ಜಾತ್ಯತೀತ ಪಕ್ಷಗಳು 'ಸಾಚಾರ್ ವರದಿ' ಅನುಷ್ಠಾನಗೊಳಿಸಲಿ: ರಾಜಿಂದರ್ ಸಿಂಗ್ ಸಾಚಾರ್

Update: 2016-11-27 13:34 GMT

ಬೆಂಗಳೂರು, ನ.27:ಮುಸ್ಲಿಮರಿಗೆ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಕಲ್ಪಿಸುವ ಜೊತೆಗೆ ಅಭಿವೃದ್ಧಿಗೆ ಪೂರಕವಾಗಿರುವ 'ಸಾಚಾರ್ ವರದಿ'ಯನ್ನು ಜಾತ್ಯಾತೀತ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಬೇಕೆಂದು ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಿಂಗ್ ಸಾಚಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ರವಿವಾರ ನಗರದ ಪುರಭವನದಲ್ಲಿ ಕರ್ನಾಟಕ ಮುಸ್ಲಿಮ್ ಸಮನ್ವಯ ಸಮಿತಿ(ಕೆಎಂಸಿಸಿ) ಏರ್ಪಡಿಸಿದ್ದ, 'ಮುಸ್ಲಿಮ್ ಸಬಲೀಕರಣ ಸಮಾವೇಶ' ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿ ದೇಶದ ಮುಸ್ಲಿಮರ ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಮಂಡಿಸುವಂತೆ ಅಧಿಕಾರ ನೀಡಿತ್ತು. ಅದರಂತೆ 2006 ರಲ್ಲಿ ಸಮಿತಿಯು ವರದಿಯನ್ನು ನೀಡಲಾಗಿದೆ. ಆದರೆ, ಇಲ್ಲಿಯವರೆಗೆ ವರದಿ ಅನುಷ್ಠಾನಗೊಂಡಿಲ್ಲ. ಅಲ್ಲದೆ, ಇದು ಕೇಂದ್ರದಲ್ಲಿಯೇ ಅನುಷ್ಠಾನಗೊಳಿಸಬೇಕಿಲ್ಲ. ಬದಲಿಗೆ ಜಾತ್ಯತೀತ ಪಕ್ಷಗಳು ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಿ ಇದನ್ನು ಅನುಷ್ಠಾನಗೊಳಿಸ ಬಹುದಾಗಿದೆ ಎಂದು ರಾಜಿಂದರ್ ಸಿಂಗ್ ಸಾಚಾರ್ ಹೇಳಿದರು.

ಕೆಲ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಮತ ಬ್ಯಾಂಕ್‌ಗಳಾಗಿ ಉಪಯೋಗಿಸುತ್ತಿದ್ದಾರೆ. ಆದರೆ, ಆ ಪಕ್ಷಗಳಿಗೆ ನೈತಿಕವಾಗಿ ಮುಸ್ಲಿಮರ ಬಗ್ಗೆ ಕಾಳಜಿಯಿದ್ದರೆ, ಸಾಚಾರ್ ವರದಿ ಜಾರಿಗೊಳಿಸಲಿ ಎಂದು ಸವಾಲು ಹಾಕಿದ ಅವರು, ದಲಿತ ಸಮುದಾಯಕ್ಕಿಂತ ಮುಸ್ಲಿಮರು ಅತಿ ಹಿಂದುಳಿದಿದ್ದಾರೆ. ಅಲ್ಲದೆ, ಹಲವು ಮಂದಿಗೆ ಇನ್ನೂ ಕನಿಷ್ಠ ಸೌಲಭ್ಯವೇ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀಸಲಾತಿ ವಂಚನೆ: ಮುಸ್ಲಿಮರು ಯಾವ ಪ್ರದೇಶಗಳಲ್ಲಿ ಹೆಚ್ಚಾಗಿದ್ದರೂ, ಅಂತಹ ಭಾಗಗಳಲ್ಲಿಯೇ ಮೀಸಲಾತಿ ಜಾರಿಗೊಳಿಸಿ ಇತರೆ ಸಮುದಾಯಗಳಿಗೆ ಅವಕಾಶ ನೀಡಲಾಗಿದೆ ಎಂದ ಅವರು, ಸಾಚಾರ್ ವರದಿಯ ಪ್ರಕಾರ ಮುಸ್ಲಿಮರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಿದರೆ, ಲೋಕಸಭೆಗೆ 30ರಿಂದ 40 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂದು ನುಡಿದರು.

