ಮಧುಮೇಹ ಚಿಕಿತ್ಸೆ ಕೈ ಸುಡುತ್ತಿರುವುದು ಏಕೆ ?

Update: 2016-11-14 11:00 GMT

ಇನ್ಸುಲಿನ್ ಇತಿಹಾಸವು ಫಾರ್ಮಾಸ್ಯೂಟಿಕಲ್ ಮಾರುಕಟ್ಟೆಯ ನಿಗೂಢ ಸಂಕೀರ್ಣತೆಯನ್ನು ಹಿಡಿದಿಟ್ಟಿದೆ. ಅದೆಂದರೆ ದೀರ್ಘಕಾಲಿಕ ಔಷಧವೊಂದು ಮಾರುಕಟ್ಟೆಯಲ್ಲಿ ಹೇಗೆ ದುಬಾರಿಯಾಗುತ್ತಿದೆ ಮತ್ತು ಇಷ್ಟೊಂದು ಪೈಪೋಟಿಯ ಯುಗದಲ್ಲೂ ಏಕೆ ಇವುಗಳ ಬೆಲೆ ಇಳಿಮುಖವಾಗುತ್ತಿಲ್ಲ ಎನ್ನುವುದು. ಈ ಔಷಧಗಳಲ್ಲಿ ಸುಧಾರಣೆ ಮಾಡಿರುವುದಾಗಿ ಕಂಪೆನಿಗಳು ಸಮರ್ಥಿಸಿಕೊಳ್ಳುತ್ತಿವೆ.

ಇನ್ಸುಲಿನ್ ಸಂಶೋಧಕರು ಆರಂಭದಲ್ಲಿ ತಮ್ಮ ಸಂಶೋಧನೆಗೆ ಪೇಟೆಂಟ್ ಪಡೆಯುವ ಬಗ್ಗೆಯೇ ಕಳವಳ ಹೊಂದಿದ್ದರು. ಮಾರಣಾಂತಿಕ ಕಾಯಿಲೆಯಿಂದ ನಿರ್ವಹಿಸಬ ಹುದಾದ ಕಾಯಿಲೆಯಾಗಿ ಮಧುಮೇಹವನ್ನು ಮಾರ್ಪಡಿಸುವ ಈ ಅಮೂಲ್ಯ ಔಷಧವನ್ನು ಲಾಭದ ದಂಧೆಯಾಗಿ ಪರಿವರ್ತಿ ಸಿಕೊಳ್ಳುವ ಬಗ್ಗೆ 1921ರಲ್ಲಿ ಟೊರಂಟೊದ ಜೀವರಸಾಯನಶಾಸ್ತ್ರ ತಜ್ಞರು ಹಾಗೂ ವೈದ್ಯರ ತಂಡಕ್ಕೆ ಇರಾದೆ ಇರಲಿಲ್ಲ.

ಅಂತಿಮವಾಗಿ ಅವರು ಪೇಟೆಂಟ್ ಅರ್ಜಿ ಸಲ್ಲಿಸಿ, ಅದನ್ನು ಟೊರಂಟೊ ವಿಶ್ವವಿದ್ಯಾನಿಲಯಕ್ಕೆ ಮಾರಾಟ ಮಾಡಿದರು. ಎಷ್ಟು ವೌಲ್ಯಕ್ಕೆ ಗೊತ್ತೇ? ಕೇವಲ ಮೂರು ಡಾಲರ್‌ಗೆ. ಯಾವ ಕಂಪೆನಿಯೂ ಇನ್ಸುಲಿನ್ ಉತ್ಪಾದನೆಯಲ್ಲಿ ಏಕಸ್ವಾಮ್ಯ ಸಾಧಿಸಬಾರದು ಹಾಗೂ ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧ ಎಲ್ಲ ರೋಗಿಗಳ ಕೈಗೆಟುಕುವಂತಾಗಬೇಕು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದರು. ಇದು ಈ ಸಂಶೋಧಕರ ಅತ್ಯಂತ ಮಾನವೀಯ ಕಾರ್ಯ. ಇದು ಇಡೀ ಮನುಕುಲಕ್ಕೆ ತಾವು ನೀಡಿದ ಕೊಡುಗೆ ಎನ್ನುವುದು ಅವರ ಭಾವನೆಯಾಗಿತ್ತು ಎಂದು ಇತಿಹಾಸಕಾರ ಮೈಕೆಲ್ ಬ್ಲಿಸ್ ವಿವರಿಸುತ್ತಾರೆ. ಆದರೆ ಇಂದು ಈ ಔಷಧ ಫಾರ್ಮಾಸ್ಯೂಟಿಕಲ್ ಕಂಪೆನಿಗಳಿಗೆ ಉಡುಗೊರೆಯಾಗಿ ಪರಿಣಮಿಸಿದೆ. ಒಂದು ಟ್ಯೂಬ್ ಇನ್ಸುಲಿನ್ ಬೆಲೆ 1997ರಲ್ಲಿ 17 ಡಾಲರ್ ಇದ್ದದ್ದು ಇದೀಗ 138 ಡಾಲರ್‌ಗೆ ಹೆಚ್ಚಿದೆ. ಎರಡು ದಶಕದ ಹಿಂದೆ 21 ಡಾಲರ್ ವೌಲ್ಯ ಇದ್ದ ಮತ್ತೊಂದು ಬಗೆಯ ಇನ್ಸುಲಿನ್ ಬೆಲೆ 255 ಡಾಲರ್‌ಗೆ ಏರಿದೆ.

