ನಾವು ಕೇಳರಿಯದ ನಮ್ಮ ಮಕ್ಕಳು

Update: 2016-11-13 13:11 GMT

ಮಕ್ಕಳಂದ್ರೆ ಹೀಗಿರಬೇಕು ಎಂದುಕೊಳ್ಳುವ ಬಹಳಷ್ಟು ಪೋಷಕರಿಗೆ ಒಂದು ಅರ್ಥವೇ ಆಗುವುದಿಲ್ಲ. ಮಕ್ಕಳಿಗೂ ದೊಡ್ಡವರು ಅಂದ್ರೆ ಹೀಗಿರಬೇಕು ಅಂತ ಒಂದು ನಿರೀಕ್ಷೆ ಇರುತ್ತೆ. ಇಬ್ಬರೂ ಪರಸ್ಪರ ಎಲ್ಲಾ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದೇ ಹೋದರೂ ಒಬ್ಬರದೊಬ್ಬರ ಭರವಸೆ, ತಮ್ಮತನಗಳನ್ನು ನಾಶ ಮಾಡದೇ ಇರುವಷ್ಟಾದರೂ ಗೌರವಿಸಬೇಕು.

ಮಕ್ಕಳ ಮಾತು ಕೇಳುವವರಾರು?

ಮಾತೃಪ್ರಧಾನ, ಪಿತೃಪ್ರಧಾನ ಸಮಾಜಗಳನ್ನು ಗಮನಿಸುತ್ತಾ ಯಾವಾಗಲೂ ಶಿಶುಪ್ರಧಾನ ಸಮಾಜದ ಅಗತ್ಯತೆಯನ್ನು ನಾನು ಒತ್ತಿ ಹೇಳುತ್ತಿದ್ದೆ. ಆದರೆ ಅದಕ್ಕಿಂತ ಸೂಕ್ಷ್ಮಸ್ತರದಲ್ಲಿ ಶಿಶುಪ್ರಧಾನ ಕುಟುಂಬವಾಗುವ ಅಗತ್ಯದ ಅರಿವುಂಟಾಗಿದ್ದು ಇತ್ತೀಚಿನ ಶಾಲಾ ಕಾರ್ಯಕ್ರಮವೊಂದರಲ್ಲಿ.

