ಹತ್ತು ವರ್ಷ ಕೆಲಸಕ್ಕೇ ಹೋಗದೆ ಸಂಬಳ ಪಡೆದ!

Update: 2016-11-11 12:36 GMT

ಮನಾಮ: ಕುವೈತ್‌ನ ಸಾರ್ವಜನಿಕ ಕ್ಷೇತ್ರದ ಉದ್ಯೋಗಿ ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲ ಪ್ರತೀ ತಿಂಗಳು ವೇತನ ಪಡೆಯುತ್ತಿದ್ದನಾದರೂ, ಇತ್ತೀಚೆಗೆ ಅಧಿಕಾರಿಗಳು ಪತ್ತೆ ಮಾಡುವವರೆಗೂ ಆತ ಕೆಲಸಕ್ಕೇ ಹಾಜರಾಗದೆ ಇರುವುದು ತಿಳಿದು ಬಂದಿದೆ.

ಗೈರು ಹಾಜರಿ ಮತ್ತು ನೀತಿ ಮತ್ತು ನಿಯಮಗಳಿಗೆ ತಕ್ಕಂತೆ ನಡೆಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಭಿಯಾನದಲ್ಲಿ ಕುವೈತ್ ಸರಕಾರ ವೇತನವನ್ನು ಸ್ಥಗಿತಗೊಳಿಸಿದ 900 ಉದ್ಯೋಗಿಗಳಲ್ಲಿ ಈತನೂ ಸೇರಿದ್ದಾನೆ. ಸರ್ಕಾರ ತನ್ನ ವೇತನ ನಿಲ್ಲಿಸುತ್ತಿರುವುದಕ್ಕೆ ಉದ್ಯೋಗಿಗೆ ಈಗ ಚಿಂತೆಯಾಗಿದೆ.

ಮತ್ತೊಂದು ಪ್ರಕರಣದಲ್ಲಿ ಉದ್ಯೋಗಿಯೊಬ್ಬರು 18 ತಿಂಗಳ ಕಾಲ ಗೈರು ಹಾಜರಿಗೆ ಕಾರಣವನ್ನು ಕೊಡದೆಯೇ ವಿದೇಶದಲ್ಲಿ ಆರಾಮವಾಗಿ ನೆಲೆಸಿದ್ದರು. ಗೈರು ಹಾಜರಾಗಿರುವುದಕ್ಕೆ ಕಾರಣ ಕೇಳಿದರೆ ಕೆಲಸಕ್ಕೆ ಬಾರದೇ ಇದ್ದರೂ ಒಂದೂವರೆ ವರ್ಷವಿಡೀ ತನ್ನ ಬಗ್ಗೆ ಮೇಲಧಿಕಾರಿ ಪ್ರಶ್ನಿಸಲೇ ಇಲ್ಲ ಎಂದು ಉತ್ತರಿಸಿದ್ದ.

