ಶಿಕ್ಷಕರ ನಿವೃತ್ತಿ ವಿರೋಧಿಸಿ ವಿದ್ಯಾರ್ಥಿಗಳ ಧರಣಿ
ಬೆಂಗಳೂರು, ಅ.29: ಶಾಲಾ ಮುಖ್ಯೋಪಾಧ್ಯಾಯರೊಬ್ಬರ ಸೇವಾ ಅವಧಿಯನ್ನು ಮತ್ತೆರಡು ವರ್ಷಗಳ ಕಾಲ ವಿಸ್ತರಿಸಬೇಕೆಂದು ಪಟ್ಟು ಹಿಡಿದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ನಗರದ ಯಲಹಂಕ ಬಳಿಯ ಹುಣಸಮಾರನಹಳ್ಳಿ ಸರಕಾರಿ ಶಾಲೆಯಲ್ಲಿ ಮೂವತ್ತು ವರ್ಷಗಳಿಂದ ಮುಖ್ಯೋಪಾಧ್ಯಾಯ ವೃತ್ತಿಯಲ್ಲಿರುವ ಭದ್ರಯ್ಯ ಎಂಬುವರು ಅಕ್ಟೋಬರ್ ಅಂತ್ಯಕ್ಕೆ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದಾರೆ. ಆದರೆ ಅವರ ಸೇವೆಯನ್ನು ಕಳೆದುಕೊಳ್ಳಲು ಬಯಸದ ವಿದ್ಯಾರ್ಥಿಗಳು ಭದ್ರಯ್ಯರ ಸೇವಾ ಅವಧಿ ವಿಸ್ತರಿಸಬೇಕೆಂದು ಸರಕಾರವನ್ನು ಒತ್ತಾಯಿಸಿ ಈ ಧರಣಿ ನಡೆಸುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರು ಸಾಥ್ ನೀಡಿದರು.
ನಮ್ಮ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ ನಮ್ಮ ಊರಿನ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ ಶಿಕ್ಷಕರ ಅವಧಿಯನ್ನು ಮತ್ತೇರಡು ವರ್ಷಗಳ ಕಾಲ ವಿಸ್ತರಿಸಬೇಕೆಂದು ಇಪ್ಪತ್ತು ದಿನಗಳಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ವಿದ್ಯಾರ್ಥಿಗಳು ಶಾಲೆಯ ಎಲ್ಲ ಪ್ರವೇಶ ದ್ವಾರಗಳಿಗೂ ಬೀಗ ಜಡಿದು ಶಿಕ್ಷಕರನ್ನು ಶಾಲೆಯ ಒಳಗಡೆ ಬಿಡದೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮಕ್ಕಳ ಮನವೊಲಿಸುವ ಪ್ರಯತ್ನ ಮಾಡಿದರೂ ಅದು ಪ್ರಯೋಜನವಾಗಲಿಲ್ಲ. ಪಟ್ಟು ಹಿಡಿದ ವಿದ್ಯಾರ್ಥಿಗಳು ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ಸರ್ವಿಸ್ ರಸ್ತೆ ತಡೆದು ಪ್ರತಿಭಟಿಸಿದರು. ಹೀಗಾಗಿ ವಿದ್ಯಾರ್ಥಿಗಳ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಯಲಹಂಕ ಠಾಣಾ ಪೊಲೀಸರು, ಪ್ರತಿಭಟನಾ ನಿರತ ಗ್ರಾಮಸ್ಥರನ್ನು ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯೋಪಾಧ್ಯಾಯರ ಸೇವಾ ಅವಧಿಯನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದರು.