ನಿರ್ಲಕ್ಷಿತರಿಗೆ ಅವಕಾಶ ಕಲ್ಪಿಸಿ ಬೆಳೆಸಿದ ಅರಸು-ಮಲ್ಲಿಕಾರ್ಜುನ ಖರ್ಗೆ

Update: 2016-10-25 18:12 GMT

ಬೀದರ್ ಜಿಲ್ಲೆಯ ವರವಟ್ಟಿಯ ದಲಿತ ಕುಟುಂಬದಲ್ಲಿ 1942ರಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆಯವರಿಗೆ ಈಗ 74ರ ಹರೆಯ. 1969ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ 26 ವರ್ಷದ ಯುವಕ ಖರ್ಗೆ, ಸುಮಾರು ಐದು ದಶಕಗಳ ಕಾಲ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಲೋಕಸಭೆಯ ಸಂಸದೀಯ ನಾಯಕನವರೆಗೆ ಹಂತ ಹಂತವಾಗಿ ಬೆಳೆದು ನಿಂತವರು. ಮತ್ತೊಂದು ಪಕ್ಷದತ್ತ ಕಣ್ಣೆತ್ತಿಯೂ ನೋಡದ ಪಕ್ಷ ನಿಷ್ಠರು. ಕಡುಕಷ್ಟದಲ್ಲಿ ಬೆಳೆದ ಖರ್ಗೆ ಬಿಎ, ಎಲ್‌ಎಲ್‌ಬಿ ಪದವಿ ಪಡೆದು, ಶಿವರಾಜ್ ಪಾಟೀಲರ ಕೈಕೆಳಗೆ ವಕೀಲಿಕೆ ಶುರು ಮಾಡಿಕೊಂಡರು. ಎಂಎಸ್‌ಕೆ ಮಿಲ್ ಕಾರ್ಮಿಕರ ಸಂಘದ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಲೇ, ಬಡ ಕಾರ್ಮಿಕರ ಪರ ಹೋರಾಟಕ್ಕಿಳಿದರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ, ದೇವರಾಜ ಅರಸರ ನಾಯಕತ್ವ ಒಪ್ಪಿ, ಇಂದಿರಾ ಕಾಂಗ್ರೆಸ್ ಪಕ್ಷ ಸೇರಿದರು. ಶೋಷಿತ ವರ್ಗದಿಂದ ಬಂದ ವಿದ್ಯಾವಂತ, ಉತ್ಸಾಹಿ ಯುವಕನೆಂಬ ಕಾರಣಕ್ಕೆ ಅರಸರು 1972ರಲ್ಲಿ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಡಿದರು. 1972ರಿಂದ 2004ರವರೆಗೆ, ನಿರಂತರವಾಗಿ 9 ಬಾರಿ ಗೆದ್ದು, ‘ಸೋಲಿಲ್ಲದ ಸರದಾರ’ನೆಂಬ ದಾಖಲೆ ಬರೆದರು. ಹಾಗೆಯೇ 2009ರಿಂದ 2 ಬಾರಿ ಸಂಸತ್ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ಹಿರಿಯ ಅನುಭವಿ ರಾಜಕಾರಣಿಯ ಪಟ್ಟಿಗೆ ಸೇರಿದರು. 72ರಲ್ಲಿ, ಮೊದಲ ಸಲ ಗೆದ್ದು ವಿಧಾನಸೌಧದ ಮೆಟ್ಟಿಲು ಹತ್ತಿದ್ದ, ಶಾಸಕತ್ವದ ರೀತಿ-ರಿವಾಜುಗಳನ್ನು ಅರಿಯುತ್ತಿದ್ದ ಖರ್ಗೆಯವರಿಗೆ ದೇವರಾಜ ಅರಸರು 1976ರಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರನ್ನಾಗಿ ಮಾಡಿ ಮಹತ್ವದ ಜವಾಬ್ದಾರಿ ವಹಿಸಿದರು. ಆನಂತರ 1978 ರಲ್ಲಿ ಪಂಚಾಯತ್‌ರಾಜ್ ಖಾತೆ ಕೊಟ್ಟು ಪ್ರಭಾವಿ ನಾಯಕನಾಗಿ ಬೆಳೆಯಲು ಬೆಂಬಲವಾಗಿ ನಿಂತರು. ಅರಸರ ನಂತರ ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಮತ್ತು ಧರಂಸಿಂಗ್‌ರ ಕ್ಯಾಬಿನೆಟ್‌ಗಳಲ್ಲೂ ಹಲವು ಮಹತ್ವದ ಖಾತೆಗಳನ್ನು ನಿರ್ವಹಿಸಿದ ಖರ್ಗೆ, ಅನುಭವಿ ಆಡಳಿತಗಾರರಾಗಿ, ಉತ್ತಮ ಸಂಸದೀಯ ಪಟುವಾಗಿ ರೂಪುಗೊಂಡರು. ಆನಂತರ ಕೇಂದ್ರದ ಮನಮೋಹನ್‌ಸಿಂಗ್‌ರ ಕ್ಯಾಬಿನೆಟ್‌ನಲ್ಲಿ ರೈಲ್ವೆ ಮತ್ತು ಕಾರ್ಮಿಕ ಸಚಿವರಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಖರ್ಗೆ, ಇಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕರಾಗಿ, ಪ್ರಧಾನಿ ನರೇಂದ್ರ ಮೋದಿಗೆ ಸರಿಸಾಟಿಯಾಗಿ ನಿಂತವರು. ಕರ್ನಾಟಕದ ರಾಜಕಾರಣದಲ್ಲಿ ಬಹುಸಂಖ್ಯಾತರು ಮತ್ತು ಬಲಿಷ್ಠ ಜಾತಿಗಳದೇ ಕಾರುಬಾರು. ಅದರಲ್ಲೂ ಹೈದರಾಬಾದ್ ಕರ್ನಾಟಕದಲ್ಲಿ ಪ್ರಭಾವಿ ಲಿಂಗಾಯತರದ್ದೇ ದರ್ಬಾರು. ಇಂತಹ ಭಾಗದಿಂದ ದಲಿತ ವರ್ಗದಿಂದ ಬಂದ ಖರ್ಗೆಯವರನ್ನು ಗುರುತಿಸಿದ್ದು ದೇವರಾಜ ಅರಸು. ದೂರದ ಗುಲಬರ್ಗಾ(ಈಗಿನ ಕಲಬುರ್ಗಿ)ದಿಂದ ಬಂದ ಖರ್ಗೆಯವರನ್ನು ಅರಸರು ಆತ್ಮೀಯವಾಗಿ ಅಪ್ಪಿಕೊಂಡಿದ್ದ್ದು, ರಾಜಕಾರಣದಲ್ಲಿ ಕೈ ಹಿಡಿದು ನಡೆಸಿದ್ದು, ಮಂತ್ರಿ ಮಾಡಿ ಸಂಸದೀಯ ರೀತಿ ರಿವಾಜುಗಳನ್ನು ಕಲಿಸಿದ್ದು... ಎಲ್ಲವೂ ಇಲ್ಲಿದೆ.