ಮೂಲ ಇನ್ಸುಲಿನ್ ಪೇಟೆಂಟ್ ಅವಧಿ ಮೀರಿ 75 ವರ್ಷಗಳ ಬಳಿಕ, ಮೂರು ಕಂಪೆನಿಗಳು ಇನ್ಸುಲಿನ್‌ನಲ್ಲಿ ಸುಧಾರಣೆ ತಂದು, ಹೊಸ ಪೇಟೆಂಟ್ ಮಾಡಿ, ಲಾಭ ದೋಚುತ್ತಿದ್ದಾರೆ. ಇದರಿಂದ ಆಧುನಿಕ ಇನ್ಸುಲಿನ್ ಕುಟುಂಬದ ವೌಲ್ಯ ನೂರಾರು ಕೋಟಿ ಡಾಲರ್‌ಗಳಷ್ಟು ಬೆಲೆಬಾಳುತ್ತದೆ.

ಇನ್ಸುಲಿನ್ ವೆಚ್ಚ ಹೆಚ್ಚಳ :

ಮಧುಮೇಹ ರೋಗಿಗಳು ಇನ್ಸುಲಿನ್ ಮೇಲೆ ಮಾಡುವ ವೆಚ್ಚ ಇದೀಗ ಗಣನೀಯವಾಗಿ ಹೆಚ್ಚಿದೆ. 2013ರ ವೇಳೆಗೆ, ಮಧುಮೇಹದ ಇತರ ಎಲ್ಲ ಔಷಧಗಳ ಮೇಲೆ ಮಾಡುವ ವೆಚ್ಚಕ್ಕಿಂತ ಅಧಿಕ ಮೊತ್ತವನ್ನು ಇನ್ಸುಲಿನ್ ಮೇಲೆ ರೋಗಿಗಳು ಮಾಡುತ್ತಿದ್ದರು.

ಇನ್ಸುಲಿನ್ ಇತಿಹಾಸವು ಫಾರ್ಮಾಸ್ಯೂಟಿಕಲ್ ಮಾರುಕಟ್ಟೆ ಯ ನಿಗೂಢ ಸಂಕೀರ್ಣತೆಯನ್ನು ಹಿಡಿದಿಟ್ಟಿದೆ. ಅದೆಂದರೆ ದೀರ್ಘಕಾಲಿಕ ಔಷಧವೊಂದು ಮಾರುಕಟ್ಟೆಯಲ್ಲಿ ಹೇಗೆ ದುಬಾರಿಯಾಗುತ್ತಿದೆ ಮತ್ತು ಇಷ್ಟೊಂದು ಪೈಪೋಟಿಯ ಯುಗದಲ್ಲೂ ಏಕೆ ಇವುಗಳ ಬೆಲೆ ಇಳಿಮುಖವಾಗುತ್ತಿಲ್ಲ ಎನ್ನುವುದು. ಈ ಔಷಧಗಳಲ್ಲಿ ಸುಧಾರಣೆ ಮಾಡಿರುವುದಾಗಿ ಕಂಪೆನಿಗಳು ಸಮರ್ಥಿಸಿಕೊಳ್ಳುತ್ತಿವೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಈ ಬದಲಾವಣೆಗಳು ಹೊಸ ಪೇಟೆಂಟ್ ಸುರಕ್ಷೆಯಡಿ ಕೇವಲ ಬೆಲೆ ಹೆಚ್ಚಿಸುವ ತಂತ್ರ. ರೋಗಿಯ ಸ್ಥಿತಿಯನ್ನು ಸುಧಾರಿಸಲು ಎಷ್ಟು ಪ್ರಮಾಣದ ಇನ್ಸುಲಿನ್ ಕಣಗಳನ್ನು ಇವು ಸರಿಹೊಂದಿಸುತ್ತವೆ ಎನ್ನುವುದು ಇವರ ಪ್ರಶ್ನೆ.