ಫಿಝಾ ಗ್ರೂಪ್ ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೆಎಂಸಿಸಿ ಖಜಾಂಚಿ ಬಿ.ಎಂ.ಫಾರೂಖ್ ಮಾತನಾಡಿ, ಮುಸ್ಲಿಮ್ ಜನಾಂಗದ ಪ್ರತಿಯೊಬ್ಬರು ಸಾಚಾರ್ ವರದಿಯನ್ನು ಜಾರಿಗೆ ತರಲು ಹೋರಾಟಕ್ಕೆ ಸನ್ನದ್ಧರಾಗಬೇಕಾಗಿದ್ದು, ಇದಕ್ಕೆ ಬಹುದೊಡ್ಡ ಜನಾಂದೋಲನ ಅಗತ್ಯವಿದೆ ಎಂದು ಹೇಳಿದರು.
 ಮುಸ್ಲಿಮರ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿ ಹಾಗೂ ಈ ಸ್ಥಿತಿಗಳ ಸುಧಾರಣೆಗೆ ಸೂಕ್ತ ಕಾರ್ಯಯೋಜನೆ ರೂಪಿಸಬೇಕು. ಸರಕಾರಿ ನೌಕರಿ ಮತ್ತು ಚುನಾವಣೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕೆಂದು 'ಸಾಚಾರ್' ಆಯೋಗ ಶಿಫಾರಸು ಮಾಡಿದೆ. ಆದರೆ, 2005ರಲ್ಲಿ ಆಯೋಗವು ವರದಿಯನ್ನು ಸಲ್ಲಿಸಿದರೂ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೆ ಮುಸ್ಲಿಮರಿಗೆ ಅನ್ಯಾಯ ಎಸಗಿದೆ ಎಂದು ಕಿಡಿಕಾರಿದರು.
  
 ಸಾಚಾರ್ ವೌಲ್ಯಮಾಪನ ಸಮಿತಿ ಮಾಜಿ ಅಧ್ಯಕ್ಷ, ಜೆಎನ್‌ಯು ನಿವೃತ್ತ ಪ್ರೊ.ಅಮಿತ್ ಕುಂದು ಮಾತನಾಡಿ, ಹಲವು ಸಮೀಕ್ಷೆಗಳ ಪ್ರಕಾರ ಇಂದಿಗೂ ಮುಸ್ಲಿಮರಿಗೆ, ಶಿಕ್ಷಣ, ಸರಕಾರಿ ಆರೋಗ್ಯ ಸೇವೆ ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಅಲ್ಲದೆ, ಮುಸ್ಲಿಮರ ಪ್ರಗತಿಗೆ ಹತ್ತು ಹಲವು ವರದಿಗಳಿದ್ದರೂ, ಎಲ್ಲ ಸರಕಾರಗಳು ಅನುಷ್ಠಾನಗೊಳಿಸಲು ಭರವಸೆ ಮಾತ್ರ ನೀಡಿದ್ದರೆ ಹೊರತು, ಕ್ರಮಕ್ಕೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಮೀರ್ ಇ ಶರೀಯತ್‌ನ ವೌಲಾನ ಮುಫ್ತಿ ಆಶ್ರಫ್ ಅಲಿ, ಕೆಎಂಸಿಸಿ ಅಧ್ಯಕ್ಷ, ನಿವೃತ್ತ ಐಎಎಸ್ ಸೈಯದ್ ಝಮೀರ್ ಪಾಷ, ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷ ನಸೀರ್ ಅಹ್ಮದ್, ಕೆಎಂಸಿಸಿ ಉಪಾಧ್ಯಕ್ಷ ಸೈಯದ್ ಝೈನುಲ್ ಅಬಿದೀನ್ ತಂಙಲ್, ನಿವೃತ್ತ ಐಎಎಸ್ ಅಧಿಕಾರಿ ಸನಾವುಲ್ಲಾ, ಪತ್ರಕರ್ತ ಬಿ.ಎಂ.ಹನೀಫ್ ಸೇರಿ ಪ್ರಮುಖರು ಹಾಜರಿದ್ದರು.


ಟಿಪ್ಪು ವಿರುದ್ಧ ಆರೋಪ ಸರಿಯಲ್ಲ
'ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ, ತನ್ನ ಪ್ರಾಣ ಮತ್ತು ಮಕ್ಕಳನ್ನೆ ಕಳೆದುಕೊಂಡ.ಇದನ್ನು ಬ್ರಿಟಿಷರೇ ಹೇಳಿದ್ದಾರೆ. ಆದರೆ, ಇದೀಗ ಟಿಪ್ಪು ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ'
  -ರಾಜಿಂದರ್ ಸಿಂಗ್ ಸಾಚಾರ್, ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News