ಮೂಲಗಳ ಪ್ರಕಾರ ಗೈರು ಹಾಜರಿ ಮತ್ತು ಅನಿಯಮಿತ ಹಾಜರಿಗಾಗಿಯೇ ವೇತನ ಕಳೆದುಕೊಂಡಿರುವ ಉದ್ಯೋಗಿಗಳು ಈಗ ನಿರ್ಧಾರವನ್ನು ಮರುಪರಿಶೀಲಿಸಲು ಬೇಡಿಕೆ ಇಟ್ಟಿದ್ದಾರೆ. ಆದರೆ ಸರಕಾರವು ಸಾರ್ವಜನಿಕ ಕ್ಷೇತ್ರದ ಇಲಾಖೆಗಳ ಸೋಮಾರಿತನದ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಿದೆ. “ಹಲವಾರು ಉದ್ಯೋಗಿಗಳು ನಿತ್ಯ ಕಚೇರಿಗೆ ಹಾಜರಾಗುವ ಬಗ್ಗೆ ಬದ್ಧತೆಯೇ ತೋರಿಸುವುದಿಲ್ಲ ಮತ್ತು ಗೈರುಹಾಜರಿಗೆ ನಿರಂತರ ಕಾರಣಗಳನ್ನು ಕೊಡುತ್ತಾರೆ” ಎಂದು ಮೂಲಗಳು ಹೇಳಿವೆ. “ಕಳೆದ ವರ್ಷ ಜುಲೈನಲ್ಲಿ 30,000 ಸಾರ್ವಜನಿಕ ಕ್ಷೇತ್ರದ ಉದ್ಯೋಗಿಗಳು ಈದ್ ಸಂದರ್ಭದಲ್ಲಿ ಅನಾರೋಗ್ಯದ ನೆಪದಲ್ಲಿ ರಜೆ ಹೋಗಿದ್ದರು. ವಿವಿಧ ಸಚಿವಾಲಯಗಳು ಮತ್ತು ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿಂದ ಅನಾರೋಗ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಮುಂದಿಟ್ಟಿದ್ದರು” ಎಂದು ನಾಗರಿಕ ಸೇವಾ ಸಮಿತಿ (ಸಿಎಸ್‌ಸಿ) ಹೇಳಿದೆ. ಶುಕ್ರವಾರ ಈದ್ ಇದ್ದು, ನಂತರದ ಎರಡು ದಿನ ರಜೆಗಳಿದ್ದವು. ಆದರೆ ಅಧಿಕಾರಿಗಳು ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದೂ ಅನಾರೋಗ್ಯದ ರಜೆಗಳನ್ನು ಹಾಕಿದ್ದರು. ಈಗ ಸಿಎಸ್‌ಸಿ ಈ ಅನಾರೋಗ್ಯದ ರಜೆಗಳ ವಿಶ್ವಾಸಾರ್ಹತೆಯ ತನಿಖೆ ನಡೆಸಲು ನಿರ್ಧರಿಸಿದೆ. 2011ರ ಅಧಿಕೃತ ವರದಿಯಲ್ಲಿ ಕುವೈತ್ ಸಾರ್ವಜನಿಕ ಕ್ಷೇತ್ರದಲ್ಲಿ ಅರ್ಧದಷ್ಟು ಮಂದಿ ಮಾತ್ರ ನಿತ್ಯವೂ ಕೆಲಸಕ್ಕೆ ಹಾಜರಾಗುತ್ತಾರೆ ಎನ್ನುವ ಆಘಾತಕಾರಿ ವಿಷಯ ಬಹಿರಂಗವಾಗಿತ್ತು. ವಿವಿಧ ನೆಪಗಳ ಅಡಿ ಗೈರುಹಾಜರಾಗುವವರಿಂದ ಸರ್ಕಾರಕ್ಕೆ 10.5 ಮಿಲಿಯನ್ ಕುವೈತ್ ಧಿರಂ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಕೆಲಸಕ್ಕೆ ಗೈರು ಹಾಜರಾಗುವ ಶೇ. 46ರಷ್ಟು ಮಂದಿ ಅನಾರೋಗ್ಯದ ಕಾರಣವನ್ನೇ ನೀಡುತ್ತಾರೆ.

ಉದ್ಯೋಗಿಗಳ 532,132 ಅನಾರೋಗ್ಯದ ದಿನದ ರಜಾಗಳಿಂದಾಗಿ ಸರ್ಕಾರಕ್ಕೆ 10,642,640 ಕುವೈತ್ ದಿನಾರ್ ನಷ್ಟವಾಗಿದೆ.

ವಿದ್ಯಾರ್ಥಿಗಳ ಗೈರು ಹಾಜರಿಯಿಂದ ಶಾಲೆಗಳ ಮೇಲೂ ಪರಿಣಾಮ ಬೀರಿರುವ ಕಾರಣ ಈಗ ಶಿಕ್ಷಣ ಅಧಿಕಾರಿಗಳು ಮಕ್ಕಳಿಗೆ ಗ್ರೇಡ್ ಕೊಡುವಾಗ ಅವರ ಹಾಜರಾತಿಯನ್ನೂ ಪರಿಶೀಲಿಸಲು ನಿರ್ಧರಿಸಿದ್ದಾರೆ. ತರಗತಿಗಳಿಗೆ ಹಾಜರಾಗದೆ ಇರಲು ಸೂಕ್ತ ಕಾರಣಗಳನ್ನು ನೀಡದ ವಿದ್ಯಾರ್ಥಿಗಳ ಗ್ರೇಡ್‌ಗಳಲ್ಲಿ ಅದರ ಪರಿಣಾಮ ಕಂಡುಬರಲಿದೆ. ರಜಾ ದಿನಗಳ ಆರಂಭ ಅಥವಾ ನಂತರ ವಿದ್ಯಾರ್ಥಿಗಳು ಹೀಗೆ ಗೈರು ಹಾಜರಾಗುವುದು ಸಾಮಾನ್ಯವಾಗಿದೆ ಎಂದು ಶಿಕ್ಷಣ ಅಧಿಕಾರಿಗಳು ಹೇಳಿದ್ದಾರೆ.

ಕೃಪೆ: gulfnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News