ಕೆಲ ಸುಧಾರಣೆಗಳು ಸಮರ್ಥನೀಯ. ಉದಾಹರಣೆಗೆ ಹಿಂದೆ ಪ್ರಾಣಿ ಮೂಲದಿಂದ ಇನ್ಸುಲಿನ್ ಉತ್ಪಾದಿಸಲಾಗುತ್ತಿತ್ತು. ಅದರ ಬದಲಾಗಿ ಇದೀಗ ವಂಶವಾಹಿ ಆಯಾಮದ ಮಾನವ ಮೂಲದ ಇನ್ಸುಲಿನ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಅಡ್ಡಪರಿಣಾಮಗಳು ಕನಿಷ್ಠ. ಆದರೆ ಹೊಸ ಪೀಳಿಗೆಯ ಅತಿ ದೀರ್ಘ ಅವಧಿವರೆಗೂ ಪರಿಣಾಮ ಬೀರುವ ಇನ್ಸುಲಿನ್‌ಗಳು, ನಿಜವಾಗಿಯೂ ಅಷ್ಟು ದುಬಾರಿಯಾಗಿರಲು ಅರ್ಹವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇಂಥ ಬಹುತೇಕ ಅಭಿವೃದ್ಧಿಗಳು ಪೇಟೆಂಟ್ ಸುರಕ್ಷೆಯನ್ನು ಉಳಿಸಿಕೊಳ್ಳುವ ಸಲುವಾಗಿಯೇ ಆಗಿವೆ ಎಂಬ ಅಭಿಪ್ರಾಯ ಸಿನಿಕತನದ್ದೆಂದು ನನಗೆ ಅನಿಸುವುದಿಲ್ಲ ಎಂದು ಹಾರ್ವಡ್ ಮೆಡಿಕಲ್ ಸ್ಕೂಲ್ ಪ್ರಾಧ್ಯಾಪಕ ಡೇವಿಡ್ ನಾಥಮ್ ಹೇಳುತ್ತಾರೆ. ವಾಸ್ತವ ಎಂದರೆ ಅವರು ಸ್ವಲ್ಪಮಟ್ಟಿಗೆ ಭಿನ್ನವಾಗಿರಬಹುದು ಹಾಗೂ ಹಳೆಯ ಇನ್ಸುಲಿನ್‌ಗೆ ಹೋಲಿಸಿದರೆ, ಅಧಿಕ ಕ್ಲಿನಿಕಲ್ ಪ್ರಯೋಜನ ಶೂನ್ಯ ಎನ್ನುವುದು ಅವರ ಸ್ಪಷ್ಟ ಅಭಿಮತ

ಅಮೆರಿಕದಲ್ಲಿ ಮಧುಮೇಹ ವ್ಯಾಪಕವಾಗಿ ಹರಡಿದ್ದು, ಸುಮಾರು 60 ಲಕ್ಷ ಮಂದಿ ಔಷಧವನ್ನೇ ಅವಲಂಬಿಸಿದ್ದಾರೆ. ಆದರೆ ಬಹುತೇಕ ಮಂದಿ ತಮ್ಮ ಜೇಬಿನಿಂದ ಇದಕ್ಕೆ ಪಾವತಿಸುವುದಿಲ್ಲ. ಇನ್ಸುಲಿನ್ ಬೆಲೆ ಹೆಚ್ಚಳ ಸಾಮಾನ್ಯವಾಗಿ ಆರೋಗ್ಯ ವಿಮೆಯ ಮುಖವಾಡ ಧರಿಸಿರುತ್ತವೆ. ಆದರೆ ವಿಮೆ ಸುರಕ್ಷೆಯಿಂದ ತಪ್ಪಿಸಿಕೊಂಡವರಿಗೆ ಬೆಲೆಏರಿಕೆಯ ಬಿಸಿ ವಾಸ್ತವವಾಗಿ ತಟ್ಟುತ್ತದೆ.

ಉದಾಹರಣೆಗೆ 34 ವರ್ಷದ ಲಾರಾ ಮಾರ್ಸ್‌ಟನ್ ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದು, ಜೀವಿತಾವಧಿಯಲ್ಲಿ ಅರ್ಧಕ್ಕೂ ಹೆಚ್ಚು ಕಾಲದಿಂದ ಇನ್ಸುಲಿನ್ ಬಳಸುತ್ತಿದ್ದಾರೆ. ದೇಹಕ್ಕೆ ಇನ್ಸುಲಿನ್ ಉತ್ಪಾದಿಸುವ ಸಾಮರ್ಥ್ಯ ಇಲ್ಲದಿರುವುದರಿಂದ, ಆಕೆ ಹುಟ್ಟಿದ ವರ್ಷ ಸಂಶೋಧನೆಯಾದ ಹ್ಯುಮ್ಯುಲಿನ್ ಔಷಧ ಪಡೆಯುತ್ತಿದ್ದಾರೆ. ವಿಮಾ ಸುರಕ್ಷೆ ಇರುವುದರಿಂದ ಅವರ ಮಾಸಿಕ ಇನ್ಸುಲಿನ್ ವೆಚ್ಚ 10 ಡಾಲರ್‌ಗೆ ಸೀಮಿತ.