ಇಂದಿರಾಜಿಗೆ ಪರಿಚಯಿಸಿದ ಅರಸು

1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ದೇವರಾಜ ಅರಸು ಕರ್ನಾಟಕದ ಇಂದಿರಾ ಕಾಂಗ್ರೆಸ್ಸಿನ ನಾಯಕರು. ಆಗವರು ಮಲ್ಲೇಶ್ವರಂನ ಬಾಡಿಗೆ ಮನೆಯಲ್ಲಿದ್ದರು. ಗುಲ್ಪರ್ಗಾ ಜಿಲ್ಲಾ ಕಾಂಗ್ರೆಸ್ ಸಂಚಾಲಕರಾದ ಧರ್ಮರಾವ್ ಅಫ್ಜಲ್‌ಪುರ್ಕರ್ ಅವರೊಂದಿಗೆ ಅರಸರನ್ನು ನೋಡಲು ಬೆಂಗಳೂರಿಗೆ ಬಂದಿದ್ದೆ. ಅರಸರದು ಮೊದಲ ನೋಟಕ್ಕೇ ಗೌರವ ಭಾವನೆ ಮೂಡುವಂತಹ ವ್ಯಕ್ತಿತ್ವ. ಜೊತೆಗೆ ‘‘ನಿಮ್ಮಂತಹ ವಿದ್ಯಾವಂತ ಯುವಕರೆ ನಮಗೆ ಬೇಕಿರುವುದು’’ ಎಂಬ ಮಾತುಗಳು ನನ್ನನ್ನು ಆಕರ್ಷಿಸಿದ್ದವು. ಆಗ ನನಗಿನ್ನ್ನೂ 26ರ ಹರೆಯ. ಗುಲ್ಬರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾದೆ. ಇದಾಗಿ ಸ್ವಲ್ಪ ದಿನಕ್ಕೆ ಇಂದಿರಾಗಾಂಧಿಯವರು ಗುಲ್ಪರ್ಗಾಕ್ಕೆ ಬಂದರು. ನಾನು ಆಗತಾನೆ ಪಕ್ಷಕ್ಕೆ ಸೇರಿದವನು. ನನ್ನ ಬೆನ್ನಿಗೆ ಜಾತಿ ಇಲ್ಲ, ಹಣವಿಲ್ಲ, ಜನ ಬೆಂಬಲವೂ ಇಲ್ಲ. ನನ್ನಂಥವನನ್ನು ಅರಸರು ಖುದ್ದು ಇಂದಿರಾಗಾಂಧಿಯವರಿಗೆ ಪರಿಚಯಿಸಿದರು. ನನ್ನ ರಾಜಕೀಯ ಬದುಕಿನಲ್ಲಿ ಅದೊಂದು ಸುವರ್ಣ ಸಂದರ್ಭ. ಚಿಕ್ಕವಯಸ್ಸಿನಲ್ಲಿಯೇ ಅರಸು-ಇಂದಿರಾಜಿಯಂತಹ ನಾಯಕರ ಸಂಪರ್ಕಕ್ಕೆ ಬಂದದ್ದು, ಭವಿಷ್ಯದ ಬದುಕೇ ಬದಲಾಗಿಹೋಯಿತು. ಆ ಸಂದರ್ಭದಲ್ಲಿಯೇ ಇಂದಿರಾ ಗಾಂಧಿಯವರು ಬಡವರ ಪರವಿದ್ದು, ಹತ್ತು ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದರು. ಅವೆಲ್ಲವೂ ಬಡವರ ಬದುಕನ್ನು ಹಸನುಗೊಳಿಸುವಂಥವು, ಸಮಾಜಮುಖಿಯಾಗಿದ್ದವು, ನಾವು ಆ ಕಾರ್ಯಕ್ರಮಗಳಿಂದ ಪ್ರಭಾವಿತರಾಗಿ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದ್ದೆವು.

