ಐದು ವರ್ಷಗಳ ಬಳಿಕ ಬಳ್ಳಾರಿಗೆ ಜನಾರ್ದನ ರೆಡ್ಡಿ!
ಬಳ್ಳಾರಿ, ನ. 1: ಪುತ್ರಿಯ ವಿವಾಹದ ಹಿನ್ನೆಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೋರ್ಟ್ ಅನುಮತಿ ಮೇರೆಗೆ ಐದು ವರ್ಷಗಳ ಬಳಿಕ ಬಳ್ಳಾರಿಗೆ ತೆರಳಿದ್ದು, ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಿದರು.
ರಾಜ್ಯಾದ್ಯಂತ 61ನೆ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮುಳುಗಿರುವ ವೇಳೆ ಜನಾರ್ದನ ರೆಡ್ಡಿ, ಕನ್ನಡದ ಶಾಲು ಹೊದ್ದು ಬಳ್ಳಾರಿ ನಗರ ಪ್ರವೇಶ ಮಾಡಿದ್ದು, ವಿಶೇಷವಾಗಿತ್ತು. ಈ ವೇಳೆ ಬಳ್ಳಾರಿ ಹೊರ ವಲಯದಲ್ಲಿ ಅವರ ಅಭಿಮಾನಿಗಳು ಹಾರ-ತುರಾಯಿಗಳೊಂದಿಗೆ ಆತ್ಮೀಯವಾಗಿ ಬರ ಮಾಡಿಕೊಂಡರು.ಲ್ಲಿಂದ ವಿಶೇಷ ಮೆರವಣಿಗೆ ಮೂಲಕ ನಗರದ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ ಮತ್ತವರ ಅಭಿಮಾನಿಗಳು ಅಲ್ಲಿಂದ ಅವರ ಮನೆಗೆ ಮೆರವಣಿಗೆಯಲ್ಲೇ ತೆರಳಿದರು. ಮಾರ್ಗದುದ್ದಕ್ಕೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರದ ಸಿರಗುಪ್ಪ ರಸ್ತೆಯಲ್ಲಿನ ತಮ್ಮ ನಿವಾಸಕ್ಕೆ ರೆಡ್ಡಿ ತೆರಳಿದರು.
ರೆಡ್ಡಿ ತಮ್ಮ ಪುತ್ರಿ ವಿವಾಹದ ಹಿನ್ನೆಲೆಯಲ್ಲಿ ನ.1ರಿಂದ 21ರ ವರೆಗೆ 20 ದಿನಗಳು ಬಳ್ಳಾರಿಯಲ್ಲಿರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಐದು ವರ್ಷಗಳ ಬಳಿಕ ಇದೇ ಮೊದಲಬಾರಿಗೆ ಬಳ್ಳಾರಿ ನಗರಕ್ಕೆ ತೆರಳಿದ್ದು ವಿಶೇಷವಾಗಿತ್ತು.