ಆದರೆ ಅವರ ವೈದ್ಯರು ಹ್ಯುಮಲಾಗ್ ಎಂಬ ಹೊಸ ಔಷಧಿಗೆ ಬದಲಿಸಿದರು. ಇದು ವಿಮೆ ವೆಚ್ಚದಲ್ಲೇ ಬೆಲೆಗೆ ಕೈಗೆಟುಕುವಂತಿತ್ತು. 2012ರಲ್ಲಿ ಮಾರ್ಸ್‌ಟನ್ ತಮ್ಮ ಉದ್ಯೋಗ ಹಾಗೂ ಆರೋಗ್ಯ ವಿಮೆ ಕಳೆದುಕೊಂಡರು. ಆಕೆ ತೆಗೆದುಕೊಳ್ಳುತ್ತಿದ್ದ ಹ್ಯುಮಲಾಗ್‌ನ ಒಂದು ಟ್ಯೂಬ್ ಮಾರುಕಟ್ಟೆ ಬೆಲೆ 140 ಡಾಲರ್ ಆಗಿತ್ತು. ಇಂಥ 3 ಟ್ಯೂಬ್ ಆಕೆಗೆ ಪ್ರತಿ ತಿಂಗಳೂ ಬೇಕಾಗುತ್ತಿತ್ತು. ಇದರಿಂದಾಗಿ ದುಬಾರಿ ವಿಮಾ ಯೋಜನೆಯನ್ನು ಆಯ್ಕೆ ಮಾಡಿಕೊಂಡರು. ಇಷ್ಟಾಗಿಯೂ ಅವರ ಮಾಸಿಕ ವೆಚ್ಚ 200 ಡಾಲರ್ ತಲುಪಿತು.

ಹಳೆಯ ಇನ್ಸುಲಿನ್ ಅಗ್ಗದ್ದಾದರೂ, ಅದು ಒಂದು ಆಯ್ಕೆ ಎನ್ನುವುದು ಆಕೆಗೆ ತಿಳಿದಿರಲಿಲ್ಲ. ಆಕೆ ಹಾಲಿ ತೆಗೆದುಕೊಳ್ಳುವ ಔಷಧದಿಂದಲೇ ಹಲವು ವರ್ಷಗಳಿಂದ ರೋಗವನ್ನು ನಿರ್ವಹಿಸುತ್ತಾ ಬಂದಿದ್ದರು. ಆ ಬಳಿಕ ಹೊಸ ಹಾಗೂ ಹಳೆ ಇನ್ಸುಲಿನ್ ಬೆಲೆಗಳ ಮೇಲೆ ನಿಗಾ ಇಡುತ್ತಲೇ ಬರುತ್ತಿದ್ದಾರೆ. ಔಷಧ ಕಂಪೆನಿಗಳು ಸಾಮಾನ್ಯವಾಗಿ, ಬೆಲೆ ಹೆಚ್ಚಳವು, ಭವಿಷ್ಯದ ಅನುಶೋಧನೆಗಳ ವೆಚ್ಚವನ್ನು ಪ್ರತಿನಿಧಿಸುತ್ತದೆ ಎಂದು ಸಮರ್ಥಿಸಿಕೊಳ್ಳುತ್ತವೆ. ಹೊಸ ಹಾಗೂ ಸುಧಾರಿತ ಔಷಧಗಳ ಸಂಶೋಧನೆಗೆ ಇದು ಬಳಕೆಯಾಗುತ್ತದೆ ಎನ್ನುವುದು ಕಂಪೆನಿಗಳ ವಾದ. ಈ ಸಮರ್ಥನೆ ನಿಜವಾದರೆ, ದುಬಾರಿ ಬೆಲೆಗೆ ಕಡಿವಾಣವೇ ಇಲ್ಲ ಎನ್ನುವುದು ಮಾರ್ಸ್ ಟನ್ ಅಭಿಪ್ರಾಯ.

