ಹಸಿರುಕ್ರಾಂತಿ ನಿಜಕ್ಕೂ ಯಶಸ್ವಿಯಾಗಿದೆಯೇ ?
ಗೋಧಿ ಉತ್ಪಾದನೆಯ ಮಟ್ಟಿಗೆ ಜಾಗತಿಕವಾಗಿ ತಲೆತಲಾಂತರಗಳಿಂದ ಸಮಸ್ಯೆಯೊಂದಿದೆಯೆಂಬುದನ್ನು ಮೆಕ್ಸಿಕೊ ದೇಶದ ಕತೆಯು ನಮಗೆ ತೋರಿಸಿಕೊಡುತ್ತದೆ. 1930ರ ದಶಕದ ಅಂತ್ಯದಲ್ಲಿ ಮೆಕ್ಸಿಕೊ ಗೋಧಿಯನ್ನು ತುಕ್ಕುರೋಗವು ತೀವ್ರವಾಗಿ ಕಾಡಿತ್ತು. 1940ರ ದಶಕದ ಆರಂಭದವರೆಗೂ ಬಹುತೇಕ ಮೆಕ್ಸಿಕೊ ರೈತರು ತಮ್ಮ ಮುಖ್ಯ ಆಹಾರಬೆಳೆಯಾದ ಜೋಳವನ್ನೇ ಬೆಳೆಯುತ್ತಿದ್ದರು. ದೇಶದ ಉತ್ತರ ಭಾಗದಲ್ಲಿ ರುವ ಸೊನೊರನ್ ಮರುಭೂಮಿಯಲ್ಲಿ ಆಗಷ್ಟೇ ರೈತರು ಗೋಧಿ ಬೆಳೆಯಲು ಆರಂಭಿಸಿದ್ದರು. ನೂತನವಾಗಿ ನಿರ್ಮಾಣವಾಗಿದ್ದ ಯಾಕೂಯಿ ನದಿ ಕಣಿವೆ ನೀರಾವರಿ ಯೋಜನೆಯೇ ಇದಕ್ಕೆ ಕಾರಣವಾಗಿತ್ತು.
ಗೋಪಿ ರಾಜ್‌ಗೋಪಾಲ್ ಅವರ ಲೇಖನವೊಂದು (ದಿ ಸ್ಟೋರಿ ಆಫ್ ಎಹ್ರಿಲಿಚ್, ಬೊರ್ಲಾಗ್ ಹಾಗೂ ದಿ ಗ್ರೀನ್ ರೆವ್ಯೆಲ್ಯೂಶನ್), ಹಸಿರುಕ್ರಾಂತಿ ಎಷ್ಟರ ಮಟ್ಟಿಗೆ ಅಗತ್ಯವಾಯಿತೆಂಬುದನ್ನು ವಿಸ್ತಾರವಾಗಿ ವಿವರಿಸಿದೆ.
1966ರಲ್ಲಿ 10.4 ದಶಲಕ್ಷ ಟನ್ ಗೋಧಿಯು ಉತ್ಪಾದನೆಯಾಗಿದ್ದರೂ, ದೇಶದ 50 ಕೋಟಿ ಜನರಿಗೆ ಉಣಿಸಲು ಅದು ಸಾಕಾಗಲಿಲ್ಲವೆಂಬಂತಹ ಅಂಕಿಸಂಖ್ಯೆಗಳನ್ನು ಅವರು ತನ್ನ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಆ ಮೂಲಕ ಹಸಿರುಕ್ರಾಂತಿಯು ಭಾರತದಲ್ಲಿ ಎಷ್ಟೊಂದು ಪ್ರಮಾಣದ ಸಂಭಾವ್ಯ ವಿನಾಶವನ್ನು ತಪ್ಪಿಸಿತ್ತೆಂದು ಅವರು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಆದರೆ 1966ರಲ್ಲಿ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಭಾಗಗಳು, ಅವರ ವಾದದ ನೈಜತೆಯನ್ನು ಪ್ರಶ್ನಿಸುವಂತಿದೆ. ಆ ಪೈಕಿ ಕೆಲವನ್ನು ಇಲ್ಲಿ ನೀಡಲಾಗಿದೆ.
ಹಸಿರುಕ್ರಾಂತಿಯು ಕೇವಲ ಗೋಧಿಯ ಅಧಿಕ ಉತ್ಪಾದನೆಯನ್ನು ಉತ್ತೇಜಿಸಿತು. 1966ರಲ್ಲಿ ಬೆಳೆಯಲಾದ ಗೋಧಿಯ ಪ್ರಮಾಣವನ್ನು ಆನಂತರದ ದಶಕಗಳಲ್ಲಿ ಬೆಳೆಯಲಾದ ಗೋಧಿಯ ಪ್ರಮಾಣಕ್ಕೆ ಹೋಲಿಸೋಣ. 1970ರ ದಶಕದಲ್ಲಿ 20 ಮಿಲಿಯ ಟನ್, 1980ರಲ್ಲಿ 32 ಮಿಲಿಯ ಟನ್ ಹಾಗೂ 2016ರಲ್ಲಿ 90 ಮಿಲಿಯ ಟನ್ ಗೋಧಿಯನ್ನು ಬೆಳೆಯುವ ಮೂಲಕ ಭಾರತವು ಜಗತ್ತಿನಲ್ಲೇ ಅತ್ಯಧಿಕ ಗೋಧಿ ಉತ್ಪಾದಕ ರಾಷ್ಟ್ರವೆನಿಸಿಕೊಂಡಿತು.
ಗೋಧಿಯ ವೈಭವೀಕರಣ
ಸ್ವಾತಂತ್ರ ದೊರೆಯುವುದಕ್ಕೆ ಹಲವಾರು ದಶಕಗಳ ಮೊದಲು ಅಥವಾ ಆನಂತರದ ಕೆಲವು ದಶಕಗಳವರೆಗೂ ಬಹುತೇಕ ಭಾರತೀಯರು ಗೋಧಿಯ ಬಳಕೆದಾರರಾಗಿರಲಿಲ್ಲ. ಅದರ ಬದಲು ಭಾರತವು ಅಕ್ಕಿ ಹಾಗೂ ಸಿರಿಧಾನ್ಯ (ನವಣೆ,ರಾಗಿ,ಸಜ್ಜೆ ಇತ್ಯಾದಿ)ಗಳನ್ನು ಸೇವಿಸುವವರ ದೇಶವಾಗಿತ್ತು. ಬೇಳೆಕಾಳುಗಳು ಭಾರತೀಯರ ಆಹಾರದ ಪಟ್ಟಿಯಲ್ಲಿ ಆನಂತರದ ಸ್ಥಾನವನ್ನು ಪಡೆದುಕೊಂಡಿದ್ದವು. 1951ರಲ್ಲಿ ನಾವು 20.6 ದಶಲಕ್ಷ ಟನ್ ಅಕ್ಕಿ, 19 ದಶಲಕ್ಷ ಟನ್ ಸಿರಿಧಾನ್ಯಗಳು ಹಾಗೂ ಬೇಳೆಕಾಳುಗಳನ್ನು ಮತ್ತು 60.50 ಲಕ್ಷ ಟನ್ ಗೋಧಿಯನ್ನು ಬೆಳೆದಿದ್ದೆವು. 1965ರಲ್ಲಿ ನಾವು39.3 ಕೋಟಿ ಟನ್ ಅಕ್ಕಿ, 31.1 ದಶಲಕ್ಷ ಟನ್ ಸಿರಿಧಾನ್ಯಗಳು ಹಾಗೂ ಬೇಳೆಕಾಳು ಮತ್ತು 12.3 ದಶಲಕ್ಷ ಟನ್ ಗೋಧಿಯನ್ನು ಬೆಳೆದಿದ್ದೆವು. ಎರಡನೆಯದಾಗಿ, ವಸಾಹತುಶಾಹಿ ಆಡಳಿತದ ಕಾಲದಲ್ಲಿ ಭಾರತದಲ್ಲಿ ಬೆಳೆದ ಹೆಚ್ಚಿನ ಪಾಲು ಗೋಧಿಯನ್ನು ಬ್ರಿಟನ್ ಹಾಗೂ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು ಹಾಗೂ ಅವುಗಳನ್ನು ಅಗ್ಗದ ದರದ ಬ್ರೆಡ್ ತಯಾರಿಗೆ ಕಚ್ಚಾವಸ್ತುವಾಗಿ ಬಳಸಲಾಗುತ್ತಿತ್ತು. ಮಧ್ಯ ಪಂಜಾಬ್‌ನ ಪ್ರಾಂತಗಳು ಹಾಗೂ ಬೀರಾರ್ ಸೇರಿದಂತೆ ಪಂಜಾಬ್‌ನಲ್ಲಿರುವ ತಮ್ಮ ಕಾಲುವೆ ಪ್ರದೇಶಗಳನ್ನು ಬ್ರಿಟಿಶರು ಗೋಧಿ ಬೆಳೆಯುವ ಬಯಲುಗಳಾಗಿ ಪರಿವರ್ತಿಸಿದರು. ವಾಸ್ತವವಾಗಿ 1920ರ ದಶಕದ ಅಂತ್ಯದಲ್ಲಿ ಗೋಧಿಯ ಅತಿಯಾದ ಉತ್ಪಾದನೆಯಾದಾಗ ಹಾಗೂ 1929ರಲ್ಲಿ ವಿಶ್ವದಾದ್ಯಂತ ತಲೆದೋರಿದ ಮಹಾ ಆರ್ಥಿಕ ಹಿಂಜರಿತದಿಂದಾಗಿ ಜನರ ಗ್ರಾಹಕಶಕ್ತಿಯು ಕುಸಿದುಬಿದ್ದಾಗ ಭಾರತ ಸೇರಿದಂತೆ ಗೋಧಿ ರಫ್ತುದಾರ ರಾಷ್ಟ್ರಗಳು ಸರಣಿ ತುರ್ತು ಮಾತುಕತೆಗಳಲ್ಲಿ ಪಾಲ್ಗೊಂಡು ಹೆಚ್ಚುವರಿ ಗೋಧಿ ಉತ್ಪಾದನೆಯನ್ನು ಹೇಗೆ ವಿಲೇವಾರಿ ಮಾಡುವುದು ಹಾಗೂ ಉತ್ಪಾದನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯಪ್ರವೃತ್ತವಾಗುವುದೆಂಬ ಬಗ್ಗೆ ಗಾಢವಾದ ಸಮಾಲೋಚ ನೆಗಳನ್ನು ನಡೆಸಿದವು.
ಈ ಹಿನ್ನೆಲೆಯಲ್ಲಿ ಗೋಧಿಯು ಆ ಕಾಲದ 50 ಕೋಟಿ ಜನರ ಪ್ರಮುಖ ಆಹಾರವಾಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ವಾಸ್ತವಿಕವಾಗಿ ಮೀನನ್ನು ಆಹಾರವಾಗಿ ಸೇವಿಸುವ ಕರಾವಳಿ ಪ್ರದೇಶಗಳ ಹಾಗೂ ಗ್ರಾಮೀಣ ಪ್ರದೇಶಗಳ ಅದರಲ್ಲೂ ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿರುವ ಬುಡಕಟ್ಟು ಪ್ರದೇಶಗಳ ಜನರಿಗೂ ಗೋಧಿ ಆಹಾರವಾಗಿರಲಿಲ್ಲ. ಬೇಳೆಕಾಳುಗಳ ಹೊರತಾಗಿ ತೈಲಬೀಜಗಳು,ಧಾನ್ಯಗಳು, ಮಾಂಸ,ಹಾಲು ಕೂಡಾ ಅವರ ಆಹಾರದ ಅವಿಭಾಜ್ಯ ಅಂಗವಾಗಿವೆಯೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಗೋಧಿ ಉತ್ಪಾದನೆಯ ಮಟ್ಟಿಗೆ ಜಾಗತಿಕವಾಗಿ ತಲೆತಲಾಂತರಗಳಿಂದ ಸಮಸ್ಯೆಯೊಂದಿದೆಯೆಂಬುದನ್ನು ಮೆಕ್ಸಿಕೊ ದೇಶದ ಕತೆಯು ನಮಗೆ ತೋರಿಸಿಕೊಡುತ್ತದೆ. 1930ರ ದಶಕದ ಅಂತ್ಯದಲ್ಲಿ ಮೆಕ್ಸಿಕೊ ಗೋಧಿಯನ್ನು ತುಕ್ಕುರೋಗವು ತೀವ್ರವಾಗಿ ಕಾಡಿತ್ತು. 1940ರ ದಶಕದ ಆರಂಭದವರೆಗೂ ಬಹುತೇಕ ಮೆಕ್ಸಿಕೊ ರೈತರು ತಮ್ಮ ಮುಖ್ಯ ಆಹಾರಬೆಳೆಯಾದ ಜೋಳವನ್ನೇ ಬೆಳೆಯುತ್ತಿದ್ದರು. ದೇಶದ ಉತ್ತರ ಭಾಗದಲ್ಲಿರುವ ಸೊನೊರನ್ ಮರುಭೂಮಿಯಲ್ಲಿ ಆಗಷ್ಟೇ ರೈತರು ಗೋಧಿ ಬೆಳೆಯಲು ಆರಂಭಿಸಿದ್ದರು. ನೂತನವಾಗಿ ನಿರ್ಮಾಣವಾಗಿದ್ದ ಯಾಕೂಯಿ ನದಿ ಕಣಿವೆ ನೀರಾವರಿ ಯೋಜನೆಯೇ ಇದಕ್ಕೆ ಕಾರಣವಾಗಿತ್ತು.
