×
Ad

ನೋಟು ನಿಷೇಧ ಎಫೆಕ್ಟ್:ರೈತರಲ್ಲಿ ಹಣವಿಲ್ಲದೆ ಗೋದಿ ಬಿತ್ತನೆಗೆ ಹಿನ್ನಡೆ

Update: 2016-11-19 22:40 IST

ಚಂಡಿಗಡ,ನ.19: ನೋಟು ನಿಷೇಧ ಕ್ರಮದಿಂದಾಗಿ ಪಂಜಾಬಿನಲ್ಲಿ ಗೋದಿ ಬಿತ್ತನೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆ. ನಗದು ಹಣದ ಕೊರತೆಯಿಂದಾಗಿ ಬಿತ್ತನೆ ಬೀಜಗಳು ಮತ್ತು ಇತರ ಅಗತ್ಯ ಸಾಮಗ್ರಿಗಳ ಖರೀದಿ ಸಾಧ್ಯವಾಗುತ್ತಿಲ್ಲ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.


ಹಳೆಯ ನೋಟುಗಳ ನಿಷೇಧದಿಂದಾಗಿ ಗೋದಿ ಬಿತ್ತನೆ ಕಾರ್ಯ ಶೇ.5ರಷ್ಟು ಹಿಂದುಳಿದಿದೆ ಎಂದು ಪಂಜಾಬ್ ಕೃಷಿ ಇಲಾಖೆಯೂ ಒಪ್ಪಿಕೊಂಡಿದೆ.


ಸಹಕಾರಿ ಬ್ಯಾಂಕುಗಳು ಹಳೆಯ 500 ಮತ್ತು 1,000 ರೂ.ನೋಟುಗಳನ್ನು ಸ್ವೀಕರಿಸುತ್ತಿಲ್ಲ, ಹೀಗಾಗಿ ರೈತರಿಗೆ ಈ ಬ್ಯಾಂಕುಗಳಿಂದ ಹಣಕಾಸು ನೆರವು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಅವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ.
ಗೋದಿ ಬಿತ್ತನೆಯಲ್ಲಿ ವಿಳಂಬವು ಚಳಿಗಾಲದ ಬೆಳೆಯ ಒಟ್ಟಾರೆ ಇಳುವರಿಯ ಕುಸಿತಕ್ಕೆ ಕಾರಣವಾಗಬಹುದು ಎಂದು ಕೃಷಿ ಇಲಾಖೆಯ ನಿರ್ದೇಶಕ ಜೆ.ಎಸ್.ಬೈನ್ಸ್ ಆತಂಕ ವ್ಯಕ್ತಪಡಿಸಿದರು.


ಗೋದಿ ಬಿತ್ತನೆ ನ.15ರೊಳಗೆ ಪೂರ್ಣಗೊಳ್ಳಬೇಕು.ಇದಕ್ಕಿಂತ ವಿಳಂಬವಾದರೆ ಪ್ರತಿ ಎಕರೆಗೆ 1.5 ಕ್ವಿಂಟಲ್ ಇಳುವರಿ ಕಡಿಮೆಯಾಗಬಹುದು ಎಂದು ಅವರು ಹೇಳಿದರು.


ಪಂಜಾಬಿನಲ್ಲಿ 35 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಗೋದಿಯನ್ನು ಬೆಳೆಯಲಾಗುತ್ತದೆ.
ನೋಟು ರದ್ದುಗೊಳಿಸಲು ಇದು ಸರಿಯಾದ ಸಮಯವಾಗಿರಲಿಲ್ಲ ಎಂದು ಹೇಳಿದ ಭಾರತೀಯ ಕಿಸಾನ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಸುಖದೇವ ಸಿಂಗ್ ಅವರು, ನಗದು ಹಣದ ಕೊರತೆಯಿಂದಾಗಿ ಪಂಜಾಬಿನ ರೈತರು ತೀವ್ರ ಚಿಂತೆ ಗೀಡಾಗಿದ್ದಾರೆ. ಬಿತ್ತನೆ ಬೀಜ,ರಸಗೊಬ್ಬರ ಇತ್ಯಾದಿಗಳ ಖರೀದಿಗೂ ನಮ್ಮಲ್ಲಿ ಹಣವಿಲ್ಲ ಎಂದರು.


ರೈತರು ಅನುಭವಿಸುತ್ತಿರುವ ಬವಣೆಗಳ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ ಅವರು,ರೈತರೇ ಪ್ರಮುಖ ಗ್ರಾಹಕರಾಗಿರುವ ಜಿಲ್ಲಾ ಸಹಕಾರಿ ಬ್ಯಾಂಕುಗಳಿಗೂ ಇತರ ಬ್ಯಾಂಕುಗಳಂತೆ ಹಳೆಯ ನೋಟುಗಳ ವಿನಿಮಯ ಮತ್ತು ಗ್ರಾಹಕರ ಖಾತೆಗಳಲ್ಲಿ ಜಮಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News