ಕಪ್ಪುಹಣದ ‘ಸರ್ಜಿಕಲ್ ಸ್ಟ್ರೈಕ್’ ಪರಿಣಾಮ ಮುಂಬೈಯ ಪರದಾಟ-ಗೋಳಾಟ...

Update: 2016-11-21 18:29 GMT

ಮೇರಾ ನಂಬರ್ ಕಬ್ ಆಯೇಗಾ?
ಮುಂಬೈಯಲ್ಲೀಗ ಹೆಚ್ಚಿನವರು ಆಡುವ ಮಾತು ಒಂದೇ -ಅದು ಮೇರಾ ನಂಬರ್ ಕಬ್ ಆಯೇಗಾ. ಬ್ಯಾಂಕ್‌ನ ಮುಂದೆ ಕೈಯಲ್ಲಿ ತಮ್ಮದೇ ಐನೂರು - ಸಾವಿರದ ಹಳೇ ನೋಟುಗಳನ್ನು ಹಿಡಿದು ಹಣ ಇದ್ದೂ ದರಿದ್ರರು ಎನ್ನುವಂತಹ ವಾತಾವರಣದ ನಡುವೆ ಬೆಳಗ್ಗೆ ಬ್ಯಾಂಕ್‌ನ ಮುಂದೆ ನಿಂತು ಬಾಗಿಲು ತೆರೆಯುವುದನ್ನೇ ನಿರೀಕ್ಷಿಸುವ ಉದ್ದುದ್ದ ಸಾಲುಗಳು. ವಿರೋಧ ಪಾರ್ಟಿಗಳ ಜೊತೆಗೆ ಶಿವಸೇನೆಯ ಉದ್ಧವ್ ಠಾಕ್ರೆಯದ್ದೂ ಮೋದಿಯ ವಿರುದ್ಧ ಟೀಕೆಯ ಘೋಷಣೆ ಬೇರೆ! ಬಿಜೆಪಿಯ ಸರಕಾರದ ಒಳಗಿದ್ದೂ ಪ್ರಧಾನಿಯವರ ಹಳೆ ನೋಟುಗಳ ರದ್ಧತಿಗೆ ಟೀಕಿಸಿ ‘‘ಮುಂಬೈ ಜನರ ಸಂಕಷ್ಟಕ್ಕೆ ಸರಕಾರವೇ ಕಾರಣ’’ ಎನ್ನುತ್ತಿದ್ದಾರೆ ಉದ್ಧವ್. 3 ತಿಂಗಳಲ್ಲಿ ಮುಂಬೈ ಮ.ನ.ಪಾ ಚುನಾವಣೆ ನಡೆಯಲಿದೆ.
ಆರ್ಥಿಕ ರಾಜಧಾನಿ ಮುಂಬೈ ದೇಶದ ಒಟ್ಟು ಆದಾಯದಲ್ಲಿ ಕಾರ್ಪೊರೇಟ್ ತೆರಿಗೆ, ಸಂಪತ್ತು ತೆರಿಗೆ ಸೇವಾಶುಲ್ಕ, ಉತ್ಪಾದನಾ ಶುಲ್ಕ ಇತ್ಯಾದಿ ಸಂಗ್ರಹದ 35 ಪ್ರತಿಶತ ಪಾಲು ನೀಡುತ್ತದೆ. ಕಪ್ಪುಹಣದ ವಿರುದ್ಧದ ‘ಸರ್ಜಿಕಲ್ ಸ್ಟ್ರೈಕ್’ನಲ್ಲಿ ಜನ ಸಾಮಾನ್ಯರು ಕಳೆದ ಎರಡು ವಾರಗಳಿಂದ ಭಾರೀ ಪರದಾಟ ನಡೆಸುತ್ತಿದ್ದಾರೆ. ಮುಂಬೈಯಲ್ಲಿ ದೇಶದ ಎಲ್ಲಕ್ಕಿಂತ ದೊಡ್ಡ ರಿಯಲ್ ಎಸ್ಟೇಟ್ ಮತ್ತು ಬುಲಿಯನ್ ಬಝಾರ್‌ಗಳು