ಇನ್ಸುಲಿನ್ ಹುಟ್ಟು :

ಒಂದು ಟ್ಯೂಬ್ ಇನ್ಸುಲಿನ್ ಬೆಲೆ 75 ಸೆಂಟ್ ಇದ್ದುದ್ದನ್ನು 50 ವರ್ಷದಿಂದ ಇನ್ಸುಲಿನ್ ಬಳಕೆ ಮಾಡುತ್ತಾ ಬಂದಿರುವ ವೈದ್ಯ ಐರಲ್ ಹಿಶ್ರ್ ನೆನಪಿಸಿಕೊಳ್ಳುತ್ತಾರೆ. 1960ರ ದಶಕದಲ್ಲಿ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ಒಂದು ಔಷಧ ಕಂಪೆನಿಯ ಜಾಹೀರಾತಿನಲ್ಲಿ ಇನ್ಸುಲಿನ್ ಬೆಲೆಯನ್ನು 84 ಸೆಂಟ್ ಎಂದು ನಮೂದಿಸಲಾಗಿದ್ದು, ಇದು ಒಂದು ಬಾಟಲಿ ಶ್ಯಾಂಪೂಗಿಂತ ಅಗ್ಗ. ಅತ್ಯಂತ ದುಬಾರಿ ಇನ್ಸುಲಿನ್, ಒಂದು ಟ್ಯೂಬ್‌ಗೆ 2 ಡಾಲರ್ ಇತ್ತು. ಹಿಶ್ರ್ ಅವರ ಪ್ರಕಾರ, ಹಲವು ವರ್ಷಗಳವರೆಗೆ ಈ ಬೆಲೆ ಕೈಗೆಟುಕುವಂತಿತ್ತು.

ವಾಷಿಂಗ್ಟನ್ ವಿವಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ತಜ್ಞರಾಗಿರುವ ಹಾಗೂ ಸ್ವತಃ ಮಧುಮೇಹಿಯೂ ಆಗಿರುವ ಹಿಶ್ರ್ ಅವರ ಪ್ರಕಾರ, ಇನ್ಸುಲಿನ್ ಕಣಗಳು ದೇಹದ ಹಾರ್ಮೋನ್‌ಗಳನ್ನು ಕೆಲಸ ಮಾಡುವಂತೆ ಉತ್ತೇಜಿಸುವ ಸಂಶೋಧನೆ. ಆದರೆ ಅದು ಆರಂಭಿಕ ಹಂತದಲ್ಲಿ ಕಚ್ಚಾ ರೂಪದಲ್ಲಿ ಪ್ರಾಣಿಗಳ ಮೂಲದಿಂದ ಸಂಗ್ರಹಿಸುತ್ತಿದ್ದ ಕಾರಣ ಹಲವರಿಗೆ ಅಲರ್ಜಿಯಂಥ ಪರಿಣಾಮಗಳಿಗೆ ಕಾರಣವಾಗುತ್ತಿತ್ತು

ಹೊಸ- ದುಬಾರಿ ಇನ್ಸುಲಿನ್ :

2000ನೆ ಇಸ್ವಿ ಬಳಿಕ, ಹೊಸ, ದುಬಾರಿ ಇನ್ಸುಲಿನ್‌ಗಳ ಶಿಫಾರಸು ಹೆಚ್ಚಿತು. ಇದರಿಂದ ಹಳೆ ಇನ್ಸುಲಿನ್ ಬಳಕೆ ಗಣನೀಯವಾಗಿ ಕಡಿಮೆಯಾಯಿತು. ಹೊಸ ಯುಗದ ಇನ್ಸುಲಿನ್ 1982ರಲ್ಲಿ ಹ್ಯುಮ್ಯುಲಿನ್ ಶೋಧದೊಂದಿಗೆ ಲಗ್ಗೆ ಇಟ್ಟಿತು. ವಂಶವಾಹಿ ಇಂಜಿನಿಯರಿಂಗ್ ತಂತ್ರಜ್ಞಾನ ಬಳಸಿಕೊಂಡು, ಜೀವಶಾಸ್ತ್ರಜ್ಞರು, ಬ್ಯಾಕ್ಟೀರಿಯಾಗಳನ್ನು ವಿಶೇಷ ಹಾಗೂ ಸಣ್ಣ ಘಟಕಗಳಾಗಿ ಪರಿವರ್ತಿಸಿ, ಮಾನವ ದೇಹ ಉತ್ಪಾದಿಸುವ ಇನ್ಸುಲಿನ್ ಮಾದರಿಗೆ ಸರಿಹೊಂದುವ ಇನ್ಸುಲಿನ್ ಉತ್ಪಾದಿಸಿದರು. ಇದರಿಂದಾಗಿ ಅಲರ್ಜಿಯಂಥ ಸಮಸ್ಯೆಗಳೂ ಕಡಿಮೆಯಾದವು. ದನ ಅಥವಾ ಹಂದಿಯ ಇನ್ಸುಲಿನ್ ಬದಲಾಗಿ ಹೊಸ ಇನ್ಸುಲಿನ್ ಸೃಷ್ಟಿಸಲು ಈ ಸಂಶೋಧನೆ ಅವಕಾಶ ಮಾಡಿಕೊಟ್ಟಿತು. ಸಹಜವಾಗಿಯೇ ಈ ವಿಧಾನ ಹೆಚ್ಚು ಜನಪ್ರಿಯವಾಯಿತು.

