ಬ್ಯಾಂಕು, ಅಂಚೆ ಕಚೇರಿಗಳ ಮುಂದೆ ಜನಜಾತ್ರೆ : ಕಾಂಗ್ರೆಸ್‌ನಿಂದ ನೀರು-ಬಿಸ್ಕೆಟ್ ಹಂಚಿಕೆ
ಬೆಂಗಳೂರು, ನ. 13: ಐದು ನೂರು ಮತ್ತು ಸಾವಿರ ರೂ.ನೋಟುಗಳ ಚಲಾವಣೆ ರದ್ದುಪಡಿಸಿ 5 ದಿನ ಕಳೆದರೂ, ಹಳೆಯ ನೋಟು ಬದಲಾವಣೆಗಾಗಿ ಕೂಲಿ ಕಾರ್ಮಿಕರು ಸೇರಿದಂತೆ ಜನ ಸಾಮಾನ್ಯರು ಸರದಿ ಸಾಲಿನಲ್ಲಿ ದಿನ ದೂಡಬೇಕಾದ ದುಸ್ಧಿತಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ರವಿವಾರದ ರಜಾದಿನವೂ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆಯೇ ಕೊರೆಯುವ ಚಳಿಯನ್ನು ಲೆಕ್ಕಿಸದೆ ರಜೆಯ ಮೋಜಿನ್ನು ಮರೆತು ಹಳೆಯ ನೋಟುಗಳ ಬದಲಾವಣೆ, ತಮ್ಮ ಖಾತೆಗೆ ಹಣ ಜಮಾ, ಹಣ ಡ್ರಾ ಮಾಡಿಕೊಳ್ಳಲು ಅಕ್ಷರಶಃ ಮುಗಿಬಿದ್ದ ದೃಶ್ಯ ರಾಜ್ಯಾದ್ಯಂತ ಕಂಡುಬಂತು.
ಇಲ್ಲಿನ ನೃಪತುಂಗ ರಸ್ತೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಕಚೇರಿ ಸೇರಿದಂತೆ ಬಹುತೇಕ ಬ್ಯಾಂಕುಗಳ ಎಲ್ಲ ಶಾಖೆಗಳು, ಎಲ್ಲ ಎಟಿಎಂ ಕೇಂದ್ರಗಳ ಮುಂದೆ ಮಕ್ಕಳು, ಮಹಿಳೆಯರು, ವೃದ್ಧರು ಎಂಬ ಯಾವುದೇ ಭಿನ್ನತೆ ಇಲ್ಲದೆ ಜನಜಾತ್ರೆಯೇ ಅಲ್ಲಿ ನೆರೆದಿತ್ತು.
ಹಳೆಯ ನೋಟುಗಳನ್ನು ತಮ್ಮ ಖಾತೆಗೆ ಜಮಾ ಮಾಡಲು ಸಮಸ್ಯೆ ಇಲ್ಲ. ಒಮ್ಮೆ ಹಣ ಜಮಾ ಮಾಡಲು ಕನಿಷ್ಟ ಪಕ್ಷ ನಾಲ್ಕೈದು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಲ್ಲಬೇಕು. ಹಣ ಬದಲಾವಣೆ ಮತ್ತು ಕೆಲ ಎಟಿಎಂಗಳಿಂದ ಹಣ ಡ್ರಾ ಮಾಡಲು ಸರದಿ ಅನಿವಾರ್ಯವಾಗಿತ್ತು.
ನೂಕು ನುಗ್ಗಲು-ಗದ್ದಲ: ನೋಟುಗಳ ಬದಲಾವಣೆ ಮತ್ತು ಹಣ ಜಮಾ ಮಾಡಲು ಬ್ಯಾಂಕುಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದ ಜನರ ನಡುವೆ ನೂಕು ನುಗ್ಗಲಿನಿಂದ ಕೆಲವೆಡೆ ಗಲಾಟೆಗಳು ಸಂಭವಿಸಿದೆ. ಗದಗನ ಬ್ಯಾಂಕ್‌ವೊಂದ ಬಳಿಕ ಸಾಲಿನಲ್ಲಿ ನಿಂತಿದ್ದ ರೈತನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಈ ಮಧ್ಯೆ ಇಲ್ಲಿನ ಕೆಜಿ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಮೈಸೂರು ಪ್ರಧಾನ ಕಚೇರಿಗೆ ಹಣ ವಿನಿಮಯಕ್ಕೆ ಆಗಮಿಸಿದ್ದು ಉತ್ತರ ಭಾರತ ಮೂಲಕ ನಾಲ್ಕೈದು ಮಂದಿ ಗ್ರಾಹಕರು ನಕಲಿ ಆಧಾರ್ ಕಾರ್ಡ್ ಬಳಿಸಿರುವುದು ಬೆಳಕಿಗೆ ಬಂದಿದ್ದು, ಬ್ಯಾಂಕಿನ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಮ್ಮ ಹಣಕ್ಕೂ ಕ್ಯೂ: ನಿಗದಿತ ಪ್ರಮಾಣದ ಹಣ ಲಭ್ಯವಿಲ್ಲದ ಕಾರಣ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಬಹುತೇಕ ಎಂಟಿಎಂ ಕೇಂದ್ರಗಳು ಬಾಗಿಲು ಮುಚ್ಚಿವೆ. ಕೆಲ ಎಂಟಿಎಂಗಳಲ್ಲಿ ಅಲ್ಪ ಪ್ರಮಾಣದ ಹಣವಿದ್ದು, ಅದನ್ನು ತೆಗೆದುಕೊಳ್ಳಲು ಮೈಲುದ್ದದ ಸರದಿ ನಿಲ್ಲಬೇಕಿತ್ತು. ಅಲ್ಲಿ ಕೇವಲ 100 ರೂ.ಮುಖಬೆಲೆಯ ನೋಟುಗಳು ಮಾತ್ರವೇ ಲಭ್ಯವಾಗುತ್ತಿತ್ತು.