ಇದೆ. ಹಾಗಾಗಿ ಇಲ್ಲೇ ಅತಿಹೆಚ್ಚು ಕಪ್ಪುಹಣವೂ ಇರುವುದು. ಶೇರು ಬಝಾರ್, ಬ್ಯಾಂಕಿಂಗ್, ಬಾಲಿವುಡ್, ಬಟ್ಟೆ ಉದ್ಯಮ, ಕೆಮಿಕಲ್ಸ್, ಸ್ಟೀಲ್... ಇತ್ಯಾದಿ ದೊಡ್ಡ ದೊಡ್ಡ ಬಝಾರ್‌ಗಳು ಇಲ್ಲಿವೆ. ಇಲ್ಲೆಲ್ಲ ಕಪ್ಪು ಹಣ ಓಡಾಡುತ್ತಿದೆ. ಅನೇಕ ದೊಡ್ಡ ಔದ್ಯೋಗಿಕ ಘಟಕಗಳಿವೆ. ಇವರ ಬಳಿ ಕಪ್ಪುಹಣವಿರುವ ವರದಿಗಳೂ ಆಗಾಗ ಕೇಳಿ ಬರುತ್ತದೆ. ಕಳೆದ ಎರಡು ವರ್ಷಗಳಲ್ಲಿ ಸರಕಾರವು 1 ಲಕ್ಷದ 20 ಸಾವಿರ ಕೋಟಿ ರೂಪಾಯಿ ಕಪ್ಪು ಹಣವನ್ನು ವಶಪಡಿಸಿಕೊಂಡಿದೆ. ಇದರಲ್ಲಿ ದೊಡ್ದ ಪಾಲು ಮುಂಬೈಯಿಂದ ವಶಪಡಿಸಲಾಗಿತ್ತು. ಮುಂಬೈ ಮಹಾನಗರ ಪಾಲಿಕೆ ದೇಶದಲ್ಲೇ ಅತೀ ದೊಡ್ಡ ಕಪ್ಪುಹಣ ಮತ್ತು ಭ್ರಷ್ಟಾಚಾರದ ಎಲ್ಲಕ್ಕಿಂತ ದೊಡ್ಡ ಅಡ್ಡೆ ಎಂದು ಅರ್ಥಶಾಸ್ತ್ರಜ್ಞರಿಂದ ಹಿಡಿದು ಅನೇಕ ಸಮೀಕ್ಷೆಗಳು ಈಗಾಗಲೇ ಹೇಳಿರುವ ಸಂಗತಿ. ಇಂತಹ ಮಹಾನಗರ ಪಾಲಿಕೆ ಇರುವುದು ಶಿವಸೇನೆಯ ಕೈಯಲ್ಲಿ. ಮುಂದಿನ 2017ರ ಫೆಬ್ರವರಿಯಲ್ಲಿ ಮುಂಬೈ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಹಾಗಾಗಿ ಅಲ್ಲಿ ಕಪ್ಪುಹಣ ಬಳಕೆಯಾಗುವುದು ಇದೀಗ ತಪ್ಪಿದಂತಾಗಿದೆ. ಈ ನಿಟ್ಟಿನಲ್ಲಿ ಶಿವಸೇನೆಗೆ ದೊಡ್ಡ ಹೊಡೆತ ಸಿಕ್ಕಿದೆ ಎನ್ನುವುದಾದರೆ ಉದ್ಧವ್ ಠಾಕ್ರೆಯವರು ನೋಟು ನಿಷೇಧಕ್ಕೆ ಸಿಡಿಮಿಡಿಗೊಂಡರೆ ಆಶ್ಚರ್ಯವಿಲ್ಲ. ಇತ್ತ ಕಾಂಗ್ರೆಸ್ ನ. 22ರಿಂದ ‘ನೋಟು ನಿಷೇಧದ ಬಗ್ಗೆ ಜನರ ಜೊತೆ ಚರ್ಚೆ’ ಎಂಬ ಆಂದೋಲನಕ್ಕೆ ಇಳಿದಿದೆ.
