×
Ad

ಟಿಪ್ಪು ಜಯಂತಿ ವಿರೋಧಕ್ಕೆ ತೀವ್ರ ಖಂಡನೆ: ನ.7ಕ್ಕೆ ಕೋಮು ಸೌಹಾರ್ದ ವೇದಿಕೆ ಪ್ರತಿಭಟನೆ

Update: 2016-11-04 21:18 IST

 ಬೆಂಗಳೂರು, ನ. 4: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ಕುತಂತ್ರವನ್ನು ಖಂಡಿಸಿ ನ.7ರಂದು ಇಲ್ಲಿನ ಪುರಭವನದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ಕೋಮು ಸೌಹಾರ್ದ ವೇದಿಕೆ ತೀರ್ಮಾನಿಸಿದೆ.
   ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಕೇಂದ್ರ ಸಮಿತಿಯ ಸದಸ್ಯೆ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿ ವಿರೋಧದ ನೆಪದಲ್ಲಿ ರಾಜ್ಯದಲ್ಲಿ ರಕ್ತಪಾತ ಹರಿಸಲು ಬಿಜೆಪಿ ಸಂಘಪರಿವಾರಗಳ ಒಳಸಂಚು ರೂಪಿಸಿವೆ. ಇವರ ಕುತಂತ್ರಕ್ಕೆ ಹಿಂದುಳಿದ ವರ್ಗದ ಯುವಕರು ಕಿವಿಗೊಡಬಾರದು ಎಂದು ಕರೆ ಕೊಟ್ಟರು.

ಟಿಪ್ಪು ಜಯಂತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಟಿಪ್ಪ ಜಯಂತಿಯನ್ನು ಆಚರಿಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ಮತ್ತು ಸಂಘಪರಿವಾರ ರಾಜ್ಯದಲ್ಲಿ ಶಾಂತಿಯನ್ನು ಕದಡಲು ಒಳಸಂಚು ರೂಪಿಸಿವೆ.ಅಲ್ಲದೆ ಟಿಪ್ಪುವಿನ ಕುರಿತು ರಾಜ್ಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಟಿಪ್ಪು ಜಯಂತಿ ವಿರೋಧಿಸಿ ನ.8ರಂದು ಬಿಜೆಪಿ, ಸಂಘಪರಿವಾರ ಪ್ರತಿಭಟನೆ ನಡೆಸಲು ಚಿಂತಿಸಿವೆ. ಈ ಪ್ರತಿಭಟನೆ ದಿನದಂದು ಮತ್ತು ಜಯಂತಿ ದಿನದಂದು ಹಿಂಸಾಚಾರ ನಡೆಯುವ ಸಾಧ್ಯತೆಗಳು ಇವೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಸರಕಾರ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.

ಐತಿಹಾಸಿಕ ದಾಖಲೆಗಳು ಹೈಕೋರ್ಟ್‌ಗೆ ಸಲ್ಲಿಕೆ: 
ಟಿಪ್ಪು ಜಯಂತಿ ವಿರೋಧಿಸಿ ಅರ್ಜಿದಾರ ಮಂಜುನಾಥ್ ಅವರ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಟಿಪ್ಪು ಜಯಂತಿಯನ್ನು ಏಕೆ ಆಚರಿಸಬೇಕು? ಅವರೇನು ಸ್ವಾತಂತ್ರ ಹೋರಾಟಗಾರರ ಎಂದು ಪ್ರಶ್ನಿಸಿದೆ. ಟಿಪ್ಪು ಸುಲ್ತಾನ್ ಜಯಂತಿ ಏಕೆ ಆಚರಿಸಬೇಕು ಎಂಬ ಅಂಶಗಳನ್ನು ಐತಿಹಾಸಿಕ ದಾಖಲೆಗಳನ್ನು ಇಂದು ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಒಂದು ಹೆಣ ಬಿದ್ದರೆ ಒಬ್ಬ ಬಿಜೆಪಿ ಶಾಸಕ ಗೆದ್ದಂತೆ:ಟಿಪ್ಪು ಜಯಂತಿ ಸಮಯದಲ್ಲಿ ಒಂದು ಹೆಣಬಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಶಾಸಕ ಗೆದ್ದಂತೆ. ಹೀಗಾಗಿ ರಕ್ತ ಚೆಲ್ಲಿಯಾದರೂಟಿಪ್ಪು ಜಯಂತಿ ನಿಲ್ಲಿಸಬೇಕೆಂದು ಬಿಜೆಪಿಯ ಮುಖಂಡರೊಬ್ಬರು ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ. ಇವರ ಕುತಂತ್ರಕ್ಕೆ ಶೂದ್ರ, ದಲಿತ, ಹಿಂದುಳಿದ ವರ್ಗದ ಯುವಕರು ಬಲಿಯಾಗಬಾರದು ಎಂದು ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಹೇಳಿದರು.

ಸಂಘ ಪರಿವಾರದ ಷಡ್ಯಂತರದ ಬಗ್ಗೆ ಯುವಕರು ಜಾಗೃತರಾಗಬೇಕು ಮತ್ತು ಮುಸ್ಲಿಮ್ ಯುವಕರು ಟಿಪ್ಪು ಜಯಂತಿ ವೇಳೆಯಲ್ಲಿ ತಾಳ್ಮೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ ಅವರು, ನ.7ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ಮುತ್ತಹಿದ್ ಮಹಾಝ್‌ನ ಮುಖಂಡ ಎಸ್.ಎಂ.ಇಕ್ಬಾಲ್,ಆರ್‌ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

‘ದೇಶದ ಯಾವೊಬ್ಬ ಸ್ವಾತಂತ್ರ ಹೋರಾಟಗಾರನ ಜಯಂತಿಯನ್ನು ಆಚರಿಸದ ಬಿಜೆಪಿ- ಸಂಘ ಪರಿವಾರ ಇದೀಗ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಬಾರದೆಂದು ಹೇಳಲು ಕನಿಷ್ಟ ನೈತಿಕತೆಯೂ ಅವರಿಗಿಲ್ಲ. ಟಿಪ್ಪು ಸುಲ್ತಾನ್ ಜಯಂತಿ ವಿರೋಧ, ಸಮಾನತೆಯ ಸಂವಿಧಾನಕ್ಕೆ ಮಾಡುವ ಅಪಮಾನ’
-ಗೌರಿ ಲಂಕೇಶ್ ಹಿರಿಯ ಪತ್ರಕರ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News