ಡ್ಯಾನಿಷ್ ಕಂಪೆನಿ ನೊವೊ ನಾರ್‌ಡಿಸ್ಕ್ ತನ್ನದೇ ಆದ ಜೈವಿಕ ಇನ್ಸುಲಿನ್ ಉತ್ಪಾದನೆಯನ್ನು 1991ರಲ್ಲಿ ಆರಂಭಿಸಿತು. ಆ ಬಳಿಕ ಬೆಲೆ ಇಳಿಯುವ ಬದಲು ಕನಿಷ್ಠ ದರ ಹೆಚ್ಚಲು ಆರಂಭವಾಯಿತು. ಸಾಮಾನ್ಯವಾಗಿ ಔಷಧಗಳ ಬೆಲೆ ಏರಿಕೆ ಸಾರ್ವಜನಿಕ ಹಾಗೂ ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟರೆ, ಇನ್ಸುಲಿನ್ ವಿಚಾರದಲ್ಲಿ ಮಾತ್ರ ಇಡೀ ಇನ್ಸುಲಿನ್ ಉದ್ಯಮ ಬೆಲೆ ಹೆಚ್ಚಿಸುತ್ತಲೇ ಹೋಯಿತು. ಇದರಿಂದಾಗಿ ಮಧುಮೇಹ ಚಿಕಿತ್ಸೆಯ ವೆಚ್ಚವೂ ಹೆಚ್ಚುತ್ತಾ ಹೋಯಿತು.

ಎರಡು ದಶಕಗಳಲ್ಲಿ ಟ್ರೂವನ್ ಹೆಲ್ತ್ ಅನಾಲಿಸ್ಟಿಕ್ ಮಾಹಿತಿ ಆಧಾರದಲ್ಲಿ ವಾಷಿಂಗ್ಟನ್ ಪೋಸ್ಟ್ ನಡೆಸಿದ ವಿಶ್ಲೇಷಣೆ ಪ್ರಕಾರ, ಇನ್ಸುಲಿನ್ ಬೆಲೆ ಕಳೆದ ಎರಡು ದಶಕದಲ್ಲಿ ಶೇಕಡ 450ರಷ್ಟು ಹೆಚ್ಚಿದೆ. 1982ರಲ್ಲಿ ಹ್ಯುಮ್ಯುಲಿನ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಅವಧಿಯಲ್ಲಿ ಕಂಪೆನಿಯ ವಕ್ತಾರ ರೊನಾಲ್ಡ್ ಕಲ್ಪ್ ಅವರು ನ್ಯೂಯಾರ್ಕ್ ಟೈಮ್ಸ್ ಜತೆ ಮಾತನಾಡಿ, ದೀರ್ಘಾವಧಿಯ ಅಪೇಕ್ಷೆ ಎಂದರೆ ವೆಚ್ಚವನ್ನು ಕಡಿಮೆ ಮಾಡುವುದು. ಆದರೆ, ಈ ಹಂತದಲ್ಲಿ ಯಾವಾಗ ಇದು ಸಾಧ್ಯವಾಗಬಹುದು ಎಂದು ಊಹಿಸುವುದು ಸಾಧ್ಯವಿಲ್ಲ ಎಂದಿದ್ದರು. ಇದೇ ಔಷಧ ಬೆಲೆ ಕಳೆದ 20 ವರ್ಷಗಳಲ್ಲಿ 21 ಡಾಲರ್‌ನಿಂದ 250 ಡಾಲರ್‌ಗೆ ಹೆಚ್ಚಿದೆ. ಅಂತೆಯೇ 1996ರ ಬಳಿಕ ಹ್ಯುಮಲಾಗ್ ಬೆಲೆ 25 ಬಾರಿ ಹೆಚ್ಚಳವಾಗಿದ್ದು, ಶೇಕಡ 700ರಷ್ಟು ದುಬಾರಿಯಾಗಿದೆ.

