ಅಂಬೇಡ್ಕರ್‌ ರ ವಾರಸುದಾರರಾಗೋಣ: ಸಿದ್ದರಾಮಯ್ಯ

Update: 2016-11-05 16:50 GMT

ಬೆಂಗಳೂರು, ನ.5: ನಾವೆಲ್ಲರೂ ಅಂಬೇಡ್ಕರ್ ವಾರಸುದಾರರಾಗುವ ಮೂಲಕ ಅವರ ಸಾಮಾಜಿಕ ನ್ಯಾಯದ ರಥವನ್ನು ಮುಂದೆ ಎಳೆದುಕೊಂಡು ಹೋಗೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಎಚ್‌ಎಎಲ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕಾರ್ಮಿಕರ, ಅಧಿಕಾರಿಗಳ ಸಂಘ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೆ ಜಯಂತಿ ಹಾಗೂ ಜ್ಯೋತಿ ಬಾಫುಲೆ ಕೌಶಲ್ಯ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಜಾತಿವಾದಿಗಳು, ಯಥಾಸ್ಥಿತಿ ವಾದಿಗಳು ಅಂಬೇಡ್ಕರ್ ಹೆಸರು ಹೇಳಿಕೊಂಡು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ಬಗ್ಗೆ ಅಂಬೇಡ್ಕರ್ ವಾರಸುದಾರರು ಎಚ್ಚರದಿಂದಿ ರಬೇಕು. ಅಂಬೇಡ್ಕರ್ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಕೋಮುವಾದಿ ಶಕ್ತಿಗಳಿಗೆ ಸರಿಯಾಗಿ ಪಾಠ ಕಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಇತ್ತೀಚೆಗೆ ಕೆಲವರು ಎಸ್ಸಿ, ಎಸ್ಟಿ ಮೋರ್ಚಾ ರಚಿಸಿ ಅಂಬೇಡ್ಕರ್ ಜಯಂತಿ, ದೊಡ್ಡ ಸಮ್ಮೇಳನ ಮಾಡಿ ವೀರಾವೇಶದ ಭಾಷಣ ಮಾಡುತ್ತಿದ್ದಾರೆ. ನಮ್ಮ ಕೆಲವರು ಸ್ವಾರ್ಥಕ್ಕಾಗಿ ಅಲ್ಲಿಗೆ ಹೋಗುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಯಾರು ಸಾಮಾಜಿಕ ನ್ಯಾಯದ ಪರ ಇದ್ದಾರೆ, ಯಾರು ಯಥಾಸ್ಥಿತಿ ವಾದಿಗಳು ಎಂಬುದನ್ನು ದಲಿತ ವಿದ್ಯಾವಂತರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅವರು ಆಶಿಸಿದರು.

ನಮ್ಮ ಸರಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಅದಕ್ಕಾಗಿಯೇ ಮೊದಲ ಬಾರಿಗೆ ಜನಸಂಖ್ಯೆಗೆ ಅನುಗುಣವಾಗಿ ಯೋಜನಾ ವೆಚ್ಚದಲ್ಲಿ 19,542 ಕೋಟಿ ರೂ. ದಲಿತರಿಗಾಗಿ ಮೀಸಲಿಡಲಾಗಿದೆ. ಈ ಹಣವನ್ನು ಅಧಿಕಾರಿಗಳು ಕಡ್ಡಾಯವಾಗಿ ದಲಿತರ ಅಭಿವೃದ್ಧಿಗೆ ಖರ್ಚು ಮಾಡಬೇಕು, ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಎಚ್ಚರಿಸಿದರು.

 ಡಾ. ಬಿ.ಆರ್. ಅಂಬೇಡ್ಕರ್ ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾದ ನಾಯಕರಲ್ಲ. ಜಾತಿ ವ್ಯವಸ್ಥೆಯ ಕಾರಣಕ್ಕೆ ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಎಲ್ಲರಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದ ಮಹಾನ್ ನಾಯಕ. ಒಂದು ವೇಳೆ ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದೇ ಹೋಗಿದ್ದರೆ, ಭಾರತದ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿರುತ್ತಿರಲಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎಚ್‌ಎಎಲ್ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ದಲಿತ ನೌಕರರು ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಂಬೇಡ್ಕರ್ ಹಾಕಿಕೊಟ್ಟಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಕಾರಣವಾಗಿದೆ. ಜಗತ್ತಿಗೇ ಮಾದರಿಯಾದ ಸಂವಿಧಾನ ಕೊಟ್ಟ ಅಂಬೇಡ್ಕರ್ ಇನ್ನಷ್ಟು ವರ್ಷಗಳ ಕಾಲ ಜೀವಿಸಿದ್ದರೆ, ಭಾರತ ಇನ್ನಷ್ಟು ಪರಿವರ್ತನೆಯಾಗುತ್ತಿತ್ತು ಎಂದು ಅವರು ಆಶಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ಅಸ್ತಿತ್ವದಲ್ಲಿದೆ. ಅಂಬೇಡ್ಕರ್ ಜಾತಿ ವ್ಯವಸ್ಥೆ ಮತ್ತು ಹಿಂದೂ ಧರ್ಮದ ಅನಾಚಾರದ ವಿರುದ್ಧ ಬೇಸತ್ತು ಮನುಸ್ಮತಿ ಸುಟ್ಟುಹಾಕಿ ಬೌದ್ಧ ಧರ್ಮ ಸ್ವೀಕರಿಸಿದರು. ಇಂದಿನ ವಿದ್ಯಾವಂತ ದಲಿತರು ಅಂಬೇಡ್ಕರ್ ಸಾಹಿತ್ಯವನ್ನು ಓದಿಕೊಂಡು ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಬಿಎಸ್ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್, ಎಚ್‌ಎಎಲ್ ಅಧ್ಯಕ್ಷ ಟಿ. ಸುವರ್ಣ ರಾಜು, ಸಂಸದ ಚಂದ್ರಪ್ಪ, ಶಾಸಕ ಬೈರತಿ ಬಸವರಾಜು, ಮತ್ತಿತರರು ಉಪಸ್ಥಿತರಿದ್ದರು.

ಡಾ. ಬಿ.ಆರ್. ಅಂಬೇಡ್ಕರ್ ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾದ ನಾಯಕರಲ್ಲ. ಜಾತಿ ವ್ಯವಸ್ಥೆಯ ಕಾರಣಕ್ಕೆ ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಎಲ್ಲರಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದ ಮಹಾನ್ ನಾಯಕ. ಒಂದು ವೇಳೆ ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದೇ ಹೋಗಿದ್ದರೆ, ಭಾರತದ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿರುತ್ತಿರಲಿಲ್ಲ.
 -ಸಿದ್ದರಾಮಯ್ಯ,  ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News