×
Ad

ಪೌರ ಕಾರ್ಮಿಕರ ಮಕ್ಕಳು ದೇಶವನ್ನಾಳಲಿ: ಸಿಎಂ 2017 ಮಾರ್ಚ್‌ಗೆ ಪೌರಕಾರ್ಮಿಕರು ಖಾಯಂ

Update: 2016-11-08 23:08 IST

ಬೆಂಗಳೂರು, ನ.8: ಪೌರ ಕಾರ್ಮಿಕರ ಮಕ್ಕಳು ವೈದ್ಯರು ಹಾಗೂ ಎಂಜಿನಿಯರ್‌ಗಳು, ಪ್ರೊಫೆಸರ್‌ಗಳು ಹಾಗೂ ರಾಜಕೀಯ ಶಿಕ್ಷಣ ಪಡೆಯುವುದರ ಮೂಲಕ ದೇಶವನ್ನಾಳುವಂತಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.

ಮಂಗಳವಾರ ಬಿಬಿಎಂಪಿ ನಗರದ ಡಾ.ರಾಜ್‌ಕುಮಾರ್ ಗಾಜಿನಮನೆಯಲ್ಲಿ ಆಯೋಜಿಸಿದ್ದ ದೇಶದಲ್ಲೇ ಪ್ರಪ್ರಥಮ ಬಾರಿಗೆ ‘ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡುವ ಯೋಜನೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಪೌರಕಾರ್ಮಿಕರ ವೇತನವನ್ನು 9,600ರಿಂದ 16,582ರೂಗೆ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಿನ ಹಣವನ್ನು ಅನಗತ್ಯವಾಗಿ ಖರ್ಚು ಮಾಡದೆ, ಉಳಿತಾಯ ಮಾಡಬೇಕು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಪೌರ ಕಾರ್ಮಿಕರು ತಮ್ಮ ಮಕ್ಕಳು ಈ ವೃತ್ತಿಗೆ ಬರದಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.

ಗುತ್ತಿಗೆದಾರರು ಪೌರಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ಸಂಬಳ ಕೊಡದೆ ವಂಚಿಸುವಂತಹ ಪ್ರಕರಣಗಳು ನಡೆದಿವೆ. ಇದನ್ನು ತಪ್ಪಿಸುವ ಸಲುವಾಗಿ ಪೌರಕಾರ್ಮಿಕರ ಅಕೌಂಟ್‌ಗೆ ನೇರವಾಗಿ ಅವರ ಸಂಬಳವನ್ನು ಜಮೆ ಮಾಡುವಂತಹ ಯೋಜನೆಯನ್ನು ರೂಪಿಸಲಾಗಿದೆ. ಯಾವ ಕಾರಣಕ್ಕೂ ಪೌರ ಕಾರ್ಮಿಕರ ಮೇಲಾಗುವ ಶೋಷಣೆಯನ್ನು ಸರಕಾರ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಗುತ್ತಿಗೆದಾರರ ಕಪಿಮುಷ್ಟಿಯಿಂದ ಪೌರಕಾರ್ಮಿಕರನ್ನು ರಕ್ಷಿಸುವ ಸಲುವಾಗಿ 2017 ಮಾರ್ಚ್ ಒಳಗೆ ಬಿಬಿಎಂಪಿ ಪೌರಕಾರ್ಮಿಕರೆಲ್ಲರನ್ನು ಖಾಯಂ ಮಾಡಿಕೊಳ್ಳಲು ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಹೀಗಾಗಿ ಪೌರಕಾರ್ಮಿಕರು ತಮ್ಮನ್ನು ಖಾಯಂ ಮಾಡಿಸಿಕೊಡುವಂತೆ ಯಾರಿಗೂ ಲಂಚ ರೂಪದಲ್ಲಿ ಹಣವನ್ನು ಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

4 ಸಾವಿರ ನಿವೇಶನ: ಪೌರಕಾರ್ಮಿಕರಿಗೆ 4 ಸಾವಿರ ನಿವೇಶನ ನೀಡಲಾಗುತ್ತಿದೆ. ಸುಮಾರು 11ಲಕ್ಷ ರೂ.ಗೂ ಹೆಚ್ಚಿರುವ ನಿವೇಶನ ವೌಲ್ಯಕ್ಕೆ ಸರಕಾರ ಸುಮಾರು 9ಲಕ್ಷದ 50ಸಾವಿರ ರೂ.ನೀಡಲಿದೆ. ಉಳಿದ ಒಂದು ಲಕ್ಷ ರೂ.ಹಣವನ್ನು ಪೌರ ಕಾರ್ಮಿಕರ ಸಂಬಳದಲ್ಲಿ ಕಡಿತ ಮಾಡಲಾಗುವುದು ಎಂದು ಅವರು ಹೇಳಿದರು.

ತೆರಿಗೆ ಸಂಗ್ರಹಕ್ಕೆ ಆದ್ಯತೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತಷ್ಟು ತೆರಿಗೆಯನ್ನು ಸಂಗ್ರಹಿಸಲು ಅವಕಾಶವಿದ್ದು, ಈ ಬಗ್ಗೆ ಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರು ಸೇರಿದಂತೆ ಬಿಬಿಎಂಪಿ ಆಯುಕ್ತರು ಶೀಘ್ರವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಪೌರಕಾರ್ಮಿಕರು ಮಾಡುವ ನಿಸ್ವಾರ್ಥ ವೃತ್ತಿಯಿಂದಾಗಿ ಜನತೆ ಆರೋಗ್ಯ ಹಾಗೂ ಸ್ವಚ್ಛತೆಯಿಂದ ಬದುಕುವಂತಾಗಿದೆ. ಪೌರಕಾರ್ಮಿಕರನ್ನು ಇಡೀ ಸಮಾಜ ಅತ್ಯಂತ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್, ಮೇಯರ್ ಪದ್ಮಾವತಿ, ಉಪಮೇಯರ್ ಆನಂದ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಆಡಳಿತ ಪಕ್ಷದ ನಾಯಕ ಮುಹ್ಮದ್ ರಿಜ್ವಾನ್ ನವಾಬ್, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮತ್ತಿತರರಿದ್ದರು.


ಇಸ್ಕಾನ್‌ಗೆ ಬಿಸಿಯೂಟದ ಟೆಂಡರ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 32704 ಪೌರ ಕಾರ್ಮಿಕರಿದ್ದು, ಅವರೆಲ್ಲರಿಗೂ ಮಧ್ಯಾಹ್ನದ ಬಿಸಿಯೂಟ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರ ಗುತ್ತಿಗೆಯನ್ನು ಇಸ್ಕಾನ್ ಸಂಸ್ಥೆಗೆ ಒಂದು ಊಟಕ್ಕೆ 20ರೂ.ನಂತೆ ನೀಡಲಾಗಿದೆ. ಊಟದಲ್ಲಿ ಅನ್ನ, ಸಾಂಬರ್, ಉಪ್ಪಿನಕಾಯಿ, ಮೊಸರು ಇರಲಿದೆ. ಸುಮಾರು 600 ಸ್ಥಳಗಳಲ್ಲಿ ಬಿಸಿಯೂಟವನ್ನು ನೀಡಲಾಗುತ್ತದೆ.
 -ಪದ್ಮಾವತಿ, ಮೇಯರ್, ಬಿಬಿಎಂಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News