ಅದೊಂದು ಶಾಲೆ. ಅಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಉದ್ಘಾಟನೆ ಮಾಡುವ ನೆಪದಲ್ಲಿ ಮಕ್ಕಳೊಂದಿಗೆ ಮಾತಾಡಿದೆ. ಪೋಷಕರು ಮತ್ತು ಶಿಕ್ಷಕರೂ ಕೂಡ ಹಾಜರಿದ್ದ ಆ ಸಭೆೆಯಲ್ಲಿ ನಾನು ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯನ್ನು ಗುರಿಯಾಗಿಸಿಕೊಂಡು ಮಕ್ಕಳನ್ನು ಬೆಳೆಸುವ ಬಗ್ಗೆ ಮತ್ತು ಕಲಿಕೆಯ ವಿಧಾನಗಳ ಬಗ್ಗೆ ಮಾತಾಡಿದೆ. ಯಾರಾದರೂ ಏನಾದರೂ ಪ್ರಶ್ನೆ ಕೇಳುವುದಿದ್ದರೆ ಕೇಳಿ ಎಂದಾಗ ‘‘ಯಾರೂ ಕೈ ಎತ್ತಲಿಲ್ಲ, ಮಾತಾಡಲಿಲ್ಲ. ನಂತರ ನಾನು ಮಕ್ಕಳನ್ನು ಏನಾದರೂ ಕೇಳುವುದಿದ್ದರೆ ಕೇಳಿ’’ ಎಂದೆ. ಅವರೂ ಏನೂ ಮಾತಾಡಲಿಲ್ಲ. ಆದರೆ ನಾನು ವೇದಿಕೆಯಿಂದ ಇಳಿಯುವಾಗ ಕೊನೆಯ ಮಾತಾಗಿ, ‘‘ನಿಮಗೆ ಪ್ರಶ್ನೆಗಳನ್ನು ಸಭೆೆಯಲ್ಲಿ ಕೇಳುವುದಕ್ಕೆ ಸಂಕೋಚವಿದ್ದರೆ ನನ್ನ ಫೋನ್ ನಂಬರ್ ತೆಗೆದುಕೊಳ್ಳಿ ನಂತರ ಮಾಡಬಹುದು’’ ಎಂದು ಧ್ವನಿವರ್ಧಕದಲ್ಲಿ ದೂರವಾಣಿ ಸಂಖ್ಯೆ ಹೇಳಿದೆ. ನಾನು ಫೋನ್ ನಂಬರ್ ಹೇಳುವಾಗ ತಮ್ಮ ಮೊಬೈಲಿನಲ್ಲಿ ನನ್ನ ಸಂಖ್ಯೆಯನ್ನು ಹಾಕಿಕೊಳ್ಳುತ್ತಿದ್ದ ಹಿರಿಯರ ಸಂಖ್ಯೆ ತೀರಾ ಕಡಿಮೆ ಇತ್ತು. ಕಣ್ಣಳತೆಯಲ್ಲಿ ಕಂಡ ಹಾಗೆ ಇಬ್ಬರು ಮೂವರು ಹೆಂಗಸರು ಹಾಕಿಕೊಳ್ಳುತ್ತಿದ್ದರು. ಗಂಡಸರಲ್ಲಂತೂ ಒಬ್ಬರೂ ಕಾಣಲಿಲ್ಲ. ಆದರೆ ಬಹಳಷ್ಟು ಮಾಧ್ಯಮಿಕ ಮತ್ತು ಹೈಸ್ಕೂಲ್ ಮಕ್ಕಳು ತಮ್ಮತಮ್ಮಲ್ಲಿ ಪೆನ್ ಇರುವವರ ಬಳಿ ಪೆನ್ ಕಸಿದುಕೊಂಡು ಕಾಗದದ ಮೇಲೆ ಬರೆದುಕೊಳ್ಳುವುದು, ಕೈ ಮೇಲೆ ಬರೆದುಕೊಳ್ಳುವುದು ಕಾಣಿಸಿತು. ಶಾಲೆಯ ಪ್ರಿನ್ಸಿಪಾಲ್ ಮುಂದೆ ಒಂದು ದಿನ ಪೋಷಕರಿಗೆ ಮತ್ತು ಶಿಕ್ಷಕರಿಗೆಂದು ಒಂದು ದಿನಗಳ ಸಂಪೂರ್ಣ ಕಾರ್ಯಾಗಾರವನ್ನು ಇರಿಸಿಕೊಳ್ಳುವ ಆಸಕ್ತಿಯನ್ನು ಘೋಷಿಸಿದರು ಮತ್ತು ನಾನೂ ಅದಕ್ಕೆ ಒಪ್ಪಿದೆ. ನಂತರ ನಾನು ನಮ್ಮ ಕುಟುಂಬದೊಂದಿಗೆ ಶಾಲೆಯ ಪೂರ್ತಿ ಅಡ್ಡಾಡುವಾಗ ಕೆಲವು ಮಕ್ಕಳನ್ನು ಸಂಧಿಸಿದೆ ಮತ್ತು ಅವರು ನನ್ನೊಂದಿಗೆ ಚಿಕ್ಕದಾಗಿ ವಿಷಯ ಹಂಚಿಕೊಂಡರು. ನಂತರ ಫೋನ್ ಮಾಡುತ್ತೇವೆಂದು ಹೇಳಿದರು. ಏಳನೆ ತರಗತಿಯ ಹುಡುಗನೊಬ್ಬ ನನ್ನ ಹಿಂದೆಯೇ ಬರುತ್ತಾ, ‘‘ನಾವು ಫೋನ್ ಮಾಡಬಹುದಾ ಸಾರ್?’’ ಎಂದು ಕೇಳಿದ. ‘‘ಮಾಡು, ಯಾವಾಗಲಾದರೂ ಮಾಡು. ನಿನಗೆ ಏನು ಹೇಳ್ಬೇಕು ಅಂತ ಅನ್ನಿಸುತ್ತೋ ಯಾವ ಮುಚ್ಚುಮರೆಯೂ ಇಲ್ಲದೇ ಹೇಳು ಎಂದೆ. ಪಬ್ಲಿಕ್‌ನಲ್ಲಿ ಹೇಳಕ್ಕಾಗದೇ ಇರೋದು, ಮನೆಯಲ್ಲಿ ಅಪ್ಪ ಅಮ್ಮನ ಹತ್ರ ಹೇಳಕ್ಕಾಗದೇ ಇರೋದನ್ನೂ ಹೇಳಬಹುದಾ?’’ ಎಂದು ಕೇಳಿದ.

‘‘ಖಂಡಿತ ಹೇಳು. ಪಬ್ಲಿಕ್‌ನಲ್ಲಿ ಹೇಳಕ್ಕಾಗದೇ ಇರೋದು ಇರಬಹುದು. ಆದರೆ ಅಪ್ಪ ಅಮ್ಮನ ಹತ್ರ ಹೇಳಕ್ಕಾಗದೇ ಇರೋದು ಯಾವುದೂ ಇರಬಾರದು’’ ಎಂದೆ. ‘‘ಓ, ಹೇಳಕ್ಕಾಗಲ್ಲ ಸರ್. ಮೂತಿಗೊಡಿತಾರೆ ಅಷ್ಟೇ!’’ ಎಂದ. ಹಾಗೆಯೇ ನಾನು ನಿರೀಕ್ಷಿಸಿದಂತೆ ಯಾವ ದೊಡ್ಡವರೂ ನನಗೆ ಫೋನ್ ಮಾಡಲಿಲ್ಲ. ಆದರೆ ಕೆಲವು ಮಕ್ಕಳು ನನಗೆ ಫೋನ್ ಮಾಡಿದರು. ತಮ್ಮ ಮನೆಯಲ್ಲಿ ತಾವೇ ಧೈರ್ಯವಾಗಿ ಅನ್ನಿಸಿದ್ದನ್ನು ಹೇಳಲಾಗದೇ ಹೋದರೆ ಎಂತಹ ಮನಸ್ಥಿತಿಯ ನಿರ್ಮಾಣ ಮಕ್ಕಳಲ್ಲಾಗುತ್ತದೆ ಎಂಬುದನ್ನು ಅಲ್ಲಿ ವಿಶೇಷವಾಗಿ ಗಮನಿಸಿದೆ. ನಿಜಕ್ಕೂ ಮಕ್ಕಳನ್ನು ಪೋಷಿಸಲು ನಮ್ಮ ಪೋಷಕರಿಗೆ ಮತ್ತು ಶಿಕ್ಷಕರಿಗೆ ವಿಶೇಷವಾದ ತರಬೇತಿಯ ಅಗತ್ಯವಿದೆ.
ಮಕ್ಕಳಂದ್ರೆ ಹೀಗಿರಬೇಕು ಎಂದುಕೊಳ್ಳುವ ಬಹಳಷ್ಟು ಪೋಷಕರಿಗೆ ಒಂದು ಅರ್ಥವೇ ಆಗುವುದಿಲ್ಲ. ಮಕ್ಕಳಿಗೂ ದೊಡ್ಡವರು ಅಂದ್ರೆ ಹೀಗಿರಬೇಕು ಅಂತ ಒಂದು ನಿರೀಕ್ಷೆ ಇರುತ್ತೆ. ಇಬ್ಬರೂ ಪರಸ್ಪರ ಎಲ್ಲಾ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದೇ ಹೋದರೂ ಒಬ್ಬರದೊಬ್ಬರ ಭರವಸೆ, ತಮ್ಮತನಗಳನ್ನು ನಾಶ ಮಾಡದೇ ಇರುವಷ್ಟಾದರೂ ಗೌರವಿಸಬೇಕು. ಮಕ್ಕಳು ನನ್ನೊಡನೆ ಹೇಳಿಕೊಂಡಿದ್ದನ್ನು ನಾನು ಇಲ್ಲಿ ಹಂಚಿಕೊಳ್ಳುತ್ತೇನೆ. ನಮ್ಮನಮ್ಮಲ್ಲಿ ನಮಗೇ ಅರಿವಿಲ್ಲದಂತೆ ಆ ಬಗೆಯ ದೋಷಗಳಿದ್ದರೆ ಖಂಡಿತ ತಡಮಾಡದೇ ಸರಿಪಡಿಸಿಕೊಂಡು ಬಿಡೋಣ.

ಎಬ್ಬಿಸಲು ಬಾರದು:

‘‘ನಮ್ಮಮ್ಮ ನನ್ನ ಎಬ್ಬಿಸುವುದು ತುಂಬಾ ಬೇಜಾರಾಗುತ್ತದೆ. ಬೆಳಗ್ಗೆ ‘ಏಯ್ ಏಳೋ’ ಮೇಲೆ ಅಂತ ಜೋರಾಗಿ ಅಲ್ಲಾಡಿಸಿಬಿಡುತ್ತಾರೆ. ಕೆಲವು ಸಲ ಭಯವಾಗಿಬಿಡುತ್ತದೆ. ಕೆಲವು ಸಲ ಎಷ್ಟು ಒಳ್ಳೆಯ ಕನಸು ಬರ್ತಿರತ್ತೆ, ದಬಾರ್ ಅಂತ ತಳ್ಳಿಂದಂಗಾಗಿಬಿಡತ್ತೆ. ಹೊದ್ದಿಕೊಂಡಿರೋದನ್ನ ರಪ್ಪಂತ ಎಳೆದು ಹಾಕಿಬಿಡುತ್ತಾರೆ. ತಕ್ಷಣ ಚಳಿ ಆಗಿಬಿಡುತ್ತದೆ. ಕೆಲವು ಸಲ ಪರಪರ ಪಾದದ ಕೆಳಗೆ ಕೆರೆದು ಬಿಡುತ್ತಾರೆ. ಕಚಗುಳಿ ಕೊಟ್ಟುಬಿಡುತ್ತಾರೆ. ಗದ್ದ ಹಿಡಿದುಕೊಂಡು ಜೋರಾಗಿ ಅಲ್ಲಾಡಿಸಿಬಿಡುತ್ತಾರೆ. ಅಳು ಬಂದುಬಿಡುತ್ತದೆ. ಅತ್ತರೆ ಬೆಳಗ್ಗೆನೇ ನಿನ್ನ ಗೋಳು ಏನು? ನಿನಗೇನು ಬೈದ್ವಾ ಅಥ್ವಾ ಹೊಡೆದ್ವಾ? ಬೆಳಗ್ಗೆ ಟೈಮ್ ಆದಾಗಲೂ ಎಬ್ಬಿಸೋದು ಬೇಡ್ವಾ? ಅಂತಾ ಬೈತಾರೆ. ಅವರು ಎಬ್ಬಿಸೋದೇ ಬೈಯೋದು ಹೊಡೆಯೋದಕ್ಕಿಂತ ಜೋರಾಗಿರತ್ತೆ.’’
ನಿಜ, ಮಕ್ಕಳು ಮಲಗಿರುವಾಗ ಅವರನ್ನು ನಿಧಾನವಾಗಿ ಅವರ ನಿದ್ರಾಲೋಕದಿಂದ ಹೊರಕ್ಕೆ ತರಬೇಕು. ಅವರ ಸ್ವಪ್ನಲೋಕದಲ್ಲಿ ಹೇಗೆ ವಿಹರಿಸುತ್ತಿರುತ್ತಾರೋ! ನಿಧಾನವಾಗಿ ಒಳ್ಳೆಯ ಮಾತುಗಳಿಂದ ಎಬ್ಬಿಸಬೇಕು. ರಪರಪ ಹೊಡೆಯುವುದು, ರಪ್ಪನೆ ಹೊದಿಕೆಯನ್ನು ಎಳೆದುಹಾಕುವುದು; ಇಂಥವೆಲ್ಲಾ ಮಾಡಿದರೆ ಅವರಿಗೆ ಆಘಾತವಾದಂತಾಗುವುದು. ಕಿರಿಕಿರಿಯೂ ಆಗುವುದು. ಜೊತೆಗೆ ಸ್ವಲ್ಪ ಬೆಳೆದಿರುವ ಮಕ್ಕಳಂತೂ ಮಲಗಿರುವಾಗ ಅಸ್ತವ್ಯಸ್ತವಾಗಿದ್ದು, ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಅವರು ಎಚ್ಚರಿಕೆಗೆ ಬಂದ ಮೇಲೆಯೇ ಹೊದಿಕೆಯನ್ನು ಅವರೇ ಸರಿಸಬೇಕು. ಯಾವಾಗ ಅವರು ಹೊದಿಕೆಯಿಂದ ಹೊರಗೆ ಬರಬೇಕೆನ್ನುವುದು ಅವರ ಇಚ್ಛೆಯೇ ಆಗಿರುತ್ತದೆ. ಪೋಷಕರು ಮಕ್ಕಳನ್ನು ಎಚ್ಚರಿಸಬೇಕೇ ಹೊರತು ಅವರ ಇಚ್ಛೆಗೆ ಹೊದಿಕೆಯನ್ನು ಎಳೆದು ಹಾಕಿ ಅವರಿಗೆ ಇರಿಸುಮುರಿಸಾಗುವಂತೆ ಅಥವಾ ಸಂಕೋಚವಾಗುವಂತೆ ಮಾಡಬಾರದು. ಕೆಲವೊಂದು ಸಲ ಬೆಳಗ್ಗೆ ಎದ್ದಾಗ ಗಂಡು ಮಕ್ಕಳೂ ಕೂಡ ತಮ್ಮ ಸ್ಥಿತಿಯನ್ನು ಪೋಷಕರ ಮುಂದೆ ಪ್ರದರ್ಶಿಸಲು ಮುಜುಗರ ಪಡುತ್ತಾರೆ. ಅವರ ಸ್ಥಿತಿಯನ್ನು ನಾವು ಅರಿತಿದ್ದರೂ ಅವರಿಗೆ ಮುಜುಗರ ಉಂಟಾಗದಿರುವಂತೆ ಅವರ ಖಾಸಗೀತನವನ್ನು ಗೌರವಿಸೋಣ.
