ದೀಪಾವಳಿ ಸಡಗರ; ಎಲ್ಲೆಂದರಲ್ಲಿ ಕಸದ ರಾಶಿ
ಬೆಂಗಳೂರು,ಅ.31: ಬೆಳಕಿನ ಹಬ್ಬ ದೀಪಾವಳಿಯಿಂದ ನಗರದ ಬೀದಿ ಬೀದಿಗಳಲ್ಲಿ ಸುಟ್ಟ ಪಟಾಕಿಯ ಕಸ, ಹೂವು ಮತ್ತು ಬಾಳೆ ದಿಂಡಿನ ಹಸಿ ತ್ಯಾಜ್ಯ ನಗರದ ರಸ್ತೆಗಳ ಇಕ್ಕೆಲಗಳಲ್ಲಿ ರಾಶಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ.
ನರಕ ಚತುರ್ದಶಿ ಮತ್ತು ದೀಪಾವಳಿ ಆಚರಣೆಯ ಪೂಜೆಗೆ ಬಳಸಿದ್ದ ಪೂಜಾ ಸಾಮಗ್ರಿಗಳ ತ್ಯಾಜ್ಯ, ಬಾಡಿದ ಹೂವು, ಹೂವಿನ ಹಾರ, ಬಾಳೆ ದಿಂಡು, ಬಾಳೆ ಎಲೆಗಳ ತ್ಯಾಜ್ಯ ನಗರದ ವಿವಿಧ ಪ್ರದೇಶಗಳಲ್ಲಿ ಕಂಡುಬಂತು. ಕಸದ ರಾಶಿಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರು ಪರದಾಡುವಂತಾಯಿತು.
ದಸರಾ ಹಬ್ಬದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಕ್ಕಿಂತ ದೀಪಾವಳಿ ಹಬ್ಬದ ತ್ಯಾಜ್ಯ ಕೊಂಚ ಕಡಿಮೆಯಾದರೂ, ಮಾಮೂಲಿ ದಿನಗಳಿಗಿಂತ ಶೇ.20ರಷ್ಟು ಕಸ ಹೆಚ್ಚಿದೆ. ಸಾಲು ಸಾಲು ರಜೆಗಳಿರುವದರಿಂದ ಪೌರ ಕಾರ್ಮಿಕರು ಕಸ ತೆಗೆಯಲು ಮುಂದಾಗಿಲ್ಲ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಶ್ನಿಸಿದರೆ, ಇನ್ನೆರಡು ದಿನಗಳಲ್ಲಿ ನಗರದ ಕಸವನ್ನು ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ನಗರದ ಅವೆನ್ಯೂ ರಸ್ತೆ, ಕಬ್ಬನ್ ಪೇಟೆ, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆಯಲ್ಲಿ ಪೌರ ಕಾರ್ಮಿಕರು ಕಸ ವಿಲೇವಾರಿಯಲ್ಲಿ ತೊಡಗಿದ್ದರು. ಮಾರಾಟವಾಗದೆ ಉಳಿದ ಬಾಳೆ ದಿಂಡು, ತುಳಸಿ, ಮಾವಿನ ಸೊಪ್ಪನ್ನು ವ್ಯಾಪಾರಿಗಳು ಸ್ಥಳದಲ್ಲೇ ಬಿಟ್ಟುಹೋಗಿ ರುವುದರಿಂದ ಪೌರ ಕಾರ್ಮಿಕರಿಗೆ ತಲೆನೋವಾಗಿ ಪರಿಣಮಿಸಿದೆ.ಾನ್ಸನ್‌ಮಾರುಕಟ್ಟೆ, ರಸಲ್ ಮಾರುಕಟ್ಟೆ, ಮಡಿವಾಳ, ಜಯನಗರ ಮಾರುಕಟ್ಟೆಗಳು ಕಸದ ರಾಶಿಯಿಂದ ಆವೃತ್ತವಾಗಿದೆ. ನಗರದ ಬಹುತೇಕ ರಸ್ತೆಗಳಲ್ಲಿ ಕಸದ ರಾಶಿ ಹರಡಿದ್ದು, ಬಿಬಿಎಂಪಿ ಅಧಿಕಾರಿಗಳು ಕಸದ ತೆರವಿಗೆ ಇನ್ನೂ ಎಚ್ಚೆತ್ತುಕೊಂಡಿಲ್ಲ.
ಈ ಮಧ್ಯೆ ಮನೆಗಳಲ್ಲೂ ತ್ಯಾಜ್ಯ ಹೆಚ್ಚುವರಿಯಾಗಿ ಉತ್ಪತ್ತಿಯಾಗಿದ್ದು, ರಜೆ ಇರುವುದರಿಂದ ಕಸದ ಕೈಗಾಡಿಗಳು ಕೂಡ ಬಾರದಿರುವುದರಿಂದ ಜನ ಸಾಮಾನ್ಯರು ರಸ್ತೆ ಬದಿಯಲ್ಲೇ ಕಸವನ್ನು ಸುರಿದಿದ್ದಾರೆ. ಇದು ಮತ್ತಷ್ಟು ಕಸದ ಸಮಸ್ಯೆಗೆ ಕಾರಣವಾಗಿದೆ.