* * *

ಆಭರಣ ಅಂಗಡಿಗಳ ವಿರುದ್ಧ ತೆರಿಗೆ ಅಧಿಕಾರಿಗಳ ಕೆಂಗಣ್ಣು
ಚಿನ್ನದ ಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ಬೆಲೆಯಲ್ಲಿ ನವೆಂಬರ್ 8ರ ರಾತ್ರಿಗೆ (ಪ್ರಧಾನಿಯವರು ಹಳೆ ನೋಟುಗಳ ಮೇಲೆ ನಿಷೇಧ ಹೇರಿದ ನಂತರ) ಆಭರಣ ಅಂಗಡಿಗಳಲ್ಲಿ ನಡೆದ ಖರೀದಿ ವ್ಯವಹಾರವು ಈಗ ಅದರ ಮಾಲಕರಿಗೆ ಪೇಚು ತಂದಿದೆ. ಆದಾಯ ತೆರಿಗೆ ಅಧಿಕಾರಿಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು, ಉತ್ಪಾದನಾ ಶುಲ್ಕ ವಿಭಾಗದ ಅಧಿಕಾರಿಗಳು ಇಂತಹ ಆಭರಣ ಅಂಗಡಿಗಳ ತನಿಖೆ ಆರಂಭಿಸಿದ್ದು ಮುಂಬೈ ಮತ್ತು ಮಹಾರಾಷ್ಟ್ರದ ಸುಮಾರು 125 ಆಭರಣ ವ್ಯಾಪಾರಿಗಳಿಗೆ ಸಮನ್ಸ್ ಕಳುಹಿಸಿದ್ದಾರೆ.
 ವಿತ್ತ ಮಂತ್ರಾಲಯದ ಅಧೀನದಲ್ಲಿರುವ ಡೈರೆಕ್ಟರೇಟ್ ಜನರಲ್ ಆಫ್ ಸೆಂಟ್ರಲ್ ಎಕ್ಸೈಜ್ ಇಂಟೆಲಿಜೆನ್ಸ್ ಆಭರಣ ಅಂಗಡಿಗಳವರಿಗೆ ನೋಟಿಸ್ ಕಳುಹಿಸಿದ್ದು ನವೆಂಬರ್ 8ರಿಂದ ನಾಲ್ಕು ದಿನಗಳ ಕಾಲ ಎಷ್ಟು ಚಿನ್ನ ಮತ್ತು ಆಭರಣಗಳನ್ನು ಯಾರ್ಯಾರಿಗೆ ನೀವು ಮಾರಿದ್ದೀರಿ? ಹಾಗೂ ನವೆಂಬರ್ 8ರಂದು ನಿಮ್ಮ ಬಳಿ ಇದ್ದ ಚಿನ್ನದ ಸಂಗ್ರಹ ಎಷ್ಟು? ಇವುಗಳ ಮಾಹಿತಿ ಜೊತೆಗೆ ಈಗ ನಿಮ್ಮಲ್ಲಿರುವ ಚಿನ್ನದ ಸಂಗ್ರಹ ಎಷ್ಟಿದೆ? ಇವುಗಳ ಲೆಕ್ಕ ನೀಡುವಂತೆ ಸೂಚನೆ ನೀಡಲಾಗಿದೆ.ಕೆಲವು ಚಿನ್ನದ ಆಭರಣ ಅಂಗಡಿಗಳವರು ನವೆಂಬರ್ 8ರಂದು ಸರಕಾರ 500 ಮತ್ತು ಸಾವಿರದ ನೋಟುಗಳನ್ನು ನಿಷೇಧ ಹೇರಿದ್ದರ ನಂತರದ ಪರಿಸ್ಥಿತಿಯ ಲಾಭವನ್ನು ಎತ್ತಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ನವೆಂಬರ್ 8 ರಾತ್ರಿಗೆ ಒಂದು