ನನಗೆ ಫೋನ್ ಮಾಡಿದ್ದವನು ಒಬ್ಬ ಏಳನೇ ತರಗತಿಯ ಹುಡುಗ. ಅವನು ಹೇಳಿದ್ದು ಹೀಗೆ, ‘‘ನಾನು ಬೆಳಗ್ಗೆ ಎದ್ದ ಕೂಡಲೇ ಕೆಲಕಾಲ ಹೊದಿಕೆಯಲ್ಲೇ ಇದ್ದು ನಂತರ ಹೊರಗೆ ಬರಬೇಕು. ಆದರೆ ನಮ್ಮಮ್ಮ ಬಿಡದೇ ಇಲ್ಲ. ರಪ್ಪಂತ ಎಳೆದುಬಿಡ್ತಾರೆ. ನಾನು ಕಾಲುಗಳನ್ನು ಹೊಟ್ಟೆವರೆಗೂ ಮಡಿಸಿಕೊಂಡು ಮುದುರಿಕೊಂಡು ಮಲಗಿರಬೇಕು. ಸ್ವಲ್ಪ ಹೊತ್ತಾದ ಮೇಲೆ ಎದ್ದೇಳುತ್ತೇನೆ. ಅದಕ್ಕೂ ಬೈತಾರೆ. ಎಚ್ಚರ ಆದ ತಕ್ಷಣ ಎದ್ದುಬಿಡಬಾರದಾ?’’ ಎಂದು.
ಬೆಳಗ್ಗಿನ ಹೊತ್ತು ಸಾಮಾನ್ಯವಾಗಿ ಗಂಡು ಮಕ್ಕಳ ಜನನೇಂದ್ರಿಯ ಉದ್ರಿಕ್ತಸ್ಥಿತಿಯಲ್ಲಿರುತ್ತದೆ. ಬುದ್ಧಿ ಬಂದಿರುವ ಮಕ್ಕಳು ಅದನ್ನು ತಮ್ಮ ಮನೆಯವರ ಮುಂದೆ ಸಹಜವಾಗಿಯೇ ಪ್ರದರ್ಶಿತವಾಗುವುದಕ್ಕೂ ಸಂಕೋಚಿಸುತ್ತಾರೆ. ಇನ್ನೂ ಕೆಲವು ಸಲ ಲೈಂಗಿಕತೆಯ ಪರಿಚಯದ ಹಂತದಲ್ಲಿರುವ ಹದಿಹರೆಯದ ಮಕ್ಕಳ ಕನಸುಗಳಲ್ಲಿ ಲೈಂಗಿಕತೆಯ ಕನಸುಗಳೇ ಮೂಡಿರುತ್ತವೆ. ಅವರು ಹೊದಿಕೆಯಲ್ಲಿ ಯಾವ ಸ್ಥಿತಿಯಲ್ಲಿದ್ದರೂ ನಾವದನ್ನು ಸಹಜವಾಗಿ ಸ್ವೀಕರಿಸಬೇಕು. ಆದರೆ ಗಮನಕ್ಕೆ ಬಂದಿತು ಎಂದು ತೋರ್ಪಡಿಸಬಾರದು ಹಾಗೂ ಅವರಿಗೆ ಮುಜುಗರವಾಗದಿರುವಂತೆ ವರ್ತಿಸಬೇಕು.
ಇನ್ನು ಕೆಲವು ಮಕ್ಕಳು ಹಾಸಿಗೆಯಲ್ಲಿ ಹೆಚ್ಚು ಹೆಚ್ಚು ಹೊರಳಾಡುತ್ತಾರೆ. ಕೆಲವೊಮ್ಮೆ ಹೆಣ್ಣು ಮಕ್ಕಳ ಉಡುಪು ಅಸ್ತವ್ಯಸ್ತವಾಗಿರುತ್ತದೆ. ಹಾಗಾಗಿ ಅವರು ಮೇಲಕ್ಕೆ ಎದ್ದಾಗ ಅವರಿಗೆ ತಮ್ಮ ಸ್ಥಿತಿಯನ್ನು ನೋಡಿಕೊಂಡು ಮುಜುಗರವಾಗದಿರುವಂತೆ ಒಂದು ವೇಳೆ ಹೊದಿಕೆ ಸರಿದಿದ್ದರೂ ಅದನ್ನು ಸರಿಯಾಗಿ ಹೊದಿಸಬೇಕು. ವಿನಾ, ಹೊದಿಕೆಯನ್ನು ಎಳೆದು ಹಾಕಿ ಎಬ್ಬಿಸುವಂತಹ ಮುಜುಗರ ಉಂಟುಮಾಡಬಾರದು.
ಮಗುವಿಗೆ ಹೇಳಲು ಅಥವಾ ತೋರಲು ಮುಜುಗರವಾಗುವಂತಹ ವಾತಾವರಣವನ್ನು ಪೋಷಕರೇ ಎಂದಿಗೂ ಕಲ್ಪಿಸಿರಬಾರದು. ಮಗುವು ಮುಕ್ತವಾಗಿರುವಂತೆಯೇ ಕೌಟುಂಬಿಕ ವಾತಾವರಣವನ್ನು ಕಲ್ಪಿಸಬೇಕು. ಆದರೂ, ಆ ಮುಕ್ತತೆ ಕೃತಕತೆಯಿಂದ ಕೂಡಿರದೇ ಮಗುವು ತಾನೇ ಸ್ವಯಂಪ್ರೇರಿತವಾಗಿ ಮುಕ್ತವಾಗಿರಬೇಕು. ಮಗುವಿನ ಖಾಸಗಿತನವನ್ನೂ ಗೌರವಿಸಬೇಕು ಮತ್ತು ಮುಕ್ತತೆಗೂ ತೆರೆದುಕೊಂಡಿರಬೇಕು.