ವಾಸ್ತವಿಕವಾಗಿ, ಯಾಕೂಯಿ ಕಣಿವೆ ಸಂಶೋಧನಾ ನಿಲಯವು ಆ ಪ್ರದೇಶದಲ್ಲಿ ಮೆಕ್ಸಿಕನ್ ಗೋಧಿ ಬೆಳೆಗಾರರ ಅವಶ್ಯಕತೆಗಳಿಗೆ ಪೂರಕವಾಗಿ ನಿರ್ಮಾಣವಾಗಿತ್ತು. ನಗರಪ್ರದೇಶಗಳ ಬದಲಾದ ಆಹಾರ ಆದ್ಯತೆಗಳಿಗೆ ಅನುಗುಣವಾಗಿ ಆಂತರಿಕ ಬಳಕೆಗೆ ಮಾತ್ರವಲ್ಲ ರಫ್ತು ಉದ್ದೇಶದಿಂದಲೂ ಗೋಧಿಯ ಉತ್ಪಾದನೆಯನ್ನು ಹೆಚ್ಚಿಸುವುದೇ ಇದರ ಉದ್ದೇಶವಾಗಿತ್ತು. ಗೋಧಿ ತುಕ್ಕುರೋಗದ ಸಮಸ್ಯೆಯನ್ನು ಕೃಷಿ ಸಂಶೋಧಕ ನೊರ್ಮನ್ ಬಗೆಹರಿಸುವ ಮೂಲಕ, ಮೆಕ್ಸಿಕೊ ರೈತರು 1958ರೊಳಗೆ ಗೋಧಿಯ ಪ್ರಮುಖ ರಫ್ತುದಾರರಾಗಲು ನೆರವಾದರು. ಆದರೆ ಗೋಧಿಯು ಬಹುತೇಕ ಮೆಕ್ಸಿಕನ್ನರ ಜನತೆಯ ಪ್ರಮುಖ ಆಹಾರವಾಗಿರದ ಕಾರಣ ಇದನ್ನು ಸ್ವಾವಲಂಬನೆಯೆಂದು ಕರೆಯಲು ಸಾಧ್ಯವಿಲ್ಲ.
ನಾಪತ್ತೆಯಾಗಿರುವ ತಿರುವುಮುರುವುಗಳು
ಈಗ ಭಾರತದ ವಿಷಯಕ್ಕೆ ಬರೋಣ. 1954ರವರೆಗೆ ಭಾರತವು ‘ಸಾರ್ವಜನಿಕ ಕಾನೂನು 480 (ಪಿಎಲ್)’ನಡಿಯಲ್ಲಿ ಅಮೆರಿಕದಿಂದ ಗೋಧಿಯನ್ನು ಆಮದು ಮಾಡಿ ಕೊಳ್ಳುತ್ತಿತ್ತು. ಇದು ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಿಗೆ ಡಾಲರ್ ಬದಲು ತಮ್ಮದೇ ಕರೆನ್ಸಿಯನ್ನು ಬಳಸಿಕೊಂಡು ಗೋಧಿ, ಸೋಯಾಬಿನ್, ಖಾದ್ಯತೈಲ ಹಾಗೂ ಹಾಲಿನ ಪುಡಿಯನ್ನು ಖರೀದಿಸುವ ಅವಕಾಶವನ್ನು ಒದಗಿಸಿತು. ತಮ್ಮ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಿಕೊಂಡು, ಅದನ್ನು ಕೈಗಾರಿಕಾ ಉಪಕರಣಗಳನ್ನು ಖರೀದಿಸಲು ಹಾಗೂ ತಮ್ಮ ಕೈಗಾರಿಕಾ ಕಾರ್ಮಿಕರಿಗೆ ಅಗ್ಗದ ದರದ ಆಹಾರವನ್ನು ಪೂರೈಕೆ ಮಾಡಲು ಈ ದೇಶಗಳಿಗೆ ಸಾಧ್ಯವಾಯಿತು. ಇದರಿಂದ ಹೆಚ್ಚಿನ ಪ್ರಯೋಜವಾದದ್ದು ಅಮೆರಿಕಕ್ಕೆ. ತಮ್ಮ ಕೃಷಿ ಉತ್ಪನ್ನಗಳನ್ನು ಮಿತಿಮೀರಿ ಉತ್ಪಾದಿಸುವ ಆದರೆ ಸೂಕ್ತವಾದ ಮಾರುಕಟ್ಟೆ ಸಿಗದ ಅಮೆರಿಕದ ರೈತರು ಇದರಿಂದ ಭಾರೀ ಪ್ರಯೋಜನವನ್ನು ಪಡೆದರು.
