×
Ad

ನೋಟು ರದ್ದು ಪೂರ್ವ ಸಿದ್ಧತೆ ಇಲ್ಲ: ಸಿಎಂ ಸಿದ್ದರಾಮಯ್ಯ

Update: 2016-11-18 19:03 IST

‘ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸರಕಾರಕ್ಕಿಲ್ಲ ’

ಬೆಂಗಳೂರು, ನ.18: 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಕೇಂದ್ರದ ಕ್ರಮವನ್ನು ವಿರೋಧಿಸುವುದಿಲ್ಲ. ಆದರೆ, ರದ್ದು ಮಾಡುವ ಮುನ್ನ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಪ್ಪುಹಣ ಮತ್ತು ಕಾಳಸಂತೆಕೋರರನ್ನು ಬಲಿ ಹಾಕುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನೋಟುಗಳನ್ನು ಇದೇ ಮೊದಲ ಬಾರಿಗೆ ರದ್ದು ಮಾಡಿಲ್ಲ. ಮುರಾರ್ಜಿ ದೇಸಾಯಿ ಅವರು ಪ್ರಧಾನಿ ಆಗಿದ್ದಾಗ ಆಗಿತ್ತು. ಆದರೆ, ಇದೀಗ ಪೂರ್ವ ಸಿದ್ಧತೆ ಮಾಡಿಕೊಳ್ಳದ ಕಾರಣ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. 500 ರ ಹೊಸ ನೋಟುಗಳನ್ನು ಬಿಡುಗಡೆ ಮಾಡದೆ 2 ಸಾವಿರ ರೂ.ಗಳ ನೋಟು ಬಿಡುಗಡೆ ಮಾಡಲಾಗಿದೆ. ಇದರಿಂದ 2 ಸಾವಿರ ರೂ.ಗಳ ನೋಟು ಕೊಟ್ಟರೂ ಅಂಗಡಿಗಳಲ್ಲಿ ಚಿಲ್ಲರೆ ಸಿಗುತ್ತಿಲ್ಲ ಎಂದರು.

 ಹಳೆಯ ನೋಟುಗಳ ವಿನಿಯಮಕ್ಕೆ ಸಹಕಾರ ಬ್ಯಾಂಕ್‌ಗಳಲ್ಲಿ ಅವಕಾಶವಿಲ್ಲ. ಹೀಗಾಗಿ, ರೈತರು ಸಾಲ ಮರು ಪಾವತಿ ಮಾಡಲು ಕಷ್ಟವಾಗಿದೆ. ಕೃಷಿಕರಿಗೆ ಆದಾಯ ತೆರಿಗೆ ಮಿತಿಯಿಲ್ಲ ಎಂದ ಅವರು, ರೈತರು ಮನೆಯಲ್ಲಿ ದುಡ್ಡು ಇಟ್ಟುಕೊಂಡಿದ್ದರೂ ಅದನ್ನು ವಿನಿಮಯ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಕೇಂದ್ರ ಹಣಕಾಸು ಸಚಿವರು ಮತ್ತು ರಿಸರ್ವ್ ಬ್ಯಾಂಕ್ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಹಳೆಯ ನೋಟುಗಳು ಚಲಾವಣೆ ಆಗುತ್ತಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸರಕಾರಕ್ಕಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News