ಕೇಳಿದ್ದೊಂದು ಕೊಟ್ಟಿದ್ದೊಂದು

ಇಂದಿರಾಜಿಯವರ ಹತ್ತಂಶದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುತ್ತಿದ್ದಾಗಲೇ 1971ರಲ್ಲಿ ಲೋಕಸಭಾ ಚುನಾವಣೆ ಎದುರಾಯಿತು. ನಾನು ಬೀದರ್‌ನಿಂದ ಟಿಕೆಟ್ ಬೇಕೆಂದು ದೇವರಾಜ ಅರಸರನ್ನು ಕೇಳಿದೆ. ಅದಕ್ಕವರು, ‘‘ನಿಮ್ಮಂತಹ ತರುಣರು ಅಲ್ಲಿ ಹೋಗಿ ಮಾಡುವುದೇನಿದೆ, ಅಲ್ಲಿ ಜಗಜೀವನ್‌ರಾಂ, ಶಂಕರಾನಂದರಂತಹ ಹಿರಿಯರಿದ್ದಾರೆ, ನೀನು ಬೆಳೀಬೇಕಾದ ಯುವಕ, ನಾನು ಮುಂದೆ ಎಂಎಲ್‌ಎ ಟಿಕೆಟ್ ಕೊಡುತ್ತೇನೆ, ನೀನು ಇಲ್ಲಿಗೆ, ಅಸೆಂಬ್ಲಿಗೆ ಬಾ’ ಅಂದು ಸುಮ್ಮನಿರಿಸಿದರು. ಮಾತು ಕೊಟ್ಟಂತೆ 1972ರ ವಿಧಾನಸಭಾ ಚುನಾವಣೆಯಲ್ಲಿ ಗುರುಮಿಠಕಲ್‌ನ ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಿದರು. ನಾನು ಆಗಲೇ, ವಕೀಲಿ ವೃತ್ತಿಯಲ್ಲಿದ್ದು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸೇಡಂನಲ್ಲಿ ಜನಾನುರಾಗಿಯಾಗಿದ್ದೆ. ಹಾಗಾಗಿ ಅಲ್ಲಿಗೆ ಟಿಕೆಟ್ ಕೇಳಿದ್ದೆ. ಆದರೆ ಅರಸು ಸೇಡಂ ಬೇಡವೆಂದು ಗುರುಮಿಠಕಲ್‌ಗೆ ಕೊಟ್ಟರು. ಆಗ ನೋಡಿದರೆ ಎಂಪಿ ಬೇಡ ಅಂದರು, ಈಗ ಸೇಡಂ ಬೇಡ ಎನ್ನುತ್ತಿದ್ದಾರೆ... ಅನುಮಾನ, ಅಸಮಾಧಾನ ಒಟ್ಟೊಟ್ಟಿಗೇ ಎದುರಾದವು. ನಮ್ಮ ಭಾಗದ ಬಹಳ ದೊಡ್ಡ ನಾಯಕರಾಗಿದ್ದ ಕೊಲ್ಲೂರು ಮಲ್ಲಪ್ಪನವರು ನನ್ನ ಸಹಾಯಕ್ಕೆ ನಿಂತರು. ಆಶ್ಚರ್ಯವೆಂದರೆ, ಅವರೂ ಕೂಡ ದೇವರಾಜ ಅರಸು ತೀರ್ಮಾನವೇ ಸರಿ ಎಂದರು. ಇಬ್ಬರು ಹಿರಿಯ ನಾಯಕರ ನಂಬಿ ಚುನಾವಣೆಗೆ ನಿಂತೆ. ಗೆದ್ದು ಶಾಸಕನಾದೆ.

ಅವಕಾಶ ಕಲ್ಪಿಸಿದ ಅರಸು

ದೇವರಾಜ ಅರಸರಲ್ಲಿ ಒಂದು ವಿಶೇಷವಾದ ಗುಣವಿತ್ತು. ನಿರ್ಲಕ್ಷಿತ ಸಮುದಾಯಗಳಿಂದ ಬಂದ ವಿದ್ಯಾವಂತ ಉತ್ಸಾಹಿ ತರುಣರನ್ನು ಹುಡುಕುವುದು, ರಾಜಕೀಯ ರಂಗಕ್ಕೆ ಕರೆತಂದು ಅಧಿಕಾರದ ಸ್ಥಾನಮಾನಗಳನ್ನು ನೀಡುವುದು. 1972ರಲ್ಲಿ ಮುಖ್ಯಮಂತ್ರಿಯಾದ ದೇವರಾಜ ಅರಸು, ತಾವಷ್ಟೇ ಅಧಿಕಾರ ಅನುಭವಿಸಲಿಲ್ಲ, ಸಮಾಜದ ಕಟ್ಟಕಡೆಯ ಜನರಿಗೂ ಅಧಿಕಾರವನ್ನು, ಅವಕಾಶವನ್ನು ಕಲ್ಪಿಸಿ ಕೊಟ್ಟರು. ನಾನು ಅದಾಗತಾನೆ ಶಾಸಕನಾಗಿದ್ದೆ. ನನಗೆ ಶಾಸನಸಭೆಯ ರೀತಿ-ರಿವಾಜುಗಳ ಅರಿವಿಲ್ಲ, ಅನುಭವವಿಲ್ಲ. ಆದರೂ ಅರಸು ನನ್ನನ್ನು 1973ರಲ್ಲಿ ಮೊದಲ ಬಾರಿಗೆ, ಮುನಿಸಿಪಲ್ ಫೈನಾನ್ಸ್ ಎನ್‌ಕ್ವೈಯರಿ ಕಮಿಟಿ ಛೇರ್ಮನ್ ಮಾಡಿದರು. ಅಲ್ಲಿಯವರೆಗೆ ಅಧಿಕಾರ ಅಂದರೇ ಗೊತ್ತಿಲ್ಲದ ನನಗೆ, ಸರಕಾರಿ ಕಾರು, ಕುರ್ಚಿ, ಕಚೇರಿ, ಸಿಬ್ಬಂದಿ ವರ್ಗ ಸಿಗುತ್ತಿದ್ದಂತೆ ಬುದ್ಧಿಗೆ ಸಾಣೆ ಹಿಡಿದಂತಾಯಿತು. ಆಗ ಆಕ್ಟ್ರಾಯ್‌ನಿಂದ ಜನರಿಗೆ ಬಹಳ ತೊಂದರೆಯಾಗುತ್ತಿತ್ತು. ಅದನ್ನು ಅಧ್ಯಯನ ಮಾಡಿ ಆಕ್ಟ್ರಾಯ್ ತೆಗೆದುಹಾಕುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟೆ. ಅದಕ್ಕೆ ಅರಸರ ಸಂಪೂರ್ಣ ಬೆಂಬಲವಿತ್ತು. ಅದಾದ ನಂತರ ಅರಸು ನನ್ನನ್ನು ಲೆದರ್ ಡೆವಲಪ್‌ಮೆಂಟ್ ಬೋರ್ಡ್ ಛೇರ್ಮನ್ ಮಾಡಿದರು. ನನ್ನ ಜನಾಂಗದ ಜನರ ಕಷ್ಟಸುಖ ಗೊತ್ತಿದ್ದರಿಂದ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡೆ. ದುರ್ಬಲವರ್ಗದವರ ಏಳಿಗೆಗಾಗಿ ಅರಸು ಸರಕಾರ ಎಂಬುದನ್ನು ಆ ಕಾರ್ಯಕ್ರಮಗಳ ಮೂಲಕ ಸಾಬೀತುಪಡಿಸಿದೆ. ರಾಜಕೀಯ ಅಧಿಕಾರ ಅಂದರೆ ಜನತೆಯ ಪರವಾಗಿ, ಜನರ ಒಳಿತಿಗಾಗಿ ಬಳಸುವ ಅಸ್ತ್ರ ಎಂಬುದನ್ನು ಅರಸು ಕಲಿಸಿಕೊಟ್ಟರು. ಸಾಮಾಜಿಕ ಬದಲಾವಣೆಯನ್ನು ಅರ್ಥ ಮಾಡಿಸಿದರು. ಹಾಗೆಯೇ ಅಧಿಕಾರ ಅನ್ನುವುದು ಕೆಲವರ ಸ್ವತ್ತಲ್ಲ ಎನ್ನುವುದನ್ನು ಮಾಡಿ ತೋರಿಸಿದರು.