1965ರ ಬೇಸಿಗೆಯಲ್ಲಿ ಭಾರತ-ಪಾಕ್ ಯುದ್ಧ ನಡೆಯುವವರೆಗೂ ಈ ಪರಿಸ್ಥಿತಿಯು ಭಾರತ ಹಾಗೂ ಅಮೆರಿಕಗಳೆರಡಕ್ಕೂ ಅನುಕೂಲಕರವಾಗಿತ್ತು. ತರುವಾಯ ವಿಯೆಟ್ನಾಂನಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಗಳನ್ನು ಭಾರತವು ಖಂಡಿಸಿದ ಬಳಿಕ ಅಮೆರಿಕವು ಪಿಎಲ್480 ಕಾರ್ಯಕ್ರಮವನ್ನು ಹಿಂತೆಗೆದು ಕೊಳ್ಳುವುದಾಗಿ ಬೆದರಿಕೆ ಹಾಕಿತು. ಆವರೆಗೆ, ಭಾರತದ ನಗರಪ್ರದೇಶಗಳ ಕಾರ್ಮಿಕ ವರ್ಗವು ಪಿಎಲ್480 ಯೋಜನೆಯಡಿ ಪಡಿತರ ಅಂಗಡಿ ವ್ಯವಸ್ಥೆಯ ಮೂಲಕ ಪೂರೈಕೆ ಮಾಡಲಾಗುತ್ತಿದ್ದ ಗೋಧಿಯನ್ನು ಅವಲಂಬಿಸಿತ್ತು. ಆಗ ಉದ್ಭವಿಸಿದ ಪ್ರತಿಕೂಲ ಸನ್ನಿವೇಶವನ್ನು ಎದುರಿಸಲು ಭಾರತವು ತನ್ನ ಆಂತರಿಕ ಪೂರೈಕೆಗಳನ್ನು ಅವಲಂಬಿಸಬೇಕಾಯಿತು. ಆದರೆ 1965ರಲ್ಲಿ ಮುಂಗಾರು ವಿಫಲವಾಗಿತ್ತು. ಇದು ಭಾರತದಲ್ಲಿ ದಿಗಿಲಿಗೆ ಕಾರಣವಾಯಿತು. 1965-66ರ ಸಾಲಿನಲ್ಲಿ ತಾನು ಭರವಸೆ ನೀಡಿದ್ದ ಗೋಧಿಯ ಒಟ್ಟು ಪ್ರಮಾಣದ ನಾಲ್ಕನೆ ಒಂದು ಭಾಗವನ್ನು ಮಾತ್ರ ಪೂರೈಕೆ ಮಾಡುವುದಾಗಿ ಅಮೆರಿಕ ಭಾರತಕ್ಕೆ ಕಡ್ಡಿತುಂಡರಿಸಿದಂತೆ ಹೇಳಿತು. ಆದರೆ ಈ ಆಹಾರದ ಬಿಕ್ಕಟ್ಟು ಇಡೀ ದೇಶಕ್ಕೆ ಅನುಭವವಾಗದಿದ್ದರೂ, ನಗರಪ್ರದೇಶಗಳ ಕಾರ್ಮಿಕವರ್ಗದ ಮೇಲೆ ಇದರ ಪರಿಣಾಮವುಂಟಾಯಿತು.
ಆದಾಗ್ಯೂ, ಭಾರತದಲ್ಲಿ ಬರಪರಿಸ್ಥಿತಿ ಗಂಭೀರವಾಗಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದಾಗ, ತನ್ನ ಉದಾರತೆಯನ್ನು ಪ್ರದರ್ಶಿಸಲು ಇದೇ ಸದವಕಾಶವೆಂದು ಮನಗಂಡ ಅಮೆರಿಕವು ಪಿಎಲ್480 ರಫ್ತು ಯೋಜನೆಯನ್ನು ಪುನಾರಂಭಿಸಿತು.
1965ರ ನವೆಂಬರ್‌ನಲ್ಲಿ ಸಿ. ಸುಬ್ರಮಣಿಯಂ ಅಮೆರಿಕಕ್ಕೆ ಪ್ರಯಾಣಿಸಿದಾಗ ಉಭಯದೇಶಗಳ ನಡುವಿನ ಬಿಕ್ಕಟ್ಟು ಅಂತ್ಯಕಂಡಿತು. ಲಾಲ್‌ಬಹಾದೂರ್ ಶಾಸ್ತ್ರಿ ಸರಕಾರದ ಪರವಾಗಿ ಸುಬ್ರಮಣ್ಯಂ ಅಮೆರಿಕದ ಜೊತೆ ವ್ಯವಹಾರ ಕುದುರಿಸಿದರು. ಪಿಎಲ್480 ರಫ್ತಿನ ಮುಂದುವರಿಕೆಗೆ ವಿನಿಮಯವಾಗಿ ರಸಗೊಬ್ಬರ ಸ್ಥಾವರಗಳಲ್ಲಿ ಖಾಸಗಿ ವಿದೇಶಿ ಹೂಡಿಕೆಗೆ ಅವಕಾಶ ನೀಡಲು, ಇದಕ್ಕೆ ಪ್ರತಿಯಾಗಿ ಪಿಎಲ್480 ಯೋಜನೆಯ ಮುಂದುವರಿಕೆಯಾಗಿ ರಸಗೊಬ್ಬರಗಳನ್ನು ಆಮದುಮಾಡಿಕೊಳ್ಳಲು ಇದರಿಂದ ಅವಕಾಶ ದೊರೆಯಿತು. ‘‘ನೂತನ ಕೃಷಿ ನೀತಿ’’ಗೆ ಇದು ಬೆನ್ನೆಲುಬಾಯಿತು.
