ನ.5 ರಿಂದ ಲಾರಿ ಮಾಲಕರ ಅನಿರ್ದಿಷ್ಟಾವಧಿ ಮುಷ್ಕರ
ಬೆಂಗಳೂರು, ಅ.26: ಆಹಾರ ನಿಗಮದ ಗೋದಾಮುಗಳಿಂದ ಅನ್ನಭಾಗ್ಯ ಯೋಜನೆ, ಬಿಸಿಯೂಟ ಯೋಜನೆ, ಹಾಸ್ಟೆಲ್‌ಗಳು ಸೇರಿದಂತೆ ರಾಜ್ಯದ ಹಲವಾರು ಯೋಜನೆಗಳಿಗೆ ಆಹಾರ ಸಾಗಣೆ ಮಾಡುವ ವಾಹನಗಳಿಗೆ ಬಾಕಿ ಉಳಿಸಿಕೊಂಡಿರುವ ಸಾಗಣೆ ವೆಚ್ಚ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಲಾರಿ ಮಾಲಕರ ಹಾಗೂ ಏಜೆಂಟರ ಅಸೋಸಿಯೇಷನ್ ನ.5 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಕೇಂದ್ರದ ಆಹಾರ ನಿಗಮದಿಂದ ಸುಮಾರು ಎಂಟು ಸಾವಿರಕ್ಕೂ ಅಧಿಕ ಲಾರಿಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಅಕ್ಕಿ, ರಾಗಿ, ಜೋಳ, ಸಕ್ಕರೆ ಹಾಗೂ ಇನ್ನಿತರೆ ವಸ್ತುಗಳನ್ನು ಸಾಗಿಸುತ್ತವೆ. ಅದಕ್ಕಾಗಿ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಹಣವನ್ನು ನೀಡುತ್ತಿದೆಯಾದರೂ ರಾಜ್ಯ ಸರಕಾರ ಕಳೆದ 11 ತಿಂಗಳಿನಿಂದ ನಮಗೆ ಸುಮಾರು 180 ಕೋಟಿ ಹಣ ನೀಡಿಲ್ಲ ಎಂದು ಕಿಡಿಕಾರಿದರು.
ಕೇಂದ್ರದಿಂದ ಪ್ರತಿ ಟನ್‌ಗೆ ಟ್ರಾನ್ಸ್‌ಪೋರ್ಟ್ ಶುಲ್ಕವನ್ನಾಗಿ ಮಾತ್ರ 75 ರೂ.ಗಳನ್ನು ರಾಜ್ಯ ಸರಕಾರಕ್ಕೆ ನೀಡುತ್ತಿದೆ. ಆದರೆ, ರಾಜ್ಯ ಸರಕಾರ ಅದರಲ್ಲಿಯೂ ಕಡಿತಗೊಳಿಸಿ ಕೇವಲ 35 ರೂ.ಗಳನ್ನು ಮಾತ್ರ ನೀಡುತ್ತಿದೆ. ಆದರೆ, ಪ್ರತ್ಯೇಕವಾಗಿ ಯಾವುದೇ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಶುಲ್ಕ, ಟೋಲ್ ಶುಲ್ಕ ನೀಡದೇ ಇರುವುದರಿಂದ ಲಾರಿ ಮಾಲಕರು ಕೈಯಿಂದ ಭರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಹಾರ ದಾಸ್ತಾನು ಕೇಂದ್ರದಿಂದ 50 ಕಿ.ಮೀ. ದೂರಕ್ಕೆ ಮಾತ್ರ ಸರಬರಾಜು ಮಾಡಬೇಕು ಎಂದು ಟೆಂಡರ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದೆ. ಆದರೂ, ಅನಗತ್ಯವಾಗಿ300-400 ಕಿ.ಮೀ ನಷ್ಟು ದೂರದ ಜಿಲ್ಲೆಗಳಿಗೆ ನಾವೇ ಕೊಡಬೇಕು ಎಂದು ಆದೇಶ ನೀಡುತ್ತಿದ್ದಾರೆ. ಇದಕ್ಕೆ ಹೆಚ್ಚಿನ ವೆಚ್ಚವನ್ನು ನೀಡದೇ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. 2012-13 ರಲ್ಲಿ ಹೈ ಕೋರ್ಟ್‌ನಿಂದ ಯಾವುದೇ ಬಾಕಿಯಿಲ್ಲದೆ ಎಲ್ಲ ಸಾಗಣೆ ವೆಚ್ಚವನ್ನು ಕಡ್ಡಾಯವಾಗಿ ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿದ್ದರೂ, ಸರಕಾರ ಇದನ್ನು ಕಡೆಗಣಿಸಿದೆ ಎಂದು ಹೇಳಿದರು.
ಸಾಗಾಣಿಕೆ ಗುತ್ತಿಗೆಯ ಅವಧಿಯು ಮಾ.1, 2017ಕ್ಕೆ ಕೊನೆಗೊಳ್ಳಲಿದ್ದು, ಶೇ.60 ರಷ್ಟು ಎಲ್ಲ ಶುಲ್ಕಗಳನ್ನು ಹೆಚ್ಚಿಸಿ ಮಾ.2 ರಿಂದಲೇ ಜಾರಿಗೆ ಬರುವಂತೆ ಆದೇಶ ನೀಡಬೇಕು. ಟೆಂಡರ್ ಅವಧಿ ಮುಗಿದ ನಂತರ ಅದನ್ನೇ ಮುಂದುವರಿಸುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಮರು ಟೆಂಡರ್ ಕರೆಯಬೇಕು ಎಂದು ಅವರು ಒತ್ತಾಯಿಸಿದರು. ಬಾಕಿ ಉಳಿಸಿಕೊಂಡಿರುವ 180 ಕೋಟಿ ರೂ. ಸಾಗಾಣಿಕೆ ವೆಚ್ಚವನ್ನು ಬಿಡುಗಡೆ ಮಾಡುವ ಕುರಿತು ಅ.4 ರೊಳಗೆ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ, ಅ.4 ರ ಮಧ್ಯರಾತ್ರಿಯಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ 8 ಸಾವಿರ ಲಾರಿಗಳು, 40 ಸಾವಿರ ಚಾಲಕರು ಮತ್ತು ಕ್ಲೀನರ್‌ಗಳು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಇದರಿಂದಾಗಿ ಸರಕಾರ ಹಲವು ಯೋಜನೆಗಳಿಗೆ ಸರಬರಾಜಾಗುವ ವಸ್ತುಗಳು ಸ್ಥಗಿತಗೊಳ್ಳಲಿವೆ ಎಂದು ಎಚ್ಚರಿಕೆ ನೀಡಿದರು.