‘ರೈತರ ಬೆಳೆ ಸಾಲ ಮನ್ನಾ-ವಸೂಲಿ ಮುಂದೂಡಿಕೆ’ ಸರಕಾರದ ಚಿಂತನೆ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ
ಬೆಂಗಳೂರು, ನ. 4: ರಾಜ್ಯದಲ್ಲಿನ 139ಬರ ಪೀಡಿತ ತಾಲೂಕುಗಳ ರೈತರು ಸಹಕಾರ ಸಂಘಗಳಿಂದ ಪಡೆದ ಸಾಲದ ಮೊತ್ತದ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಬಂದ ಬಳಿಕ ಸಾಲಮನ್ನಾ ಅಥವಾ ವಸೂಲಿ ಅವಧಿ ಮುಂದೂಡಿಕೆ ಸಂಬಂಧ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಅವರು, ಬೆಳೆ ಸಾಲ ಪಡೆದಿರುವ ರೈತರು ಮತ್ತು ಎಷ್ಟು ಮೊತ್ತದ ಸಾಲ ಪಡೆದಿದ್ದಾರೆಂಬ ಮಾಹಿತಿ ಪಡೆದ ಬಳಿಕ ಸಾಲ ಮನ್ನಾ ಅಥವಾ ವಸೂಲಿ ಅವಧಿ ಮುಂದೂಡಿಕೆ ಸಂಬಂಧ ಚಿಂತನೆ ನಡೆಸಲಾಗುವುದು ಎಂದರು.
ಸಾಲಮನ್ನಾ ಅಥವಾ ವಸೂಲಿ ಮುಂದೂಡಿಗೆ ಸಂಬಂಧ ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದ್ದು, ರೈತರ ಬೆಲೆ ಸಾಲಮನ್ನಾದಿಂದ ಸರಕಾರದ ಬೊಕ್ಕಸಕ್ಕೆ ಆಗುವ ನಷ್ಟವನ್ನು ತುಂಬಿಕೊಳ್ಳಲು ಸಂಪನ್ಮೂಲ ಕ್ರೊಢೀಕರಣ ಸೇರಿದಂತೆ ಸಾಧಕ- ಬಾಧಕಗಳ ಬಗ್ಗೆ ಸರಕಾರ ಗಮನಹರಿಸಿದೆ ಎಂದರು.
ಸರಕಾರಕ್ಕೆ ಸವಾಲು: ರಾಜ್ಯದ 176 ತಾಲೂಕುಗಳ ಪೈಕಿ ಈಗಾಗಲೇ 110 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ಇನ್ನೂ 29 ತಾಲೂಕುಗಳನ್ನು ಬರ ಪೀಡಿತ ಎಂದು ಗುರುತಿಸಲಾಗಿದೆ. ಒಟ್ಟಾರೆ 16 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.
ಮುಂದನ ಫಸಲು ಬರುವವರೆಗೂ ಭೀಕರ ಸ್ವರೂಪದ ಬರ ಸ್ಥಿತಿ ಎದುರಿಸುವುದು ಸರಕಾರಕ್ಕೆ ಸವಾಲಾಗಿದೆ. ಆ ಹಿನ್ನೆಲೆಯಲ್ಲಿ ತಕ್ಷಣವೇ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ, ಕುಡಿಯುವ ನೀರು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ರಾಜ್ಯ ಸರಕಾರ ಕುಡಿಯುವ ನೀರಿಗಾಗಿ 300 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದು, ಅಗತ್ಯವಿರುವ ಕಡೆಗಳಲ್ಲಿ ಕೊಳವೆ ಬಾವಿ ಕೊರೆಸುವುದು, ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲ ಜನ ವಸತಿಗಳಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದರು.
4500ಕೋಟಿ ರೂ.ಗಳಿಗೆ ಮನವಿ: ರಾಜ್ಯದಲ್ಲಿ ಬರ ಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಮಾರ್ಗಸೂಚಿಯನ್ವಯ ಕನಿಷ್ಟ 4500ಕೋಟಿ ರೂ.ಬಿಡುಗಡೆ ಮಾಡಬೇಕು. ಅಲ್ಲದೆ, ಕಲಬುರ್ಗಿ, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ನೆರೆ ಹಾವಳಿಗೂ ಅಗತ್ಯ ನೆರವು ನೀಡಬೇಕೆಂದು ಕೋರಿದರು.
ಹೆಚ್ಚಿನ ನೆರವಿನ ನಿರೀಕ್ಷೆ: ಕೇಂದ್ರದಿಂದ ಆಗಮಿಸಿರುವ ಬರ ಅಧ್ಯಯನ ತಂಡ ಈಗಾಗಲೇ ವಿವಿಧ ಜಿಲ್ಲೆಗಳ ವಾಸ್ತವ ಪರಿಸ್ಥಿತಿ ಅಧ್ಯಯನ ನಡೆಸಿದ್ದು, ಶೀಘ್ರದಲ್ಲೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ಕೇಂದ್ರ ಸರಕಾರ ಸೂಕ್ತ ಪರಿಹಾರ ನೀಡುವ ನಿರೀಕ್ಷೆಯಿದೆ ಎಂದು ಅವರು ವಿಶ್ವಾಸವ್ಯಕ್ತಪಡಿಸಿದರು.
‘ಬರ ಸ್ಥಿತಿ ಹಿನ್ನೆಲೆಯಲ್ಲಿ ರೈತರ ಗುಳೆ ತಪ್ಪಿಸಲು ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಟಾನ ಆಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿರುವ ಯೋಜನೆಗೆ ಕೇಂದ್ರ ನಿರ್ಲಕ್ಷ ವಹಿಸದೆ ಕಾಲ-ಕಾಲಕ್ಕೆ ಕೂಲಿ ಹಣ ಬಿಡುಗಡೆ ಮಾಡಬೇಕು. ಇದರಿಂದ ಗ್ರಾಮೀಣ ಪ್ರದೇಶದ ಬಡ ಕೂಲಿಗಳಿಗೆ ಅನುಕೂಲ ಆಗಲಿದೆ’
-ಕಾಗೋಡು ತಿಮ್ಮಪ್ಪ ಕಂದಾಯ ಸಚಿವ