1966ರಲ್ಲಿಯೂ ಭಾರತವು ಸತತ ಎರಡನೆ ವರ್ಷವೂ ಭೀಕರ ಬರಗಾಲಕ್ಕೆ ಸಾಕ್ಷಿಯಾಯಿತು. ಆದಾಗ್ಯೂ ಹಿಂದಿನ ಸಾಲಿಗೆ ಹೋಲಿಸಿದರೆ ಆ ವರ್ಷ ಆಹಾರ ಉತ್ಪಾದನೆಯು ಉತ್ತಮವಾಗಿತ್ತು. ಆ ವರ್ಷ ಪಿಎಲ್480 ಯೋಜನೆಯಡಿ ಭಾರತವು ಹಿಂದೆಂಗಿಂತಲೂ ಗರಿಷ್ಠ ಪ್ರಮಾಣದಲ್ಲಿ ಅಂದರೆ 10 ದಶಲಕ್ಷ ಟನ್ ಗೋಧಿಯನ್ನು ಆಮದು ಮಾಡಿಕೊಂಡಿತ್ತು.
ಹಸಿರುಕ್ರಾಂತಿಯ ಹರಿಕಾರನೆನಿಸಿದ ನಾರ್ಮನ್ ಬೊರ್ಲಾಗ್‌ರ ಸಂಶೋಧನೆ ಯು ಎಂ.ಎಸ್.ಸ್ವಾಮಿನಾಥನ್ ಸೇರಿದಂತೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಹಲವಾರು ವಿಜ್ಞಾನಿಗಳನ್ನು ಅಧಿಕ ಪ್ರಮಾಣದಲ್ಲಿ ಗೋಧಿ ಬೆಳೆಯುವ ತಳಿಗಳ ಸೃಷ್ಟಿಗೆ ಪ್ರೇರಣೆ ನೀಡಿತು. ಈ ಸಂಶೋಧನೆಯ ಭಾಗವಾಗಿ ದಿಲ್ಲಿಯ ಲುತ್ಯೆನ್‌ನಲ್ಲಿರುವ ಸಿ. ಸುಬ್ರಹ್ಮಣ್ಯಂ ಅವರ ತೋಟದಲ್ಲಿ ಆಮದು ಮಾಡಿದ ಗೋಧಿ ಬೀಜದ ತಳಿಗಳನ್ನು ಬೆಳೆಸಲಾಯಿತು. 1965ರ ಸಮಗ್ರ ಕೃಷಿ ಜಿಲ್ಲಾ ಕಾರ್ಯಕ್ರಮ (ಐಎಡಿಪಿ) ಮೂಲಕ ಸರಕಾರವು ನೂತನ ಗೋಧಿ ಬೀಜದ ತಳಿಗಳ ಪ್ರಸರಣೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿತು. ‘ಪ್ರಗತಿಪರರು’ ಎಂದು ಪರಿಗಣಿಸಲಾದ ರೈತರ ಮೂಲಕ ಹೇರಳವಾದ ನೀರಿನ ಸೌಲಭ್ಯವನ್ನು ಹೊಂದಿರುವ ಜಿಲ್ಲೆಗಳಲ್ಲಿ ಈ ಗೋಧಿ ತಳಿಗಳನ್ನು ಬೆಳೆಸಲು ಆಯ್ಕೆ ಮಾಡಲಾಯಿತು.
ನೂತನ ತಳಿಯ ಗೋಧಿ ಬೀಜಗಳು ಭಾರತದ ಹೊಸ ಕೃಷಿ ಕಾರ್ಯನೀತಿಗೆ ಚೆನ್ನಾಗಿ ಹೊಂದಿಕೊಳ್ಳುವಂತಿತ್ತು. ಐಎಡಿಪಿ ಪ್ರಾಂತಗಳಲ್ಲಿ ಈ ನೂತನ ತಳಿಗಳನ್ನು ಆರಂಭದಲ್ಲಿ ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಕೃಷಿಕರೇ ಬೆಳೆಯಲಾರಂಭಿಸಿದರು. ಅವರ ಎಲ್ಲಾ ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆಯೊಂದಿಗೆ ಭಾರತೀಯ ಆಹಾರ ನಿಗಮದ ಮೂಲಕ ಖರೀದಿಸುವುದಾಗಿ ಸರಕಾರ ಖಾತರಿ ಕೂಡಾ ನೀಡಿತು.ಆದರೆ ಇದೇ ವೇಳೆ ಈ ನೀತಿಯ ದುಷ್ಪರಿಣಾಮಗಳನ್ನು ವಿಶ್ವಬ್ಯಾಂಕ್‌ನ ವರದಿಯೊಂದು ಬೆಟ್ಟು ಮಾಡಿತೋರಿಸಿತ್ತು. ಈ ನೀತಿಯಿಂದ ದೊಡ್ಡ ಹಾಗೂ ಸಣ್ಣ ಪ್ರಮಾಣದ ರೈತರ ನಡುವೆ ಮತ್ತು ನೀರಾವರಿಯ ಹಾಗೂ ನೀರಾವರಿಯೇತರ ಪ್ರದೇಶಗಳ ಡುವೆ ಅಸಮಾನತೆ ಹೆಚ್ಚಾಗಲಿದೆಯೆಂದು ಅದು ಆತಂಕ ವ್ಯಕ್ತಪಡಿಸಿತ್ತು.
1968ರಲ್ಲಿ ಮುಂಗಾರು ಚೇತರಿಸಿಕೊಂಡ ಪರಿಣಾಮವಾಗಿ ಆಹಾಧಾನ್ಯಗಳ ಉತ್ಪಾದನೆಯು74.2 ದಶಲಕ್ಷ ಟನ್‌ಗಳಿಂದ 95.1 ದಶಲಕ್ಷ ಟನ್‌ಗಳಿಗೇರಿತ್ತು.
ಗೋಧಿಯನ್ನು ಸರಕಾರವು ತಮಗೆ ಸಬ್ಸಿಡಿ ಸಹಿತವಾಗಿ ಗೋಧಿಬೀಜಗಳನ್ನು ನೀಡುವ ಜೊತೆಗೆ ಖಾತರಿಪಡಿಸಿದ ಬೆಲೆಯಲ್ಲಿ ಗೋಧಿಯನ್ನು ಖರೀದಿಸುವುದೆಂದು ನೀರಾವರಿ ಪ್ರದೇಶಗಳ ರೈತರಿಗೆ ಈಗ ಅರಿವಾಯಿತು. ಹೀಗಾಗಿ ರೈತರು ಸಿರಿಧಾನ್ಯಗಳನ್ನು ಹಾಗೂ ಬೆಳೆಕಾಳುಗಳನ್ನು ಬೆಳೆಯುವ ಪ್ರದೇಶದಲ್ಲಿ ಗೋಧಿಯನ್ನು ಬೆಳೆಯಲು ಪ್ರಾರಂಭಿಸಿದರು. 1968ರಲ್ಲಿ ಸಿರಿಧಾನ್ಯ ಹಾಗೂ ಬೇಳೆಕಾಳುಗಳನ್ನು 55.5 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದರೆ, 2006ರಲ್ಲಿ ಅದು 28 ದಶಲಕ್ಷ ಹೆಕ್ಟೇರ್‌ಗೆ ಕುಸಿಯಿತು. ಹೀಗೆ ಗೋಧಿಯ ಯಶೋಗಾಥೆಯ ಹಿಂದೆ ಇತರ ಬೆಳೆಗಳ ಬಲಿದಾನದ ಕಥೆಯಿದೆ.
ಭಾರತವು 1974ರಲ್ಲಿ ಬೇಳೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿತ್ತು. 1970-71ರ ಸಾಲಿನಲ್ಲಿ ಭಾರತದ ಒಟ್ಟು ಆಹಾರಧಾನ್ಯ ಉತ್ಪಾದನೆಯು 108.4 ದಶಲಕ್ಷ ಟನ್‌ಗಳಾಗಿದ್ದು, 1974ರ ವೇಳೆಗೆ ಅದು 99.8 ದಶಲಕ್ಷ ಟನ್‌ಗಳಿಗೆ ಇಳಿಯಿತು. ವಾಸ್ತವವಾಗಿ ಅದು ಬರಪೀಡಿತ ವರ್ಷವಾಗಿತ್ತು. 1971ರ ವೇಳೆಗೆ ಪಿಎಲ್480 ಯೋಜನೆಯಡಿಯ ಗೋಧಿ ಆಮದು ಸ್ಥಗಿತಗೊಂಡಿತು. 1972ರ ವೇಳೆಗೆ ಅದು ಪುನಾರಂಭಗೊಂಡಿದ್ದು, 1972ರವರೆಗೂ ಮುಂದುವರಿಯಿತು. 1972ರಲ್ಲಿ ಗೋಧಿ ಉತ್ಪಾದನೆ ಎರಡು ಪಟ್ಟು ಹೆಚ್ಚಿದ್ದು, 24.7 ದಶಲಕ್ಷ ಟನ್‌ಗಳಿಗೇರಿತು ಹಾಗೂ 1975ರಲ್ಲಿ 28.8 ದಶಲಕ್ಷ ಟನ್‌ಗೆ ತಲುಪಿತು. ಆದಾಗ್ಯೂ ಪಿಎಲ್480 ಆಮದು ಯೋಜನೆ ಮುಂದುವರಿಯಿತು. ಹೀಗಿರುವಾಗ ಆಹಾರ ಸ್ವಾವಲಂಬನೆಗೆ ಏನರ್ಥವಿದೆ?