ಎರಡು ಬಿಟ್ಟಾಂದ್ರೆ

‘‘ನಮ್ಮಪ್ಪ ಯಾವಾಗಲೂ ಬೈತಿರ್ತಾರೆ. ಮುಖ ಕಿತ್ತೋಗುವಂತೆ ಹೊಡಿತೀನಿ. ಸಾಯಿಸ್ತೀನಿ. ಎರಡು ಬಿಟ್ಟಾಂದ್ರೆ ಮೈಲಿ ದೂರ ಬಿದ್ದಿರಬೇಕು. ಹೀಗೆ, ಬೈತಾನೇ ಇರ್ತಾರೆ. ಎರಡು ಬಿಟ್ಟಾಂದ್ರೆ ಅಂತ ಎಲ್ಲದ್ದಕ್ಕೂ ಬೈತಾರೆ. ನಾವೇನಾದ್ರೂ ಚೂರು ಜಾಸ್ತಿ ಗಲಾಟೆ ಮಾಡಿದ್ರೆ, ಬರೆಯೋದನ್ನು ಬಿಟ್ಟು ಮೇಲಕ್ಕೆ ಎದ್ದರೆ, ಬೆಲ್ಟ್ ತಗೊಳ್ಲಾ ಅಂತ ಅಪ್ಪ ಕೇಳ್ತಾರೆ. ಅಪ್ಪಂಗೆ ಹೇಳ್ಲಾಂತ ಅಮ್ಮಾ ಹೇಳ್ತಾರೆ.’’
ಪ್ರಾಣಿಗಳನ್ನು ಪಳಗಿಸುವುದೆಂದರೆ ಅದೊಂದು ಬಗೆ. ಯಾವ ಕ್ರೂರ ಪ್ರಾಣಿಯನ್ನು ಪಳಗಿಸಬೇಕೋ ಅದಕ್ಕೆ ಹೊಟ್ಟೆಗೆ ಹಾಕದೇ ಹಸಿವಿನಿಂದ ಬಳಲುವಂತೆ ಮಾಡುತ್ತಾರೆ. ಅದು ಆಯಾಸಗೊಂಡಾಗ ಛಡಿಯನ್ನೋ ಅಥವಾ ಬಾರುಕೋಲನ್ನೋ ಹಿಡಿದುಕೊಂಡು ಅದರ ಹೆಜ್ಜೆ ಹೆಜ್ಜೆಗೂ ತಮ್ಮ ನಿರ್ದೇಶನದಂತೆ ನಡೆಯುವಂತೆ ಹೆದರಿಸುತ್ತಾರೆ. ಆಹಾರದ ಅನಿವಾರ್ಯತೆ ಮತ್ತು ಛಡಿಯ ಭಯದಲ್ಲಿ ಪ್ರಾಣಿಯು ತಮ್ಮ ಅಧೀನವಾಗಿರುವಂತೆ ನೋಡಿಕೊಳ್ಳುತ್ತಾರೆ. ಆದರೆ ಮಕ್ಕಳನ್ನು ಆ ಮಟ್ಟಕ್ಕೆ ತಂದುಕೊಳ್ಳುವುದರಿಂದ ಮಕ್ಕಳ ಸಮಗ್ರ ವಿಕಾಸವಾಗಲಿ, ಬೌದ್ಧಿಕ ಬೆಳವಣಿಗೆಯಾಗಲಿ ಆಗದು. ಈ ಮೇಲೆ ಮಗುವು ಹೇಳಿದ ದೂರಿನಲ್ಲಿ ಅದರ ತಂದೆ ತಾಯಿಯರು ತಮ್ಮ ಮಗುವನ್ನು ಛಡಿಯ ತುದಿಯಲ್ಲಿಯೇ ಸಂಪೂರ್ಣ ನಿಯಂತ್ರಿಸುವಂತೆ ತೋರುತ್ತದೆ. ನಾನು ಮಗುವನ್ನು ನಿನಗೆ ಅವರು ಹೇಗೆ ಮಾತಾಡಿಸಬೇಕು? ಎಂದು ಕೇಳಿದೆ.