ತೊಲೆ ಚಿನ್ನಕ್ಕೆ 50 ಸಾವಿರ ರೂಪಾಯಿ ತನಕವೂ ಆಭರಣಗಳ ಮಾರಾಟ ವ್ಯವಹಾರ ನಡೆದಿರುವುದು ಬಹಿರಂಗಗೊಂಡಿದೆ. ಆದರೆ ಅನೇಕ ಆಭರಣ ವ್ಯಾಪಾರಿಗಳು ಆದಾಯಕರ ಅಧಿಕಾರಿಗಳಿಗೆ ತಿರುಗೇಟು ನೀಡುವುದಕ್ಕೆ ಹಾಗೂ ಉತ್ಪಾದನಾ ಶುಲ್ಕ ಮತ್ತು ಮಾರಾಟ ತೆರಿಗೆ ಅಧಿಕಾರಿಗಳನ್ನು ವಂಚಿಸಲು ನವೆಂಬರ್ 8 ಮತ್ತು 9ರಂದು ಮಾರಾಟವಾದ ಆಭರಣಗಳ ಬಿಲ್‌ನಲ್ಲಿ ಹಳೆಯ ತಾರೀಕು ನೀಡಿರುವುದೂ ಬೆಳಕಿಗೆ ಬಂದಿದೆ. ಆದರೆ ಅಧಿಕಾರಿಗಳು ಜಾಗೃತಗೊಂಡಿದ್ದು ಆಭರಣ ವ್ಯಾಪಾರಿಗಳ ಬ್ಯಾಂಕ್ ಖಾತೆಯಲ್ಲಿ ಯಾವ ದಿನ ಎಷ್ಟು ಹಣ ಹಾಕಿದ್ದಾರೆ? ನವೆಂಬರ್ 8ರ ಮೊದಲು ಮತ್ತು ನಂತರದ ದಿನಗಳ ಜಮಾ ಎಷ್ಟು ಇತ್ಯಾದಿಗಳ ಪರಿಶೀಲನೆಯನ್ನೂ ನಡೆಸುತ್ತಿದ್ದಾರೆ.
* * *

ವ್ಯಾಪಾರಿಗಳ ಪರದಾಟ

ಐನೂರು ಮತ್ತು ಸಾವಿರದ ಹಳೆ ನೋಟುಗಳ ರದ್ಧತಿಗೆ ಎರಡು ವಾರ ಕಳೆಯಿತು. ಮುಂಬೈ ಮಹಾನಗರದ ಹೆಚ್ಚಿನ ವ್ಯಾಪಾರ ಕೇಂದ್ರಗಳೆಲ್ಲ ಇದೀಗ ಮಂದಗತಿಯಲ್ಲಿ ನಡೆಯುತ್ತಿದೆ. ಎರಡು ಸಾವಿರದ ನೋಟಿಗೆ ಎಲ್ಲಿಯ ತನಕ ಚಿಲ್ಲರೆ ಕೊಡಲು ಸಾಧ್ಯವೋ ಅಷ್ಟರ ತನಕ ವ್ಯಾಪಾರ ಮಾಡುತ್ತಾರೆ. ಮತ್ತೆ ಚಿಲ್ಲರೆ ತಂದವರಿಗೆ ಮಾತ್ರ ಆದ್ಯತೆ. ರೈಲ್ವೆ ಸ್ಟೇಷನ್‌ಗಳಲ್ಲಿ ಮಾಸಿಕ- ತ್ರೈಮಾಸಿಕ ಪಾಸು ಪಡೆಯಲು ಬಂದವರೆಲ್ಲ ಐನೂರು - ಸಾವಿರದ ನೋಟುಗಳನ್ನು ನೀಡುತ್ತಿದ್ದರೆ ಇದೀಗ ನೂರರ ನೋಟು ತಂದವರಿಗೆ ಮಾತ್ರ ಮಾಸಿಕ ಪಾಸು ನೀಡಲಾಗುತ್ತಿದೆ. ಎಲ್ಲರೂ ಐನೂರು - ಸಾವಿರದ ನೋಟುಗಳನ್ನು ತಂದರೆ ನಾವೆಲ್ಲಿಂದ ಚಿಲ್ಲರೆ ನೀಡಬೇಕು ಎನ್ನುತ್ತಾರೆ ರೈಲ್ವೆಯ ಟಿಕೆಟ್ ನೀಡುವ ಸಿಬ್ಬಂದಿ. ಕಳೆದೆರಡು ವಾರಗಳಲ್ಲಿ ಬೀದಿ ಬದಿಯಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಗಳ ತನಕ 25 ಪ್ರತಿಶತ ಮಾತ್ರ ವ್ಯಾಪಾರ ನಡೆದಿದೆ. ಕೆಲವು ದೊಡ್ಡ ಅಂಗಡಿಗಳು ಗ್ರಾಹಕರನ್ನು ಉಳಿಸಲು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳಿಂದ ತಮ್ಮ ಬಿಸ್‌ನೆಸ್ ನಡೆಸುತ್ತಿದ್ದಾರೆ. ನಗದು ಬಿಸ್‌ನೆಸ್ ಇಲ್ಲದ್ದರಿಂದ ಎಲ್ಲೆಡೆಯೂ ದಂಧೆ ಮಂದಗತಿಯಲ್ಲಿ ಸಾಗುತ್ತಿದೆ. ಚಿಲ್ಲರೆ ಹಣದ ಕೊರತೆಯಲ್ಲಿ ಜನ ವ್ಯರ್ಥ ಖರ್ಚುಗಳನ್ನೆಲ್ಲ ನಿಲ್ಲಿಸಿದ್ದಾರೆ. ಬಿಡುವಿನ ವೇಳೆಯನ್ನು ಬ್ಯಾಂಕ್, ಎಟಿಎಂ ಮುಂದೆ ನಿಲ್ಲುತ್ತಿದ್ದಾರೆ.

ಇನ್ನೊಂದೆಡೆ ವಿದೇಶಿ ಪ್ರವಾಸಿಗರೂ ಭಾರೀ ಪರದಾಟ ನಡೆಸುತ್ತಿದ್ದಾರೆ. ಹೆಚ್ಚಿನವರ ಕೈಯಲ್ಲಿ ಐನೂರು - ಸಾವಿರದ ಹಳೆನೋಟುಗಳಿರುವ ಕಾರಣ ಸುತ್ತಾಡಲು ಹಿಂದಿನಂತೆ ಖುಷಿ ಆಗುತ್ತಿಲ್ಲವಂತೆ. ಮುಂಬೈಯ ಅನೇಕ ಎಟಿಎಂ ಮೆಷಿನ್‌ಗಳು ಬಂದ್ ಇವೆ. ದಾದರ್(ಪ) ರೈಲ್ವೆ ಸ್ಟೇಷನ್‌ನ ಮೂರೂ ಎಟಿಎಂ ಮೆಷಿನ್‌ಗಳು ಬಂದ್ ಇರುವುದು ಪ್ರಯಾಣಿಕರಿಗೆ ಇನ್ನಿಲ್ಲದ ತೊಂದರೆಗಳು. ಅನೇಕ ಎಟಿಎಂ ಮೆಷಿನ್‌ಗಳಲ್ಲಿ ತಮ್ಮ ಸರತಿ ಬರುತ್ತಿದ್ದಂತೆಯೇ ಹಣ ಖಾಲಿಯಾಗಿರುವ ಸಂಕೇತಗಳು ಬರುತ್ತಿರುವುದು ಅನೇಕರ ಅಳಲು. ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಇರಬೇಕು ಎಂದರೂ ಹೆಚ್ಚಿನ ಕಡೆ ಎಲ್ಲರಿಗೂ ಒಂದೇ ಸಾಲು ಇದೆ. ಇದುವರೆಗೂ ಮುಂಬೈಯಲ್ಲಿ 500ರ ಹೊಸ ನೋಟಿನ ದರ್ಶನವಾಗಿಲ್ಲ ಗ್ರಾಹಕರಿಗೆ! ಅದು ಬರುವ ತನಕ ಸಮಸ್ಯೆ ಬಗೆಹರಿಯದು. ಇವತ್ತು ಬರುತ್ತದೆ ನಾಳೆ ಬರುತ್ತದೆ ಐನೂರರ ಹೊಸ ನೋಟು ಅಂದ್ರೆ ದೊರೆಯುವುದು ಎರಡು ಸಾವಿರದ ನೋಟುಗಳೇ. ಪ್ರತೀ ಬ್ಯಾಂಕ್‌ನಲ್ಲಿ ಗ್ರಾಹಕ ಎಷ್ಟೇ ಮೊತ್ತದ ಹಣ ತರಲಿ, ಒಬ್ಬೊಬ್ಬರಿಗೆ 10 ರಿಂದ 15 ನಿಮಿಷ ತೆಗೆದುಕೊಳ್ಳುತ್ತಾರೆ. ಇದರಿಂದ ದಿನದಲ್ಲಿ ಎಷ್ಟೋ ಜನ ಸಾಲಲ್ಲಿ ನಿಂತು ವಾಪಾಸು ಹೋಗುತ್ತಾರೆ. ಬ್ಯಾಂಕ್‌ನಲ್ಲಿ ಇನ್ನಿತರ ಕಾರ್ಯಗಳಾದ ಎನ್‌ಐಎಫ್‌ಟಿ, ಡ್ರಾಫ್ಟ್, ಚೆಕ್ ಇಶ್ಯೂ, ಪಿಪಿಎಫ್‌ನಲ್ಲಿ ಹಣ ತುಂಬಿಸುವುದು ಇವೆಲ್ಲ ಸದ್ಯ ಬಂದ್ ಇದೆ. ಹೆಚ್ಚಿನ ಬ್ಯಾಂಕ್‌ಗಳಲ್ಲಿ ಕಡಿಮೆ ಸಿಬ್ಬಂದಿ ಇದ್ದಾರೆ. ಈ ದಿನಗಳ ಪರಿಸ್ಥಿತಿ ನೋಡಿದರೆ ಪ್ರತೀ ಬ್ಯಾಂಕ್ ಸಂಜೆ 6 ಗಂಟೆ ತನಕ ಇದ್ದರೂ ಪರಹಾರವಾಗದಷ್ಟು ಸಮಸ್ಯೆ ಇದೆ. ಆದರೂ ಅನೇಕ ಕಡೆ ಬ್ಯಾಂಕ್‌ನವರು ಸಂಜೆ 4ಕ್ಕೆ ಬಾಗಿಲು ಹಾಕುತ್ತಿರುವ ದ್ಯಶ್ಯಗಳನ್ನು ಕಾಣಬಹುದು. ಇನ್ನು ಕೆಲವೆಡೆ ಬಾಗಿಲಲ್ಲೇ ಕ್ಯಾಶ್ ಮುಗಿಯಿತು ಎನ್ನುವ ಬೋರ್ಡ್. ಯಾವ ಬ್ಯಾಂಕಲ್ಲೂ ಆಧಾರ್ - ಪಾನ್‌ಕಾರ್ಡ್ ದಾಖಲೆ ನೀಡಿ ಹಣ ಬದಲಿಸಬಹುದು ಎಂದಿದ್ದರೂ ಮುಂಬೈಯ ಅನೇಕ ಬ್ಯಾಂಕ್‌ಗಳಲ್ಲಿ ‘‘ನಿಮ್ಮ ಖಾತೆ ಇಲ್ಲಿದೆಯೇ? ಇದ್ದರೆ ಮಾತ್ರ. ಇಲ್ಲವಾದರೆ ನಿಮ್ಮ ಬ್ಯಾಂಕ್‌ಗೆ ಹೋಗಿ’’ ಎನ್ನುವ ಉತ್ತರ ಬರುತ್ತದೆ.
ಈ ನಡುವೆ ದೇವಾಲಯಗಳ ಕಾಣಿಕೆ ಡಬ್ಬಿಗೆ 500, 1000ದ ನೋಟುಗಳು ಭಾರೀ ಸಂಖ್ಯೆಯಲ್ಲಿ ಬೀಳುತ್ತಿವೆ. ಪ್ರಖ್ಯಾತ ಸಿದ್ಧಿ ವಿನಾಯಕ ಮಂದಿರದ ವಾರಾಂತ್ಯದ ಲೆಕ್ಕ ಮಾಡುವಾಗ 500ರ 3340 ನೋಟುಗಳು, 1 ಸಾವಿರದ 1060 ನೋಟುಗಳು ಕಂಡುಬಂತು. ಪ್ರತೀವಾರ 35 ಲಕ್ಷ ರೂ. ಕಾಣಿಕೆ ಬೀಳುತ್ತಿದ್ದರೆ ಕಳೆದ ವಾರ 60 ಲಕ್ಷ ರೂ.ಬಿದ್ದಿತ್ತು.