ಮಂತ್ರಿ ಮಾಡಿದ ಅರಸು

ಯಾವ ಹಿನ್ನೆಲೆಯೂ ಇಲ್ಲದ ನಾನು, ಮೊದಲ ಸಲ ಶಾಸಕನಾದವನು ಮಂತ್ರಿಯಾಗುವುದು ಸಾಧ್ಯವೇ? ಆಗದಿದ್ದುದನ್ನು ಆಗು ಮಾಡಿದ್ದು ಅರಸು. ನಮ್ಮ ಹಿರಿಯರು, ಮಾರ್ಗದರ್ಶಕರು ಮತ್ತು ಗುಲ್ಪರ್ಗಾ ಲೋಕಸಭಾ ಸದಸ್ಯರಾಗಿದ್ದ ಧರ್ಮರಾವ್ ಅಫ್ಜಲ್‌ಪುರ್ಕರ್ ಸಡನ್ನಾಗಿ 1973ರಲ್ಲಿ ನಮ್ಮನ್ನಗಲಿದರು. ಮರುಚುನಾವಣೆ ಬಂತು. ಆಗ ನಾನು ಸಿದ್ದರಾಮರೆಡ್ಡಿ ಎಂಬ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಬೇಕೆಂದು ಅರಸರಲ್ಲಿ ಕೇಳಿಕೊಂಡೆ. ಅದಕ್ಕೆ ಅರಸು, ‘‘ಗುಲ್ಪರ್ಗಾದಲ್ಲಿ ರೆಡ್ಡಿ ಸಮಾಜದವರು ಕಡಿಮೆ ಇದ್ದಾರೆ. ಒಂದೇ ವರ್ಷದಲ್ಲಿ ಮೂರು ಉಪಚುನಾವಣೆ ಸೋತಿದ್ದೇವೆ, ಇದನ್ನೂ ಸೋತರೆ ನನ್ನ ಕುರ್ಚಿಗೇ ಕಂಟಕ’’ ಎಂದು ಒಪ್ಪಲಿಲ್ಲ. ನಾನು ಕೊಂಚ ಹಠಕ್ಕೆ ಬಿದ್ದು, ‘‘ಸರಕಾರದ ಕಾರ್ಯಕ್ರಮಗಳಿವೆ, ಇಂದಿರಾ ಗಾಂದಿಯವರ ಆಶೀರ್ವಾದವಿದೆ, ಗೆಲ್ಲಿಸುವ ಜವಾಬ್ದಾರಿ ನನ್ನದು’’ ಎಂದೆ. ಅರಸರು ‘‘ನನ್ನ ಭವಿಷ್ಯ ನಿಮ್ಮ ಕೈಯಲ್ಲಿದೆ’’ ಎಂದು ರೆಡ್ಡಿಯನ್ನು ಅಭ್ಯರ್ಥಿ ಮಾಡಿದರು. ಅವರ ಮಾತನ್ನು ತಲೆತುಂಬಿಕೊಂಡ ಓಡಾಡಿದೆ, ಧರ್ಮರಾವ್‌ಗಿಂತಲೂ ಹೆಚ್ಚಿನ ಲೀಡ್‌ನಲ್ಲಿ ರೆಡ್ಡಿ ಗೆದ್ದರು. ಸಿದ್ದರಾಮರೆಡ್ಡಿ ಗೆದ್ದ ನಂತರ ಅರಸು ಬೆನ್ನು ತಟ್ಟಿ ‘ನಂಬಿಕೆ ಉಳಿಸಿಕೊಂಡೆ’ ಎಂದರು. 1976 ರಲ್ಲಿ ಮೊತ್ತಮೊದಲ ಬಾರಿಗೆ ಪ್ರಾಥಮಿಕ ಶಿಕ್ಷಣ ಸಚಿವನನ್ನಾಗಿ ಮಾಡಿದರು. ಶಿಕ್ಷಣ ಖಾತೆಯನ್ನು ಕೊಟ್ಟ ಅರಸು, ‘‘ಆಡಳಿತದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವ ಮೊದಲು ಅದಕ್ಕೆ ಜನಬೆಂಬಲವಿದೆಯೇ ಎಂದು ನೋಡಬೇಕು ಜೊತೆಗೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು’’ ಎಂದು ಕಿವಿಮಾತು ಹೇಳಿದರು. ಆ ಮಾತು ಶಿಕ್ಷಣ ಖಾತೆಯಲ್ಲಿ, ಆ ಕಾಲಕ್ಕೆ ರೆವಲ್ಯೂಷನರಿ ಸ್ಟೆಪ್ಸ್ ತೆಗೆದುಕೊಳ್ಳಲು ಸಹಕರಿಸಿತು. ಶಿಕ್ಷಣ ಇಲಾಖೆಯಲ್ಲಿ ಎಸ್ಸಿ ಎಸ್ಟಿ ಪಂಗಡಕ್ಕೆ ಮೀಸಲಿದ್ದ 16 ಸಾವಿರ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವಾಗ, ‘‘ಒಂದೇ ಸಲಕ್ಕೆ ಇಷ್ಟೊಂದು ಹುದ್ದೆ ತುಂಬುವುದು, ಕೆಲವರ ಕಣ್ಣುರಿಗೆ ಕಾರಣವಾಗಬಹುದು, ಯೋಚಿಸಿ ಮಾಡಿ’’ ಎಂದು ಸಾಮಾಜಿಕ ಸೂಕ್ಷ್ಮವನ್ನು, ಆಡಳಿತಾತ್ಮಕ ತೊಡಕುಗಳನ್ನು ಮನದಟ್ಟು ಮಾಡಿಸಿದರು.