ಹೊಸ ವಿನ್ಯಾಸದ 500 ರೂ.ಮತ್ತು 2 ಸಾವಿರ ರೂ.ನೋಟುಗಳನ್ನು ಎಟಿಎಂ ಕೇಂದ್ರಗಳಿಗೆ ಇನ್ನೂ ಬಂದಿಲ್ಲ. ಕಾರಣ ಎಂಟಿಎಂ ಕೇಂದ್ರಗಳಲ್ಲಿಯೂ ಹೊಸ ವಿನ್ಯಾಸದ ತಾಂತ್ರಿಕ ಸಲಕರಣೆಯನ್ನು ಅಳವಡಿಸಬೇಕಿದೆ. ಹೀಗಾಗಿ ಇನ್ನೂ ಹತ್ತು ಹದಿನೈದು ದಿನಗಳ ಕಾಲ ಸಮಸ್ಯೆ ಹೀಗೆ ಮುಂದುವರಿಯುವ ಸಾಧ್ಯತೆಗಳಿವೆ.
ನಿನ್ನೆ ತಡರಾತ್ರಿಯಿಂದ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಎಟಿಎಂ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಅದು ವಾಸ್ತವದಲ್ಲಿ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತೆ ಆಗಿದೆ. ಇನ್ನೂ ಕೆಲ ಎಂಟಿಎಂ ಕೇಂದ್ರಗಳು ಕಾರ್ಯ ಒತ್ತಡದ ಹಿನ್ನೆಲೆಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುತ್ತಿವೆ.
ರವಿವಾರದ ರಜೆಯ ಗುಂಗಿನಲ್ಲೇ ಇರುತ್ತಿದ್ದ ಬೆಂಗಳೂರಿಗರನ್ನು ಹಳೆಯ ನೋಟುಗಳು ಮತ್ತು ನಿಗದಿತ ಪ್ರಮಾಣದಲ್ಲಿ ದೊರೆಯದ ಹೊಸ ನೋಟುಗಳು ಕಂಗೆಡಿಸಿವೆ. ಬ್ಯಾಂಕ್ ಹಾಗೂ ಎಟಿಎಂಗಳಿಂದ ಹಣ ಪಡೆಯಲು ಜನ ಸಾಮಾನ್ಯರು ತಾಳ್ಮೆಯಿಂದಿದ್ದರೂ, ನಿತ್ಯದ ವ್ಯವಹಾರಗಳಿಗೆ ಹಣವಿಲ್ಲದೆ ಪರಿತಪಿಸಬೇಕಾಗಿದೆ.
ಕೂಲಿ ಬಿಟ್ಟು ಕ್ಯೂ ನಿಂತ ಕೂಲಿ ಕಾರ್ಮಿಕರು: ಕೇಂದ್ರ ಸರಕಾರ ಕಪ್ಪು ಹಣವನ್ನು ತಡೆಗಟ್ಟಲು 500 ರೂ., 1ಸಾವಿರ ರೂ. ನೋಟುಗಳನ್ನು ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಈ ಬಿಸಿ ಜನ ಸಾಮಾನ್ಯರಿಗೆ ತಟ್ಟಿದೆ. ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜನರು ಪರದಾಡುವಂತಾಗಿದೆ. ಬ್ಯಾಂಕ್‌ನಲ್ಲಿ ಜಮಾ ಮಾಡಿದ ಹಣ ಪಡೆಯಲು ಹಾಗೂ ನೋಟುಗಳನ್ನು ಬದಲಾವಣೆ ಮಾಡಲು ಜನ ಬೆಳಗ್ಗೆಯಿಂದ ಬ್ಯಾಂಕ್‌ಗಳ ಮುಂದೆ ಆಗಮಿಸಿ ಸಾಲು ಗಟ್ಟಿ ನಿಂತಿದ್ದಾರೆ.
ವಿವಿಧ ದಾಖಲೆಗಳ ಸಮೇತ ಆಗಮಿಸಿ ತಮ್ಮ ಮಕ್ಕಳ ಜೊತೆ ಬ್ಯಾಂಕ್ ಮುಂದೆ ನಿಂತಿದ್ದಾರೆ. ಜಿಲ್ಲೆಯ ಶಹಾಪುರ, ಸುರಪುರ, ಕೆಂಭಾವಿ, ಗುರುಮಠಕಲ್, ಯಾದಗಿರಿ ಮೊದಲಾದ ಕಡೆ ಇದೇ ಸ್ಥಿತಿ ಇದೆ.
ನೀರು-ಬಿಸ್ಕೆಟ್ ಹಂಚಿೆ: ಹಳೆಯ ನೋಟುಗಳ ಬದಲಾವಣೆಗೆ ಬ್ಯಾಂಕಿನ ಮುಂದೆ ಸರದಿಯಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೀರು ಮತ್ತು ಬಿಸ್ಕೆಟ್ ಹಂಚಿಕೆ ಮಾಡಿದ್ದು, ವಿಶೇಷವಾಗಿತ್ತು.