ಜೇಟ್ಲಿಗೆ ವೌಖಿಕ ಮನವಿ

Update: 2016-11-12 18:46 GMT

ದೇಶದಲ್ಲಿ 500 ಹಾಗೂ 1000 ರೂಪಾಯಿ ನೋಟಿನ ಚಲಾವಣೆ ರದ್ದು ಮಾಡುವ ಮೂಲಕ ಮೋದಿ, ಕಪ್ಪುಹಣ ವಿರುದ್ಧ ಸರ್ಜಿಕಲ್ ದಾಳಿ ನಡೆಸಿರಬಹುದು. ಆದರೆ ಇದರ ಪರಿಣಾಮವಾಗಿ ದೂರವಾಣಿ ಕರೆಗಳು ಬರುತ್ತಿರುವುದು ಹಣಕಾಸು ಸಚಿವ ಅರುಣ್ ಜೇಟ್ಲಿಯವವರಿಗೆ. ಸರಕಾರದ ನಿರ್ಧಾರ ಕುರಿತಂತೆ ಮನವಿಗಳ ಮಹಾಪೂರವೇ ದೂರವಾಣಿ ಮೂಲಕ ಜೇಟ್ಲಿಗೆ ಹರಿದುಬರುತ್ತಿದೆ. ಈ ನಿರ್ಧಾರದಿಂದ ದೊಡ್ಡ ಆತಂಕ ಎದುರಾಗಿರುವುದು ದೇಶದ ಶ್ರೀಮಂತ ದೇವಾಲಯಗಳಿಗೆ. ಇಂಥ ದೇವಾಲಯಗಳ ಕೋಟ್ಯಂತರ ರೂಪಾಯಿ ಲಾಕರ್‌ಗಳಲ್ಲಿ ದಾಸ್ತಾನು ಇವೆ. ಬಿಜೆಪಿ ಹಿಂದೂ ಪರ ಪಕ್ಷವಾಗಿರುವುದರಿಂದ ದೇವಾಲಯಗಳಿಗೆ ಈ ನಿರ್ಧಾರದಿಂದ ವಿನಾಯಿತಿ ಇದೆಯೇ ಎಂದು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಎದುರಾದಾಗ, ಜೇಟ್ಲಿ ನಕ್ಕು ಸುಮ್ಮನಾಗಿದ್ದರು. ಈ ಬಗ್ಗೆ ನಮಗೆ ವೌಖಿಕ ಮನವಿಗಳು ಬಂದಿವೆ. ಆದರೆ ಎಲ್ಲರಿಗೂ ಒಂದೇ ಕಾನೂನು ಎಂದು ಸ್ಪಷ್ಟಪಡಿಸಿದ್ದರು. ಆದರೆ ದೇವಾಲಯಗಳ ಆಡಳಿತ ಮಂಡಳಿಗಳು ಮಾತ್ರ ತಮಗೆ ಬೇರೆ ಕಾನೂನು ಬರಬಹುದು ಎಂಬ ನಿರೀಕ್ಷೆಯಲ್ಲಿವೆ.

ರಾಹುಲ್ ಬಗ್ಗೆ ತರೂರ್‌ಗೆ ಏಕೆ ಪುಳಕ?
ಕಾಂಗ್ರೆಸ್‌ನ ಭವಿಷ್ಯದ ನಾಯಕತ್ವ ನಿರ್ಧಾರದಂಥ ಮಹತ್ವದ ನಿರ್ಣಯ ಕೈಗೊಳ್ಳಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆೆ ನಿಗದಿಯಾಗಿದೆ. ರಾಹುಲ್‌ಗಾಂಧಿಯವರ ಬಂಧನ, ಬಿಡುಗಡೆ, ಪುನರ್‌ಬಂಧನದ ವಿವಾದ, ಪಕ್ಷ ಮುನ್ನಡೆಸುವ ಹುದ್ದೆಗೆ ಅವರ ಉಮೇದುವಾರಿಕೆಯನ್ನು ಮತ್ತಷ್ಟು ಬಲಪಡಿಸುವಂಥದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಉಪಾಧ್ಯಕ್ಷನಿಗೆ ಹೊಣೆಗಾರಿಕೆಯನ್ನು ಹಸ್ತಾಂತರಿಸುವ ಬಗ್ಗೆ ಸೋನಿಯಾ ನೇತೃತ್ವದ ಕಾರ್ಯಕಾರಿ ಸಮಿತಿ ನಿರ್ಧರಿಸುತ್ತದೆಯೇ ಎಂಬ ಕುತೂಹಲ ಸಹಜವಾಗಿಯೇ ಮೂಡಿದೆ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕೆಲ ಬೆಂಬಲಿಗರು ರಾಹುಲ್‌ಗಾಂಧಿ ಪರ ಇದಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಉದಾಹರಣೆಗೆ ಶಶಿ ತರೂರ್ ಇತ್ತೀಚೆಗೆ ರಾಹುಲ್‌ಗಾಂಧಿ ಬಂಧನ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಪುನರುತ್ಥಾನದ ಆರಂಭ. 1979ರಲ್ಲಿ ಇಂದಿರಾಗಾಂಧಿಯವರ ಬಂಧನದ ಒಂದೇ ವರ್ಷದ ಬಳಿಕ ಅಭೂತಪೂರ್ವ ವಿಜಯಕ್ಕೆ ಹೇಗೆ ಕಾರಣವಾಯಿತೋ ಹಾಗೆ ಎಂದು ಟ್ವೀಟ್ ಮಾಡಿದ್ದರು. ತರೂರ್ ಅವರ ಅತಿಯಾದ ಆಶಾವಾದ ಪಕ್ಷದ ಒಂದು ವಲಯವನ್ನೇ ನಿಬ್ಬೆರಗುಗೊಳಿಸಿದೆ. ಏಕೆಂದರೆ ತರೂರ್ ಹಾಗೂ ಕಪಿಲ್ ಸಿಬಲ್ ಅವರು, ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಸ್ಪರ್ಧೆಗೆ ಒತ್ತಡ ತರುವ ಸಂಭಾವ್ಯ ನಾಯಕರು.

ಅಮರ್‌ಸಿಂಗ್ ಮಿಸ್ಟರ್ ಕೂಲ್..
 ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಯಾದವೀ ಕಲಹ ತಣ್ಣಗಾಗುವ ಸೂಚನೆ ಕಾಣುತ್ತಿಲ್ಲ. ಆದರೆ ಪಕ್ಷದಲ್ಲಿ ಇಂದಿಗೂ ವರ್ಚಸ್ಸು ಉಳಿಸಿಕೊಂಡು, ಮಾರ್ಗದರ್ಶನ ಮಾಡುವ ಸಾಧನ ಎಂದು ಹೇಳಲಾದ ಅಮರ್‌ಸಿಂಗ್ ಮಾತ್ರ ಪಕ್ಷದ ಬೆಳವಣಿಗೆಗಳ ಬಗ್ಗೆ ನಿಶ್ಚಿಂತೆಯಿಂದ ಇದ್ದಾರೆ. ಅವರು ಮಾಧ್ಯಮಕ್ಕೆ ನೆನಪಿಸಿದಂತೆ, ಇಲ್ಲಿ ಪ್ರಮುಖವಾಗುವುದು ಅಖಿಲೇಶ್ ಅಭಿಪ್ರಾಯ ಅಲ್ಲ. ಅವರ ತಂದೆ, ನೇತಾಜಿಯವರದ್ದು. ಅವರ ವಿಶ್ವಾಸ ಅರ್ಥ ಮಾಡಿಕೊಳ್ಳಬಹುದಾದದ್ದು. ಅಮರ್ ಸಿಂಗ್ ಪ್ರಕಾರ, ಮುಲಾಯಂ ಅವರ ಪಾತ್ರ ಸುಸ್ಪಷ್ಟ. ರಾಷ್ಟ್ರೀಯ ಜನತಾದಳ, ಕಾಂಗ್ರೆಸ್ ಹಾಗೂ ಸಂಯುಕ್ತ ಜನತಾದಳ ಜತೆಗೆ ಸಂಬಂಧ ಬೆಸೆದುಕೊಂಡು ಮುಲಾಯಂ ಮುಖ್ಯಮಂತ್ರಿಯಾಗಿ ಮರಳಬೇಕು. ಆಡಳಿತವಿರೋಧಿ ಅಲೆಯ ಸ್ಪಷ್ಟ ಅರಿವು ಮುಲಾಯಂ ಅವರಿಗೆ ಇದೆ. ಅಮರ್‌ಸಿಂಗ್ ಅವರ ಜಾಲದ ಕೌಶಲದ ಮೇಲೆ ಮುಲಾಯಂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮ್ಮ ನೇತೃತ್ವದಲ್ಲಿ ವಾಸ್ತವ ಮೈತ್ರಿಕೂಟ ರೂಪಿಸುವಲ್ಲಿ ಇದು ಕೆಲಸ ಮಾಡುತ್ತದೆ ಎಂಬ ನಂಬಿಕೆ ಅವರಿಗೆ ಇದೆ. ಅಮರ್‌ಸಿಂಗ್ ಅವರು ಪಕ್ಷದ ಯಾದವೀ ಕಲಹದಲ್ಲಿ ಯಾವ ಗುಂಪಿನಲ್ಲೂ ಗುರುತಿಸಿಕೊಳ್ಳದಿರುವುದು ಅಚ್ಚರಿಯೇನಲ್ಲ.

