‘ಬರ ಅಧ್ಯಯನ’ ನ.2ಕ್ಕೆ ಕೇಂದ್ರದ ತಂಡ: ಕಾನೂನು ಸಚಿವ ಜಯಚಂದ್ರ
ಬೆಂಗಳೂರು, ಅ. 28: ರಾಜ್ಯದಲ್ಲಿನ ಭೀಕರ ಸ್ವರೂಪದ ಬರ ಪರಿಸ್ಥಿತಿ ಅಧ್ಯಯನಕ್ಕೆ ನ.2ರಂದು ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆ ಜಂಟಿ ಕಾರ್ಯದರ್ಶಿ ನೇತೃತ್ವದ ತಂಡ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ವಾಸ್ತವ ಸ್ಥಿತಿಯ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಿದ್ದು, ಆ ಬಳಿಕ ಬರ ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ಸೂಕ್ತ ನೆರವು ದೊರೆಯುವ ನಿರೀಕ್ಷೆಗಳಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ಇನ್ನೂ 30 ತಾಲೂಕುಗಳು ಬರದ ಪಟ್ಟಿಗೆ: ಮಳೆ ಕೊರತೆಯಿಂದ ಈಗಾಗಲೇ ರಾಜ್ಯದ 110ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ಆ ಪಟ್ಟಿಗೆ ಇನ್ನೂ 30 ತಾಲೂಕುಗಳು ಸೇರ್ಪಡೆಯಾಗಲಿವೆ. ರಾಜ್ಯದ 176 ತಾಲೂಕುಗಳ ಪೈಕಿ ಶೇ.85ರಷ್ಟು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.
ಬರ ಸ್ಥಿತಿ ಹಿನ್ನೆಲೆಯಲ್ಲಿ 12ಸಾವಿರ ಕೋಟಿ ರೂ.ಗಳಷ್ಟು ಬೆಳೆ ನಷ್ಟ ಸಂಭವಿಸಿದ್ದು, ಮಾರ್ಗಸೂಚಿಯನ್ವಯ 3,500ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ನೀಡಬೇಕು ಎಂದು ಕೋರಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆಂದು ಹೇಳಿದರು. 120ಕೋಟಿ ರೂ.ನಷ್ಟ: ಮಳೆ ಅಭಾವದ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿನ ಕೃಷಿಗೆ ನೀರು ಹರಿಸದ ಹಿನ್ನೆಲೆಯಲ್ಲಿ 88 ಸಾವಿರ ಹೆಕ್ಟೇರ್ ಬಿತ್ತನೆಯೇ ಆಗಿಲ್ಲ. ಹೀಗಾಗಿ ಪ್ರತಿ ಹೆಕ್ಟೇರ್‌ಗೆ 13,500ರೂ.ನಂತೆ ಒಟ್ಟು 120ಕೋಟಿ ರೂ. ಗಳಷ್ಟು ನಷ್ಟ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿನ ಬೆಳೆ ನಷ್ಟಕ್ಕೂ ಸೂಕ್ತ ಪರಿಹಾರ ಒದಗಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಈಗಾಗಲೇ ಬಿತ್ತನೆಯಾಗಿಯೂ ನೀರಿನ ಕೊರತೆ ಹಿನ್ನೆಲೆಯಲ್ಲಿ ಬೆಳೆ ನಷ್ಟ ಉಂಟಾಗಿದ್ದು, ಅದನ್ನು ಅಂದಾಜು ಮಾಡಲಾಗುವುದು ಎಂದರು.