×
Ad

ಶಿವಲಿಂಗಮೂರ್ತಿ ಗಣಿ ಅಕ್ರಮ ಪ್ರಕರಣ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್

Update: 2016-11-08 00:08 IST

ಬೆಂಗಳೂರು, ನ.7: ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಾಲಕತ್ವದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಗೆ(ಎಎಂಸಿ) ಅಕ್ರಮವಾಗಿ ಗಣಿ ಗುತ್ತಿಗೆ ಕೊಡಿಸಿದ ಆರೋಪದಿಂದ ಐಎಎಸ್ ಅಕಾರಿ ಶಿವಲಿಂಗಮೂರ್ತಿ ಅವರನ್ನು ಮುಕ್ತಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ಶಿವಲಿಂಗಮೂರ್ತಿ ವಿರುದ್ಧ ಇರುವ ಆರೋಪಗಳ ಕುರಿತು ಮರು ವಿಚಾರಣೆ ನಡೆಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಶಿವಲಿಂಗಮೂರ್ತಿ ಅವರನ್ನು ಆರೋಪಮುಕ್ತಗೊಳಿಸಿದ ಸಿಬಿಐ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ತನಿಖಾಕಾರಿಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

 
  ಪ್ರಕರಣವೇನು?: ಐಎಎಸ್ ಅಕಾರಿ ಶಿವಲಿಂಗ ಮೂರ್ತಿ ಅವರು ರಾಜ್ಯ ಸರಕಾರ ಅನುಮತಿ ಪಡೆಯದೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತವರ ಪತ್ನಿ ಲಕ್ಷ್ಮೀ ಅರುಣಾ ಅವರಿಗೆ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ(ಎಎಂಸಿ) ಗಣಿ ಗುತ್ತಿಗೆ ಹಕ್ಕು ಮತ್ತು ಕಂಪೆನಿಯಲ್ಲಿ ಪಾಲುದಾರಿಕೆ ಕೊಡಿಸಿದ್ದಾರೆ. ಸರಕಾರಕ್ಕೆ ವಂಚನೆ ಮಾಡುವ ಉದ್ದೇಶದಿಂದಲೇ ಈ ಕೆಲಸ ಮಾಡಲಾಗಿತ್ತು ಎಂದು ಸಿಬಿಐ ತನಿಖಾಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ದರೆ, ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಶಿವಲಿಂಗಮೂರ್ತಿ ಅವರನ್ನು ಆರೋಪಮುಕ್ತಗೊಳಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಸಿಬಿಐ ತನಿಖಾಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ. ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿತಲ್ಲದೆ, ಶಿವಲಿಂಗಮೂರ್ತಿ ಅವರ ವಿರುದ್ಧದ ಆರೋಪಗಳ ಸಂಬಂಧ ಮರು ವಿಚಾರಣೆ ನಡೆಸುವಂತೆ ಸಿಬಿಐ ನ್ಯಾಯಾಲಯಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News