ಅಂಧರ ಟಿ-20 ಕ್ರಿಕೆಟ್ ವಿಶ್ವಕಪ್‌ಗೆ ಭಾರತ ಆತಿಥ್ಯ

Update: 2016-11-10 17:27 GMT

 ಬೆಂಗಳೂರು, ನ.10: ಭಾರತ ಮುಂದಿನ ವರ್ಷ ಎರಡನೆ ಆವೃತ್ತಿಯ ಅಂಧರ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲು ಸಜ್ಜಾಗಿದೆ ಎಂದು ಭಾರತದ ಅಂಧರ ಕ್ರಿಕೆಟ್ ಸಂಸ್ಥೆ(ಸಿಎಬಿಐ) ಬುಧವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಘೋಷಿಸಿದೆ.

ಹೊಸದಿಲ್ಲಿಯಲ್ಲಿ ಮುಂದಿನ ವರ್ಷದ ಜನವರಿ 31ರಂದು ನಡೆಯಲಿರುವ ಅಂಧರ ಕ್ರಿಕೆಟ್ ವಿಶ್ವಕಪ್‌ಗೆ ರಾಹುಲ್ ದ್ರಾವಿಡ್ ಪ್ರಚಾರ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ವಿಶ್ವಕಪ್‌ನ ಫೈನಲ್ ಪಂದ್ಯ ಫೆ.12 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

 2012ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಆವೃತ್ತಿಯ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿತ್ತು. 2014ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ 40 ಓವರ್‌ಗಳ ವಿಶ್ವಕಪ್‌ನ್ನು ಜಯಿಸಿತ್ತು. ಮುಂಬರುವ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ನೇಪಾಳ, ನ್ಯೂಝಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕ, ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಭಾಗವಹಿಸುತ್ತಿವೆ.

ಟೂರ್ನಿಯು 8 ತಾಣಗಳಾದ-ಹೊಸದಿಲ್ಲಿ, ಫರಿದಾಬಾದ್, ಇಂದೋರ್, ಮುಂಬೈ, ಕೊಚ್ಚಿ, ಭುವನೇಶ್ವರ, ಬೆಂಗಳೂರು, ಗುಜರಾತ್ ಹಾಗೂ ಆಂಧ್ರಪ್ರದೇಶಗಳಲ್ಲಿ ನಡೆಯಲಿದೆ.

  ಅಂಧರ ಟ್ವೆಂಟಿ-20 ವಿಶ್ವಕಪ್‌ಗೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿರುವುದು ನಿಜಕ್ಕೂ ದೊಡ್ಡ ಗೌರವ. ಇಂದು ನನಗೆ ವಿಶೇಷ ದಿನ. ನಾನು ಅಂಧರ ಕ್ರಿಕೆಟ್‌ನ ಬಗ್ಗೆ ಕೇಳಿದ್ದೆ. ಟಿವಿಯಲ್ಲೂ ಪಂದ್ಯವನ್ನು ವೀಕ್ಷಿಸಿದ್ದೆ. ಆದರೆ, ಅಂಧರ ಕ್ರಿಕೆಟ್ ಬೆಳವಣಿಗೆಗಾಗಿ ನಡೆಸಿದ ಪ್ರಯತ್ನ ದ ಕೇಳಿದಾಗ ಅಚ್ಚರಿಯಾಯಿತು. ಸಮರ್ಥನಮ್ ಟ್ರಸ್ಟ್ ಹಾಗೂ ಸಿಎಬಿಐ ಕಳೆದ ಐದಾರು ವರ್ಷಗಳಿಂದ ಭಾರೀ ಶ್ರಮಪಟ್ಟಿದೆ. ಭಾರತ ಕಳೆದ ಮೂರ್ನಾಲ್ಕು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತಿದೆ. ಅವರ ಸಾಧನೆಯನ್ನು ನೋಡಿ ಟೂರ್ನಿಯ ರಾಯಭಾರಿಯಾಗಲು ಒಪ್ಪಿಕೊಂಡೆ ಎಂದು ದ್ರಾವಿಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News