ವಿಡಂಬನೆಯೆಂದರೆ, ಭಾರತವು ಪಿಎಲ್480 ಯೋಜನೆಯಡಿ ಆಮದನ್ನು ರದ್ದುಪಡಿಸಿದ್ದುದು ಅದು ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆಯೆಂದು ಅರ್ಥವಲ್ಲ. ಅಮೆರಿಕದ ಇತರ ಭೌಗೋಳಿಕ ರಾಜಕೀಯ ಹಿತಾಸಕ್ತಿಗಳು ಅದಕ್ಕೆ ಕಾರಣವಾಗಿತ್ತು. ವಿಶೇಷವಾಗಿ ಶೀತಲಸಮರದ ವೇಳೆ ಸ್ವಾವಲಂಬಿ ದೇಶಗಳು ತಮ್ಮ ಪ್ರಕ್ಷುಬ್ಧ ಜನಸಮುದಾಯಕ್ಕೆ ಆಹಾರವುಣಿಸುವ ಮೂಲಕ ಅವರನ್ನೇ ತನ್ನ ಅತ್ಯಂತ ಜವಾಬ್ದಾರಿಯುತ ಮಿತ್ರರನ್ನಾಗಿ ರೂಪಿಸಿದ್ದವು. ಹೀಗಾಗಿ ಅಮೆರಿಕ ಕೂಡಾ ಮೊದಲ ಹಂತದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಮೂಲಕ ತನ್ನ ಜನತೆಗೆ ಹೇರಳವಾದ ಪ್ರಮಾಣದಲ್ಲಿ ಆಹಾರ ಪೂರೈಕೆಯನ್ನು ಖಾತರಿಪಡಿಸಬೇಕಾಗಿತ್ತು. (ಈ ಉದ್ದೇಶದಿಂದಲೇ ಅದು ರಾಕ್‌ಫೆಲ್ಲರ್ ಪ್ರತಿಷ್ಠಾನದ ಮೂಲಕ ಬೊರ್ಲಾಗ್ ಕಂಪೆನಿಯಿಂದ ಕುಲಾಂತರಿ ತಳಿಗಳ ಉತ್ಪಾದಿಸುವ ಯೋಜನೆಯನ್ನು ಆರಂಭಿಸಿತ್ತು).
ಆದರೆ ಭಾರತಕ್ಕೆ ತನ್ನ ಅಗಾಧ ಜನಸಂಖ್ಯೆಗೆ ಆಹಾರವನ್ನು ಪೂರೈಕೆ ಮಾಡಲು ಪಿಎಲ್480 ಯೋಜನೆಯಡಿ ಆಮದು ಮಾಡಿಕೊಳ್ಳಬೇಕಾಗಿರಲಿಲ್ಲ. ಈ ಯೋಜನೆಯ ಮೂಲಕ ಒಂದು ಸಣ್ಣ ಪ್ರಮಾಣದ ಜನಸಂಖ್ಯೆಗೆ ಅಂದರೆ ಕಾರ್ಮಿಕ ವರ್ಗಕ್ಕಷ್ಟೇ ಇದರಿಂದ ಆಹಾರಪೂರೈಕೆಯಾಗುತ್ತಿತ್ತು. 1950ರ ದಶಕದಲ್ಲಿ ಭಾರತದಲ್ಲಿ ಯಥೇಚ್ಚ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುತ್ತಿದ್ದರೂ ಪಿಎಲ್480 ಕಾರ್ಯಕ್ರಮದಡಿ ಆಮದನ್ನು ಆರಂಭಿಸಿದ್ದುದು ಇನ್ನೂ ಹೆಚ್ಚಿನ ವಿಡಂಬನೆಯಾಗಿದೆ.