‘‘ಬಾಪ್ ನ ಬಡಾ ಭೈಯ್ಯ, ಸಬ್ ಸೆ ಬಡಾ ರೂಪೈಯ್ಯ.....’’ ಈ ದಿನಗಳಲ್ಲಿ ಮುಂಬೈಯಲ್ಲಿ ಇದೇ ಮಾತು. ಬೆಳಗ್ಗೆ ಆಗುತ್ತಲೇ ಸಾಲಲ್ಲಿ ನಿಂತುಕೊಳ್ಳುತ್ತಿದ್ದಾರೆ. ಒಂದು ಒಳ್ಳೆಯ ನಿರ್ಧಾರ ಕೂಡಾ ಸರಿಯಾದ ಪೂರ್ವ ತಯಾರಿ ಇಲ್ಲದೆ ಕೈಗೊಂಡರೆ ಎಂತಹ ಅನಾಹುತಗಳಾಗಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕು ಎಂದರೆ ಯಾರೂ ಆಕ್ಷೇಪಿಸಲಾರರೇನೋ! * * *

ತರಕಾರಿ ಪೂರೈಕೆ ಇಳಿಕೆ
ಹಳೆಯ ಐನೂರು ಮತ್ತು ಸಾವಿರದ ನೋಟುಗಳು ಬಂದ್ ಆದ ನಂತರ ಅತಿಹೆಚ್ಚು ನಷ್ಟವಾದವುಗಳಲ್ಲಿ ನವಿ ಮುಂಬೈಯ ರಖಂ ಮಾರುಕಟ್ಟೆ ಅರ್ಥಾತ್ ಎಪಿಎಂಸಿ ಮಾರ್ಕೆಟ್ ಕೂಡಾ ಒಂದು. ಇಲ್ಲಿನ ತರಕಾರಿ ವ್ಯಾಪಾರಿಗಳ ಸ್ಥಿತಿ ಶೋಚನೀಯವಾಗಿದೆ. ಮೊದಲ ಒಂದು ವಾರದಲ್ಲಿ 1.19 ಕೋಟಿ ರೂಪಾಯಿಯ ಮೌಲ್ಯದ ತರಕಾರಿಗಳು ವ್ಯಾಪಾರವಾಗದೆ ಇದ್ದ ಕಾರಣ ಕೊಳೆತು ಹೋಗುವ ದೃಶ್ಯಗಳು ಕಂಡು ಬಂದವು. ಚಿಲ್ಲರೆ ವ್ಯಾಪಾರಿಗಳಿಗೆ ತರಕಾರಿ ಕೊಳ್ಳಲೂ ಹಣ ಇರಲಿಲ್ಲ.