 ಕಳೆದ ಎರಡು ದಶಕಗಳಲ್ಲಿ ಬೆಲೆ ಹೆಚ್ಚಳವಾಗಿದ್ದರೂ, ಈ ಅವಧಿಯಲ್ಲಿ ಆಗಿರುವ ಪ್ರಗತಿ ಅದ್ಭುತ ಎನ್ನುವುದು ಉತ್ತರ ಅಮೆರಿಕದ ನೊವೊ ನಾರ್ಡಿಸ್ಕ್ ಮುಖ್ಯ ವೈದ್ಯಾಧಿಕಾರಿ ಟಾಡ್ ಹಬ್ಸ್ ಅವರ ಸಮರ್ಥನೆ. ಯಾವ ಟೀಕಾಕಾರರು ಕೂಡಾ ಹೊಸ ಔಷಧಗಳು ಪರಿಣಾಮಕಾರಿಯಾಗಿವೆ ಎನ್ನುವ ಬಗ್ಗೆ ಚಕಾರ ಎತ್ತುವುದಿಲ್ಲ. ಆದರೆ ಚರ್ಚೆ ಇರುವುದು ಇವುಗಳಿಂದಾಗುವ ಲಾಭ, ಬೆಲೆ ಏರಿಕೆ ಪ್ರಮಾಣಕ್ಕೆ ಹೋಲಿಸಿದರೆ ಎಷ್ಟರ ಮಟ್ಟಿಗೆ ಆಗುತ್ತಿದೆ ಎನ್ನುವುದು. ಇಂಥ ವಾದ ಮುಂದಿಡುವಲ್ಲಿ ಫಾರ್ಮಾಸಿ ಲಾಭಗಳ ವ್ಯವಸ್ಥಾಪಕರ ಧ್ವನಿ ಪ್ರಬಲವಾಗಿದೆ.

ಅಮೆರಿಕದಲ್ಲಿ ಜಾರಿಯಲ್ಲಿರುವ ಲಿಸ್ಟ್ ಪ್ರೈಸ್ ಕೇವಲ ಕಾಲ್ಪನಿಕ ಎನ್ನುವುದು ಔಷಧ ಕಂಪೆನಿಗಳ ವಾದ. ಆರೋಗ್ಯ ವಿಮಾ ಕಂಪೆನಿಗಳು, ಔಷಧ ಲಾಭ ನಿರ್ವಾಹಕರ ಮೂಲಕ ಚೌಕಾಶಿ ಸಾಧಿಸಿ, ಈ ಬೆಲೆಗಳಲ್ಲಿ ದೊಡ್ಡ ಮೊತ್ತದ ರಿಯಾಯಿತಿ ಪಡೆಯುತ್ತವೆ. ಕೆಲ ಪ್ರಕರಣಗಳಲ್ಲಿ ಹಣಕಾಸು ನೆರವು ಯೋಜನೆಯಡಿ ರೋಗಿಗಳಿಗೂ ನೆರವಾಗುತ್ತವೆ.

ಇದರ ಪರಿಣಾಮವಾಗಿ ಈ ಪಟ್ಟಿ ಬೆಲೆಯ ಲಾಭ ಸಿಗುತ್ತಿಲ್ಲ ಎನ್ನುವುದು ಪ್ರಮುಖ ಇನ್ಸುಲಿನ್ ಕಂಪೆನಿಗಳ ವಾದ. ಔಷಧದ ಬೆಲೆ ಹೆಚ್ಚಿದಂತೆ ವಿಮಾ ಕಂಪೆನಿಗಳು ಹೇಗೆ ಆ ಬೆಲೆಯನ್ನು ಹೊಂದಾಣಿಕೆ ಮಾಡುತ್ತವೆ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ಇದುವರೆಗೆ ಸಿಕ್ಕಿರುವ ಪುರಾವೆಗಳ ಪ್ರಕಾರ, ರೋಗಿಗಳೇ ಔಷಧ ಬೆಲೆ ಹೆಚ್ಚಳದ ಹೆಚ್ಚುವರಿ ಹೊರೆಯನ್ನು ಹೊರಬೇಕಾಗುತ್ತದೆ.

ನೊವೊ ನಾರ್ಡಿಸ್ಕ್ ಕಂಪೆನಿಯ ವಕ್ತಾರ ಕೆನ್ ಇಂಚೌಸ್ತಿ ಅವರ ಪ್ರಕಾರ, ಈ ಬೆಲೆ ಹೆಚ್ಚಳದ ಲಾಭವೆಲ್ಲ ವಿಮಾ ಕಂಪೆನಿಗೆ ನೀಡುವ ರಿಯಾಯಿತಿ ಹಾಗೂ ವಿತರಣಾ ಜಾಲದಲ್ಲಿ ಹೆಚ್ಚುವ ಶುಲ್ಕದಲ್ಲಿ ಮರೆಯಾಗುತ್ತದೆ. ಸನೋಫಿ ಕಂಪೆನಿಯ ಹೇಳಿಕೆಯ ಪ್ರಕಾರ, ಕಂಪೆನಿಯ ಅತ್ಯುತ್ತಮ ಇನ್ಸುಲಿನ್ ಬೆಲೆ ಕಳೆದ ಐದು ವರ್ಷದಲ್ಲಿ ಕಡಿಮೆಯಾಗಿದೆ. ಇವುಗಳ ಬೆಲೆ 2015ರಲ್ಲಿ ಶೇಕಡ 14ರಷ್ಟು ಕಡಿಮೆಯಾಗಿದೆ ಎನ್ನುವುದು ಕಂಪೆನಿಯ ವಾದ.