‘‘ಮಾಮೂಲಿ ಮಾತಾಡಿಸುವ ಹಾಗೆ ಮಾತಾಡಿಸಲಿ ಸರ್. ಈಗ ನಾವು ಫ್ರೆಂಡ್ಸ್ ಎಲ್ಲಾ ಮಾತಾಡಿಕೊಂಡಿರುತ್ತೀವಲ್ಲಾ ಹಾಗೆ. ಯಾವಾಗಲೂ ಅವರು ಹೇಳೋ ಹಾಗೇ ಆಗಬೇಕು ಅಂದ್ರೆ!’’
ಸ್ನೇಹಿತರಲ್ಲಿ ಒಬ್ಬರೊಬ್ಬರ ಮೇಲೆ ಸಂದರ್ಭಾನುಸಾರ ತಮ್ಮ ಹಕ್ಕು ಅಧಿಕಾರಗಳನ್ನು ಚಲಾಯಿಸುತ್ತಿರುತ್ತಾರೆ. ಆದರೆ, ಪಳಗಿಸುವಂತೆ ಛಡಿಯ ತುದಿಯಲ್ಲಿ ಸದಾ ನಿರ್ದೇಶನಗಳನ್ನು ಕೊಡುವುದಿಲ್ಲ. ಮಕ್ಕಳೂ ಕೂಡ ಬಯಸುವುದು ಅದನ್ನೇ. ಅವರೂ ಪೋಷಕರ ಮೇಲೆ ತಮ್ಮ ಹಕ್ಕು ಅಧಿಕಾರಗಳನ್ನು ಚಲಾಯಿಸಲಾಗಬೇಕು. ಅವರ ಅಧಿಕಾರಕ್ಕೆ ಒಳಗಾಗಿ, ಅವರಿಗೆ ವಿಧೇಯರಾಗಿ ನಡೆದುಕೊಳ್ಳುವ ಸಂದರ್ಭಗಳಲ್ಲಿ ಪೋಷಕರು ಮತ್ತು ಇತರ ಹಿರಿಯರು ಸರಿಯಪ್ಪಾ ಹಾಗೇ ಆಗಲಿ ಎಂಬಂತೆ ನಡೆದುಕೊಳ್ಳಬೇಕು. ಅವರು ಹೇಳಿದ ಹಾಗೇನು ಕೇಳುವುದು. ಅವರು ಮಕ್ಕಳು ನಾವು ಹೇಳಿದ ಹಾಗೇ ಕೇಳಬೇಕು ಎನ್ನುವ ಧೋರಣೆ ಮಕ್ಕಳಲ್ಲಿ ಪೋಷಕರ ಬಗ್ಗೆ ತೀರಾ ನಕಾರಾತ್ಮಕ ಧೋರಣೆಗಳನ್ನು ಹುಟ್ಟಿಹಾಕುತ್ತದೆ. ಅಪ್ಪಾ ಅಮ್ಮಾ ಗುರುಗಳೂಂದ್ರೆ ಗೌರವಿಸಬೇಕು ಎಂಬ ವ್ಯವಸ್ಥಿತ ಮತ್ತು ಪೂರ್ವನಿರ್ಧಾರಿತ ಕಟ್ಟಳೆಗಳು ಎಲ್ಲೆಗಳನ್ನು ಕೊರೆದು ಅವರನ್ನು ಸುಮ್ಮನೆ ಇರಿಸಬಹುದು. ಆದರೆ, ಅದು ಯಾವುದೇ ಸಮಯದಲ್ಲಿ ಸೀಮಾತೀತವಾಗುವಂತೆ ಮಾಡಬಹುದು. ಇದು ಪರಸ್ಪರ ನಾಶಕಾರಕ.

