ರಾಜ್‌ಕೋಟ್‌ನಲ್ಲಿ ಪೂಜಾರ -ವಿಜಯ್ ಶತಕ: ಆಂಗ್ಲರಿಗೆ ಭಾರತ ತಿರುಗೇಟು

Update: 2016-11-11 18:21 GMT

ರಾಜ್‌ಕೋಟ್, ನ.11: ಸೌರಾಷ್ಟ್ರದ ದಾಂಡಿಗ ಚೇತೇಶ್ವರ ಪೂಜಾರ ಮತ್ತು ಮುರಳಿ ವಿಜಯ್ ದಾಖಲಿಸಿದ ಆಕರ್ಷಕ ಶತಕದ ನೆರವಿನಲ್ಲಿ ಭಾರತ ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿದೆ.
ಮೊದಲ ಟೆಸ್ಟ್‌ನ ಮೂರನೆ ದಿನವಾಗಿರುವ ಇಂದು ಪೂಜಾರ ಮತ್ತು ವಿಜಯ್ ಎರಡನೆ ವಿಕೆಟ್‌ಗೆ ಜೊತೆಯಾಟದಲ್ಲಿ ದಾಖಲಿಸಿದ 209 ರನ್‌ಗಳ ನೆರವಿನಲ್ಲಿ ಭಾರತ ಸುಭದ್ರ ಸ್ಥಿತಿಯಲ್ಲಿದೆ.
ದಿನದಾಟದಂತ್ಯಕ್ಕೆ ಭಾರತ 108.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 319 ರನ್ ಗಳಿಸಿದೆ. 26 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
 ಭಾರತ ಇನ್ನು ಇಂಗ್ಲೆಂಡ್‌ನ ಮೊತ್ತವನ್ನು ಸರಿಗಟ್ಟಲು 218 ರನ್ ಗಳಿಸಬೇಕಾಗಿದೆ. ಎರಡನೆ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 23 ಓವರ್‌ಗಳಲ್ಲಿ 63 ರನ್ ಗಳಿಸಿದ್ದ ಭಾರತಕ್ಕೆ ಇಂದು ಆರಂಭದಲ್ಲೇ ಆಘಾತ ಕಾದಿತ್ತು. ಇಂದಿನ ಏಳನೆ ಎಸೆತದಲ್ಲಿ ಗೌತಮ್ ಗಂಭೀರ್ ಅವರನ್ನು ಕಳೆದುಕೊಂಡಿತ್ತು.
  ಗಂಭೀರ್ ನಿನ್ನೆಯ ಮೊತ್ತಕ್ಕೆ 1 ರನ್ ಸೇರಿಸುವಷ್ಟರಲ್ಲಿ ಅವರನ್ನು ಸ್ಟುವರ್ಟ್ ಬ್ರಾಡ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಇಂಗ್ಲೆಂಡ್ ಬಹಳ ಬೇಗನೆ ಮೊದಲ ವಿಕೆಟ್ ಉಡಾಯಿಸಿದ್ದರೂ, ಎರಡನೆ ವಿಕೆಟ್ ಪಡೆಯಲು ಬಹಳ ಹೊತ್ತು ಕಾಯಬೇಕಾಯಿತು.
ಮುರಳಿ ವಿಜಯ್‌ಗೆ ಚೇತೇಶ್ವರ ಪೂಜಾರ ಜೊತೆಯಾದರು. ಇವರನ್ನು ಪೆವಿಲಿಯನ್‌ಗೆ ಅಟ್ಟಲು ಇಂಗ್ಲೆಂಡ್‌ನ ಬೌಲರುಗಳು ಆರಂಭದಲ್ಲಿ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ.
ಇಂಗ್ಲೆಂಡ್‌ನ ಬೌಲರ್‌ಗಳನ್ನು ಪೂಜಾರ ಮತ್ತು ವಿಜಯ್ ಚೆನ್ನಾಗಿ ದಂಡಿಸಿದರು. ಇವರು ಎರಡನೆ ವಿಕೆಟ್‌ಗೆ 67 ಓವರ್‌ಗಳಲ್ಲಿ 209 ರನ್‌ಗಳನ್ನು ಸೇರಿಸಿದರು.
ಪೂಜಾರ 9ನೆ ಶತಕ: ಇಪ್ಪತ್ತೆಂಟರ ಹರೆಯದ ಚೇತೇಶ್ವರ ಪೂಜಾರ ಅವರು 39ನೆ ಟೆಸ್ಟ್‌ನಲ್ಲಿ 9ನೆ ಶತಕ ದಾಖಲಿಸಿದರು. ಪೂಜಾರ ಸಂಜೆ ಟೀ ವಿರಾಮದ ಬಳಿಕ ಶತಕ ಪೂರ್ಣಗೊಳಿಸಿದರು.
