ನೀಡುವ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಯ ಶಾಲೆಗಳ ಕೆಲವು ಶಿಕ್ಷಕರು ಹೊತ್ತಿದ್ದಾರೆ. ಶಿವಾಜಿನಗರ ಮುನ್ಸಿಪಲ್ ಉರ್ದು ಶಾಲಾ ನಂಬರ್ 6ರಲ್ಲಿ ಶಿಕ್ಷಕರಾಗಿರುವ ಮುಹಮ್ಮದ್ ಜೀಶಾನ್ ಎಂಬವರು ಇದೇ ಶಾಲೆಯಲ್ಲಿ ಕಲಿಸುತ್ತಿರುವ ಕೆಲವು ಶಿಕ್ಷಕರ ಜೊತೆಗೂಡಿ ಸ್ಪೆಷಲ್ ಸ್ಕಾಲರ್‌ಶಿಪ್ ಕ್ಲಾಸ್ ಆರಂಭಿಸಿದ್ದಾರೆ. ಐವರು ಶಿಕ್ಷಕರು ಒಟ್ಟುಗೂಡಿ ಈ ಅಭಿಯಾನ ಆರಂಭಿಸಿದ್ದಾರೆ.
ಸರಕಾರವು ಪ್ರತಿಭಾಶಾಲಿ ಮಕ್ಕಳಿಗೆ ನೀಡುತ್ತಿರುವ ಸ್ಕಾಲರ್‌ಶಿಪ್‌ನಲ್ಲಿ ಮಹಾನಗರ ಪಾಲಿಕೆಯ ಮಕ್ಕಳ ಪಾಲು ಬಹಳ ಕಡಿಮೆ ಇದೆ. ಇಂತಹ ಸ್ಥಿತಿಯಲ್ಲಿ ಈ ವನಪಾ ಶಾಲಾ ಮಕ್ಕಳಿಗೂ ಖಾಸಗಿ ಶಾಲೆಯ ಮಕ್ಕಳ ರೀತಿಯಲ್ಲಿ ಸ್ಕಾಲರ್‌ಶಿಪ್ ಕೊಡಿಸುವುದಕ್ಕೆ ಈ ಅಭಿಯಾನ ಆರಂಭ ವಾಗಿದೆ. ಇದರಲ್ಲಿ ಮಕ್ಕಳಿಗೆ ಸ್ಕಾಲರ್‌ಶಿಪ್‌ಗೆ ಸಂಬಂಧಿಸಿದ ಸಿಲೆಬಸ್ ಓದಿಸಲಾಗುವುದು.
ರಾಜ್ಯ ಸರಕಾರವು 5ನೆ ಮತ್ತು 8ನೆ ತರಗತಿಯ ಮಕ್ಕಳಿಗೆ ಸ್ಕಾರ್‌ಶಿಪ್ ನೀಡುತ್ತದೆ. ಇದಕ್ಕಾಗಿ ಒಂದು ಪರೀಕ್ಷೆ ಈ ಮಕ್ಕಳು ಪಾಸ್ ಆಗಬೇಕು. ಸ್ಪೆಷಲ್ ಸ್ಕಾಲರ್‌ಶಿಪ್ ಕ್ಲಾಸ್‌ನಲ್ಲಿ ಮಕ್ಕಳಿಗೆ ಈ ಪರೀಕ್ಷೆಯ ತಯಾರಿ ನಡೆಸಲಾಗುತ್ತಿದೆ.
 

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News