ಎಸ್‌ಡಿಪಿಐಗೆ ಯಾವುದೆ ಸಂಬಂಧವಿಲ್ಲ: ರಾಜ್ಯಾಧ್ಯಕ್ಷ ಅಬ್ದುಲ್‌ಹನ್ನಾನ್
ಬೆಂಗಳೂರು, ಅ.29: ಶಿವಾಜಿನಗರದ ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೂ ನಮ್ಮ ಪಕ್ಷಕ್ಕೂ ಯಾವುದೆ ರೀತಿಯ ಸಂಬಂಧವಿಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ.
ಶನಿವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಷಾ ಕಾಂಪ್ಲೆಕ್ಸ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಪಕ್ಷವು ಯಾವುದೆ ರೀತಿಯ ಹಿಂಸೆಗೆ ಪ್ರಚೋದನೆ ನೀಡುವುದಿಲ್ಲ. ರುದ್ರೇಶ್‌ರನ್ನು ಹತ್ಯೆ ಮಾಡಿದ್ದು ಅತ್ಯಂತ ಖಂಡನೀಯ. ಆದರೆ, ಈ ರೀತಿಯ ಯಾವುದೆ ಕೊಲೆಗಳು ನಡೆದರೂ ಬಿಜೆಪಿ ಮುಖಂಡರು ನಮ್ಮ ಪಕ್ಷದ ಹೆಸರನ್ನು ಪದೇ ಪದೇ ಬಳಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ವೈಯಕ್ತಿಕ ಕಾರಣಕ್ಕಾಗಿ ರುದ್ರೇಶ್‌ರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯ ವಿಚಾರಗಳ ಹಿನ್ನೆಲೆಯಲ್ಲಿ ಈ ಘಟನೆ ಜರುಗಿರುವ ಕುರಿತು ಮಾಹಿತಿಗಳು ಹೊರಬಂದಿವೆ. ಆದರೆ, ಆರೆಸೆಸ್ಸ್ ಹಾಗೂ ಬಿಜೆಪಿಯವರು ಈ ವಿಷಯವನ್ನು ರಾಷ್ಟ್ರೀಯಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಅಬ್ದುಲ್ ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ‘ಮೈಸೂರುಹುಲಿ’ ಟಿಪ್ಪು ಸುಲ್ತಾನ್ ಜಯಂತಿ ಸಂದರ್ಭದಲ್ಲಿ ಮಡಿಕೇರಿಯಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸರ ಲಾಠಿ ಚಾರ್ಜ್‌ನಿಂದ ತಪ್ಪಿಸಿಕೊಳ್ಳಲು ಓಡುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಆರೆಸೆಸ್ಸ್ ನಾಯಕ ಕುಟ್ಟಪ್ಪ ವಿಚಾರದಲ್ಲೂ ಇದೇ ರೀತಿ ಬಿಜೆಪಿಯವರು ವರ್ತಿಸಿದ್ದರು ಎಂದು ಅವರು ದೂರಿದರು.
ಸಂಘಪರಿವಾರ ಹಾಗೂ ಬಿಜೆಪಿಯ ಕೋಮುವಾದಿ ಮುಖವಾಡವನ್ನು ನಾವು ರಾಷ್ಟ್ರೀಯಮಟ್ಟದಲ್ಲಿ ಕಳಚುತ್ತಿದ್ದೇವೆ. ಆದುದರಿಂದ, ನಮ್ಮ ವಿರುದ್ಧ ಅನಗತ್ಯವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಮಹಾತ್ಮಗಾಂಧಿಯಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ಪೂಜಾರಿಯ ಹತ್ಯೆವರೆಗೆ ಇವರ ಹಿನ್ನೆಲೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅಬ್ದುಲ್ ಹನ್ನಾನ್ ಹೇಳಿದರು.
ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಲ್ಲಿ ರಾಜಕೀಯ ಜಾಗೃತಿ ಮೂಡಿಸುತ್ತಿದ್ದೇವೆ. ಸರಕಾರ ಹಾಗೂ ಜನಸಾಮಾನ್ಯರ ನಡುವಿನ ಸಂಪರ್ಕ ಕೊಂಡಿಯಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಕಲ್ಯಾಣ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಎಸ್‌ಡಿಪಿಐ ಕಳೆದ ಏಳು ವರ್ಷಗಳಿಂದ ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡುತ್ತಿದ್ದು, ನಮ್ಮ ಕಾರ್ಯಕರ್ತರಿಗೆ ತರಬೇತಿ ಹಾಗೂ ಕಾರ್ಯಾಗಾರಗಳ ಮೂಲಕ ರಾಜಕೀಯವಾಗಿ ಮಾರ್ಗದರ್ಶನ ಮಾಡಲಾಗುತ್ತಿದೆ. ಪ್ರಸ್ತುತ ನಾವು 73 ಗ್ರಾಮ ಪಂಚಾಯಿತಿ ಸದಸ್ಯರು, 21 ಕೌನ್ಸಿಲರ್‌ಗಳನ್ನು ಹೊಂದಿದ್ದೇವೆ ಎಂದು ಅಬ್ದುಲ್ ಹನ್ನಾನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಫಯಾಝ್ ಅಹ್ಮದ್, ಉಪಾಧ್ಯಕ್ಷ ಗಂಗಪ್ಪ, ಬಿಬಿಎಂಪಿ ಸದಸ್ಯ ಮುಜಾಹಿದ್ ಪಾಷ, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಎಸ್.ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.