ದಿಲ್ಲಿಯ ಬಾಲಕ ತೇಜಸ್ವಿನ್ ಶಂಕರ್ ಹೊಸ ದಾಖಲೆ

Update: 2016-11-11 18:00 GMT

  ಹೊಸದಿಲ್ಲಿ, ನ.11: ಇಲ್ಲಿ ಗುರುವಾರ ಆರಂಭವಾದ 32ನೆ ಆವೃತ್ತಿಯ ನ್ಯಾಶನಲ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿರುವ ದಿಲ್ಲಿಯ ಬಾಲಕ ತೇಜಸ್ವಿನ್ ಶಂಕರ್ 12 ವರ್ಷ ಹಳೆಯ ರಾಷ್ಟ್ರೀಯ ದಾಖಲೆಯೊಂದನ್ನು ಮುರಿದರು.

17ರ ಹರೆಯದ ತೇಜಸ್ವಿನ್ ಹೈಜಂಪ್ ಸ್ಪರ್ಧೆಯಲ್ಲಿ 2.26 ಮೀ. ದೂರ ಜಿಗಿದು ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಅಪರೂಪದ ಸಾಧನೆ ಮಾಡಿದರು. ನ್ಯಾಶನಲ್ ಸೀನಿಯರ್ ರೆಕಾರ್ಡ್‌ನ್ನು ಮುರಿದರು.

2004ರಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯನ್ ಆಲ್ ಸ್ಟಾರ್ ಅಥ್ಲೆಟಿಕ್ಸ್ ಕೂಟದಲ್ಲಿ ಪಶ್ಚಿಮಬಂಗಾಳದ ಹರಿ ಶಂಕರ್ ರಾಯ್ 2.25 ಮೀ. ದೂರ ಜಿಗಿದು ಬೆಳ್ಳಿ ಪದಕದ ಜೊತೆಗೆ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು.

ಇದೀಗ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ತೇಜಸ್ವಿನ್ ಸೆಪ್ಟಂಬರ್‌ನಲ್ಲಿ ಲಕ್ನೋದಲ್ಲಿ ನಡೆದ ನ್ಯಾಶನಲ್ ಓಪನ್ ಅಥ್ಲೆಟಿಕ್ಸ್‌ನಲ್ಲಿ 2.22 ಮೀ. ದೂರ ಜಿಗಿದು ಚಿನ್ನದ ಪದಕ ಜಯಿಸಿದ್ದರು. 2015ರ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿರುವ ತೇಜಸ್ವಿನ್ ಗುರುವಾರ ಇಲ್ಲಿ ನಡೆದ ಸ್ಪರ್ಧೆಯ ಮೊದಲ ಯತ್ನದಲ್ಲಿ 2.06, 2.12, 2.18, 2.21 ಮೀ. ದೂರ ಜಿಗಿದಿದ್ದರು. ಎರಡನೆ ಯತ್ನದಲ್ಲಿ 2.26 ಮೀ. ದೂರ ಜಿಗಿದು ಹೊಸ ದಾಖಲೆ ಬರೆದಿದ್ದರು.

ಜೂನಿಯರ್ ಗ್ರೇಡ್‌ನಲ್ಲಿ ಸೀನಿಯರ್ ರೆಕಾರ್ಡ್ ದಾಖಲಾಗುವುದು ತುಂಬಾ ಅಪರೂಪ. ತಮಿಳುನಾಡಿನ ಎನ್. ಅನ್ವಿ 1984ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ 2.12 ಮೀ. ದೂರ ಜಿಗಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News