ಬಿಸಿಲಲ್ಲಿ ನಡೆದ ಮುಖ್ಯಮಂತ್ರಿ

ಪದವಿ ಮುಗಿಸಿ ಕೃಷಿಕರಾಗಿದ್ದ ಅರಸು ಕತೆ ಕೇಳಿದ್ದೆ. ಆದರೆ ರಾಜಕಾರಣಕ್ಕೆ ಬಂದು ಅಧಿಕಾರ, ಜನಪ್ರಿಯತೆ ಗಳಿಸಿದ ಮೇಲೂ ಅರಸು ಹಾಗೇ ಇದ್ದರು ಎನ್ನುವುದಕ್ಕೆ ನನಗಾದ ಅನುಭವವೇ ಸಾಕ್ಷಿ. ಕೊಲ್ಲೂರು ಮಲ್ಲಪ್ಪನವರು ನಮ್ಮ ಭಾಗದ ಬಹುದೊಡ್ಡ ನಾಯಕರು. ಅವರ ಮಗನ ಮದುವೆ ಯಾದಗಿರಿಯಲ್ಲಿತ್ತು. ಮದುವೆಗೆ ಬಂದ ಅರಸು, ಅಲ್ಲಿಂದ ನಿಗದಿತ ಪ್ರಯಾಣದಂತೆ ಹೈದರಾಬಾದ್‌ಗೆ ಹೋಗುವುದಿತ್ತು. ಮದುವೆ ಮುಗಿಸಿದ ಅರಸರು, ‘‘ನಿಮ್ಮ ಕಾರಿನಲ್ಲಿಯೇ ಹೋಗೋಣ’’ ಎಂದರು. ಅಷ್ಟೇ ಅಲ್ಲ, ಮುಖ್ಯಮಂತ್ರಿಗಳ ಅಧಿಕೃತ ಕಾರು ಮತ್ತು ಜಿಲ್ಲಾಧಿಕಾರಿಗಳ ಕಾರನ್ನೂ ಬೇಡವೆಂದರು. ನನ್ನ ಕ್ಷೇತ್ರ ಗುರುಮಿಠಕಲ್ ಮಾರ್ಗವಾಗಿ ಹೈದರಾಬಾದಿಗೆ ಹೋಗುವಾಗ, ಮಾರ್ಗಮಧ್ಯೆ ಕಾರಿನ ಟಯರ್ ಪಂಕ್ಚರ್ ಆಯಿತು. ಅದು ಹತ್ತಿರದಲ್ಲಿ ಯಾವ ಊರು ಇಲ್ಲದ ನಿರ್ಜನ ಪ್ರದೇಶ. ಹಾಗೆಯೇ ಆ ಜಾಗದಲ್ಲಿ ಮರ-ಗಿಡಗಳೂ ಇರಲಿಲ್ಲ. ರಣಬಿಸಿಲು. ಏನೂ ತೋಚದೆ ಅವರ ಮುಖ ನೋಡಿದೆ. ಅರಸರ ಮುಖದಲ್ಲಿ ಯಾವ ಬದಲಾವಣೆಯೂ ಇಲ್ಲ. ಸುತ್ತಮುತ್ತ ನೋಡಿದರು, ಬಣಗುಡುತ್ತಿದ್ದ ಬಿಸಿಲಿನಲ್ಲಿ ಸುಮಾರು ಒಂದು ಕಿಲೋಮೀಟರ್ ದೂರ ನಡೆದು, ಒಂದು ಕುರುಚಲು ಗಿಡದ ಕೆಳಗೆ, ಸ್ಥಳೀಯರು ಹಾಸಿದ ಟವಲ್ ಮೇಲೆ ಸುಮ್ಮನೆ ಕೂತರು. ಅವತ್ತಲ್ಲ, ಇವತ್ತಿಗೂ ಯಾವ ಮುಖ್ಯಮಂತ್ರಿಯನ್ನೂ ಹೀಗೆ ನಡೆದದ್ದನ್ನು, ಗಿಡದ ಕೆಳಗೆ ಕೂತದ್ದನ್ನು ನಾನು ನೋಡಿಲ್ಲ ಮತ್ತು ಕೇಳಿಲ್ಲ.