 ಇಷ್ಟರ ನಡುವೆಯೂ ಅಗ್ಗದ ಇನ್ಸುಲಿನ್ ಉತ್ಪಾದಿಸುವ ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ ವಾಲ್‌ಮಾರ್ಟ್ ನೊವೊ ನಾರ್ಡಿಸ್ಕ್ ಇನ್ಸುಲಿನ್ ಬೆಲೆಯನ್ನು 25 ಡಾಲರ್ ಎಂದು ನಿಗದಿಪಡಿಸಿದೆ. ಆದರೆ ಸಾಂಪ್ರದಾಯಿಕ ಜೀವರಕ್ಷಕದಂತೆ ದೊಡ್ಡ, ಸಂಕೀರ್ಣ ಕಣಗಳನ್ನು ಗುಳಿಗೆ ರೂಪದಲ್ಲಿ ನೀಡಲು ಸಾಧ್ಯವಿಲ್ಲ. ಇದಕ್ಕೆ ದುಬಾರಿ ಎನಿಸಿದ ಜೀವಂತ ಕೋಶಗಳು ಹಾಗೂ ಬಯೊ ರಿಯಾಕ್ಟರ್ ಅಗತ್ಯವಾಗುತ್ತದೆ.

ನಾನು ವೃತ್ತಿ ಆರಂಭಿಸಿದ ಹೊಸದರಲ್ಲಿ, ರಕ್ತದ ಸಕ್ಕರೆ ಅಂಶ ಅಧಿಕವಾಗಿರುವ ರೋಗಿಗಳು ಬರುತ್ತಿದ್ದರು. ದುಬಾರಿ ಎಂಬ ಕಾರಣಕ್ಕೆ ಅವರು ಇನ್ಸುಲಿನ್ ತೆಗೆದುಕೊಳ್ಳುವುದು ನಿಲ್ಲಿಸಿದ್ದರು ಎಂದು ಜೋನ್ಸ್ ಹಾಕಿನ್ಸ್ ವಿಶ್ವವಿದ್ಯಾನಿಲಯದ ವೈದ್ಯ ಹಾಗೂ ವೈದ್ಯಕೀಯ ಇತಿಹಾಸಕಾರ ಜೆರೆಮಿ ಗ್ರೀನ್ ಹೇಳುತ್ತಾರೆ. 95 ವರ್ಷಗಳಿಂದ ಇದ್ದ ಈ ಜೀವರಕ್ಷಕ ಔಷಧ ಸುಲಭವಾಗಿ ಸಿಗುತ್ತಿಲ್ಲ ಎನ್ನುವುದು ನಿಜಕ್ಕೂ ಖೇದಕರ ಎಂದು ಗ್ರೀನ್ ಹೇಳುತ್ತಾರೆ. ಅಂತಿಮವಾಗಿ ಔಷಧ ಉತ್ಪಾದಕರು ಹಾಗೂ ವಿಮಾ ಕಂಪೆನಿಗಳು ಮುಚ್ಚಿದ ಬಾಗಿಲಿನ ಒಳಗೆ ಕೈಗೊಳ್ಳುವ ನಿರ್ಧಾರಗಳಿಗೆ ಮಧುಮೇಹಿಗಳು ಬದ್ಧರಾಗಬೇಕಾಗುತ್ತದೆ.

ಒಟ್ಟಿನಲ್ಲಿ ಜೀವಂತ ಅಸ್ಥಿಪಂಜರವಾಗಿ ಕಳೆಯಬೇಕಿದ್ದ ಮಧುಮೇಹಿಗಳು ಇದೀಗ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿನ ಸುಧಾರಣೆಯಿಂದಾಗಿ ಸಾಮಾನ್ಯ ಜೀವನ ಸಾಗಿಸುವುದು ಸಾಧ್ಯವಾಗಿದ್ದರೆ, ಇನ್ನೊಂದೆಡೆ ಹೆಚ್ಚು ತ್ತಿರುವ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

Writer - ಕರೋಲಿನ್ ವೈ ಜಾನ್ಸರ್

contributor

Editor - ಕರೋಲಿನ್ ವೈ ಜಾನ್ಸರ್

contributor

Similar News