ವಾಯುಪಡೆಯಿಂದ ರಾಜಕಾಲುವೆ ಒತ್ತುವರಿ ಸ್ಥಳ ಪರಿಶೀಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ನ.7: ನಗರದ ಜಾಲಹಳ್ಳಿಯ ಸೈಂಟ್ ಲಾರೆನ್ಸ್ ಶಾಲೆ ಸಮೀಪ ಭಾರತೀಯ ವಾಯುಪಡೆ ರಾಜಕಾಲುವೆ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಸಿದಂತೆ ಸ್ಥಳ ಪರಿಶೀಲನೆ ನಡೆಸಲು ಜಿಲ್ಲಾಡಳಿತಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಸಂಬಂಧ ಜಾಲಹಳ್ಳಿಯ ಶಾರದಾಂಬಾ ನಗರದ ವೆಂಕಟೇಶ ನಂಜಪ್ಪಹಾಗೂ ಇತರ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಲೇವಾರಿ ಮಾಡಿದೆ.
ಬೆಂಗಳೂರು ನಗರ ಜಿಲ್ಲಾಕಾರಿ ತಜ್ಞರ ಸಮಿತಿ ಯೊಂದನ್ನು ರಚಿಸಬೇಕು. ಈ ಸಮಿತಿಯು ಸ್ಥಳ ಪರಿಶೀಲನೆ ನಡೆಸಬೇಕು. ಒಂದು ವೇಳೆ ಅರ್ಜಿದಾರರು ಆರೋಪಿಸಿರುವ ಸ್ಥಳದಲ್ಲಿ ಯಾವುದೇ ಒತ್ತುವರಿ ಆಗಿರುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ನ್ಯಾಯಪೀಠವು ಆದೇಶಿಸಿದೆ. ಅರ್ಜಿದಾರರ ಪರ ಎಲ್.ವಿಜಯಕುಮಾರ್ ವಕಾಲತ್ತು ವಹಿಸಿದ್ದರು.