×
Ad

ನಗದು ಕೊರತೆಯನ್ನೆದುರಿಸಲು ಮೊಬೈಲ್ ಬಳಕೆಗೆ ಪ್ರಧಾನಿ ಒತ್ತು

Update: 2016-11-25 23:31 IST

ಬಠಿಂಡಾ,ನ.25: ನೋಟು ನಿಷೇಧದಿಂದಾಗಿ ಉದ್ಭವಿಸಿರುವ ಸಮಸ್ಯೆಗಳನ್ನು ಎದುರಿಸಲು ಮೊಬೈಲ್ ಬ್ಯಾಂಕಿಂಗ್‌ಗೆ ಇಂದಿಲ್ಲಿ ಹೆಚ್ಚಿನ ಒತ್ತು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಪ್ಪುಹಣ ಮತ್ತು ಭ್ರಷ್ಟಾಚಾರದ ಪಿಡುಗನ್ನು ತಡೆಯಲು ಬ್ಯಾಂಕ್ ಶಾಖೆಗಳಂತೆ ತಮ್ಮ ಮೊಬೈಲ್ ಫೋನ್‌ಗಳನ್ನು ಕಾರ್ಯಾಚರಿಸುವಂತೆ ಜನತೆಗೆ ಕರೆ ನೀಡಿದರು.

ಇಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ದೇಶದಲ್ಲಿಂದು ಕುಟುಂಬಗಳ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚು ಮೊಬೈಲ್ ಫೋನ್‌ಗಳಿವೆ ಮತ್ತು ಹಣಪಾವತಿಗಳನ್ನು ಮಾಡಲು ಜನರು ಅವುಗಳನ್ನು ಬಳಸಬೇಕು ಎಂದರು.
ಬ್ಯಾಂಕುಗಳು ಒದಗಿಸಿರುವ ಆ್ಯಪ್‌ಗಳನ್ನು ನಮ್ಮ ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದ ಅವರು, ಮೊಬೈಲ್ ಬ್ಯಾಂಕಿಂಗ್ ಕುರಿತು ಜನತೆಗೆ ತರಬೇತಿ ನೀಡುವಂತೆ ರಾಜಕೀಯ ನಾಯಕರು,ಶಿಕ್ಷಕರು ಮತ್ತು ಯುವಜನ ರನ್ನು ಆಗ್ರಹಿಸಿದರು.
ನೋಟು ನಿಷೇಧವು ಬಡವರಿಗೆ ಅವರ ಹಕ್ಕುಗಳನ್ನು ಕೊಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಭ್ರಷ್ಟಾಚಾರ ಮತ್ತು ಕಪ್ಪುಹಣ ಮಧ್ಯಮ ವರ್ಗ ಮತ್ತು ಶೋಷಿತರನ್ನು ತಮ್ಮ ಹಕ್ಕುಗಳಿಂದ ವಂಚಿಸಿವೆ ಮತ್ತು ಗೆದ್ದಲು ಹುಳಗಳಂತೆ ದೇಶಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದ ಅವರು, ಮಧ್ಯಮ ವರ್ಗಗಳ ಶೋಷಣೆಯನ್ನು ತಡೆಯಲು ಮತ್ತು ಬಡವರಿಗೆ ಅವರ ಎಲ್ಲ ಹಕ್ಕುಗಳನ್ನು ದೊರಕಿಸಿಕೊಡಲು ತಾನು ಬಯಸಿದ್ದೇನೆ ಎಂದರು. ನೋಟು ನಿಷೇಧದ ಸರಕಾರದ ದಿಢೀರ್ ಕ್ರಮದಿಂದಾಗಿ ಅನನುಕೂಲವನ್ನು ಅನುಭವಿಸುತ್ತಿದ್ದರೂ ತನ್ನ ಬೆಂಬಲಕ್ಕೆ ನಿಂತಿರುವುದಕ್ಕಾಗಿ ಜನತೆಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
 ನೂತನ ತಂತ್ರಜ್ಞಾನದತ್ತ ಹೊರಳುವಂತೆ ಜನರನ್ನು ಆಗ್ರಹಿಸಿದ ಅವರು, ನಿಮ್ಮ ಮೊಬೈಲ್ ಫೋನ್ ಕೇವಲ ಮೊಬೈಲ್ ಫೋನ್ ಮಾತ್ರವಲ್ಲ. ನೀವು ಅದನ್ನು ನಿಮ್ಮದೇ ಸ್ವಂತ ಬ್ಯಾಂಕ್ ಮತ್ತು ಹಣದ ಸಂಚಿಯನ್ನಾಗಿ ಪರಿವರ್ತಿಸಬಹುದು. ನಿಮ್ಮ ಜೇಬಿನಲ್ಲಿ ಒಂದೇ ಒಂದು ರೂಪಾಯಿ ಇಲ್ಲದಿದ್ದರೂ ಇಂದಿನ ತಂತ್ರಜ್ಞಾನದಿಂದಾಗಿ ನೀವು ಮೊಬೈಲ್ ಫೋನ್ ಮೂಲಕ ಹಣ ಪಾವತಿಸಿ ಖರೀದಿಗಳನ್ನು ಮಾಡಬಹುದು. ನಗದು ಹಣವನ್ನು ಮುಟ್ಟದೇ ನೀವು ನಿಮ್ಮ ವ್ಯವಹಾರವನ್ನು ನಡೆಸಬಹುದು ಎಂದರು.
ಯುವಜನತೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ನಕಲಿ ನೋಟುಗಳ ಚಲಾವಣೆಯನ್ನು ನಿಲ್ಲಿಸುವುದು ಈಗಿನ ಅಗತ್ಯವಾಗಿದೆ ಎಂದೂ ಮೋದಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News