ಎಚ್ಚರ! ನೋಟಿನ ಗಡಿಬಿಡಿಯಲ್ಲಿ ವಂಚಕರು ನುಸುಳಿದ್ದಾರೆ

Update: 2016-11-11 06:19 GMT

ರೂ. 500 ಮತ್ತು ರೂ. 1000 ಕರೆನ್ಸಿ ನೋಟುಗಳ ಚಲಾವಣೆ ಅಮಾನ್ಯಗೊಂಡಿರುವ ಹಿನ್ನೆಲೆಯಲ್ಲಿ ಆಗಿರುವ ಗೊಂದಲದ ನಡುವೆ ವಂಚಕರು ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನವಂಬರ್ 10 ಬೆಳಗಿನ ಜಾವವೇ ಬ್ಯಾಂಕ್‌ಗಳು ಸಾರ್ವಜನಿಕರಿಗೆ ಹಳೇ ನೋಟುಗಳನ್ನು ಕಡಿಮೆ ಮೌಲ್ಯದ ನೋಟುಗಳನ್ನು ಸಮಾನ ಮೊತ್ತಕ್ಕೆ ವಿನಿಮಯ ಮಾಡಿಕೊಳ್ಳಲು ಅಥವಾ ತಮ್ಮ ಖಾತೆಗಳಿಗೆ ಠೇವಣಿ ಇಡಲು ಅವಕಾಶ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಂಕ್‌ಗಳೂ ದೀರ್ಘ ಸರತಿಗಳನ್ನು ನಿಭಾಯಿಸುತ್ತಿದೆ. ಇದೇ ಅವಕಾಶವನ್ನು ನೋಡಿಕೊಂಡು ಕೆಲವು ವಂಚಕರು ಬ್ಯಾಂಕ್ ವ್ಯವಹಾರ ಗೊತ್ತಿಲ್ಲದ ಗ್ರಾಹಕರಿಂದ ಬ್ಯಾಂಕ್ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನಮ್ಮಲ್ಲಿ ಕೆಲವು ಸಹೋದ್ಯೋಗಿಗಳಿಗೆ ಇಂತಹ ವಂಚಕ ಕರೆಗಳು ಬಂದಿವೆ. ಇಲ್ಲಿ ವಂಚಕರು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಂಬರ್‌ಗಳು, ನೆಟ್ ಬ್ಯಾಂಕಿಂಗ್ ದಾಖಲೆಗಳು ಮತ್ತು ಕೆಲವರ ಬಳಿ ಪಿನ್ ಮತ್ತು ಒಟಿಪಿಗಳನ್ನೂ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗರೂಕವಾಗಿರಲು ಇಲ್ಲಿ ಕೆಲವು ವಿವರಗಳಿವೆ,

► ನೀವು ತಿಳಿದುಕೊಳ್ಳಬೇಕಾದ ಮೊದಲ ಮತ್ತು ಅತೀಮುಖ್ಯ ಸಂಗತಿಯೊಂದಿದೆ. ಹಳೇ ಕರೆನ್ಸಿ ನೋಟುಗಳನ್ನು ಬದಲಿಸಿಕೊಳ್ಳಲು ನಿಮ್ಮ ಡೆಬಿಟ್/ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳಲು ಯಾವುದೇ ಬ್ಯಾಂಕ್ ನಿಮಗೆ ಎಂದೂ ಕರೆ ಮಾಡುವುದಿಲ್ಲ.

► ವಂಚಕರು ನಿಮಗೆ ತಾವು ಬ್ಯಾಂಕ್‌ನಿಂದ ಕರೆ ಮಾಡುವುದು ಎಂದು ಹೇಳಬಹುದು ಮತ್ತು ನೀವು ಠೇವಣಿ/ ಹಿಂಪಡೆಯುವುದಕ್ಕೆ ಅರ್ಹರೇ ಎಂದು ತಿಳಿದುಕೊಳ್ಳಲು ಬ್ಯಾಂಕಿನಿಂದ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಬಹುದು. ಇದು ಸುಳ್ಳು ಕರೆ. ನೀವು ಬ್ಯಾಂಕ್ ಮೂಲಕ ಯಾವುದೇ ಸಮಯದಲ್ಲೂ ಠೇವಣಿ ಇಡಲು ಅಥವಾ ಹಣ ಹಿಂಪಡೆದುಕೊಳ್ಳಲು ಅರ್ಹರಾಗಿರುತ್ತೀರಿ.

► ನಾಳೆ ಅಥವಾ ನಂತರದ ದಿನಗಳಲ್ಲಿ ನೀವು ಹಣವನ್ನು ಹಿಂಪಡೆದುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಹಣವನ್ನು ಬದಲಿಸಲಾಗಿದೆ ಅಥವಾ ಸಕ್ರಿಯಗೊಳಿಸಲಾಗಿದೆ ಎಂದೂ ಹೇಳುವ ಕರೆ ಬರುವ ಸಾಧ್ಯತೆಯಿದೆ. ಆ ಕರೆಯಲ್ಲೂ ನಿಮ್ಮ ಬ್ಯಾಂಕಿಂಗ್ ವಿವರಗಳಾದ ಖಾತೆ ಸಂಖ್ಯೆ, ಕಾರ್ಡ್ ಸಂಖ್ಯೆ ಅಥವಾ ನೆಟ್ ಬ್ಯಾಂಕಿಂಗ್ ವಿವರಗಳನ್ನು ಕೇಳಬಹುದು. ಯಾವುದೇ ಪರಿಸ್ಥಿತಿಯಲ್ಲಿಯೂ ನೀವು ಈ ವಿವರಗಳನ್ನು ಕೊಡಬೇಡಿ. ಏಕೆಂದರೆ ನೀವು ನಿಮ್ಮ ಖಾತೆಯಿಂದ ಹಣ ವಾಪಸು ತೆಗೆದಾಗ ಬ್ಯಾಂಕ್ ನಿಮಗೆ ಹೊಸ ಕರೆನ್ಸಿ ನೋಟುಗಳನ್ನು ಕೊಟ್ಟೇ ಕೊಡುತ್ತದೆ.