169 ಎಸೆತಗಳನ್ನು ಎದುರಿಸಿದ್ದ ಅವರು 15 ಬೌಂಡರಿಗಳ ಸಹಾಯದಿಂದ ಶತಕ ಪೂರೈಸಿದರು.
 ಪೂಜಾರ 86 ರನ್ ಗಳಿಸಿದ್ದಾಗ ಔಟಾಗುವ ಅವಕಾಶ ಇತ್ತು. ಆದರೆ ಡಿಆರ್‌ಎಸ್ ನೆರವಿನಿಂದ ಅವರು ಶತಕ ಪೂರ್ಣಗೊಳಿಸುವ ಅವಕಾಶ ಪಡೆದರು. ಅನ್ಸಾರಿ ಎಸೆತದಲ್ಲಿ ಚೆಂಡು ಪೂಜಾರ ಪ್ಯಾಡ್‌ಗೆ ಬಡಿಯಿತು. ಈ ಹಂತದಲ್ಲಿ ಅವರಿಗೆ ತವರಿನಲ್ಲಿ ಶತಕ ವಂಚಿತಗೊಳ್ಳುವ ಎಲ್ಲ ಅವಕಾಶ ಇತ್ತು. ಆದರೆ ಡಿಆರ್‌ಎಸ್ ಅವರಿಗೆ ವರದಾನವಾಯಿತು. ಅವರು ಬ್ಯಾಟಿಂಗ್ ಮುಂದುವರಿಸಿ 124 ರನ್(206ಎ, 17ಬೌ) ಗಳಿಸಿ ಔಟಾದರು.
ವಿಜಯ್ ಶತಕ: ಆರಂಭಿಕ ದಾಂಡಿಗ ಮುರಳಿ ವಿಜಯ್ ಅವರು 7ನೆ ಶತಕ ದಾಖಲಿಸಿದರು. 32ರ ಹರೆಯದ ವಿಜಯ್ 43ನೆ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದಾರೆ. ಪೂಜಾರ ಶತಕ ದಾಖಲಿಸಿದ ಬಳಿಕ ವಿಜಯ್ ಶತಕ ಪೂರ್ಣಗೊಳಿಸಿದರು. ಮುರಳಿ ವಿಜಯ್ ಅವರು 66 ರನ್ ತಲುಪಿದ್ದಾಗ ಜೀವದಾನ ಪಡೆದಿದ್ದರು. ಚೊಚ್ಚಲ ಟೆಸ್ಟ್ ಆಡುತ್ತಿರುವ ಹಸೀಬ್ ಹಮೀದ್ ಅವರು ಕ್ಯಾಚ್ ಕೈ ಚೆಲ್ಲಿದ ಕಾರಣದಿಂದಾಗಿ ಮುರಳಿ ವಿಜಯ್ ಶತಕ ತಲುಪುವ ಮೊದಲೇ ಔಟಾಗುವ ಅವಕಾಶದಿಂದ ಪಾರಾಗಿದ್ದರು.
ವಿಜಯ್ 254 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಶತಕ ತಲುಪಿದರು.
ಭಾರತದ ಸ್ಕೋರ್ 107.6ಓವರ್‌ಗಳಲ್ಲಿ 318ಕ್ಕೆ ತಲುಪಿದ್ದಾಗ ಮುರಳಿ ವಿಜಯ್ ಔಟಾದರು. ಕೊಹ್ಲಿ ಮತ್ತು ಮುರಳಿ ವಿಜಯ್ ಮೂರನೆ ವಿಕೆಟ್‌ಗೆ 41 ರನ್ ಸೇರಿಸಿದರು.
ಔಟಾಗುವ ಮೊದಲು ವಿಜಯ್ 126 ರನ್(301ಎ, 9ಬೌ, 4ಸಿ) ಗಳಿಸಿ ಔಟಾದರು.
ವಿಜಯ್ ಔಟಾದ ಬಳಿಕ ಕ್ರೀಸ್‌ಗೆ ಆಗಮಿಸಿದ ನೈಟ್‌ವಾಚ್‌ಮೆನ್ ಅಮಿತ್ ಮಿಶ್ರಾ (0) ಖಾತೆ ತೆರೆಯದೆ ಪೆವಿಲಿಯನ್‌ಗೆ ವಾಪಸಾದರು.
 ಸುವರ್ಣಾವಕಾಶ ವಂಚಿತ ಗಂಭೀರ್: ಆರಂಭಿಕ ದಾಂಡಿಗ ಗೌತಮ್ ಗಂಭೀರ್‌ಗೆ ಚೆನ್ನಾಗಿ ಆಡುವ ಮೂಲಕ ತಂಡದಲ್ಲಿ ಸ್ಥಾನ ಭದ್ರಪಡಿಸಲು ಈ ಟೆಸ್ಟ್‌ನಲ್ಲಿ ಅವಕಾಶ ಇತ್ತು. ಆದರೆ ಎಲ್‌ಬಿಡಬ್ಲು ಬಲೆಗೆ ಬಿದ್ದು ಈ ಅವಕಾಶ ಕಳೆದುಕೊಂಡರು. ಬ್ರಾಡ್ ಅವರ ಇಂದಿನ ಮೊದಲ ಓವರ್‌ನಲ್ಲಿ ಗಂಭೀರ್ ಔಟಾದರು. ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್, ಜಾಫರ್ ಅನ್ಸಾರಿ, ಆದುಲ್ ರಶೀದ್ ಮತ್ತು ಸ್ಟೋಕ್ಸ್ ತಲಾ ಒಂದು ವಿಕೆಟ್ ಹಂಚಿಕೊಂಡರು.

