ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಶೇಷ ಭತ್ತೆ ಹೆಚ್ಚಳ
Update: 2016-10-27 23:03 IST
ಬೆಂಗಳೂರು, ಅ.27: ರಾಜ್ಯದ ಸರಕಾರಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ.1ರಿಂದ ಜಾರಿಗೆ ಬರುವಂತೆ 300 ರೂ.ಗಳಿಂದ 450 ರೂ.ಗಳಿಗೆ ಮಾಸಿಕ ವಿಶೇಷ ಭತ್ತೆಯನ್ನು ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಆದೇಶವು ಪ್ರಾಥಮಿಕ ಶಾಲೆಗಳಲ್ಲಿ 2008ರ ಆ.1ರ ಪೂರ್ವದಲ್ಲಿ ನೇಮಕಗೊಂಡ ಶಿಕ್ಷಕರಿಗೆ ಮಾತ್ರ ಅನ್ವಯಿಸುತ್ತದೆ. ಈ ಆದೇಶದ ಮೂಲಕ ಮಂಜೂರಾದ ವಿಶೇಷ ಭತ್ತೆಯ ಮೊತ್ತವು ವಿಶಿಷ್ಟ ಸಂಭಾವನೆಯಾಗಿದ್ದು, ಇದನ್ನು ನಿವೃತ್ತಿ ಸೌಲಭ್ಯವನ್ನು ನಿರ್ಧರಿಸುವಾಗ ಅಥವಾ ಬೇರೆ ಯಾವುದೆ ಉದ್ದೇಶಗಳಿಗೆ ಪರಿಗಣಿಸುವಂತಿಲ್ಲ.
ಈ ವಿಶೇಷ ಭತ್ತೆಯ ವೆಚ್ಚವನ್ನು ವೇತನ ವೆಚ್ಚವನ್ನು ಭರಿಸುವ ಲೆಕ್ಕ ಶೀರ್ಷಿಕೆಯಿಂದಲೆ ಭರಿಸತಕ್ಕದ್ದು. ಈ ವಿಶೇಷ ಭತ್ತೆಯನ್ನು ಪ್ರಸ್ತುತ ಈ ಸೌಲಭ್ಯವನ್ನು ಪಡೆಯುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯವಾಗುವಂತೆ ಮುಂದುವರೆಸಲಾಗಿದೆ ಎಂದು ಶಿಕ್ಷಣ ಇಲಾಖೆ(ಪ್ರಾಥಮಿಕ)ಯ ಸರಕಾರದ ಅಧೀನ ಕಾರ್ಯದರ್ಶಿ ರೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.