ಕೇರಳ-ಕರ್ನಾಟಕ ಗಡಿಯಲ್ಲಿ ಪ್ರಯಾಣಿಸುವ ಕೇರಳಿಗರು ಭೀತಿಯಲ್ಲಿ !
ಬೆಂಗಳೂರು, ಅ. 28: ಕರ್ನಾಟಕ, ಕೇರಳ ಗಡಿಪ್ರದೇಶಗಳಲ್ಲಿ ರಾತ್ರಿಯ ವೇಳೆ ವಾಹನಗಳ ಮೇಲೆ ದಾಳಿ ನಡೆಯುತ್ತಿದ್ದು, ಇದರಿಂದಾಗಿ ಕೇರಳದೆಡೆಗೆ ಹೋಗುವ ಪ್ರಯಾಣಿಕರಲ್ಲಿ ಭೀತಿ ತಲೆ ದೋರಿದೆ ಎಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ.
ರಾತ್ರಿಯಲ್ಲಿ ಪ್ರಯಾಣ ನಿಷೇಧವಿರುವುದರಿಂದ ಕುಟ್ಟ, ಗೋಣಿಕೊಪ್ಪ ಮೂಲಕ ತಮ್ಮ ಸ್ವಂತ ವಾಹನದಲ್ಲಿ ಹೋಗುವ ಪ್ರಯಾಣಿಕರು ಆಕ್ರಮಣಕ್ಕೊಳಗಾಗುತ್ತಿದ್ದಾರೆ. ವಾಹನಗಳನ್ನು ತಡೆದು ನಿಲ್ಲಿಸಿ ಹಣ, ವಸ್ತುಗಳನ್ನು ದೋಚಲಾಗುತ್ತಿದೆ ಎನ್ನಲಾಗಿದೆ.
ಕಳೆದ ಸೋಮವಾರ ತಳಿಪರಂಬ ಎಂಬಲ್ಲಿಗೆ ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿ ಆಕ್ರಮಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಅಮರಾವತಿ ರೆಸ್ಟಾರೆಂಟ್ ಸಮೀಪದಲ್ಲಿ ಮಧ್ಯರಾತ್ರಿವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕಳೆದ ಒಂದು ವಾರದಲ್ಲಿ ಇಂತಹ ಮೂರು ಘಟನೆಗಳು ನಡೆದಿವೆ ಎಂದು ವರದಿಯಾಗಿವೆ.
ಕೇರಳದತ್ತ ಹೋಗುವ ಪ್ರಯಾಣಿಕರನ್ನು ಆಕ್ರಮಿಸುವ ಘಟನೆಗಳಲ್ಲಿ ಕೇರಳ,ಕರ್ನಾಟಕ ಸರಕಾರಗಳುಮಧ್ಯಪ್ರವೇಶಿಸಬೇಕೆಂದು ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಆಗ್ರಹಿಸಿದ್ದಾರೆ. ಪ್ರಯಾಣಿಕರನ್ನು ಮಾರಕಾಯುಧಗಳನ್ನು ಹಿಡಿದು ಬರುವ ತಂಡ ಕೊಳ್ಳೆ ಹೊಡೆಯುತ್ತಿವೆ. ಘಟನೆಯನ್ನು ಕೇರಳ ಸರಕಾರ ಕರ್ನಾಟಕದ ಗಮನಕ್ಕೆ ತರಬೇಕು ಎಂದು ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ವಿನಂತಿಸಿದ್ದಾರೆ.
ವೀರಾಜಪೇಟೆಯಲ್ಲಿ ವಾಹನದ ವೇಗ ಕಡಿಮೆ ಮಾಡಿದಾಗ ಕೇರಳದ ಪ್ರಯಾಣಿಕರ ಮುಖಕ್ಕೆ ಮೆಣಸಿನ ಹುಡಿ ಎರಚಿ ದರೋಡೆ ಮಾಡುವ ಪ್ರಯತ್ನವೊಂದು ನಡೆದಿತ್ತು. ರಸ್ತೆಯ ಹಂಪ್‌ನಲ್ಲಿ ವಾಹನದ ವೇಗ ಕಡಿಮೆ ಮಾಡಿದಾಗ ಕಾರಿಗೆ ಅಡ್ಡಬಂದು ಮೆಣಸಿನ ಹುಡಿ ಎರಚಲಾಗಿದೆ. ಈ ಘಟನೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿವೆ.
ರಾತ್ರಿ ವೇಳೆ ಪ್ರಯಾಣಿಸುವ ಕೇರಳೀಯರಿಗೆ ಸುರಕ್ಷೆ ಒದಗಿಸಬೇಕೆಂದು ಆಗ್ರಹಿಸಿ ಕೆ.ಎಂ.ಸಿ.ಸಿ. ಮೈಸೂರು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿತ್ತು. ದರೋಡೆಗೆ ತುತ್ತಾಗುವ ಮಲೆಯಾಳಿಗಳಲ್ಲಿ ಹಲವರು ದೂರು ನೀಡಲು ಮುಂದಾಗದಿರುವುದು ಇಂತಹ ಘಟನೆಗಳು ಪುನರಾವರ್ತನೆಗೊಳ್ಳಲು ಕಾರಣವೆಂದು ಕೆ.ಎಂಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಕೆ.ನೌಷಾದ್ ಹೇಳಿದ್ದಾರೆ.
ಬಂಡಿಪೂರ ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆಯ ಪ್ರಯಾಣ ನಿಷೇಧಿಸಿರುವುದರಿಂದ ಮಲಬಾರ್‌ನೆಡೆಗೆ ಪ್ರಯಾಣಿಸುವವರು ಕುಟ್ಟ,ಗೋಣಿಕೊಪ್ಪ ದಾರಿಯಾಗಿ ಹೋಗುತ್ತಿದ್ದಾರೆ. ಕಾಡಿನದಾರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಪ್ರಯಾಣಿಸಬೇಕಾಗಿದೆ. ಇದು ದರೋಡೆಕೋರರಿಗೆ ಅನುಕೂಲವಾಗಿದೆ. ಕೇರಳ ರಿಜಿಸ್ಟ್ರೇಶನ್ ವಾಹನಗಳನ್ನು ಗುರಿಯಿಟ್ಟು ಅವರು ದರೋಡೆಗೆ ಇಳಿಯುತ್ತಿದ್ದಾರೆ.ಭಾಷೆ ಸಮಸ್ಯೆಮತ್ತು ಹೆಚ್ಚು ಪರಿಚಯ ಇಲ್ಲದ್ದರಿಂದಾಗಿ ಹೆಚ್ಚಿನವರು ದೂರು ನೀಡಲು ಮುಂದೆ ಬರುವುದಿಲ್ಲೆಂದು ವರದಿ ತಿಳಿಸಿದೆ.