ಸ್ಕೋರ್ ವಿವರ

ಇಂಗ್ಲೆಂಡ್ ಪ್ರಥಮ ಇನಿಂಗ್ಸ್

159.3 ಓವರ್‌ಗಳಲ್ಲಿ 537

ಭಾರತ ಪ್ರಥಮ ಇನಿಂಗ್ಸ್: 108.3 ಓವರ್‌ಗಳಲ್ಲಿ 319/4

ಮುರಳಿ ವಿಜಯ್ ಸಿ ಹಮೀದ್ ಬಿ ರಶೀದ್ 126

ಗೌತಮ್ ಗಂಭೀರ್ ಎಲ್ಬಿಡಬ್ಲು ಬ್ರಾಡ್ 29

ಪೂಜಾರ ಸಿ ಕುಕ್ ಬಿ ಸ್ಟೋಕ್ಸ್ 124

ವಿರಾಟ್ ಕೊಹ್ಲಿ ಅಜೇಯ 26

ಅಮಿತ್ ಮಿಶ್ರಾ ಸಿ ಹಮೀದ್ ಬಿ ಅನ್ಸಾರಿ 00

ಇತರ 14

ಬೌಲಿಂಗ್ ವಿವರ: ಬ್ರಾಡ್ 20-7-54-1

ವೋಕ್ಸ್ 23-5-39-0

ಅಲಿ 22-6-70-0

ಅನ್ಸಾರಿ 17.3-1-57-1

ರಶೀದ್ 16-1-39-1

ಸ್ಟೋಕ್ಸ್ 10-1-39-1

ಅಂಕಿ-ಅಂಶ

03: ಚೇತೇಶ್ವರ ಪೂಜಾರ ಇಂಗ್ಲೆಂಡ್‌ನ ವಿರುದ್ಧ ಮೂರನೆ ಶತಕ ಬಾರಿಸಿದರು. ರಾಜ್‌ಕೋಟ್‌ನಲ್ಲಿ 124 ರನ್ ಗಳಿಸಿರುವ ಪೂಜಾರ 2012-13ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸ್ವದೇಶಿ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅಜೇಯ 206 ಹಾಗೂ 135 ರನ್ ಗಳಿಸಿದ್ದರು.