ದುರದೃಷ್ಟದ ಗ್ರಹಗತಿ
ಅಸ್ವಸ್ಥತೆಯ ಗೂಡಿನಿಂದ ರಾಜಸ್ಥಾನ ಸಿಎಂ ಕೊನೆಗೂ ಹೊರಬಂದಿದ್ದಾರೆ. ಆದರೆ ಇನ್ನೂ ಕೆಲ ಕಾಲದ ವರೆಗೆ ತೀರಾ ಲೋ ಪ್ರೊಫೈಲ್ ಆಗಿಯೇ ಮುಂದುವರಿಯುವಂತೆ ಅವರ ಜ್ಯೋತಿಷಿಗಳು ವಸುಂಧರಾ ರಾಜೇ ಅವರಿಗೆ ಸಲಹೆ ಮಾಡಿದ್ದಾರೆ. ಏಕೆಂದರೆ ಅವರ ಗ್ರಹಗತಿ ಇದಕ್ಕೆ ಕಾರಣ. ರಾಜೇ ಪಾಲಿಗೆ ಎಲ್ಲವೂ ಸುಲಲಿತವಾಗುತ್ತಿಲ್ಲ. ದೂನ್ ಸ್ಕೂಲ್ ಉಪಾಧ್ಯಕ್ಷ ಗಾದಿಯ ಹೋರಾಟದಲ್ಲಿ ಮಗನ ಸೋಲು ಅವರನ್ನು ಕಂಗೆಡಿಸಿದೆ. ಅಂತೆಯೇ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಬಂಡಾಯ ಕಾಣಿಸಿಕೊಂಡಿದ್ದು, ಬೆಂಬಲಿಗರು ಕಾಂಗ್ರೆಸ್ ಕಡೆಗೆ ವಾಲುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಜೇ, ಭವಿಷ್ಯ ನುಡಿಯುವವರ ಸಲಹೆ ಪಡೆದಾಗ, ಆಕೆಯ ರಾಜಯೋಗದ ಯುಗ ಮುಗಿದಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ ಸದ್ಯೋಭವಿಷ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂದೂ ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಇದರ ಬದಲು ಆಕೆ ಸಂವಿಧಾನಾತ್ಮಕ ಹುದ್ದೆಯ ಬಗ್ಗೆಯೂ ಕೇಳಿದ್ದರು. ಈ ಕಾರಣದಿಂದಲೇ ರಾಜೇ ಇದೀಗ ಸಾರ್ವಜನಿಕವಾಗಿ ಅಷ್ಟರ ಮಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ವದಂತಿ ಹಬ್ಬಿದೆ.

ಮೋದಿ ಹಾಸ್ಯ ಪ್ರಜ್ಞೆ
ಬ್ರಿಟಿಷ್ ಪ್ರಧಾನಿ ಥೆರೇಸಾ ಮೇ ಅವರ ಗೌರವಾರ್ಥ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಔತಣಕೂಟದ ಕೊನೆಗೆ, ಮೋದಿ ಭೋಜನ ವ್ಯವಸ್ಥೆ ಹೇಗಿತ್ತು ಎಂದು ಮೇ ಅವರನ್ನು ಕೇಳಿದರು ಎನ್ನಲಾಗುತ್ತಿದೆ. ಚೆನ್ನಾಗಿತ್ತು ಎಂದು ಮೇ ಪ್ರತಿಕ್ರಿಯಿಸಿದಾಗ ಮೋದಿ, ಒಳ್ಳೆಯ ಬಾಣಸಿಗ (ಕುಕ್) ಸಿದ್ಧಪಡಿಸಿದ್ದಾರೆ. ಆದರೆ ನೈಜ ಕುಕ್ ಇಂಗ್ಲಿಷ್ ಕ್ರಿಕೆಟ್ ತಂಡದ ಜತೆ ಬಂದಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ವಾಸ್ತವವಾಗಿ ಮೋದಿ ಹೇಳಿದ್ದು, ಇಂಗ್ಲಿಷ್ ಕ್ರಿಕೆಟ್ ತಂಡದ ನಾಯಕ ಅಲಿಸ್ಟರ್ ಕುಕ್ ಬಗ್ಗೆ. ಇದರ ಅರಿವಾಗುತ್ತಿದ್ದಂತೆ ಔತಣಕೂಟ ನಗೆ ಅಲೆಯಲ್ಲಿ ತೇಲಾಡಿತು. ಅಮೆರಿಕ, ಬ್ರಿಟನ್ ಮುಖಂಡರನ್ನು ಭೇಟಿ ಮಾಡಿದಾಗ ಸಹಜವಾಗಿಯೇ ಮೋದಿ ತಮ್ಮತನ ಮೆರೆಯುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News