ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ಶರಪೋವಾ ಪುನರಾಯ್ಕೆ?

Update: 2016-11-11 17:59 GMT

 ನ್ಯೂಯಾರ್ಕ್, ನ.11: ರಶ್ಯದ ಟೆನಿಸ್ ತಾರೆ ಮರಿಯಾ ಶರಪೋವಾ ವಿರುದ್ಧ ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ ಹೇರಿರುವ ನಿಷೇಧದ ಅವಧಿ ಎಪ್ರಿಲ್‌ನಲ್ಲಿ ಕೊನೆಗೊಳ್ಳಲಿದ್ದು, ಶರಪೋವಾ ಮತ್ತೊಮ್ಮೆ ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ಆಯ್ಕೆಯಾಗಲಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಟೆನಿಸ್ ಸ್ಪರ್ಧೆಗೂ ವಾಪಸಾಗಲಿದ್ದಾರೆ ಎಂದು ವಿಶ್ವಸಂಸ್ಥೆ ಗುರುವಾರ ನೀಡಿದ ಪ್ರಕಟನೆಯಲ್ಲಿ ತಿಳಿಸಿದೆ.

ಶರಪೋವಾ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯು ಶರಪೋವಾರನ್ನು ಸದ್ಭಾವನಾ ರಾಯಭಾರಿ ಸ್ಥಾನದಿಂದ ಅಮಾನತುಗೊಳಿಸಿತ್ತು. ವಿಶ್ವಸಂಸ್ಥೆ ಅಭಿವೃದ್ದಿ ಕಾರ್ಯಕ್ರಮದಲ್ಲಿ(ಯುಎನ್‌ಡಿಪಿ) ಶರಪೋವಾ ಮಾಡಿಕೊಂಡಿದ್ದ 9 ವರ್ಷಗಳ ಒಪ್ಪಂದಕ್ಕೆ ತಡೆ ಹೇರಲಾಗಿತ್ತು.

ಮರಿಯಾ ಶರಪೋವಾ ಕ್ರೀಡೆಗೆ ವಾಪಸಾಗುತ್ತಿರುವ ವಿಷಯ ಕೇಳಿ ನಮಗೆ ತುಂಬಾ ಸಂತೋಷವಾಗಿದೆ. ಅವರ ವಿರುದ್ಧ ನಿಷೇಧವನ್ನು ನಾವು ಹಿಂಪಡೆಯಲಿದ್ದೇವೆ ಎಂದು ಯುಎನ್‌ಡಿಪಿ ವಕ್ತಾರರು ತಿಳಿಸಿದ್ದಾರೆ.

ಕಳೆದ ತಿಂಗಳು ಸ್ವಿಸ್ ಮೂಲದ ಕ್ರೀಡಾ ಪಂಚಾಯಿತಿ ನ್ಯಾಯಾಲಯ ರಶ್ಯದ ಸ್ಟಾರ್ ಆಟಗಾರ್ತಿ ಶರಪೋವಾ ವಿರುದ್ಧ ವಿಧಿಸಲಾಗಿದ್ದ 24 ತಿಂಗಳ ನಿಷೇಧವನ್ನು 15 ತಿಂಗಳಿಗೆ ಕಡಿತಗೊಳಿಸಿತ್ತು. ಹೃದಯ ಸಂಬಂಧಿತ ಕಾಯಿಲೆಗಾಗಿ ತಾನು ಕಳೆದ 10 ವರ್ಷಗಳಿಂದ ಮೆಲ್ಡೊಡಿಯಮ್ ಸೇವಿಸುತ್ತಿದ್ದೆ ಎಂದು 29ರ ಪ್ರಾಯದ ಶರಪೋವಾ ತಪ್ಪೊಪ್ಪಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News