2: ವಿಜಯ್ ಹಾಗೂ ಪೂಜಾರ ಇಂಗ್ಲೆಂಡ್‌ನ ವಿರುದ್ಧ 2ನೆ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿದ ಭಾರತದ ಎರಡನೆ ಜೋಡಿ. 2008-09ರಲ್ಲಿ ಮೊಹಾಲಿಯಲ್ಲಿ ರಾಹುಲ್ ದ್ರಾವಿಡ್ ಹಾಗೂ ಗೌತಮ್ ಗಂಭೀರ್ 314 ರನ್ ಜೊತೆಯಾಟ ನಡೆಸಿದ್ದರು. ಕಳೆದ 20 ವರ್ಷಗಳಲ್ಲಿ ಭಾರತ ಮೂರನೆ ಬಾರಿ ಇಂಗ್ಲೆಂಡ್‌ನ ವಿರುದ್ಧ 200ಕ್ಕೂ ಅಧಿಕ ಜೊತೆಯಾಟ ನಡೆಸಿದೆ.

2: ಪೂಜಾರ ಹಾಗೂ ವಿಜಯ್ ಎರಡನೆ ವಿಕೆಟ್‌ನಲ್ಲಿ ಎರಡನೆ ಬಾರಿ ದ್ವಿಶತಕ ಜೊತೆಯಾಟ ನಡೆಸಿದ್ದಾರೆ. 2012-13ರಲ್ಲಿ ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 370 ರನ್ ಸೇರಿಸಿದ್ದರು. ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಭಾರತದ ಪರ ಮೂರು ಬಾರಿ 2ನೆ ವಿಕೆಟ್‌ಗೆ ದ್ವಿಶತಕ ಜೊತೆಯಾಟ ನಡೆಸಿದ್ದಾರೆ.

65.09: ಎಂ. ವಿಜಯ್ ಹಾಗೂ ಸಿ.ಪೂಜಾರ ಭಾರತದ ಪರ 65.09ರ ಸರಾಸರಿಯಲ್ಲಿ ಜೊತೆಯಾಟ ನಡೆಸಿದ್ದಾರೆ. ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ 209 ರನ್ ಜೊತೆಯಾಟ ನಡೆಸಿರುವ ವಿಜಯ್-ಪೂಜಾರ 2000 ರನ್ ಪೂರೈಸಿದರು. 2010ರ ಬಳಿಕ 2000 ರನ್ ಜೊತೆಯಾಟ ನಡೆಸಿದ ಭಾರತದ ಮೊದಲ ಜೋಡಿ ವಿಜಯ್-ಪೂಜಾರ.

 81.45: ವಿಜಯ್ 2014ರ ಬಳಿಕ ಸರಣಿಯ ಮೊದಲ ಟೆಸ್ಟ್‌ನಲ್ಲಿ 81.45ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ವಿಜಯ್ 11 ಇನಿಂಗ್ಸ್‌ಗಳಲ್ಲಿ 896 ರನ್ ಗಳಿಸಿದ್ದಾರೆ. 6: ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲೆರಡು ಇನಿಂಗ್ಸ್‌ಗಳಲ್ಲಿ ಆರು ಬಾರಿ ಐದು ಹಾಗೂ ಅದಕ್ಕಿಂತ ಹೆಚ್ಚು ಶತಕ ಗಳು ದಾಖಲಾಗಿದೆ. 2009-10ರಲ್ಲಿ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಕೊನೆಯ ಬಾರಿ ಇಂತಹ ದೃಷ್ಟಾಂತ ದಾಖಲಾಗಿತ್ತು. ಆಗ ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್‌ನಲ್ಲಿ 2 ಶತಕ ಬಾರಿಸಿದ್ದರೆ, ಭಾರತ ನಾಲ್ಕು ಶತಕ ಬಾರಿಸಿದ್ದರು.

ಭಾರತದ ಯಶಸ್ವಿ ಜೋಡಿ

ಟೆಸ್ಟ್‌ನಲ್ಲಿ ಗರಿಷ್ಠ ಸರಾಸರಿಯಲ್ಲಿ ದಾಖಲಾದ ಜೊತೆಯಾಟ

ಜೊತೆಗಾರರು           ರನ್‌              ಸರಾಸರಿ         100

ಪೂಜಾರ-ವಿಜಯ್       2081              65.03            06

 ಗಂಗುಲಿ-ತೆಂಡುಲ್ಕರ್   4173              61.36             12

ದ್ರಾವಿಡ್-ಸೆಹ್ವಾಗ್       3383              60.41             10

ಅಝರ್-ತೆಂಡುಲ್ಕರ್   2385              58.17              09

ಅಮರನಾಥ್-ಗವಾಸ್ಕರ್2366             55.02             10


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News