ಡಿಸಿಸಿ ಬ್ಯಾಂಕುಗಳಲ್ಲಿ ಹಳೆ ನೋಟು ವಿನಿಮಯ ಅವಕಾಶಕ್ಕೆ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯಪತ್ರ
ಬೆಂಗಳೂರು, ನ.17: ರೈತರ ಅನುಕೂಲಕ್ಕಾಗಿ ಜಿಲ್ಲಾ ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕುಗಳಲ್ಲಿ ಹಳೆಯ 500 ಹಾಗೂ 1 ಸಾವಿರ ರೂ.ಮುಖಬೆಲೆಯ ನೋಟುಗಳ ವಿನಿಮಯ ಹಾಗೂ ಠೇವಣಿಗೆ ಅವಕಾಶ ನೀಡುವಂತೆ ಕೋರಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಆರ್‌ಬಿಐ ಗವರ್ನರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕೇಂದ್ರ ಸರಕಾರವು ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ನ.14ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಡಿಸಿಸಿ ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸದಂತೆ ಹೊರಡಿಸಿರುವ ಸುತ್ತೋಲೆಯಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಹುತೇಕ ರೈತರು ಜಿಲ್ಲಾ ಸಹಕಾರ ಸಂಘಗಳ ಮೂಲಕ ಬೆಳೆ ಸಾಲವನ್ನು ಪಡೆದಿರುತ್ತಾರೆ. ಆರ್‌ಬಿಐ ಹೊರಡಿಸಿರುವ ಸುತ್ತೋಲೆಯಿಂದಾಗಿ ರೈತರು ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ರೈತರ ಅನುಕೂಲಕ್ಕಾಗಿ ಈ ಸುತ್ತೋಲೆಯನ್ನು ಪರಿಷ್ಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.