ನ.14ರಿಂದ ಮಹಿಳಾ ಉದ್ಯಮಶೀಲತೆ ಸಮಾವೇಶ: ಸಚಿವ ಆರ್.ವಿ. ದೇಶಪಾಂಡೆ
ಬೆಂಗಳೂರು, ನ. 7: ಏಷ್ಯಾದ ಅತಿದೊಡ್ಡ ಮಹಿಳಾ ಉದ್ಯಮ ಶೀಲತೆ ಮತ್ತು ಆರ್ಥಿಕ ಸಬಲೀಕರಣ ಸಮಾವೇಶ (ಥಿಂಕ್ ಬಿಗ್)ವನ್ನು ನ.14ರಿಂದ ಎರಡು ದಿನಗಳ ಕಾಲ ತುಮಕೂರು ರಸ್ತೆಯಲ್ಲಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಗಳ ಜತೆ ಮಾತನಾಡಿದ ಅವರು, ಏಶ್ಯಾದ ಮೊಟ್ಟ ಮೊದಲ ಮಹಿಳಾ ಉದ್ದಿಮೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಈಗಾಗಲೇ ರಾಜ್ಯದ 467 ಮಹಿಳಾ ಉದ್ದಿಮೆದಾರರು ಸೇರಿದಂತೆ ಒಟ್ಟು 1700 ಮಂದಿ ನೋಂದಾಯಿಸಿಕೊಂಡಿದ್ದಾರೆ.
ಮಹಿಳೆಯರು ತಮ್ಮ ಕೈಗಾರಿಕೆಗಳಲ್ಲಿ ಉತ್ಪಾದಿಸಿದ ವಿವಿಧ ಉತ್ಪನ್ನಗಳ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಈಗಾಗಲೇ 265 ಮಳಿಗೆಗಳು ನೋಂದಾಯಿಸಿವೆ. ಪ್ರದರ್ಶನದಲ್ಲಿ ರಾಜ್ಯದ ಮಹಿಳೆಯರು ಸೇರಿದಂತೆ 4 ಸಾವಿರ ಮಹಿಳಾ ಉದ್ದಿಮೆದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಮಾವೇಶದಲ್ಲಿ ಮಹಿಳಾ ಉದ್ಯಮಿಗಳ ಮಾರುಕಟ್ಟೆ, ಹಣಕಾಸು ಮಾರ್ಗ, ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವುದು ಸೇರಿದಂತೆ ಮಹಿಳೆಯರ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ವಿಚಾರ ಸಂಕಿರಣ, ಸಂವಾದ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನ.14ರ ಬೆಳಗ್ಗೆ 10:30ಕ್ಕೆ ಸಿಎಂ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಮ್, ಉದ್ಯಮಿ ಕಿರಣ್ ಮಜೂಂದಾರ್ ಸೇರಿದಂತೆ ದೇಶ-ವಿದೇಶಗಳ ಮಹಿಳಾ ಉದ್ಯಮಿ ಗಳು ಪಾಲ್ಗೊಳ್ಳಲಿದ್ದಾರೆ ಎಂದರು. ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಕೈಗಾರಿಕಾ ಇಲಾಖೆ ಆಯುಕ್ತ ಗೌರವ್ ಗುಪ್ತ ಸೇರಿದಂತೆ ಇನ್ನಿತರ ಅಕಾರಿಗಳು ಉಪಸ್ಥಿತರಿದ್ದರು.
ನಾಲ್ಕು ಮಹಿಳಾ ಉದ್ಯಮ ಪಾರ್ಕ್
ಧಾರವಾಡ, ಮೈಸೂರು, ಯಾದಗಿರಿ ಹಾಗೂ ರಾಮನಗರ ಜಿಲ್ಲೆಯ ಹಾರೋಹಳ್ಳಿ ಯಲ್ಲಿ ನಾಲ್ಕು ಉದ್ದಿಮೆದಾರರ ಪಾರ್ಕ್ ಸ್ಥಾಪನೆಗೆ ಮುಂದಾಗಿದ್ದು, ಈಗಾಗಲೇ ಹಾರೋಹಳ್ಳಿ ಕೆಲಸ ಪ್ರಾರಂಭವಾಗಿದೆ. ನೂತನ ಕೈಗಾರಿಕೆ ನೀತಿಯನ್ವಯ ಮಹಿಳೆ ಉದ್ದಿಮೆದಾರರನ್ನು ಪ್ರೋತ್ಸಾಹಿಸಿ, ಉತ್ತೇಜಿಸಲು ವಿಶೇಷ ಪ್ಯಾಕೇಜ್ ನೀಡಲಾಗುವುದು ಎಂದು ತಿಳಿಸಿದರು.