ಉಕ್ಕಿನ ಸೇತುವೆ: ತನಿಖೆಗೆ ಆಗ್ರಹ
Update: 2016-10-29 00:12 IST
ಬೆಂಗಳೂರು, ಅ. 28: ಕಳಪೆ ಕಾಮಗಾರಿಯಿಂದಾಗಿ ಕಪ್ಪುಪಟ್ಟಿ ಸೇರಿಸಲು ಉದ್ದೇಶಿಸಿದ್ದ ಎಲ್ ಎಂಡ್ ಟಿ ಸಂಸ್ಥೆಗೆ ಉಕ್ಕಿನ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ನೀಡಿರುವದರಲ್ಲಿ ಹಲವು ಅನುಮಾನ ಮೂಡಿಸಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್.ವಿಜಯ್‌ಕುಮಾರ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಕಾಮಗಾರಿ ತಮಿಳುನಾಡು, ಪುದುಚೇರಿ, ತೆಲಂಗಾಣ ಸೇರಿದಂತೆ ಇತರೆ ಕಡೆ ನಡೆಸಿದ ಕಾಮಗಾರಿಯಲ್ಲಿ ಸಾಕಷ್ಟು ಕಳಪೆ ಮತ್ತು ಅವ್ಯವಹಾರ ನಡೆದಿರುವುದರಿಂದ ಎಲ್ ಅಂಡ್ ಟಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿತ್ತು ಎಂದು ತಿಳಿಸಿದರು.