ಕ್ರಾಂತಿಕಾರಿ ಕಾಯ್ದೆಗಳ ಕಲಿ

ದೇವರಾಜ ಅರಸು ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿಯೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಘೋಷಿಸಿದರು. ಭೂ ಸುಧಾರಣೆ, ಹಾವನೂರು ಕಮಿಷನ್, ಮಲ ಹೊರುವ ಪದ್ಧತಿ ನಿಷೇಧ, ಜೀತ ವಿಮುಕ್ತಿಗಳಂತಹ ಕ್ರಾಂತಿಕಾರಿ ಕಾಯ್ದೆಗಳನ್ನು ಜಾರಿಗೆ ತಂದರು. ಇಂದಿರಾಗಾಂಧಿಯವರ ಹತ್ತಂಶದ ಕಾರ್ಯಕ್ರಮಗಳ ಜೊತೆಗೆ ಅರಸರ ಇಪ್ಪತ್ತಂಶದ ಕಾರ್ಯಕ್ರಮಗಳು ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಮಾಡಿದವು. ಹಾಗೆಯೇ ಅವುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅರಸು ತೋರಿದ ಮುತ್ಸದ್ದಿತನ ಮುನ್ನಲೆಗೆ ಬಂದಿತು. ಅರಸರ ಹೆಗ್ಗಳಿಕೆ ಎಂದರೆ, ದೇಶದಲ್ಲಿ ಪ್ರಥಮವಾಗಿ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದದ್ದು. ಇದು ಇಂದಿರಾಗಾಂಧಿಯವರ ಹತ್ತಂಶದ ಕಾರ್ಯಕ್ರಮಗಳಲ್ಲಿದ್ದರೂ, ಈ ಕಾಯ್ದೆಯನ್ನು ಜಾರಿ ಮಾಡುವಲ್ಲಿ, ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳೆ ವಿಫಲವಾಗಿದ್ದವು. ಅಷ್ಟೇ ಏಕೆ, ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಪಿ.ವಿ.ನರಸಿಂಹರಾವ್, ಭೂ ಸುಧಾರಣೆ ಕಾಯ್ದೆ ಜಾರಿಗೆ ಪ್ರಯತ್ನಿಸಿ, ಅಲ್ಲಿಯ ಫ್ಯೂಡಲ್ ಲಾರ್ಡ್‌ಗಳ ಕೆಂಗಣ್ಣಿಗೆ ಗುರಿಯಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.
ಆದರೆ ಇಲ್ಲಿ, ನಮ್ಮ ರಾಜ್ಯದಲ್ಲಿ ಆ ರೀತಿಯಾಗಲಿಲ್ಲ. ದೇವರಾಜ ಅರಸರಿಗೆ ಇಂದಿರಾಗಾಂಧಿಯವರ ಸಂಪೂರ್ಣ ಬೆಂಬಲವಿತ್ತು. ಜೊತೆಗೆ ಪಕ್ಷದ ಬೆಂಬಲವೂ ಇತ್ತು. ಅದಕ್ಕಿಂತ ಹೆಚ್ಚಾಗಿ ಸ್ವತಃ ಅರಸರಲ್ಲಿ ಇಚ್ಛಾಶಕ್ತಿ ಇತ್ತು. ಭೂಹೀನರು ಭೂಮಾಲಕರಾಗಬೇಕು, ಎಲ್ಲರಂತೆ ಎದೆಯುಬ್ಬಿಸಿ ಬದುಕಬೇಕೆಂಬ ದೃಢಸಂಕಲ್ಪವಿತ್ತು. ಮೇಲ್ಜಾತಿಯ ರಾಜಕೀಯ ನಾಯಕರನ್ನು, ಭೂಮಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮನವೊಲಿಸಿ ಕಾಯ್ದೆಯನ್ನು ಜಾರಿಗೆ ತಂದು 8.25 ಲಕ್ಷ ಗೇಣಿದಾರರಿಗೆ ಹಕ್ಕುಪತ್ರ ಕೊಡಿಸಿದರಲ್ಲ, ಅದು ಅರಸು.
  ಇನ್ನು ಹಾವನೂರು ಕಮಿಷನ್... ಬಲಿಷ್ಠ ಜಾತಿಗಳನ್ನು ಮೈ ಮೇಲೆ ಎಳೆದುಕೊಂಡು ಅಧಿಕಾರ ಹೋದರೂ ಚಿಂತೆ ಇಲ್ಲ ಎಂದು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದರಲ್ಲ, ಅದು ಬಹಳ ದೊಡ್ಡ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು. ಸ್ವತಃ ಹಿಂದುಳಿದ ಜಾತಿಗೆ ಸೇರಿದ ಅರಸು, ಒಂದು ಜಾತಿ ಇನ್ನೊಂದು ಜಾತಿಯನ್ನು ಹೀನಾಯವಾಗಿ ಕಾಣುವುದನ್ನು ಮಾನವೀಯ ಧರ್ಮಕ್ಕೆ ಮತ್ತು ಸಂಸ್ಕೃತಿಗೆ ಬಗೆವ ಅಪಚಾರವೆಂದೇ ಭಾವಿಸಿದ್ದರು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಏಳಿಗೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಸರ್ವಸ್ವವನ್ನು ತ್ಯಜಿಸುತ್ತಿದ್ದ ತ್ಯಾಗಮೂರ್ತಿಯಾಗಿದ್ದರು.

ಅರಸರ ಇಪ್ಪತ್ತಂಶದ ಕಾರ್ಯಕ್ರಮಗಳ ಅನುಷ್ಠಾನದ ಫಲವೇ ನಾವೆಲ್ಲ ಮತ್ತೊಮ್ಮೆ, 1978ರಲ್ಲಿ ಬಹುಮತದಿಂದ ಆರಿಸಿ ಬರಲು ಕಾರಣವಾಯಿತು. ಅಷ್ಟೇ ಅಲ್ಲ, 1977ರಲ್ಲಿ ದೇಶದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಧೂಳೀಪಟವಾದರೂ ಕರ್ನಾಟಕದಲ್ಲಿ ಮಾತ್ರ ಭದ್ರವಾಗಿತ್ತು. ನನ್ನನ್ನು ಅರಸರು ಮತ್ತೊಮ್ಮೆ ಪಂಚಾಯತ್ ರಾಜ್ ಮಂತ್ರಿ ಮಾಡಿದರು. ರಾಜಕೀಯವಾಗಿ ಬೆಳೆಯಲು ಬೆಂಬಲಿಸಿದರು, ಉದ್ದಕ್ಕೂ ಕಣ್ಣಿಟ್ಟು ಕಾಪಾಡಿದರು.

ಆ ಸ್ಥಿತಿ ನೋಡಲಾಗಲಿಲ್ಲ...

