ಹಿರಿಯ ಪತ್ರಕರ್ತ ಪಡ್ಗಾಂವ್ಕರ್ ನಿಧನ
ಪುಣೆ, ನ.25: ಟೈಂಸ್ ಆಫ್ ಇಂಡಿಯಾದ ಮಾಜಿ ಸಲಹಾ ಸಂಪಾದಕ, 72ರ ಹರೆಯದ ದಿಲೀಪ್ ಪಡ್ಗಾಂವ್ಕರ್, ಇಂದು ಮುಂಜಾನೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರು ಕೆಲವು ದಿನಗಳಿಂದ ಅನಾರೋಗ್ಯದಲ್ಲಿದ್ದರು.
ಹೃದಯಾಘಾತ ಸಂಭವಿಸಿದ್ದ ಕಾರಣ ಪಡ್ಗಾಂವ್ಕರ್‌ರನ್ನು ನ.18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಬಹುಗ್ರಂಥಿ ವೈಫಲ್ಯ ಉಂಟಾಗಿತ್ತು ಹಾಗೂ ಮೂತ್ರಪಿಂಡಗಳು ಕಾರ್ಯಾಚರಣೆ ನಿಲ್ಲಿಸಿದುದರಿಂದ ಅವರನ್ನು ಡಯಾಲಿಸಿಸ್‌ಗೆ ಒಳಪಡಿಸಲಾಗಿತ್ತು.
ಪುಣೆಯಲ್ಲಿ ಜನಿಸಿದ್ದ ಪಡ್ಗಾಂವ್ಕರ್, ಪುಣೆಯ ಸಂತ ವಿನ್ಸೆಂಟ್ ಹೈಸ್ಕೂಲ್ ಹಾಗೂ ಫರ್ಗ್ಯೂಸನ್ ಕಾಲೇಜ್‌ಗಳಲ್ಲಿ ಶಿಕ್ಷಣ ಪಡೆದು, ಫ್ರಾನ್ಸ್‌ಗೆ ಹೋಗಿದ್ದರು. ಅಲ್ಲಿ ಪ್ಯಾರಿಸ್-ಸೋರ್ಬನ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್‌ಗಾಗಿ ಅಧ್ಯಯನ ನಡೆಸಿದ್ದರು.
1978ರಲ್ಲಿ ಬ್ಯಾಂಕಾಕ್‌ನಲ್ಲಿ ಯುನೆಸ್ಕೊದೊಂದಿಗೆ ಸೇವೆ ಸಲ್ಲಿಸಿದ್ದ ಪಡ್ಗಾಂವ್ಕರ್ ಬಳಿಕ ಪ್ಯಾರಿಸ್‌ನಲ್ಲಿ ಅದರ ಮಾಹಿತಿ ವಿಭಾಗದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು.
ಕೆಲವು ವರ್ಷಗಳಿಂದ ನಾಗರಿಕ ಅಶಾಂತಿಗೆ ಸಾಕ್ಷಿಯಾಗಿರುವ ಜಮ್ಮು-ಕಾಶ್ಮೀರದಲ್ಲಿ ಶಾಂತಿಯನ್ನು ಮರಳಿಸುವ ಸಲುವಾಗಿ ಎಲ್ಲ ವರ್ಗಗಳ ಜನರೊಂದಿಗೆ ಮಾತನಾಡಲು ಕೇಂದ್ರ ಸರಕಾರ ಆಯ್ಕೆ ಮಾಡಿದ್ದ ತಂಡದಲ್ಲಿ ಈ ಹಿರಿಯ ಪತ್ರಕರ್ತನಿದ್ದರು.
ಮೊದಲು ಟೈಂಸ್ ಆಫ್ ಇಂಡಿಯಾದ ಪ್ಯಾರಿಸ್‌ನ ವರದಿಗಾರರಾಗಿದ್ದ ಪಡ್ಗಾಂವ್ಕರ್ ಬಳಿಕ ಭಾರತಕ್ಕೆ ಬಂದು ಅದರ ಸಂಪಾದಕರಾಗಿದ್ದರು.