ರಂಗೋಲಿ ಕೆಳಗೆ ನುಗ್ಗಲು ನೋಡಿದ ಅಡಿಗಾಸ್ ಹೋಟೆಲ್ ತಂತ್ರವನ್ನು ಬಯಲು ಮಾಡಿದ ಗ್ರಾಹಕ
ಬೆಂಗಳೂರು,ನ.18 : ಹಳೆಯ 500 ಹಾಗೂ 1000 ರೂ ನೋಟು ರದ್ದತಿಯಾದಂದಿನಿಂದ ದೇಶದಾದ್ಯಂತ ಜನರು ಎಟಿಎಂ ಗಳು ಹಾಗೂ ಬ್ಯಾಂಕುಗಳ ಮುಂದೆ ತಮ್ಮಲ್ಲಿರುವ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಹಾಗೂ ನಗದು ಪಡೆದುಕೊಳ್ಳಲು ಸರತಿ ನಿಲ್ಲುವಂತಾಗಿದೆ. ಆದರೆ ಈ ಗೊಂದಲದ ನಡುವೆಯೂ ಕೆಲವರು ತಮ್ಮ ಕಾರ್ಯಸಾಧನೆ ಮಾಡುತ್ತಿದ್ದಾರೆ. ಬೆಂಗಳೂರಿನ ಖ್ಯಾತ ಅಡಿಗಾಸ್ ಹೋಟೆಲ್ ನೋಟು ರದ್ದತಿ ಕ್ರಮವನ್ನನುಸರಿಸಿ ರಂಗೋಲಿ ಕೆಳಗೆ ನುಗ್ಗಲು ಪ್ರಯತ್ನಿಸಿದ್ದನ್ನು ಗ್ರಾಹಕರೊಬ್ಬರು ಬಯಲು ಮಾಡಿದ್ದಾರೆ. ಚಾಣಾಕ್ಷತನದಿಂದ ಕಪ್ಪು ಹಣವನ್ನು ಬಿಳಿಯಾಗಿಸುವ ಹೋಟೆಲಿನ ಕ್ರಮವನ್ನು ಅವರು ಹೊರ ಜಗತ್ತಿಗೆ ಫೇಸ್ ಬುಕ್ ಪೋಸ್ಟ್ ಒಂದರ ಮುಖಾಂತರ ವಿವರಿಸಿದ್ದಾರೆ.
ಮಿಧುನ್ ನೋಬ್ಲೆ ಎಂಬ ಬೆಂಗಳೂರಿಗ ಇತ್ತೀಚೆಗೆ ಅಡಿಗಾಸ್ ಹೋಟೆಲಿಗೆ ತಮ್ಮ ಕಚೇರಿಗೆ ಆಹಾರ ಪಾರ್ಸೆಲ್ ಪಡೆಯಲು ಹೋಗಿದ್ದರು. ಹೆಚ್ಚಿನ ಅಂಗಡಿಯವರು ಆನ್ ಲೈನ್ ಪೇಮೆಂಟ್ ಅಥವಾ ಹೊಸ ನೋಟುಗಳನ್ನು ನೀಡುವಂತೆ ಗ್ರಾಹಕರನ್ನು ಕೇಳುತ್ತಿದ್ದಾರಾದರೆ ಅಡಿಗಾಸ್ ಮಾತ್ರ ಕ್ಯಾಶ್ ನೀಡುವಂತೆ ನೋಬ್ಲೆ ಅವರಿಗೆ ಒತ್ತಾಯಿಸಿತ್ತು. ಅದಕ್ಕೆ ಒಂದು ಬಿಲ್ ಕೂಡ ನೀಡಿತ್ತು. ಆದರೆ ಬಿಲ್ ನಲ್ಲಿ ನಮೂದಿಸಲಾಗಿದ್ದ ದಿನಾಂಕ ನೋಡಿದ ನೋಬ್ಲೆಯವರಿಗೆ ಶಾಕ್ ಆಗಿತ್ತು. ಅದು ಹಿಂದಿನ ದಿನಾಂಕವಾಗಿತ್ತು.
ವಾಸ್ತವವಾಗಿ ಹೊಟೇಲ್ ಆಡಳಿತ ಪ್ರಧಾನಿ ನೋಟು ರದ್ದತಿ ಘೋಷಿಸಿದ ದಿನಾಂಕದ ಹಿಂದಿನ ತಿಂಗಳುಗಳಲ್ಲಿನ ಆದಾಯ ಎಂದು ತೋರಿಸುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿತ್ತು.
ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಅವರು ಹೊಟೇಲ್ ತಮಗೆ ನೀಡಿದ ಬಿಲ್ ಇದರ ಫೋಟೋ ಕಾಪಿ ಕೂಡ ಲಗತ್ತಿಸಿದ್ದಾರೆ.