ಮೋದಿಯ ಐತಿಹಾಸಿಕ ಆದೇಶ ಅನುಷ್ಠಾನಕ್ಕೆ ಕೊಡುಗೆ ನೀಡಿದ ಮೈಸೂರು ವಿಮಾನ ನಿಲ್ದಾಣ !
ಬೆಂಗಳೂರು,ನ. 12 : ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಆದೇಶ ಅನುಷ್ಠಾನಕ್ಕೆ ಕರ್ಣಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಕೊಡುಗೆ ಅಪಾರ. ಅದರಲ್ಲೂ ಮೈಸೂರು ಸರಕಾರಿ ನೋಟು ಮುದ್ರಣಾಲಯದಿಂದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನವದೆಹಲಿಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕಿಗೆ ಸಾಗಿಸಲು ಚಾರ್ಟರ್ಡ್ ವಿಮಾನ, ಮೈಸೂರು ವಿಮಾನ ನಿಲ್ದಾಣದಿಂದ ಕಳೆದ ಆರು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿತ್ತು. ಇದರಿಂದಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಮಾಡಿದ ವೆಚ್ಚ ವ್ಯರ್ಥವಲ್ಲ ಎನ್ನುವುದು ಇದೀಗ ಸಾಬೀತಾಗಿದೆ.
ಕಳೆದ ಕೆಲ ವರ್ಷಗಳಿಂದ ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣ ಅವಕೃಪೆಗೆ ಪಾತ್ರವಾಗಿತ್ತು. ಏಕೈಕ ರನ್‌ವೇ ಹೊಂದಿರುವ ಈ ಪುಟ್ಟ ವಿಮಾನ ನಿಲ್ದಾಣ ಇದೀಗ ಇಡೀ ದೇಶದಲ್ಲೇ ಕಂಪನ ಮೂಡಿಸಿರುವ ಐತಿಹಾಸಿಕ ನಿರ್ಧಾರ ಅನುಷ್ಠಾನಕ್ಕೆ ಗಣನೀಯ ಕೊಡುಗೆ ನೀಡಿದೆ.
ಈ ಬಗ್ಗೆ ತೀರಾ ಗೌಪ್ಯ ಕಾಪಾಡಿಕೊಂಡು ಬರಲಾಗುತ್ತಿತ್ತು. ಆದರೆ ಇದರ ಮಧ್ಯೆ ಖಾಸಗಿ ಚಾರ್ಟರ್ಡ್ ವಿಮಾನವೊಂದು ಸದ್ದುಗದ್ದಲವಿಲ್ಲದೆ ತನ್ನ ಕಾರ್ಯವನ್ನು ನಿರ್ವಹಿಸುತ್ತಲೇ ಇತ್ತು. ಈ ವಿಮಾನ ಮೈಸೂರಿನಿಂದ ಬೆಂಗಳೂರು ಸೇರಿದಂತೆ ಆರ್‌ಬಿಐ ಕಚೇರಿ ಇರುವ ಹಲವೆಡೆಗಳಿಗೆ ಸಂಚಾರ ಕೈಗೊಂಡಿದೆ.
ಮೈಸೂರಿನ ನೋಟು ಮುದ್ರಣಾಲಯದಲ್ಲಿ ಮುದ್ರಣವಾದ 2000 ರೂಪಾಯಿ ನೋಟುಗಳನ್ನು ವಿವಿಧ ಆರ್‌ಬಿಐ ಕಚೇರಿಗಳಿಗೆ ರವಾನಿಸುವಲ್ಲಿ ಈ ವಿಮಾನ ನಿಲ್ದಾಣ ಗಣನೀಯ ಕೊಡುಗೆ ನೀಡಿದೆ. ಇದು 500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳ ಚಲಾವಣೆ ರದ್ದು ಮಾಡುವ ನಿರ್ಧಾರಕ್ಕೆ ವೇದಿಕೆ ಒದಗಿಸಿತ್ತು.
ಮೈಸೂರಿನಲ್ಲಿರುವ ನೋಟು ಮುದ್ರಣಾಲಯ ಅಧಿಕ ಭದ್ರತೆಯ ವಲಯವಾಗಿದ್ದು, ಇಲ್ಲಿಗೆ ಪ್ರತ್ಯೇಕವಾದ ರೈಲು ಹಳಿ ವ್ಯವಸ್ಥೆ ಮತ್ತು ನೀರು ಸರಬರಾಜು ವ್ಯವಸ್ಥೆ ಇದೆ. ಎರಡು ದಶಕದಷ್ಟು ಹಳೆಯ ಈ ಮುದ್ರಣಾಲಯ ವಿಶ್ವಮಟ್ಟದಲ್ಲೇ ಅತ್ಯಂತ ಶ್ರೇಷ್ಠ ನೋಟು ಮುದ್ರಣಾಲಯಗಳಲ್ಲೊಂದು. ಈ ಮುದ್ರಣಾಲಯದಲ್ಲಿ 2000 ರೂಪಾಯಿಗಳ ನೋಟು ಮುದ್ರಣ ಕಾರ್ಯ ಆರು ತಿಂಗಳ ಹಿಂದೆ ಆರಂಭವಾಗಿತ್ತು.
ಹೀಗೆ ಮುದ್ರಣವಾದ ನೋಟುಗಳನ್ನು 20 ಲಕ್ಷದಿಂದ ಹಿಡಿದು 2 ಕೋಟಿ ವರೆಗೆ ಆಯಾ ಬ್ಯಾಂಕು ಶಾಖೆಗಳ ಗಾತ್ರವನ್ನು ಹೊಂದಿಕೊಂಡು ನೀಡಲಾಗಿದೆ.