1980ರಲ್ಲಿ ಇಂದಿರಾ-ಅರಸು ರಾಜಕೀಯವಾಗಿ ಬೇರೆ ಬೇರೆಯಾದರು. ಆಗ ಅರಸರನ್ನು ಭೇಟಿ ಮಾಡಿ, ‘‘ಇಂದಿರಾಜಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದೇವೆ. ಅವರನ್ನು ಬಿಟ್ಟು ಹೋಗುವುದು ಸರಿಯಲ್ಲ’’ ಎಂದೆ. ಆದರೆ ನನ್ನ ಮಾತು ಕೇಳುವ ಸ್ಥಿತಿಯಲ್ಲಿರದ ಅರಸು ಒರಟಾಗಿ, ‘‘ಇಷ್ಟವಿದ್ದರೆ ಇರಿ, ಹೋಗಬೇಕೆನಿಸಿದರೆ ಹೋಗಿ’’ ಎಂದುಬಿಟ್ಟರು. ಏನು ಮಾಡಬೇಕೋ ತೋಚಲಿಲ್ಲ. ಕೊನೆಗೆ ಇಂದಿರಾಜಿ ಗುಂಪು ಸೇರಿದೆ. 1980ರಲ್ಲಿ ಗುಂಡೂರಾವ್ ಮುಖ್ಯಮಂತ್ರಿ, ನಾನು ಕಂದಾಯ ಮಂತ್ರಿ, ಅರಸು ವಿರೋಧ ಪಕ್ಷದ ನಾಯಕರು. ಬೆಂಗಳೂರಿನ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಅರಸು, ‘‘ಬೆಂಗಳೂರಿನ ಬಗ್ಗೆ ನೀವಾದರೂ ಗಮನ ಕೊಡಿ, ನಗರ ಅಡ್ಡಾದಿಡ್ಡಿ ಬೆಳೆದರೆ ಮೂಲ ಸೌಲಭ್ಯ ಒದಗಿಸಲು ಕಷ್ಟವಾಗುತ್ತದೆ. ಈ ಬಗ್ಗೆ ಚರ್ಚಿಸಲು ನಿಮ್ಮ ಅಧ್ಯಕ್ಷತೆಯಲ್ಲಿ ಸಭೆ ಕರೆದು, ಒಂದು ತೀರ್ಮಾನಕ್ಕೆ ಬನ್ನಿ’’ ಎಂದರು.

 ವಿಧಾನಸೌಧದ ಕಮಿಟಿ ಕೊಠಡಿಯಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ಕರೆದೆ. ಅರಸು ಸಮಯಕ್ಕೆ ಸರಿಯಾಗಿ ಬಂದರು. ಬೇರೆಯವರು ಬರಲು ಇನ್ನೂ ಸಮಯವಿತ್ತು. ‘‘ಒಂದು ಕಾಫಿ ಕೊಡಿಸಿ’’ ಎಂದು ನನ್ನ ಕೊಠಡಿಗೇ ಬಂದರು. ನನ್ನ ಬೆಳೆಸಿದ ನಾಯಕನಿಗೆ ನನ್ನ ಕುರ್ಚಿ ತೋರಿಸಿ ಕುಳಿತುಕೊಳ್ಳಲು ವಿನಂತಿಸಿಕೊಂಡೆ. ಅವರು ಒಪ್ಪಲಿಲ್ಲ. ನನ್ನ ಎದುರಿನ ಕುರ್ಚಿಯಲ್ಲಿ ಕೂತರು. ಅವರ ಆ ಸ್ಥಿತಿ ಕಂಡು ಕರುಳು ಹಿಂಡಿತು. ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಆಗಿದ್ದವರು, ಈಗ ಸಾಮಾನ್ಯರಂತೆ ಕುಳಿತರಲ್ಲಾ ಎಂದು ದುಃಖ ಉಮ್ಮಳಿಸಿ ಬಂತು.
ನನ್ನ ಕಣ್ಣೀರು ಕಂಡ ಅರಸು ‘‘ರಾಜಕಾರಣದಲ್ಲಿ ಯಾವುದು ಶಾಶ್ವತ ಅಲ್ಲ, ಇದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬಾರದು’’ ಎಂದು ಸಮಾಧಾನ ಹೇಳಿದರು. ಅದು ನನ್ನನ್ನು ಇನ್ನಷ್ಟು ದುಃಖಕ್ಕೆ ಈಡುಮಾಡಿತು. ಅರಸು.. ಒಬ್ಬರೆ.

  ನನ್ನ ಬೆಳೆಸಿದ ನಾಯಕನಿಗೆ ನನ್ನ ಕುರ್ಚಿ ತೋರಿಸಿ ಕುಳಿತುಕೊಳ್ಳಲು ವಿನಂತಿಸಿಕೊಂಡೆ. ಅವರು ಒಪ್ಪಲಿಲ್ಲ. ನನ್ನ ಎದುರಿನ ಕುರ್ಚಿಯಲ್ಲಿ ಕೂತರು. ಅವರ ಆ ಸ್ಥಿತಿ ಕಂಡು ಕರುಳು ಹಿಂಡಿತು. ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಆಗಿದ್ದವರು, ಈಗ ಸಾಮಾನ್ಯರಂತೆ ಕುಳಿತರಲ್ಲಾ ಎಂದು ದುಃಖ ಉಮ್ಮಳಿಸಿ ಬಂತು.
ನನ್ನ ಕಣ್ಣೀರು ಕಂಡ ಅರಸು ‘‘ರಾಜಕಾರಣದಲ್ಲಿ ಯಾವುದು ಶಾಶ್ವತ ಅಲ್ಲ, ಇದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬಾರದು’’ ಎಂದು ಸಮಾಧಾನ ಹೇಳಿದರು. ಅದು ನನ್ನನ್ನು ಇನ್ನಷ್ಟು ದುಃಖಕ್ಕೆ ಈಡುಮಾಡಿತು.

   

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News