ನವೆಂಬರ್ 8ರ ರಾತ್ರಿಯಿಂದ ಐನೂರು ಮತ್ತು ಸಾವಿರದ ಹಳೆ ನೋಟುಗಳ ಚಲಾವಣೆ ಬಂದ್ ಆದ ನಂತರ ಅದರ ಪಾರ್ಶ್ವ ಪರಿಣಾಮಕ್ಕೆ ಎಪಿಎಂಸಿ ಮಾರ್ಕೆಟ್ ಕೂಡಾ ಸಿಕ್ಕಿಕೊಂಡಿತು. ಅಂದಿನಿಂದ ಖರೀದಿಗೆ ಬರುವ ವ್ಯಾಪಾರಿಗಳ ಸಂಖ್ಯೆ ತೀವ್ರ ಇಳಿಕೆಯಾಗಿದೆ. ಕಾರಣ ಈ ಸಣ್ಣ ವ್ಯಾಪಾರಿಗಳಿಗೆ ಇನ್ನೂ ಬ್ಯಾಂಕ್‌ನಲ್ಲಿ ಕರೆನ್ಸಿ ಬದಲಾವಣೆ ಆಗಿಲ್ಲ. ನವಿ ಮುಂಬೈ ಎಪಿಎಂಸಿ ಮಾರ್ಕೆಟ್‌ನ ಅಶೋಕ್ ವಾಲುಂಜ್ ಅವರು ತಿಳಿಸಿದಂತೆ, ‘‘ಪ್ರತಿದಿನ ತರಕಾರಿಗಳ 500ರಿಂದ 600 ಟೆಂಪೋ ಈ ಮಾರ್ಕೆಟ್‌ಗೆ ಬರುತ್ತದೆ. ಇವುಗಳಲ್ಲಿ ಸುಮಾರು 1.5 ಕೋಟಿ ರೂಪಾಯಿಯ ತರಕಾರಿಗಳು ಇರುತ್ತವೆ. ಆದರೆ ಈ ದಿನಗಳಲ್ಲಿ ಹಿಂದಿನಂತೆ ಖರೀದಿ ಆಗುತ್ತಿಲ್ಲ. 25 ಪ್ರತಿಶತವಾದರೂ ಮಾರಾಟವಾಗದೆ ಉಳಿಯುತ್ತದೆ. ಪರಿಸ್ಥಿತಿ ಎರಡನೆ ವಾರದಲ್ಲಿ ಸುಧಾರಿಸುತ್ತಿದ್ದರೂ ರಖಂ ವ್ಯಾಪಾರಿಗಳಿಗೆ 3 ಕೋಟಿ 15 ಲಕ್ಷ ರೂಪಾಯಿಗಳಿಗೂ ಹೆಚ್ಚು ನಷ್ಟ ಸಂಭವಿಸಿರುವುದು ನಿಜ’’ ಎನ್ನುತ್ತಾರೆ.
ಇನ್ನು ಹಾಲು ಪೂರೈಸುವ ಮಹಾನಂದ ಹಾಲಿನ ವಿತರಕರಾದ ವಿಠಲ್ ಶಿಂದೆ ಹೇಳುತ್ತಾರೆ, ‘‘ಸರಕಾರ ಯಾವಾಗ ಹಳೆ ನೋಟುಗಳನ್ನು ನಿಷೇದಿಸಿತ್ತೋ ಅದರ ಮರುದಿನದಿಂದ ಹಾಲು ಪೂರೈಕೆಯಲ್ಲಿ 20 ಪ್ರತಿಶತ ಪೂರೈಕೆ ಇಳಿಕೆಯಾಗಿದೆ. ಜನರಿಗೆ ನೀಡಲು ಚಿಲ್ಲರೆ ಹಣ ಇಲ್ಲವೆನ್ನುತ್ತಿದ್ದಾರೆ. ತರಕಾರಿ-ಹಣ್ಣುಹಂಪಲು ಮಾರುಕಟ್ಟೆಗಳಲ್ಲಿ ದಿನಗೂಲಿ ಕೆಲಸಗಾರರು ಒಪ್ಪೊತ್ತಿನ ಊಟಕ್ಕೂ ಪರದಾಟ ನಡೆಸುವ ಹಾಗಿದೆ.
ಐನೂರು ಮತ್ತು ಸಾವಿರದ ಹಳೆ ನೋಟುಗಳ ನಿಷೇಧದ ನಂತರ ಮುಂಬೈಯ ಒಂದೂವರೆ ಕೋಟಿ ಜನಸಂಖ್ಯೆಯಲ್ಲಿ 25 ಲಕ್ಷ ಮುಂಬೈಕರ್ ಈ ದಿನಗಳಲ್ಲಿ ಬ್ಯಾಂಕ್‌ನ ಹಳೆನೋಟು ಜಮಾ ಮಾಡಿ ಹೊಸ ನೋಟುಗಳನ್ನು ಪಡೆಯಲು ಸಾಲಲ್ಲಿ ನಿಂತಿದ್ದಾರೆ. ಕಂಪೆನಿಗಳ ಮಾಲಕರು ಮಾತ್ರ ತಮ್ಮ ಕಾರ್ಮಿಕರನ್ನು ಬ್ಯಾಂಕ್ ಮುಂದೆ ನಿಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News