► ಎಟಿಎಂಗಳು ನವೆಂಬರ್ 11ರಿಂದ ತೆರೆಯಲಿವೆ. ವಂಚಕರ ಒಂದು ಟ್ರಿಕ್‌ನಲ್ಲಿ ಹೊಸ ನೋಟುಗಳನ್ನು ತೆಗೆಯಲು ನಿಮ್ಮ ಡೆಬಿಟ್ ಕಾರ್ಡ್ ಅರ್ಹವೇ ಎಂದು ತಿಳಿದುಕೊಳ್ಳಲು ನೀವು ಡೆಬಿಟ್ ಕಾರ್ಡ್ ವಿವರಗಳನ್ನು ಕೊಡಬೇಕು. ಈ ತಂತ್ರಕ್ಕೂ ದಯವಿಟ್ಟು ಮರುಳಾಗಬೇಡಿ. ನೀವು ಎಟಿಎಂಗಳಿಂದ ನಗದು ತೆಗೆಯಲು ಹಳೇ ಡೆಬಿಟ್ ಕಾರ್ಡನ್ನೇ ಬಳಸಬಹುದು. ಹೊಸ ಕರೆನ್ಸಿಯನ್ನೂ ಪಡೆಯಬಹುದು. ಆದರೆ ದೊಡ್ಡ ಮೊತ್ತವನ್ನು ತೆಗೆಯುವುದು ಸಾಧ್ಯವಾಗುವುದಿಲ್ಲ.

► ಅದು ಹೇಗೋ ವಂಚಕರು ನಿಮ್ಮ ಕಾರ್ಡ್ ವಿವರಗಳನ್ನು ಪಡೆದುಕೊಂಡಿರುವುದೇ ಆಗಿದ್ದಲ್ಲಿ, ನಿಮ್ಮ ಸಿವಿವಿ, ಪಿನ್ ಅಥವಾ ಒಟಿಪಿಯನ್ನು ನಿಮ್ಮ ಕಾರ್ಡ್ ಬಳಕೆ ಪರಿಶೀಲನೆಗೆ ಕೇಳಬಹುದು. ನಂತರ ಈ ವಿವರಗಳನ್ನು ವಂಚನೆಯ ವ್ಯವಹಾರಗಳಿಗೆ ಅಥವಾ ನಿಮ್ಮ ಖಾತೆಯಿಂದ ಹಣ ಬೇರೆಡೆಗೆ ವರ್ಗಾಯಿಸಲು ಬಳಸಿಕೊಳ್ಳಬಹುದು. ಯಾವುದೇ ವಿವರಗಳನ್ನು ಕೊಡಬೇಡಿ.

► ಬಹುತೇಕ ಪ್ರಕರಣಗಳಲ್ಲಿ ನಿಮ್ಮ ಬ್ಯಾಂಕಿನ ವಿವರಗಳು ಅವರ ಬಳಿ ಮೊದಲೇ ಇದ್ದ ಹೊರತಾಗಿ ಈ ವಂಚಕರು ಅವರು ಯಾವ ಬ್ಯಾಂಕಿನಿಂದ ಕರೆ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಾಗದು. ಅಂತಹ ಕರೆಗಳನ್ನು ನೀವು ಸ್ವೀಕರಿಸಿ ಮಾತನಾಡಿದಲ್ಲಿ ಅವರು ವಂಚಕರೇ ಎಂದು ತಿಳಿದುಕೊಳ್ಳುವ ಸರಳವಾದ ದಾರಿ ಎಂದರೆ ಅವರು ಯಾವ ಬ್ಯಾಂಕಿನಿಂದ ಕರೆ ಮಾಡುವುದು ಎಂದು ಕೇಳುವುದು.

ನಮ್ಮ ಸಹೋದ್ಯೋಗಿಯೊಬ್ಬರಿಗೆ ಇಂತಹ ವಂಚನೆಯ ಕರೆ ಬಂದಾಗ ನಾವು ಅದು ಎಲ್ಲಿಂದ ಬಂದಿದೆ ಎಂದು ತಿಳಿದುಕೊಳ್ಳಲು ಮರಳಿ ಕರೆ ಮಾಡಿದೆವು. ವಂಚಕ ನಮ್ಮ ಕಾರ್ಡ್ ವಿವರಗಳು, ಸಿವಿವಿ ಸಂಖ್ಯೆ, ಎಕ್ಸಪೈರಿ ಡೇಟ್ ಎಲ್ಲಾ ವಿವರಗಳನ್ನೂ ಕೇಳಿದ್ದ. ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವುದು ಎಂದರೆ, ನಿಮ್ಮ ಬಳಿ ಇರುವ ಹಣಗಳನ್ನು ನೀವು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ವೈಯಕ್ತಿಕವಾಗಿ ಮಾತ್ರ ಬದಲಿಸಿಕೊಳ್ಳಬಹುದು. ಯಾವುದೇ ಹಂತದಲ್ಲಿಯೂ ಬ್ಯಾಂಕಿನವರೆಂದು ಹೇಳಿದವರಿಗೆ ನೀವು ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಕೊಡುವಂತಿಲ್ಲ.

ಕೃಪೆ:indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News