ಬೆಂಗಳೂರು ಪೊಲೀಸರು `ಎನ್ ಕೌಂಟರ್ ಮಾಡಿದ' ಗ್ಯಾಂಗ್ ಸ್ಟರ್ 16 ವರ್ಷದ ಬಾಲಕ !
ಬೆಂಗಳೂರು, ನ.16: ಕಳೆದ ವಾರ ಬೆಂಗಳೂರು ಪೊಲೀಸರು ತಾವು ಎನ್ ಕೌಟಂರ್ ಒಂದರಲ್ಲಿ 19 ವರ್ಷದ ಎಸ್ ಆಶಿಕ್ ಎಂಬ ಗ್ಯಾಂಗ್ ಸ್ಟರ್ ನನ್ನು ಗುಂಡಿಕ್ಕಿ ಸಾಯಿಸಿದ್ದಾಗಿ ಹೇಳಿದ್ದರೆ, ಇದೀಗ ತಿಳಿದು ಬಂದ ಮಾಹಿತಿಯಂತೆ ಪೊಲೀಸರ ಗುಂಡೇಟಿಗೆ ಬಲಿಯಾದವನು 16 ವರ್ಷದ ಬಾಲಕನಾಗಿದ್ದಾನೆ.
ಮೃತ ಬಾಲಕನ ಕುಟುಂಬದವರ ಪ್ರಕಾರ ಆಶಿಕ್ ಬಗ್ಗೆ ಪೊಲೀಸರ ಹೇಳಿಕೆ ಸಂಪೂರ್ಣವಾಗಿ ನಿಜವಲ್ಲ ಹಾಗೂ ಆತ ಮುಂದಿನ ವರ್ಷ ತನ್ನ ಪಿಯುಸಿ ಶಿಕ್ಷಣ ಮುಂದುವರಿಸಲು ನಿರ್ಧರಿಸಿದ್ದ.
ನವೆಂಬರ್ 7 ರಂದು ಪೊಲೀಸರು ಜ್ಞಾನಭಾರತಿ ಸಮೀಪದ ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ ಲೇಔಟಿನಲ್ಲಿ ನಡೆಸಿದ್ದ ಎನ್ ಕೌಂಟರ್ ನಲ್ಲಿ ಆಶಿಕ್ ಸಾವಿಗೀಡಾಗಿದ್ದ. ಮೃತಪಟ್ಟ ಯುವಕ ರೌಡಿ ದಡಿಯ ಸಂತೋಷ್ ಗ್ಯಾಂಗಿಗೆ ಸೇರಿದವನೆಂದು ಪೊಲೀಸರು ಆರಂಭದಲ್ಲಿ ಹೇಳಿದ್ದರು. ಮೇಲಾಗಿ ಆತ ಇನ್ ಸ್ಪೆಕ್ಟರ್ ಬರ್ಮಪ್ಪ ಬಿ ಮಲ್ಲೂರು ಅವರಿಗೆ ಬಾಡಿಗೆ ಕಟ್ಟಡವೊಂದರೊಳಗೆ ಚೂಪಾದ ವಸ್ತುವೊಂದರಿಂದ ಹಲ್ಲೆ ನಡೆಸಿದ ಆತನ ತಲೆಗೆ ಗುಂಡು ಹಾರಿಸಿ ಕೊಲ್ಲಲಾಯಿತು ಹಾಗೂ ಆತ ಕಲ್ಲಿ ರಮೇಶ್ ಎಂಬವನ ಜತೆ ಅಡಗಿದ್ದ ಎಂದು ಹೇಳಿದ್ದರು.
ಆಶಿಕ್ ಸಾವಿನಿಂದ ಕಂಗಾಲಾಗಿರುವ ಆತನ ತಂದೆ ಸೆಲ್ವರಾಜ್ ತಮ್ಮ ಪುತ್ರನ ವಯಸ್ಸು ಕೇವಲ 16 ಎಂದು ಹೇಳಿದ್ದಾರೆ. ಅವರ ಕುಟುಂಬದ ಇನ್ನೊಬ್ಬ ಮಹಿಳೆ ಆಶಿಕ್ ನನ್ನು ಪೊಲೀಸರು ಗ್ಯಾಂಗ್ ಸ್ಟರ್ ಎಂದು ಗುರುತಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೆ ಯಾವುದೇ ಮಾಹಿತಿ ನೀಡದಂತೆ ಪೊಲೀಸರು ತಮಗೆ ಎಚ್ಚರಿಕೆ ನೀಡಿದ್ದಾರೆಂದೂ ಹೇಳಿದ್ದಾರೆ.
ಆಶಿಕ್ ಗೆ ಸೇರಿದ್ದ ಟಿಸಿ ಬೆಂಗಳೂರು ಮಿರರ್ ಪತ್ರಿಕೆಗೆ ಲಭಿಸಿದ್ದು ಅದರಲ್ಲಿ ಆತನ ಜನನ ದಿನಾಂಕ ಮಾರ್ಚ್ 22, 2000 ಎಂದು ಬರೆಯಲಾಗಿದೆ. ಆಶಿಕ್ ಎಂಟನರ ತರಗತಿ ತನಕ ಕಲಿತ ಶ್ರೀ ರೇಣುಕಾ ಹೈಸ್ಕೂಲ್ ಟಿಸಿ ನೀಡಿತ್ತು.
ಎನ್ ಕೌಂಟರ್ ನಡೆದ ದಿನ ಪೊಲೀಸರು ಮೊದಲು ಕೊಲೆಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಬೇಕಾಗಿದ್ದ ದಡಿಯ ಸಂತೋಷ್ ಮತ್ತಾತನ ಐದು ಮಂದಿ ಗ್ಯಾಂಗ್ ಸದಸ್ಯರನ್ನು ಹುಡುಕಾಡಲು ಆರಂಭಿಸಿದ್ದರು. ಈ ಸಂದರ್ಭ ಅವರು ಸಂತೋಷ್ ಮತ್ತಾತನ ಸಹವರ್ತಿಗಳಿದ್ದ ವಾಹನವೊಂದನ್ನು ಉಳ್ಳಾಲ ಮುಖ್ಯ ರಸ್ತೆಯಲ್ಲಿ ತಡೆದು ನಿಲ್ಲಿಸಿದ್ದರು. ಈ ಸಂದರ್ಭ ಪೊಲೀಸ್ ವಾಹನ ತಪ್ಪಿಸಲೆತ್ನಿಸುವ ಭರದಲ್ಲಿ ಶಾಲಾ ಶಿಕ್ಷಕಿಯೊಬ್ಬರಿಗೆ ಢಿಕ್ಕಿ ಹೊಡೆದು ಆಕೆಯ ಸಾವಿಗೆ ಕಾರಣರಾಗಿದ್ದರು. ನಂತರ ಪೊಲೀಸರು ಕಲ್ಲಿ ರಮೇಶ್ ಹಾಗೂ ಆಶಿಕ್ ಅಡಗಿದ್ದರೆನ್ನಲಾದ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಬಾಡಿಗೆ ಕಟ್ಟಡಕ್ಕೆ ಆಗಮಿಸಿದ್ದರು.