ನಾವು ಕಾಣದಿರುವುದು :

‘‘ಬಂದವರ ಮುಂದೆಲ್ಲಾ ಬೈತಿರ್ತಾರೆ. ಬಂದವರಿಗೇನೋ ನಾವು ಹೇಳಿರ್ತೀವಿ. ಅವರೂ ಕೇಳ್ತಿರ್ತಾರೆ. ನಾವೂಂದ್ರೆ ಅವರಿಗೆ ಇಷ್ಟ ಆಗ್ತಿರತ್ತೆ. ಅಷ್ಟರಲ್ಲಿ ನಮ್ಮಮ್ಮ ಮತ್ತೆ ಅಪ್ಪ ಅವನೇನೂ ಇಲ್ಲ. ಹೋಪ್ಲೆಸ್. ಬರೀ ಹಿಂಗೇ ಅಂತ ಏನೇನೋ ಹೇಳಿ ಕೆಡಿಸಿಬಿಡುತ್ತಾರೆ. ನಂಗೊತ್ತಿಲ್ಲವಾ ಅವನು ಏನೂಂತ? ಸುಮ್ಮನೆ ಏನೇನೋ ಬುರುಡೆ ಬಿಡ್ತಾನೆ ಅಂದುಬಿಡ್ತಾರೆ.’
ಮಕ್ಕಳು ತಮ್ಮ ಮನೆಯವರ ಮುಂದೆ ಇರುವ ತಮ್ಮ ಇಮೇಜಿಗಿಂತ ಬೇರೆಯೇ ಇನ್ನೇನೋ ಚಿತ್ರಣವನ್ನು ಬಂದವರ ಮುಂದೆ ಕಟ್ಟಿಕೊಡುವಂತಹ ಪ್ರಯತ್ನದಲ್ಲಿರುತ್ತಾರೆ. ಅದಕ್ಕೆ ಕಾರಣಗಳು ಹಲವಾರು. ಒಂದೋ ಮಕ್ಕಳ ಆಸೆಯೇ ಹಾಗಿದ್ದು, ಮನೆಯವರೇ ಅದಕ್ಕೆ ಅವಕಾಶ ಕೊಡದಿದ್ದರಬಹುದು. ಅಥವಾ ಬೇರೆಯವರು ಬಂದಿರುವ ಸಮಯದಲ್ಲಿ ತಾವೆಲ್ಲೋ ಗಮನಿಸಿದ ಮತ್ತು ತಮ್ಮನ್ನು ಸೆಳೆದ ವಿಷಯವನ್ನು ಅಲ್ಲಿ ಹೊಸಬರ ಹತ್ತಿರ ಪ್ರದರ್ಶಿಸುವ ಮೂಲಕ ತಮ್ಮ ಹೊಸ ಆಸಕ್ತಿಯ ಪ್ರದರ್ಶನ ಮಾಡಬಹುದು. ಪೋಷಕರಿಗೆ ಅಥವಾ ಶಿಕ್ಷಕರಿಗೆ ಅದು ತೀರಾ ಹೊಸದಾಗಿರಬಹುದು. ಆದರೆ, ಮಗುವು ಬೆಳವಣಿಗೆಯ ಹಂತಗಳಲ್ಲಿ ನಿತ್ಯವೂ ಇರುವುದರಿಂದ ಹಲವು ಕಡೆಗಳಿಂದ ತನಗೆ ಬೇಕಾದಂತಹ ಸಾರಸತ್ವಗಳನ್ನು ಗ್ರಹಿಸುತ್ತಿರುತ್ತದೆ. ಹಾಗಾಗಿ ಮಕ್ಕಳ ಎಷ್ಟೋ ಗುಣ ಪ್ರತಿಭೆಗಳು ನಮಗೆ ತೀರಾ ಹೊಸದೆನಿಸುತ್ತವೆ. ನಾವು ಕಂಡಿಲ್ಲದೇ ಇರೋ ಮಕ್ಕಳೇ ಇವರು ಎಂದು ನಿರ್ದಾಕ್ಷಿಣ್ಯವಾಗಿ ಅವರನ್ನು ತಳ್ಳಿ ಹಾಕುವ ಬದಲು ಮಗುವಿನ ಆಸಕ್ತಿ ಈ ವಿಷಯದಲ್ಲಿ ಎಷ್ಟರ ಮಟ್ಟಿಗೆ ಆಳವಾಗಿದೆ ಅಥವಾ ತಕ್ಷಣದ ಪ್ರಭಾವಕ್ಕೆ ಒಳಗಾಗಿತ್ತು ತಾತ್ಕಾಲಿಕವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಅದಕ್ಕೆ ಪೂರಕವಾದಂತಹ, ಪೋಷಿಸುವಂತಹ ಕೆಲಸಗಳನ್ನು ಮಾಡಬೇಕು. ನಮ್ಮ ಮನೆಯಷ್ಟೇ ನಮ್ಮ ಮಗುವಿಗೆ ಸಾಕಾಗುವುದಿಲ್ಲ. ಅದಕ್ಕೆ ಮನೆಯಿಂದ, ಮನೆಯವರಿಂದ ಹೊರತಾದ ಅನೇಕ ವಿಷಯಗಳು ಮತ್ತು ವ್ಯಕ್ತಿಗಳ ಸಂಪರ್ಕಗಳೂ ಬೇಕಾಗುತ್ತವೆ. ಮನೆಯಾಚೆಗಿನ ಹಲವು ಸುಂದರ ಮತ್ತು ಸಾಧನೆಗಳನ್ನು ಅವರು ಒಳಗೆ ತರುತ್ತಿರುತ್ತಾರೆ. ಅದು ಮನೆಯೊಳಗಿನವರಿಗೆ ಹಿಂದೆಂದೂ ತಮ್ಮಲ್ಲಿ ಕಂಡಿರದಂತಹ, ರೂಢಿಯಲ್ಲಿ ಇದ್ದಿರದಂತಹ ವಿಷಯವಸ್ತುವೇ ಆಗಿರುತ್ತದೆ. ಆದರೆ, ಅದು ಮಗುವಿನ ಕನಸಿಗೆ, ಮುಂಬಾಳ್ವೆಗೆ ಬೇಕಾಗಿರುತ್ತದೆ. ಅದರ ಮೇಲಿನ ಪ್ರೇಮಪೂರ್ವಕ ಒಡೆತನ ಎಷ್ಟಿರುವುದೋ ಅಷ್ಟೇ ಅದರ ಖಾಸಗೀತನವೂ ಕೂಡ ಇದೆ. ಅದನ್ನು ನಾವು ತಿಳಿದಿರಲೇ ಬೇಕು.

Writer - ಯೋಗೇಶ್ವರ್ ಮಾಸ್ಟರ್

contributor

Editor - ಯೋಗೇಶ್ವರ್ ಮಾಸ್ಟರ್

contributor

Similar News